ದಸರೆಗೂ ಮುನ್ನ ರಸ್ತೆಗಳಲ್ಲಿನ ಗುಂಡಿ ಮುಚ್ಚಿಸಿ
ಬಾಕಿ ಉಳಿದ ರಸ್ತೆಗಳ ಡಾಂಬರೀಕರಣಕ್ಕೆ ಅನುದಾನ ನೀಡಲಾಗುವುದು
Team Udayavani, Sep 20, 2022, 5:43 PM IST
ಮೈಸೂರು: ನಗರದ ಮುಖ್ಯಭಾಗದ ರಸ್ತೆಗಳಲ್ಲಿನ ಗುಂಡಿ ಮುಚ್ಚಿಸುವುದು ಮಾತ್ರವಲ್ಲದೇ ಎಲ್ಲ ಬಡಾವಣೆಗಳಲ್ಲಿನ ರಸ್ತೆ ಗುಂಡಿ ಮುಚ್ಚಿಸಿ ಮೈಸೂರಿನ ಗೌರವ ಉಳಿಸಿ, ಪ್ರತಿ ವಾರ್ಡಿನಲ್ಲಿ ಮನೆ ಮನೆ ದಸರಾ ಆಚರಿಸಲು ಪ್ರತಿ ವಾರ್ಡಿಗೆ 5 ಲಕ್ಷ ರೂ. ಅನುದಾನ ನೀಡುವಂತೆ ನಗರ ಪಾಲಿಕೆ ಸದಸ್ಯರು ಒತ್ತಾಯಿಸಿದರು.
ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ಸಂಜೆ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ 2022ರ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಶೇಷ ಕೌನ್ಸಿಲ್ ಸಭೆಯಲ್ಲಿ ಎಲ್ಲಾ ಸದಸ್ಯರು ಪಕ್ಷಭೇದ ಮರೆತು ಎಲ್ಲಾ ಬಡಾವಣೆಗಳ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿದರು.
ಜಂಬೂಸವಾರಿ ಮೆರವಣಿಗೆ ರಸ್ತೆ ಅಭಿವೃದ್ಧಿಗೆ ಮಾತ್ರ ಸೀಮಿತರಾಗಬೇಡಿ. ಫುಟ್‌ಪಾತ್ ತೆರವುಗೊಳಿಸಿ, ಯುಜಿಡಿ ಲೈನ್, ಚರಂಡಿ ಸ್ವತ್ಛಗೊಳಿಸಿ ದಸರಾ ಆರಂಭಕ್ಕೂ ಮುನ್ನ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.
ಪಾಲಿಕೆ ವಿರೋಧ ಪಕ್ಷದ ನಾಯಕ ಆಯೂಬ್ ಖಾನ್ ಮಾತನಾಡಿ, ದಸರಾ ಉತ್ಸವ ಜನಸಾಮಾನ್ಯರ ಉತ್ಸವವಾಗಿ ಉಳಿದಿಲ್ಲ. ಕೆಲವರಿಗೆ ಮಾತ್ರ ಸೀಮಿತವಾಗಿದೆ. ನಗರದ ಪ್ರಮುಖ ರಸ್ತೆ ಮತ್ತು ಬಡಾವಣೆಗಳಿಗೆ ದಸರಾ ಸಂಭ್ರಮ ಸೀಮಿತವಾಗಿದೆ. ಇದಕ್ಕೆ ಆಸ್ಪದ ನೀಡದೇ ಎಲ್ಲಾ ಬಡಾವಣೆಯಲ್ಲಿನ ರಸ್ತೆಗಳ ಗುಂಡಿ ಮುಚ್ಚಿಸಿ ಮೈಸೂರು ನಗರದ ಮರ್ಯಾದಿ ಕಾಪಾಡಬೇಕು. ಮುಖ್ಯರಸ್ತೆ ಅಭಿವೃದ್ಧಿಗೆ ಆಯುಕ್ತರು 20 ಲಕ್ಷ ರೂ. ಕೊಟ್ಟು ಸುಮ್ಮನಾಗಿದ್ದಾರೆ.
ಹಿಂದಿನ ಸರ್ಕಾರಗಳು ದಸರಾ ವೇಳೆಗೆ ಪಾಲಿಕೆಗೆ ವಿಶೇಷ ಅನುದಾನ ನೀಡುತ್ತಿದ್ದವು. ಈ ಬಾರಿ ಒಂದು ರೂಪಾಯಿ ಹಣವೂ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಹಿರಿಯ ಸದಸ್ಯ ಆರೀಫ್ ಹುಸೇನ್ ಮಾತನಾಡಿ, 25 ವರ್ಷಗಳ ನಂತರ ಹಿಂದುಳಿದ ವರ್ಗಗಳ ಸಮುದಾಯದ ವ್ಯಕ್ತಿಯೊಬ್ಬರು ಮೇಯರ್ ಆಗಿರುವುದು ಸಂತಸ. ಆದರೆ ಮೇಯರ್ ಅವರು ಬರೀಕೈನಲ್ಲಿ ಸಭೆ ಕರೆದಿದ್ದಾರೆ. ಜಿಲ್ಲಾಡಳಿತ ಪಾಲಿಕೆಗೆ 2.5 ಕೋಟಿ ರೂ. ನೀಡಿ ಸುಮ್ಮನಾಗಿದೆ. ಸರ್ಕಾರದಿಂದ ವಿಶೇಷ ಅನುದಾನ ತಂದು ದಸರಾ ಮಾಡುವಂತೆ ಒತ್ತಾಯಿಸಿದರು.
ಜೆಡಿಎಸ್ ಸದಸ್ಯೆ ಪ್ರೇಮಾ ಶಂಕರೇಗೌಡ ಮಾತನಾಡಿ, ದಸರಾ ಆರಂಭಕ್ಕೂ ಮುನ್ನ ಗುಂಡಿ ಮುಕ್ತ ಮೈಸೂರು ನಗರ ಮಾಡಬೇಕು. ಪ್ರಧಾನಿ ಬಂದಾಗ 10 ಕೋಟಿ ರೂ. ಖರ್ಚು ಮಾಡಿ ರಸ್ತೆ ಅಭಿವೃದ್ಧಿ ಮಾಡಿದ್ದೇವೆ. ಈಗ ರಾಷ್ಟ್ರಪತಿ ಬರುತ್ತಿದ್ದಾರೆ. ಇಡೀ ಮೈಸೂರು ಅಭಿವೃದ್ಧಿಪಡಿಸಬೇಕು. ಗುಂಡಿ ಮುಚ್ಚಲು ವಾರ್ಡಿಗೆ 20 ಲಕ್ಷ ರೂ. ನೀಡಬೇಕು. ಹೆಚ್ಚುವರಿ ಪೌರಕಾರ್ಮಿಕರನ್ನು ನೀಡಬೇಕು ಎಂದು ಮೇಯರ್ ಅವರಲ್ಲಿ ಮನವಿ ಮಾಡಿದರು.
ಪಾಲಿಕೆ ಹೆಚ್ಚುವರಿ ಆಯುಕ್ತೆ ಎಂ.ಜೆ.ರೂಪಾ ಮಾತನಾಡಿ, ದಸರಾ ಕಾಮಗಾರಿ ನಿರ್ವಹಣೆಗೆ ಜಿಲ್ಲಾಡಳಿತದಿಂದ ಇಂಜಿನಿಯರ್ ಶಾಖೆಗೆ 1 ಕೋಟಿ 60 ಲಕ್ಷ, ಒಳಚರಂಡಿಗೆ 18 ಲಕ್ಷ, ನೀರು ಸರಬರಾಜಿಗೆ 10 ಲಕ್ಷ, ಆರೋಗ್ಯ ಮತ್ತು ಸ್ವತ್ಛತೆಗೆ 30 ಲಕ್ಷ ಅನುದಾನ ನೀಡಿದೆ ಎಂದು ತಿಳಿಸಿದರು.
ಬಿಜೆಪಿ ಸದಸ್ಯ ರಾಮಪ್ರಸಾದ್ ಮಾತನಾಡಿ, ದಸರಾ ಉತ್ಸವಕ್ಕೆ ದೇಶ ವಿದೇಶಗಳಿಂದ ಮೈಸೂರಿಗೆ ಪ್ರವಾಸಿಗರು ಆಗಮಿಸುತ್ತಾರೆ. ಈ ವೇಳೆ ಯಾವುದೇ ಮುಜುಗರವಾಗದಂತೆ ಸ್ವತ್ಛತೆ ಆದ್ಯತೆ ಕೊಡಬೇಕು ಎಂದು ಹೇಳಿದರು. ಬಿಜೆಪಿ ಸದಸ್ಯೆ ವೇದಾವತಿ ಮಾತನಾಡಿ, ನಮ್ಮ ವಾರ್ಡ್‌ನಲ್ಲಿ ಡೆಂಗ್ಯು ಮತ್ತು ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದೆ. ಹಾಗೇ ಮಾನಸಗಂಗೋತ್ರಿಯ ಜೆ.ಸಿ.ರಸ್ತೆಯಲ್ಲಿ ಬೀದಿದೀಪಗಳು ಕೆಟ್ಟಿದ್ದು, ಶೀಘ್ರ ದುರಸ್ತಿಪಡಿಸಬೇಕು ಎಂದು ಕೋರಿದರು. ಅಶೋಕಪುರಂ ಗರಡಿಯಲ್ಲಿ ದೀಪಾಲಂಕಾರ ಮಾಡುವಂತೆ ಸದಸ್ಯೆ ಪಲ್ಲವಿ ಬೇಗಂ ಮನವಿ ಮಾಡಿದರು.
ಪಾಲಿಕೆ ಸದಸ್ಯೆಗೆ ನೆರವಾಗುವಂತೆ ಮನವಿ: ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಲಿಕೆ ಸದಸ್ಯೆ ಡಾ.ಅಶ್ವಿನಿ ಭರತ್ ಅವರಿಗೆ 5 ಲಕ್ಷ ರೂ.ಗಳ ನೆರವು ನೀಡಬೇಕು ಎಂದು ಎಲ್ಲಾ ಸದಸ್ಯರು ಒತ್ತಾಯಿಸಿದರು. ಬಿಜೆಪಿ ಸದಸ್ಯ ರಮೇಶ್ ಪ್ರಸ್ತಾಪಿಸಿದ ವಿಷಯನ್ನು ಹಲವರು ಅನುಮೋದಿಸಿದರು. ಸದಸ್ಯರಿಗೆ ಆರೋಗ್ಯ ವಿಮೆ ಮಾಡಿಸುವಂತೆ ಕೋರಿದರು. ಆಯುಕ್ತರಿಂದ ಮಾಹಿತಿ ಪಡೆದು ನೆರವು ನೀಡುವುದಾಗಿ ಮೇಯರ್
ಶಿವಕುಮಾರ್ ಭರವಸೆ ನೀಡಿದರು.
ಸಭೆಯ ಕೊನೆಯಲ್ಲಿ ಮಾತನಾಡಿದ ಮೇಯರ್ ಶಿವಕುಮಾರ್, ಈಗಾಗಲೇ ಸ್ಥಳೀಯ ಶಾಸಕರು ಮತ್ತು ಮೇಯರ್ ಅನುದಾನದಲ್ಲಿ ಹಲವು ರಸ್ತೆಗಳ ಗುಂಡಿಮುಚ್ಚುವ ಕಾರ್ಯ ನಡೆದಿದೆ. ಬಾಕಿ ಉಳಿದ ರಸ್ತೆಗಳ ಡಾಂಬರೀಕರಣಕ್ಕೆ ಅನುದಾನ ನೀಡಲಾಗುವುದು. ಜತೆಗೆ ಮನೆ ಮನೆ ದಸರಾಗೆ ಎಲ್ಲಾ ಶಾಸಕರಿಗೂ 2 ಲಕ್ಷ ರೂ. ಅನುದಾನ ನೀಡುತ್ತೇವೆ. ನಗರದ ರಾಜ ಮಾರ್ಗದಲ್ಲಿ ಅನಧಿಕೃತವಾಗಿ ಫುಟ್‌ಪಾತ್ ಒತ್ತುವರಿ ಮಾಡಿರುವುದನ್ನು ತೆರವು ಮಾಡುತ್ತೇವೆ ಎಂದು ಭರವಸೆ ನೀಡಿದರು. ಉಪ ಮೇಯರ್ ಡಾ.ಜಿ.ರೂಪಾ, ಹೆಚ್ಚುವರಿ ಆಯುಕ್ತೆ ಎಂ.ಜೆ.ರೂಪಾ ಇದ್ದರು.
ಗ್ಯಾಸ್ ಪೈಪ್‌ಲೈನ್ ಕಾಮಗಾರಿಗೆ ಆಕ್ಷೇಪ
ದಸರಾ ಸಂಬಂಧ ಕರೆದಿದ್ದ ವಿಶೇಷ ಕೌನ್ಸಿಲ್‌ನಲ್ಲಿ ದಸರಾ ಸಂಬಂದ ಚರ್ಚೆಗೆ ಮುಂದಾಗದ ಕಾಂಗ್ರೆಸ್ -ಜೆಡಿಎಸ್ ಸದಸ್ಯರು ಗ್ಯಾಸ್ ಪೈಪ್‌ಲೈನ್ ಕಾಮಗಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹಿಂದಿನ ಕೌನ್ಸಿಲ್ ಸಭೆಯಲ್ಲಿ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಬಗ್ಗೆ ಚರ್ಚೆಯೇ ಮಾಡದೆ ಒಪ್ಪಿಗೆ ನೀಡಿರುವುದಕ್ಕೆ
ಆಕ್ರೋಶ ವ್ಯಕ್ತಪಡಿಸಿ, ಈ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಆಡಳಿತ ಪಕ್ಷದ ಸದಸ್ಯರು ದಸರಾ ಸಭೆ ನಡೆಸುವಂತೆ ಒತ್ತಾಯಿಸಿದರು. ಇದರಿಂದ ಅರ್ಧಗಂಟೆಗೂ ಹೆಚ್ಚುಕಾಲ ಬಿಜೆಪಿ ಮತ್ತು ಜೆಡಿಎಸ್, ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿ ನಡೆಯಿತು.
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ರಾಜ್ಯದ ಮಹಾನಗರ ಪಾಲಿಕೆಗಳ 9 ಮೇಯರ್‌ಗಳಿಗೆ ಆಹ್ವಾನ ನೀಡಲಾಗಿದೆ. ಆಯುಕ್ತರು ಸೂಕ್ತ ವ್ಯವಸ್ಥೆ
ಕಲ್ಪಿಸುವಂತೆ, ಜಿಲ್ಲಾಧಿಕಾರಿಗಳಿಗೆ ಪಾಸ್ ನೀಡುವಂತೆ ಕೋರಲಾಗಿದೆ. ಅಧಿಕಾರಿಗಳು ಸದಸ್ಯರ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು.
●ಶಿವಕುಮಾರ್, ಮೇಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.