ಪಾದಪೂಜೆಗೆ ಬಂದರೆ ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ
Team Udayavani, Jan 22, 2019, 6:40 AM IST
ಮೈಸೂರು: ಅಪಾರ ವಿದ್ವತ್ತು, ಕಾಯಕ ನಿಷ್ಠೆ, ಧಾರ್ಮಿಕ ಕೈಂಕರ್ಯಗಳ ಜೊತೆಗೆ ತ್ರಿವಿಧ ದಾಸೋಹದ ಮೂಲಕ ನಾಡಿನಾದ್ಯಂತ ಮನೆಮಾತಾಗಿದ್ದ ಡಾ.ಶಿವಕುಮಾರ ಮಹಾಸ್ವಾಮಿಗಳನ್ನು ವಯಸ್ಸಿನಲ್ಲಿ ಹಿರಿಯರು ಎಂಬ ಕಾರಣದಿಂದ ಹಳೇ ಮೈಸೂರು ಭಾಗದ ಭಕ್ತರು ಮಾತ್ರವಲ್ಲ, ಮಠಾಧೀಶರುಗಳೂ ಕೂಡ ದೊಡ್ಡ ಬುದ್ಧಿಯೋರು ಎಂದೇ ಕರೆಯುತ್ತಿದ್ದರು.
ಈ ಭಾಗದಲ್ಲಿ ಮಠಗಳಲ್ಲಿ ಜಯಂತ್ಯುತ್ಸವ, ಜಾತ್ರಾ ಮಹೋತ್ಸವ ಸೇರಿದಂತೆ ಯಾವುದೇ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಬೇಕಾದರೂ ಮೊದಲು ಸಿದ್ಧಗಂಗಾ ಮಠಕ್ಕೆ ತೆರಳಿ ಶಿವಕುಮಾರ ಮಹಾಸ್ವಾಮಿಗಳ ಮಾರ್ಗದರ್ಶನಪಡೆದು ಬರಲಾಗುತ್ತಿತ್ತು. ಕಳೆದ ಎರಡು ವರ್ಷಗಳ ಹಿಂದೆ ಅನಾರೋಗ್ಯಪೀಡಿತರಾಗುವವರೆಗೂ ಸ್ವತಃ ಶಿವಕುಮಾರ ಮಹಾಸ್ವಾಮಿಗಳೇ ಎಲ್ಲಾ ಕಾರ್ಯಕ್ರಮಗಳಿಗೂ ಬಂದು ನೇತೃತ್ವವಹಿಸಿ ಆಶೀರ್ವಾದ ಮಾಡಿ ಹೋಗುತ್ತಿದ್ದರು.
ಉತ್ತಮ ಒಡನಾಟ: ಸುತ್ತೂರು ಶ್ರೀಕ್ಷೇತ್ರದ ಹಿಂದಿನ ಶ್ರೀಗಳಾದ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜೊತೆಗೆ ಶಿವಕುಮಾರ ಮಹಾಸ್ವಾಮಿಗಳು ಉತ್ತಮ ಒಡನಾಟ ಹೊಂದಿದ್ದರು. ಮೈಸೂರು ಸಂಸ್ಥಾನದ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಟ್ಟಿಸಿಕೊಟ್ಟಿದ್ದ ಅರಮನೆ ಪಂಚಗವಿ ಮಠದಲ್ಲಿ ಕಾಶಿ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ನಡೆಸಿ, ಅಲ್ಲಿಯೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಬಂದಿದ್ದ ಗೌರಿಶಂಕರ ಸ್ವಾಮಿಗಳು,
ಪಂಚಗವಿ ಮಠದ ಸ್ವಾಮೀಜಿಗಳಾಗಿದ್ದ ಸಂದರ್ಭದಲ್ಲಿ ಅಪಾರ ವಿದ್ವತ್ ಹೊಂದಿದ್ದ ಗೌರಿಶಂಕರ ಸ್ವಾಮೀಜಿಯವರಿಂದ ಮಾರ್ಗದರ್ಶನ ಪಡೆಯಲು ಶಿವಕುಮಾರ ಮಹಾಸ್ವಾಮಿಗಳು ಹಾಗೂ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಒಟ್ಟಿಗೇ ಪಂಚಗವಿ ಮಠಕ್ಕೆ ತೆರಳಿ, ಗೌರಿಶಂಕರ ಸ್ವಾಮೀಜಿಯವರು ಪೀಠದ ಮೇಲೆ ಕುಳಿತರೆ ಇವರಿಬ್ಬರು ನೆಲದಲ್ಲಿ ಕುಳಿತು ಅವರಿಂದ ಮಾರ್ಗದರ್ಶನ ಪಡೆದು ಬರುತ್ತಿದ್ದರು. ಗೌರಿಶಂಕರ ಸ್ವಾಮಿಗಳು ಕಿರಿಯ ವಯಸ್ಸಿನಲ್ಲೇ ಅನಾರೋಗ್ಯದಿಂದ ಲಿಂಗೈಕ್ಯರಾದರು ಎಂದು ಸ್ಮರಿಸುತ್ತಾರೆ ನಿವೃತ್ತ ಪ್ರಾಧ್ಯಾಪಕರಾದ ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ.
ಆಧುನಿಕ ಶಿಕ್ಷಣ ಪಡೆದಿದ್ದರು: ಸ್ವಾಮೀಜಿಗಳಾದವರು ಸಂಸ್ಕೃತ, ವೇದ-ಆಗಮ ಓದಿಕೊಂಡಿರುತ್ತಿದ್ದರು. ಆದರೆ, ಶಿವಕುಮಾರಸ್ವಾಮೀಜಿಯವರು ಆ ಕಾಲಕ್ಕೇ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವಿಯಂತಹ ಆಧುನಿಕ ಶಿಕ್ಷಣ ಪಡೆದಿದ್ದರು. ಹೀಗಾಗಿ ಸಿದ್ಧಗಂಗಾ ಮಠದ ಶಾಲೆಯಲ್ಲಿ ಹೈಸ್ಕೂಲ್ ಮಕ್ಕಳಿಗೆ ಸ್ವತಃ ಶಿವಕುಮಾರ ಮಹಾಸ್ವಾಮಿಗಳು ಇಂಗ್ಲಿಷ್ ಪಾಠವನ್ನೂ ಮಾಡಿದ್ದಿದೆ. ಅದ್ಭುತ ಭಾಷಣಕಾರರು ಆಗಿದ್ದರು.
ಕೊನೆಯ ಭೇಟಿ: 2015ರ ಜನವರಿ 2ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜನ್ಮ ಶತಮಾನೋತ್ಸವ ಸಮಾರಂಭದ ಉದ್ಘಾಟನಾ ಕಾರ್ಯಕ್ರಮವೇ ಮೈಸೂರಿಗೆ ಶಿವಕುಮಾರ ಮಹಾಸ್ವಾಮಿಗಳ ಕೊನೆಯ ಭೇಟಿ. ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಆ ಕಾರ್ಯಕ್ರಮಕ್ಕೆ ಶಿವಕುಮಾರ ಸ್ವಾಮೀಜಿ ಅವರನ್ನು ಹೆಲಿಕಾಪ್ಟರ್‌ನಲ್ಲಿ ಕರೆತರಲಾಗಿತ್ತು.
ಪಾದಪೂಜೆಗೆ ಬೇಡಿಕೆ: ಯಾವ ಹಳ್ಳಿಯಲ್ಲಿ ಭಕ್ತರು ಪಾದಪೂಜೆಗೆ ಕರೆದರು ಶಿವಕುಮಾರ ಮಹಾಸ್ವಾಮಿಗಳು ಹೋಗುತ್ತಿದ್ದರು. ದೊಡ್ಡ ಬುದ್ಧಿಯೋರು ಹೋದರೆಂದರೆ ಹಳ್ಳಿಗಳಲ್ಲಿ ಪಾದಪೂಜೆ ಕಾರ್ಯಕ್ರಮವನ್ನೇ ಜಾತ್ರೆಗಳಂತೆ ಆಚರಿಸುತ್ತಿದ್ದರು. ಶಿವಕುಮಾರ ಮಹಾಸ್ವಾಮಿಗಳಿಗೆ 100 ವರ್ಷ ತುಂಬಿದ ನಂತರ ಪಾದಪೂಜೆಗೆ ಬನ್ನಿ , ಹೆಲಿಕಾಪ್ಟರ್‌ನಲ್ಲಿ ಕರೆದೊಯ್ಯುತ್ತೇವೆ ಎಂದು ಬಹಳಷ್ಟು ಜನ ಬೇಡಿಕೆ ಇಡುತ್ತಿದ್ದರು. ಚಾಮರಾಜ ನಗರದ ಬದನಗುಪ್ಪೆಯಲ್ಲಿ ಶಿವಕುಮಾರ ಮಹಾಸ್ವಾಮಿಗಳ ಪಾದಪೂಜೆ ಕಾರ್ಯಕ್ರಮಕ್ಕೆ ಸುಮಾರು 50 ಸಾವಿರ ಜನ ಸೇರಿದ್ದರು.
ಹುಟ್ಟೂರಿಗೆ ಕಾಲಿಟ್ಟಿರಲಿಲ್ಲ ಹಠಯೋಗಿ!: ಕಾಲೇಜು ಶಿಕ್ಷಣದ ಸಂದರ್ಭದಲ್ಲೇ ಸಿದ್ಧಗಂಗಾ ಮಠದ ಒಡನಾಟ ಹೊಂದಿದ್ದ ಪೂರ್ವಾಶ್ರಮದ ಹೆಸರು ಶಿವಣ್ಣ ಅವರನ್ನು ಸ್ವಾಮೀಜಿ ಮಾಡುವುದಾಗಿ ಸಿದ್ಧಗಂಗಾ ಮಠದ ಹಿರಿಯ ಸ್ವಾಮೀಜಿಗಳಾದ ಉದ್ದಾನೇಶ್ವರರು, ಶಿವಣ್ಣ ಅವರ ಮನೆಗೆ ಹೇಳಿ ಕಳುಹಿಸಿದಾಗ ಇವರ ತಂದೆ ಬೈದು ಕಳುಹಿಸಿದ್ದರು. ಈ ವಿಷಯ ತಿಳಿದ ಶಿವಣ್ಣ, ನನ್ನ ಗುರುಗಳಿಗೆ ಅವಮಾನ ಮಾಡಿದ್ದರಿಂದ ಈ ಊರಿಗೇ 25 ವರ್ಷಗಳ ಕಾಲ ಕಾಲಿಡಲ್ಲ ಎಂದು ಶಪಥ ಮಾಡಿದ್ದರು.
ಆದರೆ, ಶಿವಣ್ಣ ಅವರ ತಮ್ಮನ ಮಗ ಗ್ರಾಮದಲ್ಲಿ ಹೊಸ ಮನೆಯನ್ನು ಕಟ್ಟಿ, ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿಗಳಾಗಿದ್ದ ಶಿವಕುಮಾರ ಸ್ವಾಮೀಜಿಯವರನ್ನು ಗೃಹಪ್ರವೇಶಕ್ಕೆ ಕರೆಯಲು ಹೋದಾಗ, ನನ್ನ ಗುರುಗಳಿಗೆ ಅವಮಾನ ಮಾಡಿರುವ ಆ ಊರಿಗೆ ಕಾಲಿಡಲ್ಲ ಎಂದು ಶಪಥ ಮಾಡಿರುವುದಾಗಿ ಹೇಳುತ್ತಾರೆ. ಆದರೆ, ನೀವು ಬರದೇ ನಾನು ಗೃಹಪ್ರವೇಶವನ್ನೇ ಮಾಡುವುದಿಲ್ಲ ಎಂದು ಹಠ ಹಿಡಿದು ಕೂರುತ್ತಾರೆ. ಕಡೆಗೂ ಭಕ್ತರ ಮನವಿ ಮೇರೆಗೆ ಶಿವಕುಮಾರ ಸ್ವಾಮೀಜಿ ಹುಟ್ಟೂರಿಗೆ ಹೋಗಿ ಗೃಹಪ್ರವೇಶದಲ್ಲಿ ಭಾಗಿಯಾಗಿ ಬಂದಿದ್ದರಂತೆ.
ದಸರಾ ಉದ್ಘಾಟನೆ: 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಯನ್ನು ಸಿದ್ಧಗಂಗಾ ಶ್ರೀಗಳು ಚಾಮುಂಡಿಬೆಟ್ಟದಲ್ಲಿ ನೆರವೇರಿಸಿದ್ದರು.
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.