ಚುನಾವಣೆ ಹೊಸ್ತಿಲಲ್ಲಿ ವಿಪಕ್ಷಗಳಿಗೆ ಸಿದ್ದು ಪೆಟ್ಟು
Team Udayavani, Feb 6, 2018, 5:35 PM IST
ಮೈಸೂರು: ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವಾಗ ಬಿಜೆಪಿಯಿಂದ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಹಾಗೂ ಜೆಡಿಎಸ್ ನಿಂದ ಅನಿಲ್ ಚಿಕ್ಕಮಾದು ಅವರನ್ನು ಕಾಂಗ್ರೆಸ್‌ಗೆ ಸೆಳೆದು ರಾಜಕೀಯ ಚಾಣಾಕ್ಷತೆ ಮೆರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ಗೆ ಬಹುದೊಡ್ಡ ಪೆಟ್ಟು ನೀಡಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕಾಂಗ್ರೆಸ್ ಸೇರಿದ ವಿಜಯಶಂಕರ್ ಅವರ ಜತೆಗೆ ಹುಣಸೂರು ಬಿಜೆಪಿ ಘಟಕದ ಸಾಕಷ್ಟು ಪದಾಧಿಕಾರಿಗಳು ಬಿಜೆಪಿ ತೊರೆದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮೊದಲಾದವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ.
ಸಿಎಚ್‌ವಿ ಸೇರ್ಪಡೆ: ಯುವ ಕಾಂಗ್ರೆಸ್ ಮೂಲಕ ಹುಣಸೂರಿನಲ್ಲಿ ರಾಜಕಾರಣ ಆರಂಭಿಸಿದ ಸಿ.ಎಚ್.ವಿಜಯಶಂಕರ್ ಅವರು, ನಂತರ ದಲ್ಲಿ ಸುದೀರ್ಘಕಾಲ ಬಿಜೆಪಿಯಲ್ಲಿದ್ದವರು. ನಗರ ಪ್ರದೇಶದ ಪಕ್ಷ ಎಂಬ ಹಣೆಪಟ್ಟಿ ಹೊಂದಿದ್ದ ಬಿಜೆಪಿಯಿಂದ 1994ರಲ್ಲಿ ಹುಣಸೂರಿನ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಎರಡು ಬಾರಿ ಮೈಸೂರು-ಕೊಡಗು ಕ್ಷೇತ್ರದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ವಿಧಾನಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿ ಅರಣ್ಯ ಮತ್ತು ಸಣ್ಣ ಕೈಗಾರಿಕೆ ಖಾತೆಯನ್ನೂ ನೀಡಲಾಗಿತ್ತು.
2014ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಹಾಸನ ಕ್ಷೇತ್ರದ ಟಿಕೆಟ್ ನೀಡಲಾಯಿತು. ಪಕ್ಷದ ಸೂಚನೆಯನ್ನುಧಿಕ್ಕರಿಸದೆ ಎಚ್ .ಡಿ.ದೇವೇಗೌಡರ ವಿರುದ್ಧ ಸ್ಪರ್ಧಿಸಿ ಸೋತ ನಂತರ, 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಾಕಾಂಕ್ಷಿಯಾಗಿ ಜಿಲ್ಲೆಯ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಆದರೆ, ಏಕಾಏಕಿ ಅಲ್ಲಿಗೂ ಹೊರಗಿನ ಉದ್ಯಮಿಯೊಬ್ಬರನ್ನು ತಂದು ಕೂರಿಸಿ, ಚಾಮುಂಡೇಶ್ವರಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧಿಸುವಂತೆ ಪಕ್ಷದ ಪ್ರಮುಖರೊಬ್ಬರ ಹೇಳಿ ಕಳುಹಿಸಿದ್ದನ್ನು ಒಪ್ಪದಿದ್ದಾಗ ಪಕ್ಷದಲ್ಲಿ ಹಂತ ಹಂತವಾಗಿ ಕಡೆಗಣಿಸುತ್ತಾ ಬರಲಾಯಿತು. ಇದರಿಂದ ಬೇಸತ್ತ ವಿಜಯಶಂಕರ್, ಅಂತಿಮವಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇದರಿಂದ ತಮ್ಮ ವಿರುದ್ಧ ಬಂಡೆದ್ದು ಪಕ್ಷ ತ್ಯಜಿಸಿದ ಎಚ್.ವಿಶ್ವನಾಥ್ ಅವರ ಸ್ಥಾನಕ್ಕೆ ಅದೇ ಸಮುದಾಯದ ವಿಜಯಶಂಕರ್ ಅವರನ್ನು ಕರೆತರುವ ಮೂಲಕ ಸಿದ್ದರಾಮಯ್ಯ ಸಡ್ಡು ಹೊಡೆದಿದ್ದಾರೆ.
ಜೆಡಿಎಸ್ ಇಬ್ಭಾಗ: ಇನ್ನು ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿದ್ದ ದಿ.ಎಸ್.ಚಿಕ್ಕಮಾದು ಅವರ ಪುತ್ರ ಅನಿಲ್ ಕುಮಾರ್ ಅವರು ಜೆಡಿಎಸ್ ಟಿಕೆಟ್ ಕೈತಪ್ಪಲಿದೆ ಎಂಬ ಕಾರಣದಿಂದ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದ್ದಾರೆ.
ಇವರೊಂದಿಗೆ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಚ್.ಡಿ.ಕೋಟೆ ಜೆಡಿಎಸ್ ಘಟಕದ ಅಧ್ಯಕ್ಷ ಸುರೇಂದ್ರ ಗೌಡ, ಸರಗೂರು ಜೆಡಿಎಸ್ ಘಟಕದ ಅಧ್ಯಕ್ಷ ರವಿ ಸೇರಿದಂತೆ ಪಕ್ಷದ ಎರಡೂ ಘಟಕಗಳ ಅನೇಕ ಪದಾಧಿಕಾರಿಗಳು, 2008ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತಿದ್ದ, ನಾಯಕ ಸಮಾಜದ ಮುಖಂಡರಾದ ದೊಡ್ಡ ನಾಯಕ ಮೊದಲಾದವರು ಕಾಂಗ್ರೆಸ್ ಸೇರಿರುವುದರಿಂದ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಕ್ಷರಶಃ ಇಬ್ಭಾಗವಾದಂತಾಗಿದೆ.
2008ರಲ್ಲಿ ಎಚ್.ಡಿ.ಕೋಟೆ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಬೀಚನಹಳ್ಳಿ ಚಿಕ್ಕಣ್ಣ ಅವರು ಸಂಸದ ಆರ್. ಧ್ರುವನಾರಾಯಣ ಅವರ ಜತೆಗಿನ ವೈಮನಸ್ಯ ದಿಂದ ಬಿಜೆಪಿ ಸೇರಿದ್ದರು. ಆದರೆ, ಹಿಂದೆ ಅದೇ ಕ್ಷೇತ್ರದ ಶಾಸಕರಾಗಿದ್ದ ಕೋಟೆ ಎಂ.ಶಿವಣ್ಣ ಅವರು ಬಿಜೆಪಿ ಜಿಲ್ಲಾಧ್ಯಕ್ಷರಾದ ನಂತರ ಬಿಜೆಪಿ ತೊರೆದು, ಮತ್ತೆ ಕಾಂಗ್ರೆಸ್ ಸೇರ್ಪಡೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ, ಚಿಕ್ಕಣ್ಣ ಕಾಂಗ್ರೆಸ್ ಸೇರ್ಪಡೆಗೆ ಸಂಸದ ಧ್ರುವನಾರಾಯಣ ಅವರು ಅಡ್ಡಗಾಲು ಹಾಕಿದ್ದರು, ಅದೇ ಸಂದರ್ಭದಲ್ಲಿ ಶಾಸಕ ಎಸ್.ಚಿಕ್ಕಮಾದು ಅವರು ಅಕಾಲಿಕ ಮರಣ ಹೊಂದಿದ್ದರಿಂದ ಚಿಕ್ಕಣ್ಣ ಜೆಡಿಎಸ್ ಸೇರಿದರು. ಆದರೆ, ಚಿಕ್ಕಮಾದು ಅವರು ಜಿಲ್ಲೆಯಲ್ಲಿ ನಾಯಕ ಸಮಾಜದ ಪ್ರಭಾವಿಯಾಗಿದ್ದ ಹಿನ್ನೆಲೆಯಲ್ಲಿ ಅವರ ಅಕಾಲಿಕ ಮರಣದಿಂದ ತೆರವಾಗಿರುವ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಚಿಕ್ಕಮಾದು ಕುಟುಂಬದವರನ್ನೇ ಕಣಕ್ಕಿಳಿಸುವುದು ಸೂಕ್ತ ಎಂಬ ಜಿಲ್ಲೆಯ ಜೆಡಿಎಸ್ ಶಾಸಕರ ಸಲಹೆ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ಅನಿಲ್ ಚಿಕ್ಕಮಾದು ಅವರಿಗೇ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಆದರೆ, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ಗೆ ಹೊಡೆತ ನೀಡಬೇಕು ಎಂಬ ಕಾರಣದಿಂದ ಚಿಕ್ಕಮಾದು ಕುಟುಂಬದವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಿಲ್ ಚಿಕ್ಕಮಾದು ಅವರನ್ನು ಕಾಂಗ್ರೆಸ್‌ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಜೆಡಿಎಸ್‌ಗೆ ದೊಡ್ಡ ಹೊಡೆತವನ್ನೇ ನೀಡಿದ್ದಾರೆ.
ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.