ಹಳೇ ಮೈಸೂರು ಭಾಗದಲ್ಲಿ ದಾಸೋಹ ಪರಂಪರೆ
Team Udayavani, Dec 19, 2018, 11:42 AM IST
ದ್ವೇಷದಿಂದ ಪ್ರಸಾದಕ್ಕೆ ವಿಷ ಬೆರೆಸಿ ಅಮಾಯಕರನ್ನು ಬಲಿ ತೆಗೆದುಕೊಂಡ ಸುಳ್ವಾಡಿ ಮಾರಮ್ಮ ದೇಗುಲ ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರ, ಸಾರ್ವಜನಿಕರ ಧಾರ್ಮಿಕ ಭಾವನೆಗಳ ಮೇಲೆ ನಿರ್ಬಂಧ ಹೇರಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ನೂರಾರು ವರ್ಷಗಳಿಂದ ಹಸಿದವರಿಗೆ ಅನ್ನ ದಾಸೋಹ ನಡೆಸುವ ನಾಡಿನ ಮಠ-ಮಂದಿರಗಳನ್ನು ಏಕಾಏಕಿ ಅನುಮಾನದಿಂದ ನೋಡುವುದು ಸರಿಯಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಏತನ್ಮಧ್ಯೆ, ಸಿಸಿ ಟಿವಿ ಅಳವಡಿಕೆ ಕಡ್ಡಾಯ ಮಾಡಿರುವ ಸರ್ಕಾರದ ಆದೇಶವನ್ನು ಕೆಲ ಸಂಘ ಸಂಸ್ಥೆಗಳು ಸ್ವಾಗತಿಸಿವೆ.
ಮೈಸೂರು: ಸುಳ್ವಾಡಿಯ ಕಿಚ್‌ಗುತ್ ಮಾರಮ್ಮ ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದ ವ್ಯಕ್ತಿಗತ ದ್ವೇಷದಿಂದ ಪ್ರಸಾದಕ್ಕೆ ವಿಷ ಬೆರೆಸಿ ಅಮಾಯಕರನ್ನು ಬಲಿ ತೆಗೆದುಕೊಂಡ ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರ, ಸಾರ್ವಜನಿಕರ ಧಾರ್ಮಿಕ ಭಾವನೆಗಳ ಮೇಲೆ ನಿರ್ಬಂಧ ಹೇರಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ನಾಡಿನ ಮಠ-ಮಂದಿರಗಳು ನೂರಾರು ವರ್ಷಗಳಿಂದ ಹಸಿದವರಿಗೆ ಪ್ರಸಾದ ರೂಪದಲ್ಲಿ ಅನ್ನ ನೀಡುವ ಮೂಲಕ ಅನ್ನದಾಸೋಹ ನಡೆಸುತ್ತಾ ಬಂದಿವೆ. ಇಂತಹ ಅನ್ನ ದಾಸೋಹ ಪರಂಪರೆಯನ್ನೇ ಏಕಾಏಕಿ ಅನುಮಾನದಿಂದ ನೋಡುವುದು ಸರಿಯಲ್ಲ.
ಕಿಚ್‌ಗುತ್ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವನೆಯಿಂದ ಮಾರಣ ಹೋಮ ನಡೆದ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸೋಮವಾರ ಸುತ್ತೋಲೆ ಹೊರಡಿಸಿ, ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಅಧಿಸೂಚಿತ ಸಂಸ್ಥೆಗಳಲ್ಲಿ ಭಕ್ತಾಧಿಗಳಿಗೆ ಪ್ರಸಾದ ರೂಪದಲ್ಲಿ ಅನ್ನ ದಾಸೋಹ ವ್ಯವಸ್ಥೆ ಇರುವ ಕಡೆಗಳಲ್ಲಿ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ನಿಬಂಧನೆಗಳನ್ನು ಹೇರಿದ್ದಾರೆ.
ದೇವರ ನೈವೇದ್ಯಕ್ಕಾಗಿ ಮತ್ತು ದಾಸೋಹಕ್ಕಾಗಿ ಇರುವ ಅಡುಗೆ ಕೋಣೆಗೆ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ಅಡುಗೆ ಕೋಣೆಗೆ ಯಾರೇ ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ಕಟ್ಟು ನಿಟ್ಟಾಗಿ ನಿಗಾವಹಿಸುವುದು. ತಯಾರಿಸಿದ ನೈವೇದ್ಯ-ಅಡುಗೆ ಸ್ವೀಕರಿಸಲು ಯೋಗ್ಯ ವಾಗಿರುವ ಬಗ್ಗೆ ಖಚಿತಪಡಿಸಿಕೊಂಡು ನಂತರ ವಿತರಣೆ ಮಾಡಲು ಕ್ರಮವಹಿಸುವುದು.
ದೇವಾಲಯದ ಪರಿಸರದಲ್ಲಿ ಭಕ್ತಾದಿಗಳೇ ಪ್ರಸಾದ ತಯಾರಿಸಿ ನೇರವಾಗಿ ಭಕ್ತಾದಿಗಳಿಗೆ ವಿತರಿಸುವ ವಿಚಾರದಲ್ಲಿ ಪೂರ್ವಭಾವಿ ಅನುಮತಿ ಪಡೆಯುವುದು ಹಾಗೂ ಭಕ್ತಾದಿಗಳಿಗೆ ವಿತರಿಸುವ ಮುನ್ನ ಆರೋಗ್ಯ ಇಲಾಖೆಯ ಆಹಾರ ಸುರಕ್ಷಾ ತಂಡದಿಂದ ಪರೀಕ್ಷೆಗೆ ಒಳಪಡಿಸಿ ಪ್ರಸಾದವು ಸ್ವೀಕರಿಸಲು ಯೋಗ್ಯವಾಗಿರುವ ಬಗ್ಗೆ ದೃಢೀಕರಣ ಪಡೆದುಕೊಳ್ಳತಕ್ಕದ್ದು ಎಂಬ ನಾಲ್ಕು ನಿಬಂಧನೆಗಳನ್ನು ಹಾಕಿದ್ದಾರೆ.
ಹಾಗೆ ನೋಡಿದರೆ ಮೈಸೂರು ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಅನ್ನ ದಾಸೋಹ ನಡೆಸಿಕೊಂಡು ಬರಲಾಗುತ್ತಿದೆ.
ಉಳಿದಂತೆ ಆಷಾಢ ಶುಕ್ರವಾರಗಳಂದು, ಚಾಮುಂಡೇಶ್ವರಿ ದೇವಿಯ ವರ್ಧಂತಿಯಂದು ದೇವಿಯ ದರ್ಶನಕ್ಕೆ ಚಾಮುಂಡಿಬೆಟ್ಟಕ್ಕೆ ಬರುವ ಸಾವಿರಾರು ಭಕ್ತರಿಗೆ ಇಷ್ಟಾರ್ಥ ಸಿದ್ಧಿಗಾಗಿ ದೇವಿಗೆ ಹರಕೆ ಹೊತ್ತವರು ಪ್ರತಿ ಶುಕ್ರವಾರಗಳಂದು ಅನ್ನಸಂತರ್ಪಣೆ ಏರ್ಪಡಿಸುತ್ತಾ ಬಂದಿದ್ದಾರೆ. ಜೊತೆಗೆ ಆ ದಿನಗಳಲ್ಲಿ ಮೈಸೂರು ನಗರದ ಮೂಲೆ ಮೂಲೆಗಳಲ್ಲಿ ಭಕ್ತರು ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡುತ್ತಾ ಬಂದಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಸುತ್ತೂರು ಶ್ರೀಕ್ಷೇತ್ರ ದಾಸೋಹಕ್ಕೆ ಹೇಳಿ ಮಾಡಿಸಿದಂತಿದೆ. ಹಸಿದು ಬಂದವರು ಯಾವುದೇ ಸಮಯದಲ್ಲಿ ಮಠಕ್ಕೆ ಹೋದರು ಅವರಿಗೆ ದಾಸೋಹ ಇದ್ದೇ ಇರುತ್ತದೆ. ಇನ್ನು ಸುತ್ತೂರು ಸಂಸ್ಥಾನದವತಿಯಿಂದ ಪ್ರತಿ ವರ್ಷ ವಾರಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಜನರು ದಾಸೋಹ ಸ್ವೀಕರಿಸುತ್ತಾರೆ.
ಇನ್ನು ಬೆಟ್ಟದ ಬಳಗ ಚಾರಿ ಟಬಲ್‌ಟ್ರಸ್ ಹಾಗೂ ಬೆಟ್ಟದ ಮೆಟ್ಟಿಲು ಹತ್ತುವ ಬಳಗಗಳಿಂದ ಪ್ರತಿ ವರ್ಷ ಪ್ರತ್ಯೇಕವಾಗಿ ಚಾಮುಂಡಿಬೆಟ್ಟದ ಮಹಾ ನಂದಿಗೆ ಅಭಿಷೇಕ ನಡೆಸಿ, ಅನ್ನಸಂತರ್ಪಣೆ ಮಾಡುತ್ತಾ ಬರಲಾಗಿದೆ. ರಾಮ ನವಮಿಯಂದು ನಗರಾದ್ಯಂತ ಶ್ರೀರಾಮನ ಫೋಟೋ ಇಟ್ಟು ಪೂಜಿಸಿ, ಸಾರ್ವಜನಿಕರಿಗೆ ಕೋಸಂಬರಿ, ಪಾನಕ, ನೀರು ಮಜ್ಜಿಗೆ ವಿತರಿಸಲಾಗುತ್ತದೆ.
ಗಣೇಶ ಚತುರ್ಥಿ ಸಂದರ್ಭದಲ್ಲಿ ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡುವ ಸಂಘ ಸಂಸ್ಥೆಗಳವರು ಅನ್ನ ಸಂತರ್ಪಣೆ ಏರ್ಪಡಿಸುವುದು, ಅಯ್ಯಪ್ಪ ಮಾಲಾಧಾರಿಗಳೂ ಇರುಮುಡಿ ಪೂಜೆಯ ದಿನ ಅನ್ನಸಂತರ್ಪಣೆ ಏರ್ಪಡಿಸುವುದು ವಾಡಿಕೆಯಾಗಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಯಾವುದೋ ಒಂದು ಘಟನೆಯನ್ನು ಮುಂದಿಟ್ಟುಕೊಂಡು ಜನರ ಧಾರ್ಮಿಕ ಭಾವನೆಗಳ ಮೇಲೆ ಪ್ರಹಾರ ನಡೆಸುವುದು ಸರಿಯಲ್ಲ.
ಬೆಟ್ಟದ ಬಳಗದವತಿಯಿಂದ ಕಳೆದ 13 ವರ್ಷಗಳಿಂದ ಮಹಾ ನಂದಿಗೆ ಅಭಿಷೇಕ ಮಾಡಿದ ನಂತರ 6,7 ಸಾವಿರ ಜನರಿಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ. ಚಾಮುಂಡಿ ವರ್ಧಂತಿ ದಿನ ಮೈಸೂರಿನಲ್ಲಿ 600ಕ್ಕೂ ಹೆಚ್ಚು ಕಡೆಗಳಲ್ಲಿ ಅನ್ನ ಸಂತರ್ಪಣೆ ಇರುತ್ತದೆ. ಸರ್ಕಾರ ಸುತ್ತೋಲೆ ಹೊರಡಿಸಿದ ತಕ್ಷಣ ಆರೋಗ್ಯಾಧಿಕಾರಿಗಳು ಅಲ್ಲೆಲ್ಲಾ ಹೋಗಿ ಆಹಾರ ತಪಾಸಣೆ ಮಾಡಿ ದೃಢೀಕರಿಸಿಕೊಡಲು ಸಾಧ್ಯವೆ?
ದೇವರ ಪೂಜೆ ಮಾಡಿ ಎಲ್ಲರೂ ಭಕ್ತಿಯಿಂದಲೇ ಪ್ರಸಾದ ತಯಾರಿಸುತ್ತಾರೆ, ಭಕ್ತರೂ ಸಹ ಭಕ್ತಿಯಿಂದಲೇ ಪ್ರಸಾದ ಸ್ವೀಕರಿಸುತ್ತಾರೆ. ಯಾರೋ ಕಿಡಿಗೇಡಿಗಳು ಮಾಡಿದ್ದಕ್ಕೆ ಸರ್ಕಾರ ಸಾರ್ವತ್ರಿಕವಾಗಿ ಈ ರೀತಿಯ ತೀರ್ಮಾನ ಮಾಡಿದ್ದು ಸರಿಯಲ್ಲ ಎನ್ನುತ್ತಾರೆ ಬೆಟ್ಟದ ಬಳಗದ ಕಾರ್ಯದರ್ಶಿ ಗೋವಿಂದ.
ದೇವಾಲಯದ ಒಳಗಿನ ಚಟುವಟಿಕೆಗಳಿಗೂ ಭಕ್ತರಿಗೂ ಸಂಬಂಧ ಇರುವುದಿಲ್ಲ. ಭಕ್ತರು ಅಮಾಯಕರು. ಇಂಥವರ ಮೇಲೆ ಹಗೆ ತೀರಿಸಬಹುದಾದ ವಾತಾವರಣ ದೇವಾಲಯಗಳಲ್ಲಿ ನಿರ್ಮಾಣವಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಮಂದಿರ, ಮಸೀದಿ, ದೇವಾಲಯಗಳು ಜನರಲ್ಲಿ ದೇವ ಭಯವನ್ನು ಹುಟ್ಟಿಸುವ ಪವಿತ್ರ ಸ್ಥಳಗಳಾಗಿವೆ.
ಭಕ್ತರ ನಂಬಿಕೆಯ ಕೇಂದ್ರಗಳಾಗಿರುವ ಇಂತಹ ಪುಣ್ಯಕ್ಷೇತ್ರಗಳಲ್ಲಿ ಮಾನವೀಯ ಕೃತ್ಯಗಳು ನಡೆಯುವುದಾದರೆ ಅಕ್ಕರೆ ಪರಲೋಕದ ಜ್ಞಾನ, ಸ್ವರ್ಗದ ನೈಜ ಕಲ್ಪನೆ, ಪಾಪಕಾರ್ಯಗಳಿಗೆ ನರಕಾಗ್ನಿಯ ರೂಪದಲ್ಲಿ ಸಿಗಲೇಬಾಕದ ತಕ್ಕ ಶಿಕ್ಷೆಯ ಭೀತಿ ಮತ್ತು ನಿಜವಾದ ದೇವಭಯವಿಲ್ಲದಿರುವುದೇ ಕಾರಣವಾಗಿದೆ.
ಈ ಘಟನೆಯನ್ನು ಮುಂದಿಟ್ಟುಕೊಂಡು ಜನರಲ್ಲಿ ದೇವಭಯವನ್ನು ಹುಟ್ಟಿಸುವ ಕೆಲಸವಾಗಬೇಕಿದೆ. ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಸುರಕ್ಷಾ ಕ್ರಮಗಳನ್ನು ಕೈಗೊಂಡು ತಪಾಸಣೆಗೆ ಒಳಪಡಿಸಿದ ನಂತರವೇ ಪ್ರಸಾದವನ್ನು ನೀಡುವ ಕ್ರಮ ಜಾರಿಗೆ ತರಬೇಕಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ಅಧ್ಯಕ್ಷ ಅನವ್ವರ್ ಪಾಷಾ ಹೇಳುತ್ತಾರೆ.
ಗುರು ಮಲ್ಲೇಶ್ವರರು ದಾಸೋಹ ಪರಂಪರೆ: ಗುರು ಮಲ್ಲೇಶ್ವರರು ದಾಸೋಹ ಪರಂಪರೆಯನ್ನು ಹುಟ್ಟುಹಾಕಿ, ಹಸಿದು ಬಂದ ಭಕ್ತರಿಗೆ ಪ್ರಸಾದ ನೀಡಲು ಜೋಳಿಗೆ ಹಿಡಿದು ಮನೆ ಮನೆಗೆ ಹೋಗಿ ಅನ್ನ ಭಿಕ್ಷೆ ಪಡೆದು ಬರುತ್ತಿದ್ದರು. ಆ ಪರಂಪರೆ ಇಂದಿಗೂ ಮುಂದುವರಿದಿದೆ ಎನ್ನುತ್ತಾರೆ ಹಿರಿಯರು.
ಇಂದಿಗೂ ಗುರು ಮಲ್ಲೇಶ್ವರ ಪರಂಪರೆಯ ಮಠದ ಸ್ವಾಮೀಜಿಗಳು ಕಂಬಳಿ ಹೊದ್ದು, ಲಾಟೀನು ಹಿಡಿದು ಜೋಳಿಗೆ ಹಾಕಿಕೊಂಡು ಮನೆ ಮನೆಗೆ ಹೋಗಿ ಆ ಮನೆಯವರು ನೀಡಿದ ಅನ್ನ, ಸಾಂಬಾರು, ರೊಟ್ಟಿಯನ್ನು ಪಡೆದು ಬಂದು ಮಠಕ್ಕೆ ಬಂದ ಭಕ್ತರಿಗೆ ದಾಸೋಹ ನೀಡಲಾಗುತ್ತದೆ. ಪಂಕ್ತಿಯಲ್ಲಿ ದಾಸೋಹ ಸ್ವೀಕರಿಸುವಾಗ ಅಲಕ್ ನಿರಂಜನ ಗುರು ಮಲ್ಲೇಶ್ವರ ಮಹಾ ಪ್ರಭು ಎಂದು ಹೇಳುವುದು ಇದೇ ಕಾರಣಕ್ಕೆ ಎನ್ನುತ್ತಾರೆ.
ನಾಲ್ಕೈದು ತಿಂಗಳ ಹಿಂದೆಯೇ ದೇವಸ್ಥಾನದ ದಾಸೋಹ ಭವನದ ಅಡುಗೆ ಕೋಣೆ ಹಾಗೂ ಹಾಲ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅಡುಗೆಗೂ ಶುದ್ಧ ಕುಡಿಯುವ ನೀರನ್ನೇ ಬಳಸಲಾಗುತ್ತದೆ. 3-4 ತಿಂಗಳಿಗೊಮ್ಮೆ ಕುಡಿಯುವ ನೀರನ್ನೂ ತಜ್ಞರಿಂದ ದೃಢೀಕರಿಸಲಾಗುತ್ತದೆ. ದಾಸೋಹ ಭವನದ ಮೇಲ್ವಿಚಾರಕರು ಅನ್ನ ಪ್ರಸಾದವನ್ನು ಸೇವಿಸಿದ ನಂತರವೇ ಭಕ್ತರಿಗೆ ನೀಡಲಾಗುತ್ತದೆ. ಸರ್ಕಾರದ ಸುತ್ತೋಲೆ ಹಿನ್ನೆಲೆಯಲ್ಲಿ ಇನ್ನೂ ಪರಿಣಾಮಕಾರಿಯಾಗಿ ನಿಗಾವಹಿಸುತ್ತೇವೆ.
-ಪ್ರಸಾದ್, ಕಾರ್ಯನಿರ್ವಾಹಕ ಅಧಿಕಾರಿ, ಚಾಮುಂಡೇಶ್ವರಿ ದೇಗುಲ
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಮೈಸೂರು ಜಿಲ್ಲೆಯ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಮಾತ್ರ ಅನ್ನ ದಾಸೋಹ ವ್ಯವಸ್ಥೆ ಇದೆ. ಸರ್ಕಾರ ಸುತ್ತೋಲೆಯಲ್ಲಿ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.
-ಯತಿರಾಜ್ ಸಂಪತ್‌ಕುಮಾರ್, ಮುಜರಾಯಿ ತಹಶೀಲ್ದಾರ್ ಸಂಸ್ಥೆಗಳು ಸ್ವಾಗತಿಸಿವೆ.
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.