ಭಯ ಬೇಡ ಮೈಸೂರು ದಸರೆಗೆ ಬನ್ನಿ
Team Udayavani, Sep 18, 2019, 3:00 AM IST
ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವ ವೀಕ್ಷಣೆಗಾಗಿ ಮೈಸೂರಿಗೆ ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಸಣ್ಣ ತೊಂದರೆಯೂ ಉಂಟಾಗದಂತೆ ಭದ್ರತೆ ದೃಷ್ಟಿಯಿಂದ ಏನೇನು ಕ್ರಮ ಕೈಗೊಳ್ಳಬೇಕೋ ಎಲ್ಲವನ್ನೂ ಸರ್ಕಾರ ಕೈಗೊಳ್ಳಲಿದ್ದು, ಪಕ್ಷಾತೀತವಾಗಿ ಎಲ್ಲರ ಸಹಕಾರದೊಂದಿಗೆ ದಸರಾ ಯಶಸ್ಸಿಗೆ ಶ್ರಮಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಸಂಘ ಮಂಗಳವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯ ಮೇರೆಗೆ ಕಳೆದ 20 ದಿನಗಳಿಂದ ಮೈಸೂರಿನಲ್ಲಿ ದಸರಾ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪಾರಂಪರಿಕ ಮೈಸೂರು ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸುವ ಮೂಲಕ ಮೈಸೂರಿಗೆ ಬರುವ ಪ್ರವಾಸಿಗರ ಮನಗೆಲ್ಲುವ ಮೂಲಕ ಮೈಸೂರಿನ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಲು ಪ್ರಯತ್ನ ನಡೆಸಿರುವುದಾಗಿ ಹೇಳಿದರು. ಮೈಸೂರಿನ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತಿಲ್ಲ. ರಸ್ತೆ ಗುಂಡಿ ಮುಚ್ಚಲು ಟೆಂಡರ್ ಆಗಿದ್ದು, ಮಳೆ ನಿಂತ ಕೂಡಲೇ ಗುಂಡಿಗಳನ್ನು ಮುಚ್ಚಲಾಗುವುದು ಎಂದರು.
ವ್ಯಾಪಕ ಪ್ರಚಾರ: ದಸರಾ ಮಹೋತ್ಸವಕ್ಕೆ ದೇಶ-ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ವ್ಯಾಪಕ ಪ್ರಚಾರವನ್ನು ಕೈಗೊಳ್ಳಲಾಗಿದೆ. ಮೈಸೂರಿಗೆ ಬಂದು ಹೋಗುವ 15 ರಿಂದ 18 ರೈಲುಗಳಿಗೆ, ಕೆಎಸ್ಸಾರ್ಟಿಸಿಯ 2ಸಾವಿರಕ್ಕೂ ಹೆಚ್ಚು ಬಸ್‌ಗಳಿಗೆ ದಸರಾ ಪ್ರಚಾರ ಫಲಕಗಳನ್ನು ಅಳವಡಿಸಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹತ್ತು ಹೋರ್ಡಿಂಗ್ಸ್ ಗಳನ್ನು ಅಳವಡಿಸಲಾಗುವುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಡಹಬ್ಬ ದಸರೆಗೆ ಜನರನ್ನು ಆಹ್ವಾನಿಸುವ ಸಂದೇಶವನ್ನು ಬಸ್, ರೈಲು ನಿಲ್ದಾಣಗಳಲ್ಲಿ ಭಿತ್ತರಿಸುವ ಮೂಲಕ ವ್ಯವಸ್ಥಿತವಾಗಿ ಪ್ರಚಾರ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಬಿಗಿ ಭದ್ರತೆ: ದಸರಾ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ಸಂಚು ರೂಪಿಸಿರುವ ಮಾಹಿತಿ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರು ಭದ್ರತೆ ಬಿಗಿಗೊಳಿಸಿ, ತಪಾಸಣೆಯನ್ನು ಹೆಚ್ಚಿಸಿದ್ದಾರೆ. ಆದರೆ, ಮೈಸೂರಿಗೆ ಯಾವುದೇ ಭೀತಿ ಇಲ್ಲ. ಈ ಬಗ್ಗೆ ಜನತೆಗೆ ಗೊಂದಲಬೇಡ. ಈ ಸಂಬಂಧ ಈಗಾಗಲೇ ರಾಜ್ಯದ ಗೃಹ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರೊಂದಿಗೂ ಮಾತನಾಡಿ ದಸರೆಗೆ ಬರುವ ಜನತೆಗೆ ಭಯ-ಭೀತಿ ಮೂಡದಂತೆ ಏನೇನು ಕ್ರಮಬೇಕೋ ಎಲ್ಲವನ್ನೂ ಮಾಡುತ್ತೇವೆ ಎಂದು ಅಭಯ ನೀಡಿದರು.
ಜವಾಬ್ದಾರಿ ಹಂಚಿಕೆ: ಹಿರಿಯ ಶಾಸಕರಾದ ಜಿ.ಟಿ.ದೇವೇಗೌಡ ಅವರು ಸೇರಿದಂತೆ ಪಕ್ಷಾತೀತವಾಗಿ ಜಿಲ್ಲೆಯ ಎಲ್ಲಾ ಪಕ್ಷದ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರುಗಳಿಗೇ ದಸರಾ ಜವಾಬ್ದಾರಿಯನ್ನು ಹಂಚಿಕೆ ಮಾಡಿದ್ದೇವೆ. ಹೀಗಾಗಿ ಎಲ್ಲರೂ ತಂಡವಾಗಿ ಕೆಲಸ ಮಾಡುತ್ತಿದ್ದೇವೆ.
ಗೊಂದಲ ನಿವಾರಣೆ: ಪ್ರತಿ ವರ್ಷ ಪಾಸ್‌ಗಳಿಗಾಗಿ ಗೊಂದಲ ಏರ್ಪಡುವ ಮಾಹಿತಿ ಇದೆ. ಒಂದೇ ಪಾಸನ್ನು ನಾಲ್ಕು ನಾಲ್ಕು ಜನರಿಗೆ ಕೊಟ್ಟು ಗೊಂದಲ ಸೃಷ್ಟಿಮಾಡುತ್ತ ಇದ್ದಿದ್ದೂ ಇದೆ. ಇದೇ ಕಾರಣಕ್ಕೆ ದಸರಾ ಗೋಲ್ಡ್‌ಕಾರ್ಡ್ ಅನ್ನು 2500ದೊಳಗೆ ಮಿತಿಗೊಳಿಸಲು ನಿರ್ಧರಿಸಲಾಗಿದೆ. ಜತೆಗೆ ರಾತ್ರಿ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತು ಸಂದರ್ಭದಲ್ಲಿ ಅಧಿಕಾರಿಗಳೇ ತುಂಬಿರುತ್ತಾರೆ ಎಂಬ ಅಪವಾದ ಹೋಗಲಾಡಿಸಲು ಹಿಂದಿನ ದಿನ ನಡೆಯುವ ಪಂಜಿನ ಕವಾಯತು ತಾಲೀಮಿಗೆ ಅಧಿಕಾರಿಗಳು ಮತ್ತು ಅವರ ಕುಟುಂಬ ವರ್ಗದವರು ವೀಕ್ಷಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.
ವಾಹನಗಳಿಗೆ ಪ್ರವೇಶ ತೆರಿಗೆ ಕಡಿತ: ದಸರಾ ಸಂದರ್ಭದಲ್ಲಿ ಒಂದು ತಿಂಗಳ ಕಾಲ ಹೊರ ರಾಜ್ಯಗಳಿಂದ ಮೈಸೂರಿಗೆ ಬರುವ ಪ್ರವಾಸಿ ವಾಹನಗಳಿಗೆ ಪ್ರವೇಶ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಈ ಬಾರಿ ಮೈಸೂರಿನ ಜೊತೆಗೆ ಸುತ್ತಮುತ್ತಲಿನ ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಗಳಿಗೂ ಪ್ರವಾಸಿಗರು ಹೋಗಿ ಬರಲಿ ಎಂಬ ಕಾರಣಕ್ಕೆ ಆ ಜಿಲ್ಲೆಗಳಿಗೂ ಪ್ರವೇಶ ತೆರಿಗೆ ವಿನಾಯಿತಿ ನೀಡಲು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ಸಚಿವ ವಿ.ಸೋಮಣ್ಣ ತಿಳಿಸಿದರು.
ತೆಪ್ಪೋತ್ಸವದವರೆಗೆ ದೀಪಾಲಂಕಾರ: ನಾಡಹಬ್ಬ ದಸರೆಗೆ ವಿದ್ಯುತ್ ದೀಪಾಲಂಕಾರದಿಂದ ಮೈಸೂರು ಝಗಮಗಿಸುತ್ತದೆ. ಆದರೆ, ಪ್ರತಿ ವರ್ಷ ಜಂಬೂಸವಾರಿ ಮುಗಿದ ಮರು ದಿನವೇ ದೀಪಾಲಂಕಾರ ಸ್ಥಗಿತಗೊಳಿಸುವುದರಿಂದ ಆ ನಂತರ ಮೈಸೂರಿಗೆ ಬರುವ ಪ್ರವಾಸಿಗರಿಗೆ ನಿರಾಸೆಯಾಗುತ್ತದೆ. ಇದಕ್ಕಾಗಿ ಜಂಬೂಸವಾರಿ ಮುಗಿದ ನಂತರ ಚಾಮುಂಡೇಶ್ವರಿ ತೆಪ್ಪೋತ್ಸವ ನಡೆಯುವ ಅ.17ರವರೆಗೂ ದೀಪಾಲಂಕಾರ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.