ಬೆಳೆ ಕಟಾವಾದ್ರೂ ರೈತರಿಗೆ ಬೆಳೆ ಸಾಲವಿಲ್ಲ: ತರಾಟೆ
Team Udayavani, Oct 31, 2019, 3:00 AM IST
ಮೈಸೂರು: ಮುಂಗಾರು ಪೂರ್ಣಗೊಂಡು ಬೆಳೆಗಳ ಕಟಾವು ಮುಗಿದಿದ್ದರೂ ಬ್ಯಾಂಕ್‌ಗಳು ಬೆಳೆ ಸಾಲ ನೀಡುವಲ್ಲಿ ಶೇ.100ರಷ್ಟು ಗುರಿ ಏಕೆ ತಲುಪಿಲ್ಲ ಎಂದು ಪ್ರತಾಪ್ ಸಿಂಹ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಬುಧವಾರ ನಡೆದ ಜಿಲ್ಲಾ ಯೋಜನೆಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮುಂಗಾರು ಪೂರ್ಣಗೊಂಡು ಹಿಂಗಾರು ಸಹ ಮುಗಿಯುತ್ತಾ ಬಂದಿದೆ.
ಈ ನಡುವೆ ಬೆಳೆಗಳು ಕಟಾವಿನ ಹಂತಕ್ಕೆ ಬಂದಿವೆ. ಹೀಗಿದ್ದರೂ, ಅರ್ಹ ರೈತರಿಗೆ ಬೆಳೆ ಸಾಲ ನೀಡುವಲ್ಲಿ ಶೇ.100 ಗುರಿ ತಲುಪಿಸಲಾಗಿಲ್ಲ. ಶೇ.59 ಬೆಳೆ ಸಾಲ ನೀಡಿವೆ ಎಂದಾದರೆ, ಶೇ.100 ಗುರಿ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಕೃಷಿ ಸಂಬಂಧಿತ ಸರ್ಕಾರಿ ಯೋಜನೆಗಳು ರೈತರಿಗೆ ತಲುಪಬೇಕು. ಶೀಘ್ರವೇ ಗುರಿ ತಲುಪಲು ಬ್ಯಾಂಕ್ ಅಧಿಕಾರಿಗಳು ಕ್ರಮವಹಿಸಿ, ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಮುದ್ರಾ ಯೋಜನೆ ಸಾಲ: ಲೀಡ್ ಬ್ಯಾಂಕ್‌ನ ಜಿಲ್ಲಾ ಮುಖ್ಯ ವ್ಯವಸ್ಥಾಪಕ ವೆಂಕಟಾಚಲಪತಿ ಮಾತನಾಡಿ, ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಶಿಶು- 55 ಸಾವಿರ ರೂ. ಒಳಗೆ, ಕಿಶೋರ್-50,000 ರೂ.-5 ಲಕ್ಷ ರೂ.ವರೆಗೆ ಹಾಗೂ ತರುಣ್-5 ಲಕ್ಷ ರೂ.-10 ಲಕ್ಷ ರೂ.ವರೆಗೆ ಮೂರು ಹಂತದಲ್ಲಿ ಸಾಲ ನೀಡಲಾಗುವುದು.
ಶಿಶು ಯೋಜನೆಯಡಿ ಜಿಲ್ಲೆಯಲ್ಲಿ 12,740 ಖಾತೆ ತೆರೆಯಲಾಗಿದ್ದು, 61.76 ಕೋಟಿ ರೂ. ಸಾಲ ವಿತರಿಸಲಾಗಿದೆ. ಕಿಶೋರ್ ಯೋಜನೆಯಡಿ 11,673 ಖಾತೆಯಾಗಿದ್ದು, 241.11 ಕೋಟಿ ರೂ. ಸಾಲ ನೀಡಲಾಗಿದೆ. ತರುಣ್ ಯೋಜನೆಯಡಿ 2,927 ಖಾತೆಯಾಗಿದ್ದು, 255.87 ಕೋಟಿ ರೂ. ಸಾಲ ನೀಡಲಾಗಿದೆ. ಒಟ್ಟಾರೆ 558.74 ಕೋಟಿ ರೂ. ಸಾಲ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸ್ಟ್ಯಾಂಡಪ್ ಇಂಡಿಯಾ: “ಸ್ಟ್ಯಾಂಡಪ್ ಇಂಡಿಯಾ’ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ ಸಾಮಾನ್ಯ ವರ್ಗದಿಂದ 173 ಅರ್ಜಿಗಳು (ಮಹಿಳೆಯರು) ಬಂದಿದ್ದು, 42.44 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಅಲ್ಪಸಂಖ್ಯಾತ ಸಮುದಾಯದಿಂದ 10 ಅರ್ಜಿಗಳು (ಮಹಿಳೆಯರು) ಸಲ್ಲಿಕೆಯಾಗಿದ್ದು 2.17 ಕೋಟಿ ರೂ. ಬಿಡುಗಡೆ.
ಒಬಿಸಿ- 14 ಅರ್ಜಿಗಳು (ಮಹಿಳೆಯರು) 2.69 ಕೋಟಿ ರೂ. ಬಿಡುಗಡೆ. ಎಸ್ಸಿ- ಮಹಿಳೆಯರಿಂದ 10 ಅರ್ಜಿ (2.01 ಕೋಟಿ ರೂ.) ಮತ್ತು ಪುರುಷರಿಂದ 26 ಅರ್ಜಿ (7.90 ಕೋಟಿ ರೂ.) ಬಿಡುಗಡೆಯಾಗಿದೆ. ಎಸ್ಟಿ- ಮಹಿಳೆಯರಿಂದ 10 ಅರ್ಜಿಗಳಿಗೆ 1.91 ಕೋಟಿ ರೂ. ಬಿಡುಗಡೆಯಾಗಿದೆ ಎಂದು ವಿವರಿಸಿದರು.
ಯೋಜನೆ ತಲುಪಿಸಿ: ಸ್ಟ್ಯಾಂಡಪ್ ಇಂಡಿಯಾ ಯೋಜನೆ ಪ್ರಗತಿಗೆ ಸಂಬಂಧ ಬೇಸರ ವ್ಯಕ್ತಪಡಿಸಿದ ಸಂಸದ ಪ್ರತಾಪ್‌ಸಿಂಹ, ಮೈಸೂರು ಜಿಲ್ಲೆಯಲ್ಲಿ ಎಸ್ಸಿ-ಎಸ್ಟಿ ಸಮುದಾಯದ ಜನ ಹೆಚ್ಚಿದ್ದಾರೆ. ಆದರೂ ಪ್ರಧಾನಿ ಮೋದಿ ಅವರ ಆಸಕ್ತಿ ಫಲವಾಗಿ ರೂಪುಗೊಂಡ ಈ ಯೋಜನೆಗೆ ಒಟ್ಟಾರೆ ಕೇವಲ 246 ಅರ್ಜಿಗಳು ಬಂದಿವೆ ಎಂದರೆ ಹೇಗೆ? ಕೇಂದ್ರದ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ಸಾಲಮನ್ನಾ: ಜಿಲ್ಲೆಯಲ್ಲಿ ಈವರೆಗೆ ಶೇ. 84.49 ಸಾಲ ಮನ್ನಾ ಆಗಿದೆ. ಶೇ. 15 ಬಾಕಿ ಇದ್ದು, ಶೀಘ್ರವೇ ಶೇ. 100 ಗುರಿ ತಲುಪಲಾಗುವುದು. ಈಗಲೂ ಸಹಾಯವಾಣಿಗೆ ಸಾಲ ಮನ್ನಾ ವಿಚಾರವಾಗಿ ನಿತ್ಯ 20ಕ್ಕೂ ಹೆಚ್ಚು ಕರೆಗಳು ಬರುತ್ತಿವೆ. ಬ್ಯಾಂಕ್ ಅಧಿಕಾರಿಗಳು ಇದನ್ನು ಮನಗಾಣಬೇಕು ಎಂದು ವೆಂಕಟಾಚಲಪತಿ ಮನವಿ ಮಾಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಜ್ಯೋತಿ, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಣಿಕಂಟನ್, ಎಸ್‌ಬಿಐನ ಪರಮೇಶ್ವರ್ ಇದ್ದರು.
ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಇರಲಿ: ಯೋಜನೆಗಳು ಸಮರ್ಪಕವಾಗಿ ತಲುಪಲು ಪ್ರತಿಯೊಬ್ಬರೂ ಖಾತೆ ತೆರೆಯುವಂತೆ ಬ್ಯಾಂಕ್ ಅಧಿಕಾರಿಗಳು ಅರಿವು ಮೂಡಿಸಬೇಕು. ಜನಧನ್ ಯೋಜನೆಯಡಿ ಜಿಲ್ಲೆಯಲ್ಲಿ ಸಂಪೂರ್ಣ ಬ್ಯಾಂಕ್ ಖಾತೆ ಹೊಂದಲು ಅವಕಾಶ ಮಾಡಿಕೊಡಬೇಕು. ಆದರೆ, ಹುಣಸೂರಿನ ಹಿರಿಕ್ಯಾತನಹಳ್ಳಿ ಹಾಗೂ ಬಿಳಿಕೆರೆಯಲ್ಲಿ ಝೀರೊ ಬ್ಯಾಲೆನ್ಸ್ ಖಾತೆ ತೆರೆಯಲು ಬ್ಯಾಂಕ್‌ಗಳು ಅವಕಾಶ ನೀಡುತ್ತಿಲ್ಲ ಎಂಬ ದೂರುಗಳಿವೆ ಎಂದು ಸಂಸದರು ಗರಂ ಆದರು.
ಅದಕ್ಕೆ ವೆಂಕಟಾಚಲಪತಿ ಪ್ರತಿಕ್ರಿಯಿಸಿ, ಜೀರೊ ಬ್ಯಾಲೆನ್ಸ್ ಖಾತೆಯಿಂದ ಖಾತೆದಾರರ ವಾರ್ಷಿಕ ವಿಮೆಯಲ್ಲಿ ತೊಂದರೆಯಾಗಬಹುದು. ಸಮಸ್ಯೆ ನಿವಾರಣೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು. ಜಿಲ್ಲೆಯಲ್ಲಿ ಪ್ರತಿ ಪಂಚಾಯಿತಿ ಒಂದೊಂದು ಬ್ಯಾಂಕ್ ಶಾಖೆ ಹೊಂದಿರಬೇಕು. ಈ ಮಾದರಿಯಲ್ಲಿ ಎಷ್ಟು ಶಾಖೆಗಳಿವೆ ಎಂದು ಸಂಸದರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೆಂಕಟಾಚಲಪತಿ ಮುಂದಿನ ಸಭೆಯಲ್ಲಿ ಮಾಹಿತಿ ನೀಡಲಾಗುವುದು ಎಂದರು.
10 ರೂ. ನಾಣ್ಯ ಚಲಾವಣೆಗೆ ಅರಿವು ಮೂಡಿಸಿ: ಸಾರ್ವಜನಿಕರಲ್ಲಿ 10 ರೂ. ನಾಣ್ಯ ಚಲಾವಣೆ ವಿಚಾರದಲ್ಲಿ ಇನ್ನೂ ಗೊಂದಲವಿದೆ. ಈ ಬಗ್ಗೆ ಬ್ಯಾಂಕ್‌ಗಳು ಅರಿವು ಮೂಡಿಸುವ ಅಗತ್ಯವಿದೆ. ಎಲ್ಲೆಡೆ ನಾಣ್ಯ ಚಲಾವಣೆ ಮಾಡಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಹಾಯಕ ಪ್ರಧಾನ ವ್ಯವಸ್ಥಾಪಕ ಎನ್.ದತ್ತಾತ್ರೇಯ ಹೇಳಿದರು. ನಾಣ್ಯ ಚಲಾವಣೆ ವಿಚಾರದಲ್ಲಿ ಹಲವು ಬ್ಯಾಂಕ್‌ಗಳಲ್ಲೇ ಗೊಂದಲವಿದೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.
ಜಿಲ್ಲೆಯ 100 ಬ್ಯಾಂಕ್‌ಗಳನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಅದರಲ್ಲಿ ಶೇ. 40 ಬ್ಯಾಂಕ್ 10 ರೂ. ನಾಣ್ಯ ಸ್ವೀಕರಿಸುತ್ತಿಲ್ಲ. ಬ್ಯಾಂಕ್‌ಗಳಲ್ಲೇ ಹೀಗಾದರೆ ಇನ್ನು ಜನಸಾಮಾನ್ಯರನ್ನು ಗೊಂದಲದಿಂದ ಹೊರತರಲು ಸಾಧ್ಯವೇ ಎಂದು ಪ್ರಶ್ನಿಸಿದರು. ಈಗಾಗಲೇ ಕೆಎಸ್‌ಆರ್‌ಟಿಸಿ, ಸರ್ಕಾರಿ ಡಿಪೋಗಳಲ್ಲಿ ನಾಣ್ಯ ಸ್ವೀಕರಿಸಲಾಗುತ್ತಿದೆ. ಈ ಬಗ್ಗೆ ಜನರಿಗೆ ಮನವರಿಕೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.