ನೀರಿಲ್ಲದೆ ಭಣಗುಡುತ್ತಿದೆ ಕಾರಂಜಿ ಕೆರೆ
Team Udayavani, Apr 23, 2019, 3:07 AM IST
ಮೈಸೂರು: ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಕಾರಂಜಿ ಕೆರೆ ನೀರಿಲ್ಲದೆ ಭಣಗುಡುತ್ತಿದ್ದು, ಇದೇ ಮೊದಲ ಬಾರಿಗೆ ಸಂಪೂರ್ಣ ಬರಿದಾಗಿ ನೀರಿಗಾಗಿ ಬಾಯೆ¤ರೆದು ನಿಂತಿದೆ.
ಹನಿ ನೀರೂ ಇಲ್ಲದೆ, ತನ್ನ ಸೌಂದರ್ಯವನ್ನು ಕಳಚಿಕೊಂಡು ಬರಡು ಭೂಮಿಯಾಗಿ ಮಾರ್ಪಟ್ಟಿದೆ. ನೂರಕ್ಕೂ ಹೆಚ್ಚು ಪಕ್ಷಿ ಪ್ರಭೇದ, ಮೊಸಳೆ, ಆಮೆ, ಬಣ್ಣ ಬಣ್ಣದ ಪಾತರಗಿತ್ತಿಗಳಿಂದ ಕಂಗೊಳಿಸುತ್ತಿದ್ದ ಕಾರಂಜಿ ಕೆರೆ ಪ್ರಕೃತಿ ಉದ್ಯಾನ ಎಂದಿನ ವೈಭವವನ್ನು ಕಳೆದುಕೊಂಡು ತನ್ನ ಅಸ್ತಿತ್ವಕ್ಕಾಗಿ ಹೆಣಗುತ್ತಿದೆ.
ಇಂದಿಗೂ ಕಾರಂಜಿ ಕೆರೆ ಪ್ರಕೃತಿ ಉದ್ಯಾನಕ್ಕೆ ಪ್ರತಿನಿತ್ಯ ಮುನ್ನೂರಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ, ಹನಿ ನೀರಿಲ್ಲದೆ ಒಣಗಿ ಬಾಯ್ತರೆದು ನಿಂತಿರುವ ಕೆರೆ, ಜೀವ ವೈವಿಧ್ಯವಿಲ್ಲದ ಕೆರೆಯನ್ನು ನೋಡಿ ಗೊಣಗುತ್ತಾ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಾಸ್ ತೆರಳುವುದು ಸಾಮಾನ್ಯವಾಗಿದೆ.
ಕೆರೆಯಲ್ಲಿದ್ದ ಮೊಸಳೆ, ಮೀನುಗಳು, ಬಣ್ಣ ಬಣ್ಣದ ನಾನಾ ಬಗೆಯ ಚಿಟ್ಟೆಗಳು, ಕೊಕ್ಕರೆ, ನೀರು ಕೋಳಿ, ಬಾತು, ಮಿಂಚುಳ್ಳಿ, ನೀರು ಕಾಗೆ, ಬೂದು ಬಕ, ಹೆಜ್ಜಾರ್ಲೆ, ರಾತ್ರಿ ಬಕ ಸೇರಿದಂತೆ ನೂರಕ್ಕೂ ಹೆಚ್ಚು ಪಕ್ಷಿ ಪ್ರಭೇದ ಇಂದು ಮಾಯವಾಗಿದೆ. ಜೊತೆಗೆ ವಿದೇಶಗಳಿಂದ ಚಳಿಗಾಲದಲ್ಲಿ ಕೆರೆಗೆ ವಲಸೆ ಬರುತ್ತಿದ್ದ 40ಕ್ಕೂ ಹೆಚ್ಚು ಪಕ್ಷಿ ಪ್ರಭೇದದ ಸುಳಿವು ಇಲ್ಲದಂತಾಗಿ ಇಡೀ ಕೆರೆಯಲ್ಲಿ ನೀರವ ಮೌನ ಆವರಿಸಿದೆ.
ದಡ ಸೇರಿದ ದೋಣಿಗಳು: ಪ್ರವಾಸಿಗರ ಮುಖ್ಯ ಆಕರ್ಷಣೆಯಾಗಿದ್ದ ಬೋಟಿಂಗ್ ವ್ಯವಸ್ಥೆ ಇಂದು ನೀರಿಲ್ಲದ ಪರಿಣಾಮ ಕೆರೆಯ ದಡದಲ್ಲಿ ದೋಣಿಗಳು ವಿರಮಿಸುತ್ತಿವೆ. ಬಂದ ಪ್ರವಾಸಿಗರು ಬರಿದಾದ ಕೆರೆ, ದಡದಲ್ಲಿ ನಿಂತಿರುವ ದೋಣಿಯನ್ನು ನೋಡಿ ತೆರಳುವಂತಾಗಿದೆ.
ಮುಚ್ಚಿದ ನೀರಿನ ಮೂಲ: ಮಳೆಗಾಲದಲ್ಲಿ ಚಾಮುಂಡಿ ಬೆಟ್ಟದಿಂದ ರಾಜ ಕಾಲುವೆ ಮೂಲಕ ಹರಿದು ಬರುತ್ತಿದ್ದ ನೀರು, ಕಾರಂಜಿ ಕೆರೆಗೆ ನೀರಿನ ಮೂಲವಾಗಿತ್ತು. ಆದರೆ, ಭೂಗಳ್ಳರಿಂದ ಹಲವು ಕಡೆ ಒತ್ತುವರಿಯಾದ ಪರಿಣಾಮ ಕೆರೆಗೆ ನೀರು ಹರಿದು ಬರುವುದು ಕಡಿಮೆಯಾಗಿದೆ.
ಪರಿಣಾಮ ಕಳೆದ ಬಾರಿ ಉತ್ತಮ ಮಳೆಯಾದರೂ ಕೆರೆ ಸಂಪೂರ್ಣವಾಗಿ ಬತ್ತಿ ಹೋಗಿದೆ. ಇದಲ್ಲದೇ ನಗರದ ಸಿದ್ಧಾರ್ಥ ಬಡಾವಣೆ ಮೂಲಕ ಕೆರೆಗೆ ಒಳ ಚರಂಡಿ ನೀರು ಸೇರುತ್ತಿತ್ತು. ನಂತರ ಅದನ್ನು ಯುಜಿಡಿಗೆ ಸೇರಿಸಿದಾಗ ನೀರಿನ ಪ್ರಮಾಣ ಕುಸಿದಿದೆ.
ಮೃಗಾಲಯಕ್ಕೂ ಆಪತ್ತು: ಕೆರೆ ಹೀಗೆ ನೀರಿಲ್ಲದೇ ಬರಿದಾಗಿ ಇನ್ನು ನಾಲ್ಕೈದು ವರ್ಷ ಇದೇ ಸ್ಥಿತಿ ಮುಂದುವರಿದರೆ ಪಕ್ಕದ ಮೃಗಾಲಯವೂ ಪರಿಣಾಮ ಎದುರಿಸಬೇಕಾಗುತ್ತದೆ. ಮೃಗಾಲಯಕ್ಕೆ ಈವರೆಗೆ ಕಾರಂಜಿಕೆರೆ ನೀರಿನ ಮೂಲವಾಗಿತ್ತು.
ಈಗ ಸದ್ಯಕ್ಕೆ ಕೊಳವೆ ಬಾವಿಗಳನ್ನು ಆಶ್ರಯಿಸಿದೆ. ಆದರೆ, ಕೆರೆ ಒಣಗಿರುವುದರಿಂದ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳ ನೀರಿಗೂ ಸಮಸ್ಯೆ ಎದುರಾಗಲಿದೆ. ಇದರಿಂದ ಸದಾ ಹಸುರಿನಿಂದ ಕಂಗೊಳಿಸುತ್ತಿದ್ದ ಮೃಗಾಲಯದ ಮರ-ಗಿಡಗಳು ಒಣಗಲಿವೆ. ಜತೆಗೆ ಇಲ್ಲಿನ ಪ್ರಾಣಿಗಳಿಗೂ ನೀರಿನ ಸಮಸ್ಯೆ ಎದುರಾಗಲಿದೆ.
ಕೆರೆ ಭರ್ತಿಗೆ ಶಾಶ್ವತ ಯೋಜನೆಗೆ ಸಿದ್ಧತೆ: ಇದೇ ಮೊದಲ ಬಾರಿಗೆ ಕಾರಂಜಿ ಕೆರೆಯಲ್ಲಿ ನೀರು ಬತ್ತಿರುವುದರಿಂದ ವಿಚಲಿತರಾಗಿರುವ ಮೃಗಾಲಯದ ಆಡಳಿತ ಮಂಡಳಿ, ಕೆರೆಗೆ ಶಾಶ್ವತ ಯೋಜನೆಯೊಂದನ್ನು ರೂಪಿಸಿದೆ.
ಮೈಸೂರು ನಗರ ಪಾಲಿಕೆ ಸಹಯೋಗದಲ್ಲಿ ಸುಯೇಜ್ ಫಾರಂನಿಂದ ಶುದ್ಧೀಕರಿಸಿದ ನೀರನ್ನು ಪೈಪ್‌ಲೈನ್ ಮೂಲಕ ಚಾಮುಂಡಿ ಬೆಟ್ಟದ ಪಾದಕ್ಕೆ ತೆಗೆದುಕೊಂಡು ಹೋಗಿ, ನಂತರ ನೈಸರ್ಗಿಕವಾಗಿ ರಾಜ ಕಾಲುವೆ ಮೂಲಕ ಕಾರಂಜಿ ಕೆರೆಗೆ ಹರಿದು ಬರುವಂತೆ ಮಾಡುವ ಯೋಜನೆಗೆ ಮೃಗಾಲಯವು ಚಿಂತಿಸಿದೆ.
ನಗರಪಾಲಿಕೆ ಮತ್ತು ಮೃಗಾಲಯದ ಆಡಳಿತಾತ್ಮಕವಾಗಿ ಈ ಯೋಜನೆಗೆ ಒಪ್ಪಿಗೆ ನೀಡಿದರೆ ಕೆರೆಯೊಂದಕ್ಕೆ ಸುಯೇಜ್ ಫಾರಂ ನೀರನ್ನು ಶುದ್ಧೀಕರಿಸಿ ಹರಿಸುತ್ತಿರುವುದು ದೇಶದಲ್ಲಿ ಇದೇ ಮೊದಲನೆಯದಾಗುತ್ತದೆ. ಜೊತೆಗೆ ಮಾದರಿ ಕೆಲಸವೂ ಆಗಲಿದೆ.
ಚಾಮುಂಡಿ ಬೆಟ್ಟದ ಪಾದದಿಂದ ನೀರನ್ನು ರಾಜಕಾಲುವೆ ಮೂಲಕ ಹರಿಸಿದರೆ ನೀರು ನೈಸರ್ಗಿಕವಾಗಿ ಹರಿಯುವುದರಿಂದ ನೀರು ಶುದ್ಧವಾಗಿ, ನೀರಿನಲ್ಲಿರುವ ಸತ್ವ ಹೆಚ್ಚಾಗಿ ಕೆರೆ ಸೇರುತ್ತದೆ. ಒಟ್ಟಾರೆ ಈ ಯೋಜನೆಗೆ 3-4 ಕೋಟಿ ರೂ. ವ್ಯಯವಾಗಲಿದ್ದು, ಈಗಾಗಲೇ ಪಾಲಿಕೆಯ ಅಧಿಕಾರಿಗಳ ಜೊತೆಗೆ ವಿಷಯ ಪ್ರಸ್ತಾಪಿಸಲಾಗಿದೆ.
ಜೊತೆಗೆ ಕಾರಂಜಿ ಕೆರೆ ತಾಂತ್ರಿಕ ಸಮಿತಿ ರಚಿಸಿದ್ದು, ಸಾಧಕ ಬಾಧಕಗಳನ್ನು ಚರ್ಚಿಸಿದ್ದೇವೆ. ಸುಯೇಜ್ ಫಾರಂನಲ್ಲಿ ಶುದ್ಧೀಕರಿಸಿರುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ನಂತರ ಈ ಯೋಜನೆಗೆ ಕೈಹಾಕಲಿದ್ದೇವೆ ಎನ್ನುತ್ತಾರೆ ಶ್ರೀಚಾಮರಾಜೇಂದ್ರ ಮೃಗಾಲಯದ ನಿರ್ದೇಶಕ ಅಜಿತ್ ಕುಲಕರ್ಣಿ.
* ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.