ಕೇಂದ್ರದ ಮಾರ್ಗಸೂಚಿಯಂತೆ ಬೆಳೆ ಪರಿಹಾರ
Team Udayavani, Jul 16, 2019, 3:00 AM IST
ಮೈಸೂರು: ವನ್ಯಪ್ರಾಣಿಗಳು ಬೆಳೆ ಹಾನಿ ಮಾಡಿದಾಗ ನೀಡುವ ಪರಿಹಾರ ವೈಜ್ಞಾನಿಕವಾಗಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಬೆಳೆ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಮಾನವ-ವನ್ಯಪ್ರಾಣಿಗಳ ಸಂಘರ್ಷ ತಡೆಯಲು ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.
ನಂಜನಗೂಡು ತಾಲೂಕಿನ ರೈತರೊಬ್ಬರು, ಹುಲ್ಲಹಳ್ಳಿ ಸಮೀಪದ ಓಂಕಾರ್ ಅರಣ್ಯದಂಚಿನಲ್ಲಿ ತಮ್ಮ 10 ಎಕರೆ ಜಮೀನಿದೆ. ಆನೆಗಳು ರೈಲು ಹಳಿಯ ಬೇಲಿ ದಾಟಿ ಬಂದು ಬೆಳೆ ಹಾಳು ಮಾಡುತ್ತಿವೆ ಎಂದು ಅಳಲು ತೋಡಿಕೊಂಡರು.
ಚಿರತೆ ಹಿಡಿಯಲು ಬೋನ್ ಇಟ್ಟರೆ ತಮ್ಮ ಕೆಲಸ ಮುಗಿಯಿತು ಎಂದು ಅರಣ್ಯಾಧಿಕಾರಿಗಳು ತಿಳಿದುಕೊಂಡಿದ್ದಾರೆ. ನಮ್ಮ ಜೀವಕ್ಕೆ ಹಾನಿಯಾದರೆ ಯಾರು ಹೊಣೆ?, ಕಾಡು ಪ್ರಾಣಿಗಳ ಜವಾಬ್ದಾರಿ ಯಾರದು? ಆನೆಗಳು ಏಕೆ ಜಮೀನಿಗೆ ಬರುತ್ತವೆ? ಇದನ್ನು ತಪ್ಪಿಸಲು ಸಾಧ್ಯವಿಲ್ಲವೇ?
ಎಂದು ಪ್ರಶ್ನಿಸಿದ ರೈತರು, ಓಂಕಾರ್ ಅರಣ್ಯ ವ್ಯಾಪ್ತಿಯಲ್ಲಿ ನೀಲಗಿರಿಯನ್ನು ಯಥೇಚ್ಚವಾಗಿ ಬೆಳೆಸಲಾಗಿದೆ. ನೀಲಗಿರಿ ಬದಲಿಗೆ ನೈಸರ್ಗಿಕವಾಗಿ ಕಾಡು ಬೆಳೆಸಬೇಕು ಎಂದು ಸಲಹೆ ನೀಡಿದರು. ಮಾನವ-ವನ್ಯಪ್ರಾಣಿ ಸಂಘರ್ಷದಲ್ಲಿ ಮೃತಪಟ್ಟ ರೈತ ಕುಟುಂಬಕ್ಕೆ ನೀಡುತ್ತಿರುವ ಪರಿಹಾರ ಧನವನ್ನು ಹೆಚ್ಚಿಸಬೇಕು ಎಂದು ರೈತರು ಕೋರಿದರು.
ರೈಲ್ವೆ ಕಂಬಿ ಬೇಲಿ: ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ ಉತ್ತರಿಸಿ, ಓಂಕಾರ್ ಅರಣ್ಯದಲ್ಲಿ ರೈಲು ಕಂಬಿಯ ಬೇಲಿ ದಾಟಿಕೊಂಡು ಆನೆಗಳು ಬರುತ್ತಿರುವುದನ್ನು ತಡೆಯಲು ಕ್ರಮ ಕೈಗೊಂಡಿದ್ದೇವೆ. ಬೋಳೆಗೌಡನ ಕಟ್ಟೆ ಸಮೀಪದಲ್ಲಿ 15 ಕಿ.ಮೀ. ರೈಲ್ವೆ ಕಂಬಿಯ ಬೇಲಿ, 18 ಕಿ.ಮೀ. ಆನೆ ತಡೆ ಕಂದಕವನ್ನು ಡಿಸೆಂಬರ್ ಒಳಗೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಬೆಳೆ ಪರಿಹಾರ ಹೆಚ್ಚಿಸಿ: ಬೆಳೆ ಪರಿಹಾರವನ್ನು ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ 67 ಲಕ್ಷ ರೂ. ಪರಿಹಾರ ನೀಡಬೇಕು. ಇದರಲ್ಲಿ 30 ಲಕ್ಷ ರೂ. ಸರ್ಕಾರ ನೀಡಿದ್ದು, 23 ಲಕ್ಷ ರೂ. ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬಿದಿರು ಬೆಳೆ: ನಾಗರಹೊಳೆ, ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ 150 ಹುಲಿಗಳು, 1600 ಆನೆಗಳು, 25 ಸಾವಿರ ಜಿಂಕೆಗಳಿವೆ. ಎರಡೂ ಭಾಗಗಳಲ್ಲಿಯೂ ಬಿದಿರು ಚೆನ್ನಾಗಿ ಬೆಳೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮೇವಿಗೆ ತೊಂದರೆಯಾಗುವುದಿಲ್ಲ. ಆಗ ರೈತರ ಜಮೀನಿಗೆ ಕಾಡು ಪ್ರಾಣಿಗಳು ಬರುವುದು ಕಡಿಮೆಯಾಗಲಿದೆ ಎಂದರು.
ಕಾರ್ಖಾನೆ ಪುನಾರಂಭ: ಕೆ.ಆರ್.ನಗರ ತಾಲೂಕಿನ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಾರಂಭದ ಸಂಬಂಧ ಟೆಂಡರ್ ದಾಖಲೆಗಳನ್ನು ಹೊಂದಿಸಲಾಗುತ್ತಿದೆ ಎಂದು ಕಾರ್ಖಾನೆಯ ಪ್ರಭಾರ ಎಂ.ಡಿ. ಉಮೇಶ್ ಹೇಳಿದರು.
ಸಾಲಮನ್ನಾ: ಜಿಲ್ಲೆಯ 39,615 ರೈತರ ಒಟ್ಟು 214 ಕೋಟಿ ರೂ. ಸಾಲಮನ್ನಾ ಮಾಡಲಾಗಿದೆ ಎಂದು ಲೀಡ್‌ಬ್ಯಾಂಕ್ ವ್ಯವಸ್ಥಾಪಕ ವೆಂಕಟಾಚಲಪತಿ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 56,704 ರೈತರಿಂದ ಒಟ್ಟು 385 ಕೋಟಿ ರೂ. ಸಾಲವಿದೆ. ಸರ್ಕಾರ 214 ಕೋಟಿ ರೂ.ಗಳನ್ನು ನೀಡಿದ್ದು, ಉಳಿಕೆ 169 ಕೋಟಿ ರೂ. ಬಾಕಿ ಇದೆ.
ಹೊಸ ಸಾಲ ತಕ್ಷಣ ಕೊಡಬೇಕೆಂದು ಎಲ್ಲ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಜ್ಯೋತಿ, ಎಸ್.ಪಿ ರಿಶ್ಯಂತ್, ಜಂಟಿ ಕೃಷಿ ನಿರ್ದೇಶಕ ಡಾ.ಮಹಾಂತೇಶಪ್ಪ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.
ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ: ಜಿಲ್ಲಾ ಮಟ್ಟದ ಸಭೆಯಲ್ಲಿ ರೈತ ಬೊಕ್ಕಳ್ಳಿ ನಂಜುಂಡಸ್ವಾಮಿ ಮಾತನಾಡಿ, ಕೈಗಾರಿಕೆಗಳಿಗೆ ಬೆಳಗಿನ ಜಾವ, ರೈತರಿಗೆ ರಾತ್ರಿ ವೇಳೆ ವಿದ್ಯುತ್ ನೀಡುತ್ತಾರೆ. ಇದರಿಂದ ರೈತರು ಪಂಪ್‌ಸೆಟ್ ಮನೆಯಲ್ಲಿ ಮಲಗಬೇಕಾದ ಸ್ಥಿತಿ ಬಂದಿದೆ. ಇದಕ್ಕಾಗಿಯೇ ರೈತರ ಮಗನಿಗೆ ಹೆಣ್ಣು ಕೊಡುವುದಿಲ್ಲ.
ನಮ್ಮ ಮನೆಯ ಹೆಣ್ಣು ಮಕ್ಕಳು ರೈತರನ್ನು ಮದುವೆಯಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಸೆಸ್ಕ್ನ ಅಧೀಕ್ಷಕ ಇಂಜಿನಿಯರ್ ಮುನಿಗೋಪಾಲ್, ಹಿಂದೆ ಎರಡು ಪಾಳಿ ಮಾಡಿ ರಾತ್ರಿ 3 ಗಂಟೆ ಮತ್ತು ಹಗಲು 4 ಗಂಟೆ ವಿದ್ಯುತ್ ನೀಡಲಾಗುತ್ತಿತ್ತು. ಜಿಲ್ಲೆಯಲ್ಲಿ ಮಾತ್ರ ಈಗ ಹಗಲು ವೇಳೆಯೇ ಬೆಳಗ್ಗೆ 4 ಗಂಟೆಯಿಂದ 7 ಗಂಟೆ ವಿದ್ಯುತ್ ನೀಡಲಾಗುತ್ತಿದೆ ಎಂದರು.
ಬೆಳಗ್ಗೆ 4 ಗಂಟೆಗೆ ವಿದ್ಯುತ್ ನೀಡಿದರೆ ಕಾಡಂಚಿನ ಜಮೀನಿಗೆ ರೈತರು ಹೋಗಿ ಸಾಯಬೇಕೆ?, ಕಾಡು ಪ್ರಾಣಿಗಳ ಹಾವಳಿ ಇರುತ್ತದೆ. ಹಾಗಾಗೀ ಈ ಸಮಯವನ್ನು ಸ್ವಲ್ಪ ಬದಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.