ಮತ ಎಣಿಕೆ ಕೇಂದ್ರದಲ್ಲಿ ಶಿಸ್ತು, ಶಾಂತಿ ಕಾಪಾಡಿ
Team Udayavani, May 19, 2019, 3:00 AM IST
ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಮೇ 23 ರಂದು ಬೆಳಗ್ಗೆ 8 ಗಂಟೆಯಿಂದ ನಗರದ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನಲ್ಲಿ ಆರಂಭವಾಗುತ್ತಿದ್ದು, ಎಣಿಕೆ ಕೇಂದ್ರಕ್ಕೆ ಆಗಮಿಸುವ ಪಕ್ಷದ ಏಜೆಂಟರು ಶಿಸ್ತು, ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಮೈಸೂರು-ಕೊಡಗು ಲೋಕಸಭಾ ಚುನಾವಣೆಯ ಅಭ್ಯರ್ಥಿಗಳು, ಏಜೆಂಟರ ಸಭೆ ನಡೆಸಿ ಅವರು ಮಾಹಿತಿ ನೀಡಿದರು.
ಮತ ಎಣಿಕೆಯ ಪೂರ್ವದಲ್ಲಿ ಜಿಲ್ಲಾ ಖಜಾನೆಯಿಂದ ಜಮೆ ಮಾಡಲಾಗಿರುವ ಅಂಚೆ ಮತಪತ್ರಗಳನ್ನು ಅಂದು ಬೆಳಗ್ಗೆ 6 ಗಂಟೆಗೆ ಮತ ಎಣಿಕೆ ಕೇಂದ್ರಕ್ಕೆ ಸೂಕ್ತ ಭದ್ರತೆಯೊಂದಿಗೆ ತೆಗೆದುಕೊಂಡು ಹೋಗಲಾಗುವುದು. ಈ ಸಮಯದಲ್ಲಿ ಅಭ್ಯರ್ಥಿಗಳು ಅಥವಾ ಎಣಿಕೆ ಏಜೆಂಟರು ಹಾಜರಿರಬೇಕು.
ಗುರುತಿನ ಚೀಟಿ ತನ್ನಿ: ಮತ ಎಣಿಕೆ ಕೇಂದ್ರದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಎಣಿಕೆ ಕೇಂದ್ರಕ್ಕೆ ಬರುವ ಅಭ್ಯರ್ಥಿಗಳು ಅಥವಾ ಎಣಿಕೆ ಏಜೆಂಟರು ತಮಗೆ ನೀಡಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು. ಎಣಿಕೆ ಕೇಂದ್ರದಲ್ಲಿ ಧೂಮಪಾನ, ಗುಟ್ಕಾ, ಬೀಡಿಸೇವನೆ ನಿಷೇಧಿಸಲಾಗಿದೆ ಮತ್ತು ಮೊಬೈಲ್ ಫೋನ್ ತರುವವರಿಗೆ ಟೋಕನ್ ಮೂಲಕ ಮೊಬೈಲ್ ಫೋನ್ ಸೂಕ್ತ ಕೊಠಡಿಯಲ್ಲಿ ಇಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಎಣಿಕೆ ಕೇಂದ್ರದಲ್ಲಿ ಏಜೆಂಟರು ತಮಗೆ ನೀಡಿರುವ ಟೇಬಲ್ ಸಂಖ್ಯೆಯಲ್ಲೇ ಆಸೀನರಾಗಬೇಕು. ವಿದ್ಯುನ್ಮಾನ ಮತಯಂತ್ರಗಳನ್ನು ಮುಟ್ಟಬಾರದು ಹಾಗೂ ಕೊಠಡಿಗಳಲ್ಲಿರುವ ಚುನಾವಣಾಧಿಕಾರಿ ಆಥವಾ ಸಹಾಯಕ ಚುನಾವಣಾಧಿಕಾರಿ ಅವರ ನಿರ್ದೇಶನಗಳನ್ನು ಪಾಲಿಸಬೇಕು.
ಮತಯಂತ್ರಗಳನ್ನು ಇಟ್ಟಿರುವ ಭದ್ರತಾ ಕೊಠಡಿಗಳನ್ನು ಮೇ 23ರಂದು ಬೆಳಗ್ಗೆ 7.30ಕ್ಕೆ ತೆರೆಯಲಾಗುವುದು ಈ ಸಂದರ್ಭದಲ್ಲಿ ಅಭ್ಯರ್ಥಿಗಳು ಅಥವಾ ಏಜೆಂಟರು ಹಾಜರಿರಬೇಕು. ಬೆಳಗ್ಗೆ 8 ಗಂಟೆಗೆ ಅಂಚೆ ಮತಗಳ ಎಣಿಕೆ ಕಾರ್ಯ ಪ್ರಾರಂಭವಾಗುತ್ತದೆ.
ಅಂಚೆ ಮತ ಎಣಿಕೆ ಪ್ರಾರಂಭವಾದ ನಂತರ ವಿದ್ಯುನ್ಮಾನ ಮತಯಂತ್ರಗಳನ್ನು ಎಣಿಕೆ ಕೊಠಡಿಗಳಿಗೆ ತಂದು ಎಣಿಕೆ ಕಾರ್ಯವನ್ನು ಸಹಾಯಕ ಚುನಾವಣಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಸಲಾಗುವುದು. ಎಲ್ಲಾ ಮತಯಂತ್ರಗಳ ಎಣಿಕೆ ಕಾರ್ಯ ಮುಗಿದ ಬಳಿಕ 5 ವಿವಿ ಪ್ಯಾಟ್‌ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಆಯ್ಕೆಯಾದ 5 ವಿವಿ ಪ್ಯಾಟ್‌ಗಳಲ್ಲಿನ ಚೀಟಿಗಳನ್ನು ಎಣಿಕೆ ಮಾಡಲಾಗುವುದು ಎಂದರು.
ಕೊಠಡಿ ಸಂಖ್ಯೆ: ಮಡಿಕೇರಿ ವಿಧಾನಸಭಾ ಕೇತ್ರದ 369 ಮತಗಟ್ಟೆಗಳ ಎಣಿಕೆ ಕಾರ್ಯವು 18 ಸುತ್ತುಗಳಲ್ಲಿ ಮೊದಲನೇ ಮಹಡಿಯ ಕೊಠಡಿಸಂಖ್ಯೆ 103 ಮತ್ತು 104 ರಲ್ಲಿ ನಡೆಯಲಿದೆ. ವಿರಾಜಪೇಟೆ ಕೇತ್ರದ 274 ಮತಗಟ್ಟೆಗಳ ಎಣಿಕೆ ಕಾರ್ಯವು 19 ಸುತ್ತುಗಳಲ್ಲಿ ನೆಲ ಮಹಡಿಯ ಕೊಠಡಿಸಂಖ್ಯೆ 11 ಮತ್ತು 12 ರಲ್ಲಿ ನಡೆಯಲಿದೆ. ಪಿರಿಯಾಪಟ್ಟಣ ಕೇತ್ರದ 235 ಮತಗಟ್ಟೆಗಳ ಎಣಿಕೆ ಕಾರ್ಯವು 16 ಸುತ್ತುಗಳಲ್ಲಿ ಮೂರನೇ ಮಹಡಿಯ ಕೊಠಡಿಸಂಖ್ಯೆ 303 ಮತ್ತು 304 ರಲ್ಲಿ ನಡೆಯಲಿದೆ.
ಹುಣಸೂರು: ಹುಣಸೂರು ಕೇತ್ರದ 274 ಮತಗಟ್ಟೆಗಳ ಎಣಿಕೆ ಕಾರ್ಯವು 19 ಸುತ್ತುಗಳಲ್ಲಿ ಮೊದಲನೇ ಮಹಡಿಯ ಕೊಠಡಿಸಂಖ್ಯೆ 111 ಮತ್ತು 112 ರಲ್ಲಿ ನಡೆಯಲಿದೆ.
ಚಾಮುಂಡೇಶ್ವರಿ: ಚಾಮುಂಡೇಶ್ವರಿ ಕೇತ್ರದ 338 ಮತಗಟ್ಟೆಗಳ ಎಣಿಕೆ ಕಾರ್ಯವು 19 ಸುತ್ತುಗಳಲ್ಲಿ ಮೊದಲನೇ ಮಹಡಿಯ ಕೊಠಡಿಸಂಖ್ಯೆ 120 ರಲ್ಲಿ ನಡೆಯಲಿದೆ.
ಕೃಷ್ಣರಾಜ: ಕೃಷ್ಣರಾಜ ಕೇತ್ರದ 270 ಮತಗಟ್ಟೆಗಳ ಎಣಿಕೆ ಕಾರ್ಯವು 18 ಸುತ್ತುಗಳಲ್ಲಿ ಎರಡನೇ ಮಹಡಿಯ ಕೊಠಡಿಸಂಖ್ಯೆ 211 ಮತ್ತು 212 ರಲ್ಲಿ ನಡೆಯಲಿದೆ.
ಚಾಮರಾಜ, ನರಸಿಂಹರಾಜ: ಚಾಮರಾಜ ಕೇತ್ರದ 245 ಮತಗಟ್ಟೆಗಳ ಎಣಿಕೆ ಕಾರ್ಯವು 17 ಸುತ್ತುಗಳಲ್ಲಿ ಎರಡನೇ ಮಹಡಿಯ ಕೊಠಡಿಸಂಖ್ಯೆ 226 ರಲ್ಲಿ ಹಾಗೂ ನರಸಿಂಹರಾಜ ಕೇತ್ರದ 282 ಮತಗಟ್ಟೆಗಳ ಎಣಿಕೆ ಕಾರ್ಯವು 19 ಸುತ್ತುಗಳಲ್ಲಿ ಎರಡನೇ ಮಹಡಿಯ ಕೊಠಡಿಸಂಖ್ಯೆ 203 ಮತ್ತು 204 ರಲ್ಲಿ ನಡೆಯುವುದು ಮತ್ತು ಅಂಚೆ ಮತಪತ್ರ ನೆಲ ಮಹಡಿಯ ಕೊಠಡಿಸಂಖ್ಯೆ 19ರಲ್ಲಿ ಹಾಗೂ ಇಟಿಪಿಬಿಎಸ್ ಸ್ಕ್ಯಾನಿಂಗ್ ನೆಲ ಮಹಡಿಯ ಕೊಠಡಿ ಸಂಖ್ಯೆ 18ರಲ್ಲಿ ನಡೆಯುವುದು ಎಂದು ವಿವರಿಸಿದರು.
ಅಂಚೆ ಮತಪತ್ರಗಳನ್ನು ಚುನಾವಣಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಹಾಗೂ ಎಂಟು ಸಹಾಯಕ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಗುವುದು. ಒಂದು ಟೇಬಲ್‌ನಲ್ಲಿ 500 ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲಾಗುವುದು ಹಾಗೂ ಪ್ರತಿ ಟೇಬಲ್‌ಗೆ ಒಬ್ಬ ಪತ್ರಾಂಕಿತ ಅಧಿಕಾರಿಯನ್ನು ಎಣಿಕೆ ಮೇಲ್ವಿಚಾರಕರಾಗಿ ಅಲ್ಲದೇ ಪ್ರತಿ ಮೇಜಿಗೆ ಒಬ್ಬ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಮೈಕ್ರೋ ವೀಕ್ಷಣಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ.
ಸಹಾಯಕ ಚುನಾವಣಾಧಿಕಾರಿ ಅನುರಾಧಾ ಜಿ. ಹಾಗೂ ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರತಿ ಸುತ್ತಿನ ಫಲಿತಾಂಶ ಮಾಹಿತಿ: ಎಣಿಕೆ ಕೊಠಡಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಹಾಗೂ ಎಣಿಕೆಯ ಪ್ರತಿಯೊಂದು ಹಂತದ ಚಿತ್ರೀಕರಣಕ್ಕಾಗಿ ವಿಡಿಯೋಗ್ರಾಫರ್‌ಗಳನ್ನು ನೇಮಕ ಮಾಡಲಾಗಿದೆ ಮತ್ತು ಪ್ರತಿ ಸುತ್ತು ಮುಗಿದ ನಂತರ ಫಲಿತಾಂಶದ ಮಾಹಿತಿಯನ್ನು ಎಲ್ಲಾ ಅಭ್ಯರ್ಥಿಗಳಿಗೂ ನೀಡಲಾಗುವುದು.
ಮತ ಎಣಿಕೆ ಸಿಬ್ಬಂದಿಗಳು ವಿದ್ಯುನ್ಮಾನ ಮತಯಂತ್ರಗಳಲ್ಲಿ ಗುಂಡಿ ಒತ್ತಿ ಫಲಿತಾಂಶದ ವಿವರಗಳನ್ನು ತೋರಿಸುವರು. 17 ಸಿ ನಮೂನೆಯಲ್ಲಿ ಭಾಗ-2 ರಲ್ಲಿ ನಮೂದಿಸಿ ಹಾಜರಿರುವ ಎಣಿಕೆ ಏಜೆಂಟರ ಸಹಿ ಪಡೆದು ಚುನಾವಣಾಧಿಕಾರಿಗಳಿಗೆ ಸಲ್ಲಿಸುತ್ತಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.