ಹೋರಾಟದ ವೇಳೆ ಕಾನೂನು ಉಲ್ಲಂಘನೆ ಬೇಡ
Team Udayavani, Jul 14, 2017, 11:47 AM IST
ತಿ.ನರಸೀಪುರ: ರೈತರ ಸಮಸ್ಯೆಗಳ ಪರಿಹರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೂಡ ಅಗತ್ಯ ಸಹಕಾರ ನೀಡಲಿದ್ದು, ರೈತರು ಹೋರಾಟದ ವೇಳೆ ಕಾನೂನು ಉಲ್ಲಂಘನೆ ಮಾಡಬಾರದೆಂದು ನಂಜನಗೂಡು ಉಪವಿಭಾಗದ ಎಎಸ್ಪಿ ಮಹಮದ್ ಸುಜೀತ ಸಲಹೆ ಮಾಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ತಾಲೂಕು ರೈತ ಸಂಘಟನೆಗಳ ಮುಖಂಡರ ಸಭೆಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿ, ರೈತರು ದೇಶದ ಬೆನ್ನೆಲೆಬು. ಅವರ ಸಮಸ್ಯೆಗಳ ಬಗ್ಗೆ ನಮಗೂ ಕಾಳಜಿ ಇದೆ. ರೈತರ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದು ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವಲ್ಲಿ ಪೊಲೀಸ್ ಇಲಾಖೆ ಕೂಡ ಸಹಕರಿಸುತ್ತದೆ ಎಂದರು.
ಕಾನೂನು ವಿರುದ್ಧ ಹೋಗಬೇಡಿ: ಇಲಾಖೆಯಿಂದ ಎಷ್ಟು ಸಾಧ್ಯವೂ ಅಷ್ಟು ಒಳ್ಳೆಯದನ್ನು ರೈತರಿಗೆ ಮಾಡುವುದು ಕೂಡ ನಮ್ಮ ಅಭಿಲಾಷೆಯಾಗಿದೆ. ರೈತರು ತಮ್ಮ ಹಕ್ಕುಗಳನ್ನು ಕೇಳುವುದು ಸರಿ ಆದರೆ ಹೋರಾಟ ಮಾಡುವ ವೇಳೆ ಕಾನೂನು ವ್ಯಾಪ್ತಿಗೆ ವಿರುದ್ಧವಾಗಿ ಹೋಗದಂತೆ ಎಚ್ಚರಿಕೆ ವಹಿಸಬೇಕು. ರೈತರಿಗೆ ಅಥವಾ ಅವರ ಹೋರಾಟಕ್ಕೆ ಕಳಂಕ ತರುವವರ ಬಗ್ಗೆ ಕೂಡ ಗಮನವಿರಬೇಕು ಎಂದರು.
ಸರಿಯಾದ ಮಾಹಿತಿ ಇಲ್ಲ: ಸಭೆಯಲ್ಲಿ ರೈತ ಮುಖಂಡರು ಮಾತನಾಡಿ, ಮುಂಗಾರು ಕೃಷಿ ಚಟುವಟಿಕೆಗೆ ಪೂರಕವಾಗಿ ನಾಲೆಗಳು ನೀರು ಕೊಡುತ್ತಾರೋ ಇಲ್ಲವೂ ಎಂಬ ಮಾಹಿತಿ ನೀರಾವರಿ ಇಲಾಖೆಯಿಂದ ಮಾಹಿತಿ ಇಲ್ಲ. ಕೃಷಿ ಇಲಾಖೆ ನಾಲೆಗೆ ನೀರು ಕೊಡದಿದ್ದರೆ ಯಾವ ರೀತಿಯ ಬೆಳೆಗಳನ್ನು ರೈತರು ಹಾಕಬೇಕು ಎಂಬ ಮಾಹಿತಿ ಬೇಕಿದೆ.
ಮಾಹಿತಿ ಲಭ್ಯವಿಲ್ಲ: ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಬರಗಾಲ ಪರಿಸ್ಥಿತಿಯಿಂದಾಗಿ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೇ ಜನ ಹಾಗೂ ಜಾನುವಾರುಗಳಿಗೆ ತೊಂದರೆಯಾಗಿದೆ. ಸರ್ಕಾರ ಮಾತ್ರ ಜಲಾಶಯ ತುಂಬುವ ಮುನ್ನವೇ ತಮಿಳುನಾಡಿಗೆ ನೀರು ಹರಿಸುತ್ತಿದೆ. ಪರಿಸ್ಥಿತಿ ಹೀಗಿರುವಾಗ ನಮ್ಮ ಉಳಿವಿಗೆ ನಾವು ಹೋರಾಟ ಮಾಡಬೇಕೋ ಇಲ್ಲವೋ ಹೇಳಿ, ರೈತರ ರಕ್ಷಣೆಯ ಬಗ್ಗೆ ಇಂದು ಯಾರು ತಲೆಕೆಡಿಸಿಕೊಳ್ಳುತ್ತಿಲ್ಲ.
ಬರ ಪರಿಹಾರ ನೀಡುವ ಬಗ್ಗೆ ಕೂಡ ರೈತರಿಗೆ ನಿಗದಿತ ಮಾಹಿತಿ ಲಭ್ಯವಿಲ್ಲ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಅನ್ಯಾಯವಾದರೇ ನಮ್ಮ ಉಳಿವಿಗೆ ಹೋರಾಡುವುದೇ ಅನಿವಾರ್ಯವೇ ಆಗುತ್ತದೆ ಎಂದರು. ಕೂಡಲೇ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳು ಮುಂಗಾರು ಕೃಷಿಗೆ ಸಂಬಂಧಿಸಿದಂತೆ ರೈತರ ಸಭೆ ಕರೆದು ಮಾಹಿತಿ ನೀಡಬೇಕೆಂದು ರೈತ ಮುಖಂಡರು ಸಭೆಯಲ್ಲಿ ಒತ್ತಾಯಿಸಿದರು.
ವೃತ್ತ ನಿರೀಕ್ಷಕ ಮನೋಜ್ ಕುಮಾರ್, ಪಿಎಸೈ ಎನ್. ಆನಂದ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ಕಿರಗಸೂರು ಶಂಕರ್, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಗೌಡರ ಪ್ರಕಾಶ್, ರಾಜ್ಯ ರೈತ ಸಂಘದ ಅಧ್ಯಕ್ಷ ಆಲಗೂಡು ಮಹಾದೇವು, ಕಳ್ಳಿಪುರ ಮಹಾದೇವಸ್ವಾಮಿ, ಕುಮಾರಸ್ವಾಮಿ, ರಂಗಸಮುದ್ರ ಸುರೇಶ್, ಕುಪ್ಯ ಪುಟ್ಟಸ್ವಾಮಿ, ಬಿ.ಪಿ. ಪರಶಿವಮೂರ್ತಿ, ಪ್ರಸಾದ್‌ನಾಯಕ್ ಸೇರಿದಂತೆ ಹಲವಾರು ರೈತ ಮುಖಂಡರು ಸಭೆಯಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.