ಸರಳಾತಿ ಸರಳ ದಸರಾಗೆ ಖರ್ಚು ವೆಚ್ಚ ಅದ್ಧೂರಿ!
Team Udayavani, Nov 2, 2020, 1:46 PM IST
ಮೈಸೂರು: ಕೋವಿಡ್ ಸಂಕಷ್ಟ ನಡುವೆ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾವನ್ನು ಸರಳಾತಿ ಸರಳವಾಗಿ ನಡೆಸಿದ್ದರೂ ಅನಗತ್ಯವಾಗಿ ದುಂದುವೆಚ್ಚ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ.
ದಸರಾ ಉತ್ಸವ ಅರಮನೆ ಮತ್ತು ಚಾಮುಂಡಿ ಬೆಟ್ಟಕ್ಕೆ ಸೀಮಿತವಾಗಿದ್ದರೂ, ಖರ್ಚು ಮಾತ್ರ ಬರೋಬ್ಬರಿ 3 ಕೋಟಿ ಸಮೀಪಿಸಿದೆ. ಅನಗತ್ಯವಾಗಿ ದುಪ್ಪಟ್ಟು ಹಣ ವಿನಿಯೋಗಿಸಿ ದಸರೆ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಮನಬಂದಂತೆ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಭಾನುವಾರ ಅರಮನೆ ಮಂಡಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ದಸರಾ ಉತ್ಸವಕ್ಕೆ ಖರ್ಚಾದ ಹಣದ ಬಗ್ಗೆ ಸುದ್ದಿಗೋಷ್ಠಿ ನಡೆಸಿ, ಲೆಕ್ಕ ನೀಡಿ, ದಸರೆಗೆ 2.91 ಕೋಟಿ ರೂ. ಖರ್ಚಾಗಿದ್ದು, 7.95 ಕೋಟಿ ರೂ. ಉಳಿತಾಯವಾಗಿದೆ ಎಂದು ಮಾಹಿತಿ ನೀಡಿದ ಬೆನ್ನಲ್ಲೆ ದಸರಾ ಉತ್ಸವಕ್ಕೆ ಅನಗತ್ಯವಾಗಿ ಮಾಡಿರುವ ಲಕ್ಷಾಂತರ ರೂ. ವೆಚ್ಚ ಬೆಳಕಿಗೆ ಬಂದಿದೆ.
ದಸರಾ ಎಂದರೆ ಜನರನ್ನೇ ದೂರ ಇಟ್ಟು ದಸರಾ ಮಾಡಿ, ಈ ಪ್ರಮಾಣದ ಹಣ ಖರ್ಚು ಮಾಡುವ ಅಗತ್ಯ ಇತ್ತೇ ಎಂಬ ಪ್ರಶ್ನೆಗಳು ಕೇಳಿ ಬರುತ್ತಿದ್ದು, ಇಲ್ಲ ಸಲ್ಲದಕ್ಕೆಲ್ಲ ಸಾವಿರಾರು ರೂಪಾಯಿ ಹಣವನ್ನು ನೀಡಿರುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ದಸರೆ ಉದ್ಘಾಟನೆ ಮತ್ತು ಜಂಬೂ ಸವಾರಿ ಸೇರಿದಂತೆ 500 ಮಂದಿಗಷ್ಟೇ ಆಹ್ವಾನ ನೀಡಲಾಗಿದ್ದು, ಇದಕ್ಕಾಗಿ 1.36 ಲಕ್ಷ ರೂ. ಖರ್ಚು ಮಾಡಿ ಆಹ್ವಾನ ಪತ್ರಿಕೆಯನ್ನು ಮುದ್ರಿಸಲಾಗಿದೆ. ಅಲ್ಲದೇ ದಸರಾ ಸಂಬಂಧ ಲೇಖನ ಸಾಮಗ್ರಿ ಖರೀದಿಗೆಂದು 74 ಸಾವಿರ,ಇಂಟರ್‌ನೆಟ್‌ಗೆ 78 ಸಾವಿರ ಹಾಗೂ ದಸರಾ ಸಂಬಂಧ ನಡೆದ ವಿವಿಧ ಸಭೆಗಳಿಗೆ ಟೀ, ಕಾಫಿ, ತಿನಿಸು ಹೆಸರಿನಲ್ಲಿ 1.22 ಲಕ್ಷ ರೂ. ಖರ್ಚು ಮಾಡಿರುವುದು ಸರಳಾತಿ ಸರಳ ದಸರಾ ಉತ್ಸವವನ್ನೇ ಅಣಕಿಸುವಂತಾಗಿದೆ.
ದುಂದುವೆಚ್ಚ: ಕೋವಿಡ್ ಸಂಕಷ್ಟದ ಕಾಲದಲ್ಲಿ ಸರ್ಕಾರ ದಸರಾ ಉತ್ಸವವನ್ನು ಅರಮನೆ, ಬೆಟ್ಟಕ್ಕೆ ಸೀಮಿತಗೊಳಿಸಿಯೂ ಈ ಪ್ರಮಾಣದ ಹಣ ಖರ್ಚು ಮಾಡಿರುವುದು ಸರಿಯಲ್ಲ. ದಸರೆ ಎಂದರೆ ಜನರನ್ನು ಸೇರಿಸಿ ಮಾಡುವ ಹಬ್ಬ. ಆದರೆ, ಜನರನ್ನು ದೂರ ಇಟ್ಟು ದಸರಾ ಮಾಡಿ, ಸಾರ್ವಜನಿಕರ ತೆರಿಗೆ ಹಣವನ್ನು ಈ ಪ್ರಮಾಣದಲ್ಲಿ ದುಂದುವೆಚ್ಚ ಮಾಡಿದ್ದಾರೆ. ಇದೇ ಹಣವನ್ನು ಕೊರೊನಾ ಚಿಕಿತ್ಸೆ ನೀಡಲು ಬಳಿಸಿಕೊಳ್ಳಬಹುದಿತ್ತು ಅಥವಾ ನೆರೆ ಸಂತ್ರಸ್ತರಿಗೆ ಸೌಲಭ್ಯ ಕಲ್ಪಿಸಬಹುದಿತ್ತು ಎಂದು ನ್ಯಾಯವಾದಿ ಪಿ.ಜೆ. ರಾಘವೇಂದ್ರ ತಿಳಿಸಿದ್ದಾರೆ.
ಸ್ಥಿರ ವೇದಿಕೆಗೆ 41 ಲಕ್ಷ ರೂ. : ಅರಮನೆ ಆವರಣದಲ್ಲಿ ಒಂಭತ್ತು ದಿನಗಳ ಕಾಲ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿರ್ಮಿಸಲಾಗಿದ್ದ ವೇದಿಕೆಗೆ ಬರೋಬ್ಬರಿ 41 ಲಕ್ಷ ರೂ. ವ್ಯಯಿಸಲಾಗಿದೆ. ವೇದಿಕೆ ನಿರ್ಮಾಣ ಮತ್ತು ಅಗತ್ಯ ವ್ಯವಸ್ಥೆಗೆಂದು ಇಷ್ಟು ಪ್ರಮಾಣದ ಹಣ ನೀಡಿರುವುದು ಹಲವು ಸಂದೇಹಗಳಿಗೆ ಕಾರಣವಾಗಿದೆ.
ಸರ್ಕಾರಿ ಅಧೀನ ಸಂಸ್ಥೆಗೂ ಬಾಪ್ತು : ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಒಂದಾದ ಚಂದನ ವಾಹಿನಿಯು ದಸರಾ ಜಂಬೂ ಸವಾರಿಯನ್ನು ನೇರ ಪ್ರಸಾರ ಮಾಡಿತ್ತು. ಇದಕ್ಕೂ 5.70 ಲಕ್ಷ ರೂ. ವಿನಿಯೋಗ ಮಾಡಲಾಗಿದೆ. ಇದರ ಜೊತೆಗೆ ಮತ್ತೂಂದು ಸಂಸ್ಥೆಯಾದ ಮೈಸೂರು ಆಕಾಶ ವಾಣಿ ಜಂಬೂ ಸವಾರಿ ವೀಕ್ಷಕ ವಿವರಣೆ ನೀಡಿದ್ದ ಕ್ಕಾಗಿ 66 ಸಾವಿರ ರೂ.ನೀಡಲಾಗಿದೆ. ಸರ್ಕಾರಿ ಅಧೀನ ಸಂಸ್ಥೆಗಳಿಗೂ ಈ ಪ್ರಮಾಣದ ಹಣ ನೀಡುವ ಅಗತ್ಯವಿದೆಯೇ ಎಂಬ ಪ್ರಶ್ನೆಗಳು ಮೂಡಿದೆ.
6 ಪ್ರಮಾಣ ಪತ್ರ ಮುದ್ರಣಕ್ಕೆ 8 ಸಾವಿರ ರೂ. : ಅ.17ರಂದು ಚಾಮುಂಡಿ ಬೆಟ್ಟದಲ್ಲಿ ನಡೆದ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ 6 ಮಂದಿ ಕೋವಿಡ್ ವಾರಿಯರ್ಸ್‌ಗಳಿಗೆ ಪ್ರಮಾಣ ಪತ್ರ ನೀಡಲಾಗಿತ್ತು. ಆದರೆ ಈ 6 ಪ್ರಮಾಣ ಪತ್ರಗಳಿಗೆ 8,496 ರೂ. ಪಾವತಿಸಿರುವುದು ದುಬಾರಿ ವೆಚ್ಚಕ್ಕೆ ಹಿಡಿದ ಕನ್ನಡಿಯಾಗಿದೆ. ಒಟ್ಟಾರೆ ಜಿಲ್ಲಾಡಳಿತ ಸರಳ ದಸರ ಹೆಸರಿನಲ್ಲಿ ಅನಗತ್ಯವಾಗಿ ಸಾರ್ವಜನಿಕರ ಹಣವನ್ನು ದುಂದುವೆಚ್ಚ ಮಾಡಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
-ಸತೀಶ್ ದೇಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.