
ದೋಸ್ತಿ ಕಾರ್ಯಕರ್ತರಲ್ಲಿ ಅಸಮಾಧಾನ ಹಾಗೇ ಇದೆ
Team Udayavani, Apr 8, 2019, 3:00 AM IST

ಮೈಸೂರು: ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದ್ದು, ಫಲಿತಾಂಶಕ್ಕೂ ಮುನ್ನವೇ ಸಮ್ಮಿಶ್ರ ಸರ್ಕಾರ ಪತನಗೊಂಡರು ಆಶ್ಚರ್ಯವಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್‌ನವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಹೊರತು, ಯಾವುದೇ ಅಭಿವೃದ್ಧಿಕಾರ್ಯ ನಡೆದಿಲ್ಲ.
ರಾಜ್ಯದ ಅಭಿವೃದ್ಧಿಗಿಂತ ಅಧಿಕಾರಕ್ಕಾಗಿ ಕಾಂಗ್ರೆಸ್-ಜೆಡಿಎಸ್ ನಾಯಕರು ಒಂದಾಗಿದ್ದು, ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಅಸಮಾಧಾನ ಹಾಗೇ ಇದೆ. ಹೀಗಾಗಿ ಮೈತ್ರಿ ಪಕ್ಷದ ಸಭೆಗಳಲ್ಲಿ ಒಮ್ಮತ ಮೂಡುತ್ತಿಲ್ಲ. ಇದಕ್ಕಾಗಿಯೇ ಸಚಿವ ಜಿ.ಟಿ.ದೇವೇಗೌಡ ಮೈಸೂರಿನಲ್ಲಿ ಕಾಂಗ್ರೆಸ್ ಸೋತರೆ ನಾವು ಹೊಣೆಗಾರರಲ್ಲ ಎಂದು ಹೇಳಿದ್ದಾರೆ ಎಂದರು.
ಸಿದ್ದು ಮೂಲೆಗುಂಪು: ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನಿಂದ ಮತಿಭ್ರಮಣೆಯಾಗಿದೆ. ಅವರನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಬ್ಯಾನರ್‌ಗಳಲ್ಲಿ ಅವರ ಹೆಸರು, ಫೋಟೋ ಹಾಕುತ್ತಿಲ್ಲ. ಅವರ ಪಕ್ಷದಲ್ಲೇ ಮೂಲೆ ಗುಂಪಾಗಿದ್ದಾರೆ. ಹಾವಿನ ದ್ವೇಷ ಹನ್ನೆರಡು ವರುಷ ಎಂಬಂತೆ ಚಾಮುಂಡೇಶ್ವರಿ ಕ್ಷೇತ್ರದ ತಮ್ಮ ಸೋಲಿನ ಸೇಡನ್ನು ಲೋಕಸಭೆ ಚುನಾವಣೆಯಲ್ಲಿ ತೀರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಹಾಸನ, ಮಂಡ್ಯ, ತುಮಕೂರು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಸೋಲಿಸಲು ಪ್ರಯತ್ನಿಸುತ್ತಿರುವ ಸಿದ್ದರಾಮಯ್ಯ, ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಮೈಸೂರು, ಚಾಮರಾಜನಗರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ನಿಶ್ಚಿತವಾಗಿ ಗೆಲುವು ಸಾಧಿಸಲಿದ್ದು, ಆನಂತರ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಮೂಲೆ ಗುಂಪಾಗಲಿದ್ದಾರೆ ಎಂದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಸಿದ್ದರಾಮಯ್ಯ, ಬಾದಾಮಿಯಲ್ಲಿ ನನ್ನ ವಿರುದ್ಧ 1,600 ಮತಗಳ ಅಂತರದಿಂದ ಗೆದ್ದರು. ಈಗ ಬಾದಾಮಿಯ ಮತದಾರರು ಯಾತಕ್ಕಾದರೂ ಸಿದ್ದರಾಮಯ್ಯರನ್ನು ಗೆಲ್ಲಿಸಿದ್ದೇವೊ ಎನ್ನುವ ಮಾತನ್ನು ಹೇಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ಮೈತ್ರಿ ಪಕ್ಷಗಳು ಧೂಳೀಪಟ: ಹಲವು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಎಲ್ಲಾ ಪಕ್ಷಗಳು ಒಂದಾಗುತ್ತಿದ್ದವು. ಆದರೆ, ಇಂದು ಪರಿಸ್ಥಿತಿ ಬದಲಾಗಿದ್ದು, ಬಿಜೆಪಿಯನ್ನು ಸೋಲಿಸಲು ಎಲ್ಲಾ ಪಕ್ಷಗಳು ಒಂದಾಗುತ್ತಿವೆ. ಮೋದಿ ಎರಡು ಬಾರಿ ಪ್ರಧಾನಿಯಾಗಬೇಕು ಎಂದು ಬೇರೆ ಪಕ್ಷಗಳ ನಾಯಕರೇ ಹೇಳುತ್ತಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಸಭೆಗಳಲ್ಲೂ ಮೋದಿ ಮೋದಿ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ. ಹೀಗಾಗಿ ಮೋದಿ ಮತ್ತೆ ಪ್ರಧಾನಿಯಾಗಲಿದ್ದು, ಮೈತ್ರಿ ಪಕ್ಷಗಳು ಧೂಳೀಪಟವಾಗುತ್ತವೆ. ಕಾಂಗ್ರೆಸ್ ಸಂಪೂರ್ಣ ನೆಲಕಚ್ಚುತ್ತದೆ ಎಂದು ಶ್ರೀರಾಮುಲು ಭವಿಷ್ಯ ನುಡಿದರು.
ಸಂಸದ ಪ್ರತಾಪ್‌ಸಿಂಹ, ರಾಜ್ಯ ಬಿಜೆಪಿ ಕಾರ್ಯದರ್ಶಿ ಎಂ.ರಾಜೇಂದ್ರ, ಮಾಜಿ ಶಾಸಕರಾದ ಸಿದ್ದರಾಜು, ಪೊ›.ಕೆ.ಆರ್.ಮಲ್ಲಿಕಾರ್ಜುನಪ್ಪ, ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಅಪ್ಪಣ್ಣ, ಸ್ಲಂ ಮೋರ್ಚಾ ಕಾರ್ಯದರ್ಶಿ ಕೌಟಿಲ್ಯ ರಘು ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಪರಿವಾರ, ತಳವಾರ ಪರಿಶಿಷ್ಟ ವರ್ಗಕ್ಕೆ: ನಾಯಕ ಜನಾಂಗದ ಪರ್ಯಾಯ ಪದಗಳಾದ ಪರಿವಾರ, ತಳವಾರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂಬ ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಬಿಜೆಪಿ ಈಡೇರಿಸಲಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಂಸದರಾಗಿದ್ದ ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್, ಪ್ರತಾಪ್‌ಸಿಂಹ, ವಿ .ಶ್ರೀನಿವಾಸಪ್ರಸಾದ್, ಶಾಸಕ ಎಸ್.ಎ. ರಾಮದಾಸ್, ಸಿದ್ದರಾಜು, ಎಂ.ಅಪ್ಪಣ್ಣ, ಎಂ.ರಾಮಚಂದ್ರ ಅವರ ಪ್ರಯತ್ನದ ಫಲವಾಗಿ ಲೋಕಸಭೆಯಲ್ಲಿ ಪರಿವಾರ, ತಳವಾರ ವಿಧೇಯಕ ಅನುಮೋದನೆಯಾಗಿದೆ.
ನಾನು ಮತ್ತು ಯಡಿಯೂರಪ್ಪ ಅವರು ದೆಹಲಿಯಲ್ಲಿ 15 ಇಲಾಖೆಗಳನ್ನು ಸುತ್ತಾಡಿ, ಟೇಬಲ್‌ಗಳಲ್ಲಿ ಪಾಸ್ ಮಾಡಿಸಿದ್ದೆವು. ರಾಜ್ಯಸಭೆಯಲ್ಲಿ ಪಾಸ್ ಮಾಡಿಸುವ ಸಂಧರ್ಭದಲ್ಲಿ ರಾಜ್ಯ ರಾಜಕೀಯಕ್ಕೆ ಮರಳಿದ್ದರಿಂದ ಅದು ಪೂರ್ಣವಾಗಿರಲಿಲ್ಲ.
ಈ ಬಾರಿಯ ಚುನಾವಣೆಯಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಪ್ರತಾಪ್ ಸಿಂಹ ಗೆಲುವು ಸಾಧಿಸಿದ ಬಳಿಕ ಪರಿವಾರ-ತಳವಾರ ಸಮುದಾಯಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಕೆಲಸ ಮಾಡಲಿದ್ದು, ಜುಲೈ ಅಥವಾ ಆಗಸ್ಟ್‌ನಲ್ಲಿ ರಾಜ್ಯಸಭೆಯಲ್ಲಿ ವಿಧೇಯಕ್ಕೆ ಅನುಮೋದನೆ ಪಡೆಯಲಾಗುವುದು ಎಂದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.