ಭಾವ ವ್ಯಕ್ತಪಡಿಸುವ ಭಾಷೆಗೆ ಭವಿಷ್ಯ ಇರುತ್ತೆ
Team Udayavani, Oct 4, 2022, 4:34 PM IST
ಮೈಸೂರು: ಯಾವ ಭಾಷೆಗೆ ಕಾವ್ಯಾಭಿವ್ಯಕ್ತತೆ ಇರುತ್ತದೋ ಆ ಭಾಷೆಗೆ ಭವಿಷ್ಯವಿರುತ್ತದೆ. ಇಂಗ್ಲಿಷ್ ಒತ್ತಡಕ್ಕೆ ಸಿಲುಕಿಯೂ ಕನ್ನಡದ ಕಾವ್ಯ ಪ್ರಭಾವ ದಟ್ಟವಾಗಿ ಬೆಳೆದಿದೆ ಎಂದು ನಾಟಕಕಾರ, ಕವಿ ಎಚ್.ಎಸ್.ಶಿವಪ್ರಕಾಶ್ ಅಭಿಪ್ರಾಯ ಪಟ್ಟರು.
ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ದಸರಾ ಕವಿಗೋಷ್ಠಿ ಉಪ ಸಮಿತಿ ವತಿಯಿಂದ ನಡೆದ ಪ್ರಧಾನ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಕ್ಷಿ ಹಾರುವುದನ್ನು ನೋಡುವಂತೆಯೇ ಕಾವ್ಯದ ಪ್ರಭಾವವೂ ಇದೆ. ಕನ್ನಡ ಕಾವ್ಯ ಪರಂಪರೆಗೆ ಸುದೀರ್ಘ ಇತಿಹಾಸವಿದೆ ಎಂದು ಹೇಳಿದರು.
ಹದಿನೈದು ವರ್ಷಗಳ ಹಿಂದೆ ವಿದೇಶಕ್ಕೆ ಹೋದಾಗ ಅಲ್ಲಿನವರು ನಮ್ಮ ಕವಿಗಳ ಬಗ್ಗೆ ವಿಚಾರಿಸಿದಾಗ ಸಂಕೋಚವಾಗುತ್ತಿತ್ತು. ಇವತ್ತು ಕವಿಗಳ ಸಂಖ್ಯೆ ಹೆಚ್ಚಾಗಿದೆ. ಕನ್ನಡದ ಜನ ವರ್ಗಗಳು ಸಶಕ್ತವಾಗಿ ಕಾವ್ಯ ಕಟ್ಟುತ್ತಿದ್ದಾರೆ ಎಂದರು.
ಶಾಲೆ, ವಿವಿ ಆಗಿ ಕೆಲಸ:ಕವಿಗಳು ಜನರ ಶಾಲೆಯಾಗಿ, ಜನರ ವಿಶ್ವವಿದ್ಯಾನಿಲಯವಾಗಿ ಕೆಲಸ ಮಾಡಿದ್ದಾರೆ. ಈ ಸಾಲಿನಲ್ಲಿ ಸರ್ವಜ್ಞ, ವಚನಕಾರರು, ದಾಸರು, ತತ್ವಪದಕಾರರು ಮನರಂಜನೆಗಾಗಿ ಕಾವ್ಯ ರಚಿಸಿದ ಸಂದಿಗ್ಧ ಸಂದರ್ಭದಲ್ಲಿ ತಿಳಿವು ಕೊಟ್ಟಿದ್ದಾರೆ. ಕನ್ನಡ ಕವಿ ಪರಂಪರೆ ಸಮೃದ್ಧಗೊಳಿಸಿದ್ದಾರೆ ಎಂದು ವಿವರಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಮೊಟ್ಟ ಮೊದಲು ಇತಿಹಾಸದ ಕಲ್ಪನೆ ಕೊಟ್ಟ ಬ್ರಿಟಿಷರ ಕಲ್ಪನೆಗೂ ಭಾರತೀಯರ ಕಲ್ಪನೆಗೂ ವ್ಯತ್ಯಾಸವಿದೆ. ಅವರು ಭೂತ, ವರ್ತಮಾನ, ಭವಿಷ್ಯ ಎಂದು ವರ್ಗೀಕರಿಸುತ್ತಾರೆ. ನಾವು ಕಾಲಚಕ್ರದಲ್ಲಿ ನಂಬಿಕೆ ಇಟ್ಟಿದ್ದೇವೆ ಎಂದು ತಿಳಿಸಿದರು.
ಕರ್ನಾಟಕದ ಕಾವ್ಯ ವಿಶಿಷ್ಟವಾಗಿ ಬೆಳೆದಿದೆ:ನಮ್ಮ ಪ್ರಕಾರ ಕಾಲ ಒಂದೇ. ಕೃಷ್ಣ ಈಗಲೂ ಇದ್ದಾನೆ. ರಾಮ ಈಗ ಹೋದನೆಂದರೆ ನಂಬುತ್ತೇವೆ. ಆದರೆ, ಬ್ರಿಟಿಷರು ಬಂದ ಬಳಿಕ ಇದನ್ನು ಬದಲಾಯಿಸಿ ಕೊಂಡೆವು. ಭಾರತ ಮತ್ತು ಕರ್ನಾಟಕದ ಕಾವ್ಯ ವಿಶಿಷ್ಟವಾಗಿ ಬೆಳೆದು ಬಂದಿದೆ ಎಂದು ಹೇಳಿದರು.
ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ನಶಿಸಿತು: ಭಾರತೀಯರಿಗೆ ಯಾವ ಶಿಕ್ಷಣ ಕೊಡಬೇಕೆಂದು 1833ರಲ್ಲಿ ಮೆಕಾಲೆ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಯಿತು. ಅದರಲ್ಲಿ ನಾಲ್ವರು ವಿದೇಶಿಯರು, ನಾಲ್ವರು ಭಾರತೀಯರಿದ್ದರು. ಸಮಿತಿಯಲ್ಲಿದ್ದ ಭಾರತೀಯರು ವಿದೇಶಿಯರು ಹೇಳಿದ್ದಕ್ಕೆ ತಲೆ ಅಲ್ಲಾಡಿಸಿದರು. ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ನಶಿಸಿತು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೇಯರ್ ಶಿವಕುಮಾರ್, ಶಾಸಕ ಸಿ.ಎಸ್.ನಿರಂಜನ್ ಕುಮಾರ್, ನಿಗಮ ಮಂಡಲಿ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸಗೌಡ, ಶಿವಕುಮಾರ್, ದಸರ ಉಪ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ, ದಸರಾ ಕವಿಗೋಷ್ಠಿ ಕಾರ್ಯಾಧ್ಯಕ್ಷ ಡಾ.ಎಂ.ಜಿ. ಮಂಜುನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.