ಸಾಲಮನ್ನಾ: ಯೂಟರ್ನ್, ರೈಟ್ ಟರ್ನ್ ಇಲ್ಲ
Team Udayavani, May 24, 2018, 4:11 PM IST
ಮೈಸೂರು: ರೈತರ ಸಾಲಮನ್ನಾ ವಿಚಾರದ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು, ನಾನು ನೀಡಿದ್ದ ವಾಗ್ಧಾನವನ್ನು ಈಡೇರಿಸದೆ ಇರುವುದಿಲ್ಲ. ಅಲ್ಲಿಯವರೆಗೆ ನಾಡಿನ ರೈತರು, ರೈತ ಮುಖಂಡರು ತಾಳ್ಮೆ ವಹಿಸಬೇಕು, ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಬುಧವಾರ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಮೈಸೂರಿಗೆ ಆಗಮಿಸಿ ಚಾಮುಂಡಿಬೆಟ್ಟಕ್ಕೆ ತೆರಳಿ, ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲಮನ್ನಾ ವಿಚಾರದಲ್ಲಿ ನಾನು ಯೂಟರ್ನ್, ರೈಟ್ ಟರ್ನ್ ಯಾವುದನ್ನೂ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಮ್ಮಿಶ್ರ ಸರ್ಕಾರ ಆಗಿರುವುದರಿಂದ ಕಾಂಗ್ರೆಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಬೇಕಿದೆ.
ಹೀಗಾಗಿ ರೈತರ ಸಾಲಮನ್ನಾಕ್ಕೆ ಸ್ವಲ್ಪ ಸಮಯ ಬೇಕಿದೆ. ಸಾಲಮನ್ನಾದಿಂದ ಆರ್ಥಿಕ ಹೊರೆ ಅನುಭವಿಸಬೇಕಾಗುತ್ತದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ನನ್ನ ಅಭಿಪ್ರಾಯ ಹಾಗೂ ಯೋಜನೆ ಬೇರೆಯೇ ಇದೆ. ರೈತ ಮುಖಂಡರು ಈ ವಿಚಾರವನ್ನು ಜಾತೀ ನೆಲೆಯಲ್ಲಿ ನೋಡುವುದು ಬೇಡ. ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಧಕ್ಕೆಯಾಗದಂತೆ ಸಾಲಮನ್ನಾ ವಿಚಾರದಲ್ಲಿ ಮುಂದುವರಿಯುವುದಾಗಿ ತಿಳಿಸಿದರು. ರೈತರನ್ನು ಕೇವಲ ಸಾಲಮನ್ನಾಕ್ಕೆ ಸೀಮಿತಗೊಳಿ ಸುವುದಿಲ್ಲ. ಇಸ್ರೇಲ್ ಮಾದರಿಯ ಕೃಷಿ ನೀತಿ ಸೇರಿದಂತೆ ಹಲವಾರು ಸುಧಾರಿತ ಕೃಷಿ ಪದ್ಧತಿ ಗಳನ್ನು ಜಾರಿಗೆ ತರುವ ಆಲೋಚನೆ ಇದೆ ಎಂದು ಹೇಳಿದರು.
ತೃಪ್ತಿ ತಂದಿಲ್ಲ: ಇವತ್ತಿನ ಪರಿಸ್ಥಿತಿಯಲ್ಲಿ ನಾನು ಮುಖ್ಯಮಂತ್ರಿಯಾಗುತ್ತಿರುವುದು ಸಂಪೂರ್ಣ ತೃಪ್ತಿತಂದಿಲ್ಲ. ಮನಸ್ಸಿನಲ್ಲಿ ಒಂದಷ್ಟು ನೋವು ತುಂಬಿಕೊಂಡೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದೇನೆ. ಪೂರ್ಣ ಬಹುಮತದೊಂದಿಗೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕೆಂಬುದು ನನ್ನ ಆಸೆಯಾಗಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಐದು ವರ್ಷ ಸುಭದ್ರವಾಗಿರಲಿದೆ. ಇಂದಿನ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ರಾಜಕಾರಣದ ಚಿತ್ರಣ ಬದಲಾಗುವ ಸೂಚನೆ ನೀಡಲಿದೆ ಎಂದರು.
ಸಮ್ಮಿಶ್ರ ಸರ್ಕಾರವಾದರೂ ನನ್ನ ಕಾರ್ಯವೈಖರಿ ಎಂದಿನಂತೆಯೇ ಇರುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ನನಗಿರುವ ಇತಿಮಿತಿಗಳ ನಡುವೆಯೂ ಉತ್ತಮ ಆಡಳಿತ ನೀಡುತ್ತೇನೆ. ಜನ ಸಾಮಾನ್ಯರಿಗೆ ನೇರವಾಗಿ ಸ್ಪಂದಿಸುವುದೇ ನನ್ನ ಉದ್ದೇಶ, ಇದಕ್ಕಾಗಿ ಮುಖ್ಯಮಂತ್ರಿಯ ಮನೆಬಾಗಿಲು ನಾಡಿನ ಜನರಿಗೆ ಸದಾ ತೆರೆದಿರುತ್ತದೆ. ಜೊತೆಗೆ ವಿಧಾನಸೌಧದಲ್ಲೂ ಜನತೆ ನನ್ನನ್ನು ನೇರವಾಗಿ ಭೇಟಿ ಮಾಡಬಹುದಾಗಿದೆ ಎಂದರು. ಈ ಹಿಂದೆ ತಾನು ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ್ದ ಜನತಾ ದರ್ಶನ, ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳನ್ನು ಮತ್ತೆ ಆರಂಭಿಸಲಾಗುವುದು. ಸಮ್ಮಿಶ್ರ ಸರ್ಕಾರ ಆಗಿರುವುದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರದಲ್ಲಿ ಆಡಳಿತ ಪಕ್ಷದ ನಾಯಕ ರಾಗಿರುವ ಸಿದ್ದರಾಮಯ್ಯ ಪಾತ್ರ ಏನೆಂಬುದನ್ನು ಇನ್ನೆರಡು ದಿನಗಳಲ್ಲಿ ನಿರ್ಧರಿಸಲಾಗುವುದು, ಕಾಂಗ್ರೆಸ್ -ಜೆಡಿಎಸ್ ಎರಡೂ ಪಕ್ಷಗಳ ಪ್ರಣಾಳಿಕೆಯನ್ನು ಸಮನ್ವಯ ಸಮಿತಿಯ ಮುಂದಿಟ್ಟು ಕಾರ್ಯಕ್ರಮ ರೂಪಿಸುತ್ತೇವೆ. ನಾನು ಜನರ ಮಧ್ಯೆ ಬೆಳೆದವನು, ಹೀಗಾಗಿ ಸದಾ ಕಾಲ ಜನರ ಜೊತೆಗಿರುವ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಹೇಳಿದರು.
ಬಿಜೆಪಿಯವರಿಗೆ ಕಾಣುವುದೆಲ್ಲಾ ಹಳದಿಯೇ, ಅವರು ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ, ಕರಾಳ ದಿನ ಆಚರಿಸುತ್ತಿರುವ ಅವರು ಪ್ರತಿಭಟನೆ ಮಾಡಿಕೊಳ್ಳಲಿ. ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಆದರೆ, ವಿಶ್ವಾಸಮತ ಮುಗಿದ ಮೇಲೆ ರಾಜಕಾರಣ ಬದಿಗಿಟ್ಟು, ರಾಜ್ಯ ಕಟ್ಟುವ ಕೆಲಸದಲ್ಲಿ ಅವರೂ ಭಾಗಿಯಾಗಲಿ.
ಕುಮಾರಸ್ವಾಮಿ, ಮುಖ್ಯಮಂತ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.