ಗೋ ಹತ್ಯೆಕಾಯ್ದೆ : ಮೃಗಾಲಯಗಳಿಗೆ ಭಾರೀ ಹೊರೆ
ದನದ ಮಾಂಸ ಬದಲಿಗೆ ಪರ್ಯಾಯವಾಗಿ ಕುರಿ, ಮೇಕೆ ಮಾಂಸ ಬಳಸಿದರೆ 15 ಪಟ್ಟು ಹೆಚ್ಚು ಹೊರೆ ,ಆಹಾರಕ್ರಮದ ಮೇಲು ಪರಿಣಾಮ
Team Udayavani, Dec 11, 2020, 4:19 PM IST
ಮೈಸೂರು: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಸಂಬಂಧ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ರಾಜ್ಯದ ಮೃಗಾಲಯಗಳಿಗೆಆರ್ಥಿಕ ಹೊರೆ ಹೆಚ್ಚಾಗುವ ಭೀತಿ ಎದುರಾಗಿದೆ.
ಬುಧವಾರ ಗೋಹತ್ಯೆ ನಿಷೇಧಿಸುವ ಕಠಿಣ ನಿಯಮ ಒಳಗೊಂಡ ಕರ್ನಾಟಕ ಜಾನುವಾರು ವಧೆ, ಪ್ರತಿಭಂದಕ ಮತ್ತು ಸಂರಕ್ಷಣಾ ವಿಧೇಯಕಕ್ಕೆ ವಿಧಾನಸೌಧದಲ್ಲಿ ಅನುಮೋದನೆ ಸಿಕ್ಕಿದ್ದು, ಎಲ್ಲೆಡೆ ಕಾಯ್ದೆ ಬಗ್ಗೆ ಬಿಸಿ ಬಿಸಿ ಚರ್ಚೆ, ಟೀಕೆ, ಆಕ್ರೋಶ ಭುಗಿಲೆದ್ದಿರುವ ನಡುವೆ ರಾಜ್ಯದ 9 ಮೃಗಾಲಯಗಳಿಗೀಗ ಆರ್ಥಿಕ ಹೊರೆ ಹೆಚ್ಚಾಗುವ ಭೀತಿ ನಿರ್ಮಾಣವಾಗಿದೆ.
ಮೃಗಾಲಯದಲ್ಲಿರುವ ಮಾಂಸಹಾರಿ ಪ್ರಾಣಿಗಳಿಗೆ ಪ್ರತಿದಿನ ಮೃಗಾಲಯ ಪ್ರಾಧಿಕಾರವು ಗೋಮಾಂಸವನ್ನು ಖರೀದಿಸಿ ಪ್ರಾಣಿಗಳಿಗೆ ಆಹಾರವಾಗಿನೀಡುವ ಮೂಲಕ ಪಾಲನೆ ಮಾಡಲಾಗುತ್ತಿತ್ತು.ಆದರೆ, ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯಿದೆಜಾರಿಗೆ ತರುತ್ತಿರುವುದರಿಂದ ಗೋಮಾಂಸ ಬಳಕೆ ಮಾಡುವಂತಿಲ್ಲ. ಇದಕ್ಕೆ ಪರ್ಯಾಯವಾಗಿ ಕೋಳಿ, ಮೇಕೆ, ಕುರಿ ಅಥವಾ ಹಂದಿ ಮಾಂಸವನ್ನು ಬಳಸುವಂತಾಗುತ್ತದೆ. ಆದರೆ, ಈ ಮಾಂಸಗಳಿಗೆ ಹೆಚ್ಚಿನ ಬೆಲೆ ಇರುವುದರಿಂದ ಮೃಗಾಲಯಕ್ಕೆ ಮತ್ತಷ್ಟು ಆರ್ಥಿಕ ಹೊರೆಯಾಗಲಿದೆ.
ಗಾಯದ ಮೇಲೆ ಬರೆ: ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯಿದೆ ಜಾರಿ ಮಾಡಿದರೆ, ಈಗಾಗಲೇ ಕೋವಿಡ್‌ನಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮೃಗಾಲಯಗಳಿಗೆ ಆರ್ಥಿಕವಾಗಿ ಮತ್ತಷ್ಟು ಹೊರೆಯಾಗಲಿದೆ. ರಾಜ್ಯದ 9ಮೃಗಾಲಯಗಳಿಗೆ ಪ್ರತಿನಿತ್ಯ 1300 ಕೆ.ಜಿ.ಯಷ್ಟು ದನದ ಮಾಂಸ ಖರೀದಿ ಮಾಡಲಾಗುತ್ತಿತ್ತು. ಇದಕ್ಕೆ ವೆಚ್ಚವಾಗುತ್ತಿದೆ. ಹಣ ನಿತ್ಯ 2.08ಲಕ್ಷ ರೂ. ಆದರೆ ಈಗ ದನದ ಮಾಂಸಕ್ಕೆಪರ್ಯಾಯವಾಗಿ ಮೇಕೆ, ಕುರಿ ಮಾಂಸ ಖರೀದಿಸಿದರೆ 9.75 ಲಕ್ಷ ರೂ. ವೆಚ್ಚವಾಗ ಲಿದೆ. ಈ ಮೂಲಕ ಹೆಚ್ಚುವರಿಯಾಗಿ 7.76 ಲಕ್ಷರೂ. ವಿನಿಯೋಗಿಸಬೇಕಾಗುತ್ತದೆ. ಇದರಿಂದ ಮೃಗಾಲಯಗಳಿಗೆ ಹೆಚ್ಚಿನ ಹೊರೆಯಾಗುವುದಲ್ಲದೇ, ಪ್ರಾಣಿಗಳ ಆಹಾರ ಕ್ರಮ ಮತ್ತು ಪಾಲನೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.
ಮೈಸೂರು ಮೃಗಾಲಯಕ್ಕೆ ಪ್ರತಿ ವರ್ಷ 1,27,750 ಕೆ.ಜಿ ದನದ ಮಾಂಸ ಬೇಕಿದ್ದು, ವಾರ್ಷಿಕವಾಗಿ 2.04 ಕೋಟಿ ರೂ. ವ್ಯಯ ಮಾಡುತ್ತಿದೆ. ಇದಕ್ಕಾಗಿ ಖಾಸಗಿಯವರಿಗೆ ಟೆಂಡರ್ ನೀಡಲಾಗುತ್ತದೆ. ಪ್ರವಾಸಿಗರು ಮೃಗಾಲಯದಿಂದ ಮರಳಿದ ಬಳಿಕ ಅಥವಾ ಸಫಾರಿ ಮುಕ್ತಾಯವಾದ ನಂತರ ಮಾಂಸಹಾರಿ ಪ್ರಾಣಿಗಳಿಗೆ ಆಹಾರ ನೀಡುವುದು ವಾಡಿಕೆ. ನಿತ್ಯ ಸಂಜೆ 5.30-6.30 ರ ಒಳಗೆ ಮಾಂಸಾಹಾರವನ್ನು ಪ್ರಾಣಿಗಳಿಗೆ ನೀಡಲಾಗುತ್ತದೆ. ಹೆಣ್ಣು ಹುಲಿ ಮತ್ತು ಸಿಂಹಕ್ಕೆ ತಲಾ 8 ರಿಂದ 9 ಕೆ.ಜಿ, ಗಂಡು ಸಿಂಹ- ಹುಲಿಗೆ 12ರಿಂದ 14 ಕೆ.ಜಿ. ಮಾಂಸ ಹಾಗೂ ಚಿರತೆಗೆ 6 ರಿಂದ 8 ಕೆ.ಜಿ. ನೀಡಲಾಗುತ್ತಿದೆ. ಪ್ರಾಣಿಯ ದೇಹದ ತೂಕದ ಆಧಾರದ ಮೇರೆಗೆ ಇದನ್ನು ನಿರ್ಧರಿಸಲಾಗುತ್ತದೆ.
ಪ್ರತಿ ಮಂಗಳವಾಋ ಉಪವಾಸ: ಕಾಡಿನಲ್ಲಿ ಬೇಟೆ ಆಡಿದ ವ್ಯಾಘ್ರ ಹೊಟ್ಟೆ ತುಂಬ ಮಾಂಸ ಸೇವಿಸುತ್ತದೆ. ಮೂರ್ನಾಲ್ಕು ದಿನ ಅದು ವಿಶ್ರಾಂತಿ ಪಡೆಯುತ್ತದೆ. ಬಳಿಕ ಆಹಾರ ಹುಡುಕ ಲು ಆರಂಭಿಸುತ್ತದೆ. ಹೀಗಾಗಿ, ಸಮತೋಲನ ಉಂಟಾಗುತ್ತದೆ. ನಿತ್ಯವೂ ಆಹಾರ ಸೇವಿಸುವ ಮೃಗಾಲಯದ ಪ್ರಾಣಿಗಳ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು. ಹೀಗಾಗಿ, ಪ್ರತಿ ಮಂಗಳವಾರ ಈ ಪ್ರಾಣಿಗಳನ್ನು ಉಪವಾಸ ಬಿಡಲಾಗುತ್ತದೆ ಎಂದು ಮೃಗಾಲಯ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ : ಸರ್ಕಾರವೇ ರೈತರಿಂದ ಹಸು ಖರೀದಿಸಿ, BJP ಮುಖಂಡರ ಮನೆಯಲ್ಲೋ, ಜಮೀನಿನಲ್ಲೋ ಸಾಕಲಿ: ಡಿಕೆಶಿ
ದನ ಮಾಂಸ ಮುಖ್ಯ ಆಹಾರ : ಮೃಗಾಲಯ ಪ್ರಾಧಿಕಾರದ ಅಧೀನದಲ್ಲಿರುವ 9 ಮೃಗಾಲಯಗಳ ಪೈಕಿ ಮೂರರಲ್ಲಿ ದನ ಮತ್ತು ಎಮ್ಮೆಯ ಮಾಂಸವೇ ಪ್ರಧಾನ ಆಹಾರ. ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನದಲ್ಲಿ ನಿತ್ಯ 8 ಕ್ವಿಂಟಲ್, ಮೈಸೂರಿನ ಮೃಗಾಲಯದಲ್ಲಿ ದಿನಕ್ಕೆ 4 ಕ್ವಿಂಟಲ್ ಹಾಗೂ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಪ್ರತಿತಿದಿನ 2 ಕ್ವಿಂಟಲ್ ದನದ ಮಾಂಸವನ್ನು ಪ್ರಾಣಿಗಳಿಗೆ ಆಹಾರವಾಗಿ ಕೊಡಲಾಗುತ್ತಿದೆ. ಹುಲಿ, ಸಿಂಹ , ಚಿರತೆ, ಸೀಳುನಾಯಿ,ತೋಳ, ಜಾಗ್ವಾರ್, ಕತ್ತೆ ಕಿರುಬ ಸೇರಿ ಹಲವು ಪ್ರಾಣಿ ಹಾಗೂ ಹದ್ದು, ಗೂಬೆ, ಬಕಪಕ್ಷಿ ಸೇರಿ ಅನೇಕ ಪಕ್ಷಿಗಳು ಮಾಂಸಾಹಾರಿಗಳು. ಕುರಿ, ಕೋಳಿಯೊಂದಿಗೆ ದನ ಮತ್ತು ಎಮ್ಮೆ ಮಾಂಸ ನೀಡಲಾಗುತ್ತಿದೆ.
ದನದ ಮಾಂಸಕ್ಕೆ 2.04 ಕೋಟಿ ರೂ., ಪರ್ಯಾಯಮಾಂಸಕ್ಕೆ 35.58 ಕೋಟಿ : ಪ್ರತಿದಿನ ಮೃಗಾಲಯ ಪ್ರಾಧಿಕಾರ 1300 ಕೆ.ಜಿ.ದನದ ಮಾಂಸ ಖರೀದಿ ಮಾಡಲಿದ್ದು, ವರ್ಷಕ್ಕೆ 1,27,750 ಕೆ.ಜಿ. ದನದ ಮಾಂಸ ಬೇಕಿದ್ದು, ಇದಕ್ಕಾಗಿ ವಾರ್ಷಿಕವಾಗಿ 2.04 ಕೋಟಿರೂ.. ವಿನಿಯೋಗಿಸುತ್ತದೆ. ಒಂದು ವೇಳೆ ಸರ್ಕಾರ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದರೆ, ದನದ ಮಾಂಸದ ಬದಲಿಗೆ ಕುರಿ ಅಥವಾ ಮೇಕೆ ಮಾಂಸ ಖರೀದಿಸಬೇಕು. ಇದಕ್ಕೆ ಪ್ರತಿನಿತ್ಯ 1300 ಕೆ.ಜಿ. ಖರೀದಿಸಿದರೆ 9.75 ಲಕ್ಷ ರೂ. ವೆಚ್ಚವಾಗಲಿದೆ. ಈ ಮೂಲಕ ಹೆಚ್ಚುವರಿಯಾಗಿ7.76 ಲಕ್ಷ ರೂ. ಪ್ರತಿನಿತ್ಯ ವಿನಿಯೋಗಿ ಸಬೇಕಾಗುತ್ತದೆ. ಇದಕ್ಕೆ ವರ್ಷಕ್ಕೆ 35.58 ಕೋಟಿ ರೂ. ವ್ಯಯ ಮಾಡಬೇಕಾಗುತ್ತದೆ.
ದನ ಹಾಗೂ ಎಮ್ಮೆಯ ಮಾಂಸಕ್ಕೆ ಪರ್ಯಾಯವಾಗಿ ಬಳಕೆ ಮಾಡಬಹುದಾದ ಆಹಾರದಕುರಿತು ಗಂಭೀರವಾಗಿ ಚಿಂತಿಸಲಾಗುವುದು. ಆಹಾರಕ್ರಮ ಬದಲಾವಣೆ ಬಗ್ಗೆ ಮೃಗಾಲಯಗಳ ಅಧಿಕಾರಿಗಳು ಹಾಗೂಪಶುವೈದ್ಯರ ಸಭೆಕರೆದು ಚರ್ಚಿಸಲು ನಿರ್ಧರಿಸಲಾಗಿದೆ. ತಜ್ಞರ ಸಲಹೆ ಮೇರೆಗೆ ಮುಂದುವರಿಯುತ್ತೇವೆ. ಮೇಕೆ,ಕುರಿ ಮಾಂಸಖರೀದಿಯಿಂದ ಆರ್ಥಿಕಹೊರೆಯಾದರೂ ಸರ್ಕಾರದ ಆದೇಶ ಪಾಲಿಸುತ್ತೇವೆ. –ಮಹದೇವಸ್ವಾಮಿ, ಅಧ್ಯಕ್ಷರು ಮೃಗಾಲಯ ಪ್ರಾಧಿಕಾರ.
-ಸತೀಶ್ ದೇಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.