![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 6, 2019, 4:34 PM IST
ಮೈಸೂರು: ಜಿಲ್ಲೆಯಲ್ಲಿ ಈ ಬಾರಿ ಸುರಿದ ಹದವಾದ ಮಳೆಗೆ ಎಲ್ಲೆಡೆ ಬೆಳೆ ಸಮೃದ್ಧವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ತಂದಿರುವುದು ಒಂದೆಡೆಯಾದರೆ, ಕೆಲದಿನಗಳಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿರುವುದರಿಂದ ಈಗಾಗಲೇ ಕಟಾವಿಗೆ ಬಂದ ಬೆಳೆಯನ್ನು ಕಟಾವು ಮಾಡಲು ರೈತರು ಹಿಂಜರಿಯುವಂತಾಗಿದೆ.
ಸೆಪ್ಟೆಂಬರ್ ನಂತರದಲ್ಲಿ ಹಿಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿದ ರಾಗಿ, ಭತ್ತ, ಜೋಳ ಸೇರಿದಂತೆ ಇತರೆ ದ್ವಿದಳ ಧಾನ್ಯ ಬೆಳೆಗಳು ಹದವಾಗಿ ಮಳೆ ಬಿದ್ದ ಹಿನ್ನೆಲೆ ಸಮೃದ್ಧವಾಗಿ ಬೆಳೆದಿದ್ದು, ಕಟಾವಿಗೆ ಬಂದಿರುವ ಬೆಳೆಯನ್ನು ಕೊಯ್ಲು ಮಾಡಲು ರೈತರು ತಯಾರಿ ನಡೆಸಿದ್ದಾರೆ. ಆದರೆ, ಕಳೆದ ಹದಿನೈದು ದಿನಗಳಿಂದೀಚೆಗೆ ಮೋಡ ಕವಿದ ವಾತಾವರಣ ಹಾಗೂ ಮಳೆಯ ಮುನ್ಸೂಚನೆ ಎದುರಾಗಿರುವುದರಿಂದ ರೈತರಲ್ಲಿ ಆತಂಕ ಮನೆಮಾಡಿದ್ದು, ಬೆಳೆದ ಬೆಳೆ ಮಳೆಯ ಪಾಲಾಗದಿರಲಿ ಭಗವಂತ ಎಂದು ವರುಣನನ್ನು ಪಾರ್ಥಿಸುವಂತಾಗಿದೆ.
ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ತಂಬಾಕು ಹೊರತು ಪಡಿಸಿ ಉಳಿದ ಬೆಳೆಗಳು ನೀರು ಪಾಲಾಗಿದ್ದವು. ಇದರಿಂದ ರೈತರು ಕಂಗಾಲಾಗಿ ದ್ದರು. ಆದರೆ, ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾದ
ಹಿಂಗಾರು ಹಂಗಾಮು ರೈತರ ಕೈ ಹಿಡಿದಿದೆ. ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಹಿಂಗಾರು ಪ್ರಬಲವಾಗಿದ್ದು, ಎಲ್ಲೆಡೆ ಉತ್ತಮ ಮಳೆಯಾಗಿದೆ. ರೈತರ ಕೃಷಿ ಚಟುವಟಿಕೆಗೆ ಪೂರಕವಾದ ವಾತಾವರಣ ಮತ್ತು ಸಮಯಕ್ಕೆ ತಕ್ಕಂತೆ ಮಳೆ ಬಿದ್ದ ಕಾರಣದಿಂದ ಭೂಮಿಗೆ ಬಿತ್ತಿದ ಎಲ್ಲಾ ಬೆಳೆಯೂ ರೈತರ ಕೈ ಹಿಡಿದಿದೆ. ಜೊತೆಗೆ ಎಲ್ಲಾ ಬೆಳೆಗಳಿಗೂ ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದು, ಕೆಲವೇ ದಿನಗಳಲ್ಲಿ ಖರೀದಿ ಕೇಂದ್ರ ಕೂಡ ಆರಂಭವಾಗಲಿದೆ.
3,150ಕ್ಕೆ ಜಿಗಿದ ರಾಗಿ ಬೆಲೆ: ಈ ಬಾರಿ ರಾಗಿಗೆ ಬಂಗಾರದ ಬೆಲೆ ಬಂದಿದ್ದು, ಸರ್ಕಾರ ಕ್ವಿಂಟಲ್ ರಾಗಿಗೆ 3,150 ರೂ. ಬೆಂಬಲ ಬೆಲೆ ಘೋಷಿಸಿದೆ. ಕಳೆದ ವರ್ಷ ಕ್ವಿಂಟಲ್‌ಗೆ 2,850 ರೂ. ಇದ್ದ ರಾಗಿ ಈ ವರ್ಷ 300 ರೂ.ಗೆ ಜಿಗಿತವಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯುವ ಬೆಳೆಯಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು, ರಾಗಿಗೆ ಬಂಪರ್ ಬೆಲೆ ಘೋಷಣೆಯಾಗಿರುವುದರಿಂದ ಕಂಗಾಲಾಗಿದ್ದ ರೈತರಲ್ಲಿ ಹೊಸ ಉತ್ಸಾಹ ತಂದಂತಾಗಿದೆ.
ಮಳೆಗೆ ಕಡಿಮೆಯಾದ ಇಳುವರಿ: ಜಿಲ್ಲೆಯಲ್ಲಿ ಈ ಬಾರಿ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಎಲ್ಲವೂ ಸಮೃದ್ಧವಾಗಿ ಬೆಳೆದಿದೆ.ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದ ಕಾರಣ ಸಮರ್ಪಕವಾಗಿ ಬೆಳೆಗೆ ನೀರು ಹರಿಸಲಾಗಿತ್ತು. ಆದರೆ, ಕೆಲವೆಡೆ ಹಿಂಗಾರಿನಲ್ಲಿ ಹೆಚ್ಚು ಮಳೆ ಬಿದ್ದ ಪರಿಣಾಮ ಹೈಬ್ರಿಡ್ ತಳಿ ಮತ್ತು ಜ್ಯೋತಿ ತಳಿಯ ಭತ್ತದ ಇಳುವರಿ ಕುಸಿದಿದೆ.
ಇದರ ಹೊರತಾಗಿ ಇನ್ನುಳಿದ ಎಲ್ಲಾ ತಳಿ ಭತ್ತವು ಸಮೃದ್ಧವಾಗಿ ಬೆಳೆದು ನಿಂತಿದ್ದು, ರೈತರು ಕಟಾವು ಮಾಡುತ್ತಿದ್ದಾರೆ. ಈ ಬಾರಿ ಸಾಮಾನ್ಯ ಭತ್ತಕ್ಕೆ 1,815 ಹಾಗೂ ಗ್ರೇಡ್ ಎ ಭತ್ತಕ್ಕೆ 1,835 ರೂ. ಬೆಂಬಲ ಬೆಲೆಯನ್ನು ಘೋಷಿಸಲಾಗಿದೆ. ಒಟ್ಟಾರೆ ಹಿಂಗಾರಿನಲ್ಲಿ ಸಮೃದ್ಧವಾಗಿ ರೈತರ ಬೆಳೆ ಬೆಳೆದಿದ್ದರೂ, ವರುಣನ ಕೃಪೆಯಿಂದ ಮತ್ತೆ ಮಳೆಯಾಗದಿದ್ದರೆ ರೈತರ ಶ್ರಮಕ್ಕೆ ತಕ್ಕ ಫಲ ಸಿಕ್ಕಂತಾಗುತ್ತದೆ. ಒಂದು ವೇಳೆ ಮಳೆ ಬಂದರೆ ರೈತರ 6 ತಿಂಗಳ ಶ್ರಮ ಮತ್ತು ಬಂಡವಾಳ ಎಲ್ಲವೂ ನೀರುಪಾಲಗುವ ಆತಂಕ ಮನೆಮಾಡಿದೆ.
-ಸತೀಶ್ ದೇಪುರ
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
You seem to have an Ad Blocker on.
To continue reading, please turn it off or whitelist Udayavani.