ದಸರಾ ಮುಗಿತು: ಯಥಾಸ್ಥಿತಿಗೆ ಮರಳಿದ ಮೈಸೂರು
Team Udayavani, Oct 10, 2019, 3:00 AM IST
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಸಿಂಗಾರಗೊಂಡು, ಹತ್ತಾರು ಕಾರ್ಯಕ್ರಮಗಳೊಂದಿಗೆ ಕಳೆದ ಹತ್ತು ದಿನಗಳಿಂದ ಜನರನ್ನು ಆಕರ್ಷಿಸಿದ್ದ ಮೈಸೂರು ನಗರ ಯಥಾಸ್ಥಿತಿಗೆ ಮರಳಿದೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆ ವೀಕ್ಷಣೆಗಾಗಿ ಅರಮನೆ ಆವರಣ ಹಾಗೂ ಮೆರವಣಿಗೆ ಸಾಗುವ ಮಾರ್ಗದಲ್ಲಿ ಹಾಕಲಾಗಿದ್ದ ಪೆಂಡಾಲ್, ಶಾಮಿಯಾನ, ಕುರ್ಚಿಗಳನ್ನು ತೆರವುಗೊಳಿಸಲಾಗುತ್ತಿದೆ.
ಕಳೆದ ಹತ್ತು ದಿನಗಳಿಂದ ಜನರಿಂದ ತುಂಬಿ ತುಳುಕುತ್ತಿದ್ದ ಮೈಸೂರಿನ ರಸ್ತೆಗಳು ಮೊದಲಿನ ಸ್ಥಿತಿಗೆ ಮರಳಿದ್ದು, ಮೈಸೂರು ನಗರದಲ್ಲಿರುವ ಹೋಟೆಲ್, ವಸತಿ ಗೃಹಗಳಲ್ಲಿ ಸುಮಾರು 6 ಸಾವಿರ ಕೊಠಡಿಗಳಿದ್ದು, ಕಳೆದ ಮೂರು ದಿನಗಳಲ್ಲಿ ಶೇ.100ರಷ್ಟು ಭರ್ತಿಯಾಗಿತ್ತು. ಇದೀಗ ದಸರಾ ಮುಗಿದ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಬಂದಿದ್ದ ಪ್ರವಾಸಿಗರು ಕೊಠಡಿಗಳನ್ನು ಖಾಲಿ ಮಾಡಿ ತೆರಳುತ್ತಿದ್ದರೆ, ಶಾಲಾ-ಕಾಲೇಜುಗಳಿಗೆ ದಸರಾ ರಜೆ ಇರುವ ಕಾರಣ ಮೈಸೂರು ಸುತ್ತಮುತ್ತಲಿನ ಕೊಡಗು, ಊಟಿ ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತಿದ್ದಾರೆ.
ಹತ್ತು ದಿನಗಳ ಮೈಸೂರು ದಸರೆಗೆ ಉಳಿದ ಒಂಭತ್ತು ದಿನಗಳಿಗಿಂತ ವಿಜಯದಶಮಿ ಮೆರವಣಿಗೆ (ಜಂಬೂಸವಾರಿ)ಯೇ ಹೆಚ್ಚಿನ ಜನಾಕರ್ಷಣೆ ಹೊಂದಿರುವುದರಿಂದ ಮಂಗಳವಾರ ಮೈಸೂರು ನಗರದ ಎಲ್ಲಿ ನೋಡಿದರೂ ಜನ..ಜನ..ಜನರೇ ಕಾಣಸಿಗುತ್ತಿದ್ದರು. ಮಧ್ಯಾಹ್ನ 2.15ರ ನಂತರ ಜಂಬೂಸವಾರಿ ಮೆರವಣಿಗೆ ಹೊರಡುವುದು ತಿಳಿದಿದ್ದರೂ ಹತ್ತಿರದಿಂದ ಅಂಬಾರಿಯನ್ನು ಕಣ್ತುಂಬಿಕೊಳ್ಳಬೇಕು,
ಮಕ್ಕಳಿಗೆ ಕಲೆ-ಸಂಸ್ಕೃತಿಯ ವೈಭವವನ್ನು ಪರಿಚಯಿಸಬೇಕು ಎಂಬ ಮಹದಾಸೆಯಿಂದ ಬೆಳಗ್ಗೆ 7 ಗಂಟೆಯಿಂದಲೇ ಗೋಲ್ಡ್‌ಕಾರ್ಡ್, ಪಾಸ್ ಹೊಂದಿದ್ದವರು ಅರಮನೆ ಆವರಣಕ್ಕೆ ಆಗಮಿಸಿ ಉರಿ ಬಿಸಿಲನ್ನೂ ಲೆಕ್ಕಿಸದೆ ಜಂಬೂಸವಾರಿ ಆರಂಭವಾಗುವುದನ್ನೇ ಎದುರು ನೋಡುತ್ತಾ ಕುಳಿತಿದ್ದರೆ, ಇತ್ತ ಅರಮನೆ ಹೊರಭಾಗದ ಜಯ ಚಾಮರಾಜೇಂದ್ರ ವೃತ್ತದಿಂದ ಜಂಬೂಸವಾರಿ ಸಾಗುವ ಕೆ.ಆರ್.ವೃತ್ತ, ನ್ಯೂ ಸಯ್ನಾಜಿರಾವ್ ರಸ್ತೆ, ಬಂಬೂ ಬಜಾರ್, ಹೈವೇ ವೃತ್ತ,
ಬನ್ನಿಮಂಟಪ ಮೈದಾನದವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಜಂಬೂಸವಾರಿ ವೀಕ್ಷಣೆಗೆ ಗೊತ್ತುಪಡಿಸಿದ ಸ್ಥಳಗಳಲ್ಲಿ ಮಾತ್ರವಲ್ಲದೆ, ಸಿಕ್ಕ ಸಿಕ್ಕ ಮರ, ಕಟ್ಟಡಗಳ ಮೇಲೆ ಹತ್ತಿ ಕುಳಿತು ಜಂಬೂಸವಾರಿಯನ್ನು ಕಣ್ತುಂಬಿಕೊಂಡರು. ಅಂಬಾರಿ ಕಂಡ ಕೂಡಲೇ ಭಕ್ತಿಭಾವದಿಂದ ಚಾಮುಂಡೇಶ್ವರಿಗೆ ಕೈಮುಗಿದು ಕೆಲವರು ಮನೆಯತ್ತ ಹೊರಟರೆ, ಮತ್ತೆ ಕೆಲವರು ಪಂಜಿನ ಕವಾಯತು ವೀಕ್ಷಣೆಗಾಗಿ ಬನ್ನಿಮಂಟಪ ಮೈದಾನದತ್ತ, ಮತ್ತೆ ಕೆಲವರು ಮಡಿಕೇರಿ ದಸರೆಗೆ ತೆರಳಲು ಧಾವಿಸತೊಡಗಿದ್ದರಿಂದ ನಗರದ ರಸ್ತೆಗಳೆಲ್ಲ ಜನರಿಂದ ತುಂಬಿದ್ದವು.
ಜಂಬೂಸವಾರಿ ವೀಕ್ಷಣೆಗಾಗಿ ಅರಮನೆ ಆವರಣದಲ್ಲಿ 26 ಸಾವಿರ, ಪಂಜಿನ ಕವಾಯತು ವೀಕ್ಷಣೆಗಾಗಿ ಬನ್ನಿಮಂಟಪ ಮೈದಾನದಲ್ಲಿ 32 ಸಾವಿರ ಆಸನ ವ್ಯವಸ್ಥೆ ಮಾಡಲಾಗಿತ್ತು. ಅರಮನೆ ಆವರಣದಲ್ಲಿ ಬೆಳಗ್ಗಿನಿಂದಲೇ ಬಂದು ಕುಳಿತವರು ತಿಂದು ಬಿಸಡಿದ ಬಿಸ್ಕೆಟ್ ಮತ್ತಿತರೆ ತಿಂಡಿಗಳ ಪ್ಲಾಸ್ಟಿಕ್ ಕವರ್‌ಗಳು, ದಾಹತಣಿಸಿಕೊಳ್ಳಲು ತಂದಿದ್ದ ನೀರಿನ ಬಾಟಲಿಗಳು, ತಂಪುಪಾನೀಯಗಳ ಬಾಟಲಿ, ಟೆಟ್ರಾಪ್ಯಾಕ್‌ಗಳನ್ನು ಬಿಸಾಡಿ ಹೋಗಿದ್ದನ್ನು ಪೌರ ಕಾರ್ಮಿಕರು ಸ್ವಚ್ಛಗೊಳಿಸಿದರು.
ದಸರೆ ಮುಗಿದ ಬೆನ್ನಲ್ಲೇ ಬುಧವಾರ ನಗರದ ರಸ್ತೆಗಳೆಲ್ಲ ನಿರಾಳವಾಗಿವೆ. ಹಬ್ಬದ ರಜೆಗೆ ಮನೆಗೆ ಬಂದಿದ್ದವರು ಕರ್ತವ್ಯಕ್ಕೆ ಮರಳಲು ಹೊರಟದ್ದರಿಂದ ಬುಧವಾರ ಬೆಳಗಿನ ವೇಳೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮತ್ತು ಬಸ್‌ಗಳಲ್ಲಿ ಜನ ದಟ್ಟಣೆ ವಿಪರೀತವಾಗಿತ್ತು.
ಜಂಬೂಸವಾರಿ ಯಶಸ್ವಿಗೊಳಿಸಿದ ಗಜಪಡೆಗೆ ವಿಶ್ರಾಂತಿ: ಜಂಬೂಸವಾರಿ ಮೆರವಣಿಗೆಗಾಗಿ ಒಂದೂವರೆ ತಿಂಗಳ ಹಿಂದೆ ಅಂಬಾರಿ ಆನೆ ಅರ್ಜುನ ನೇತೃತ್ವದಲ್ಲಿ ಕಾಡಿನ ವಿವಿಧ ಆನೆ ಶಿಬಿರಗಳಿಂದ ಕರೆತರಲಾಗಿದ್ದ ಗಜಪಡೆ ಅರಣ್ಯ ಇಲಾಖೆಯ ವಿಶೇಷ ಆರೈಕೆಯಲ್ಲಿ ನಿತ್ಯ ತಾಲೀಮು ನಡೆಸಿದ್ದವು. ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಗಜಪಡೆಗೆ ಬುಧವಾರ ವಿಶ್ರಾಂತಿ ನೀಡಲಾಗಿದ್ದು,
ಅರಮನೆ ಆವರಣದಲ್ಲಿ ಆನೆಗಳಿಗೆ ಮಜ್ಜನ ಮಾಡಿಸಿ ಜಂಬೂಸವಾರಿಗೆ ಅಲಂಕರಿಸಲಾಗಿದ್ದ ಬಣ್ಣವನ್ನು ತೊಳೆದು, ಆಹಾರ ನೀಡಿ ವಿಶ್ರಾಂತಿ ನೀಡಿ, ಆನೆಗಳಿಗೆ ಧರಿಸಿದ್ದ ವಸ್ತ್ರಗಳನ್ನು ಅರಮನೆ ಮಂಡಳಿಗೆ ಹಿಂದಿರುಗಿಸಿ, ಮಾವುತರು ಮತ್ತು ಕಾವಾಡಿಗಳು ಸಹ ವಿಶ್ರಾಂತಿಯ ಮೊರೆ ಹೋಗಿದ್ದರು. ಅವರ ಕುಟುಂಬದವರು ತಾವು ಬೀಡುಬಿಟ್ಟಿದ್ದ ಟೆಂಟ್‌ಗಳಲ್ಲಿ ತಮ್ಮ ಹಾಡಿಗಳಿಗೆ ಹಿಂತಿರುಗಲು ಅಗತ್ಯ ಸಿದ್ಧತೆ ನಡೆಸುತ್ತಿದ್ದರೆ, ಮತ್ತೆ ಕೆಲವರು ಮಕ್ಕಳನ್ನು ಕರೆದೊಯ್ದು ನಗರವನ್ನು ತೋರಿಸಿ, ತಿಂಡಿ-ಆಟಿಕೆಗಳನ್ನು ಕೊಡಿಸುತ್ತಿದ್ದ ದೃಶ್ಯ ಕಂಡುಬಂತು.
ಮತ್ತೊಂದು ಹೊಣೆ: ದಸರಾ ಮುಗಿದ ಬೆನ್ನಲ್ಲೆ ಗುಂಡ್ಲುಪೇಟೆ ತಾಲೂಕಿನ ಹುಂಡಿಪುರ ಗ್ರಾಮದ ಬಳಿ ದಾಳಿ ಮಾಡಿ ವ್ಯಕ್ತಿಯೊಬ್ಬರನ್ನು ಕೊಂದಿರುವ ಹುಲಿ ಸೆರೆ ಕಾರ್ಯಾಚರಣೆಗೆ ಅರ್ಜುನ, ಅಭಿಮನ್ಯು ಆನೆಗಳನ್ನು ಕಳುಹಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.
ಎಲ್ಲರ ಸಹಕಾರದಿಂದ ದಸರಾ ಸಂಪೂರ್ಣ ಯಶಸ್ವಿಯಾಗಿದೆ. ದಸರಾ ಆಚರಣೆ ಮಾಡಲು ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ.
-ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.