ಸನಾತನ ಧರ್ಮವನ್ನು ದೃಢವಾಗಿ ನಂಬಿರಿ;ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ
ಮುಂದಿನ ಪೀಳಿಗೆ ಅಧರ್ಮ ಮಾರ್ಗದಲ್ಲಿ ಸಾಗದಂತೆ ಎಚ್ಚರ ವಹಿಸಿ...
Team Udayavani, Apr 3, 2024, 4:25 PM IST
ಮೈಸೂರು: ಭಾರತೀಯ ಪರಂಪರೆಯ ಸನಾತನ ಧರ್ಮವನ್ನು ದೃಢವಾಗಿ ನಂಬಿ. ಮಕ್ಕಳಿಗೂ ಧರ್ಮ ಪಾಲನೆಯ ಮಾರ್ಗವನ್ನು ಕಲಿಸಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದು ಶೃಂಗೇರಿಯ ಪರಮಪೂಜ್ಯ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಹೇಳಿದರು. ನಂಜನಗೂಡಿನ ಶೃಂಗೇರಿ ಶಂಕರ ಮಠದ ಶಾಖೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಅನುಗ್ರಹ ಸಂದೇಶ ನೀಡಿದರು.
ಜವಾಬ್ದಾರಿ ದೊಡ್ಡದಾಗಿದೆ:
ಧರ್ಮ, ಸಂಸ್ಕೃತಿ ಬಗ್ಗೆ ಮಕ್ಕಳಿಗೆ ಮನೆಯೇ ಪಾಠಶಾಲೆ. ಜನನಿಯೇ ಮೊದಲ ಗುರು. ಈ ಜವಾಬ್ದಾರಿ ಎಲ್ಲರಿಗೂ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದ ತುರ್ತು ಸ್ಥಿತಿ ಇಂದು ಒದಗಿಬಂದಿದೆ. ಋಷಿ ಪರಂಪರೆಯಿಂದ ಬಂದ ನಮ್ಮ ಧರ್ಮದ ಬಗ್ಗೆ ಅನೇಕರಿಗೆ ತಿಳಿವಳಿಕೆ ಇಲ್ಲದ ಸ್ಥಿತಿಯಲ್ಲಿ ನಾವಿದ್ದೇವೆ. ಮೊದಲು ನಾವು ತಿಳಿದು, ನಮ್ಮ ಮಕ್ಕಳಿಗೆ ಚಿಕ್ಕ ಮಟ್ಟದಲ್ಲಾದರೂ ನಮ್ಮ ಸಂಸ್ಕೃತಿ, ಆಚರಣೆಗಳನ್ನು ರೂಢಿಸಿ. ಇದು ಮನೆ, ಕುಟುಂಬ, ವಂಶಕ್ಕೆ ಮಾತ್ರವಲ್ಲ, ದೇಶಕ್ಕೂ ಮಹತ್ತರ ಕೊಡುಗೆಯಾಗುತ್ತದೆ ಎಂದು ಜಗದ್ಗುರುಗಳು ಸಂದೇಶ ನೀಡಿದರು.
ಮೊಬೈಲ್‌ಗಳಿಗೆ ದಾಸರಾಗಬೇಡಿ:
ಭಾರತೀಯ ಪರಂಪರೆ ವಿಶ್ವದಲ್ಲೇ ವಿಶಿಷ್ಠವಾದ ಪರಂಪರೆ. ಸಾವಿರಾರು ವರ್ಷ ಕಾಡಿನಲ್ಲಿ ನಮ್ಮ ಋಷಿ- ಮುನಿಗಳು ಘೋರ ತಪಸ್ಸು ಮಾಡಿ, ದೇವರನ್ನು ಪ್ರತ್ಯಕ್ಷ ಒಲಿಸಿಕೊಂಡು ಜೀವನ ಕ್ರಮ ರೂಪಿಸಿದ್ದಾರೆ. ಇಹ ಮತ್ತು ಪರದ ಸಾಧನೆಗಳನ್ನು, ಅಂತರಂಗ- ಬಹಿರಂಗ ವ್ಯಕ್ತಿತ್ವ ರೂಪಿಸಲು ಬೇಕಾದ ಸೂತ್ರಗಳನ್ನು ಕಟ್ಟಿಕೊಟ್ಟಿದ್ದಾರೆ. ಆದರೆ ಇಂದು ಸಾಮಾಜಿಕ ಜಾಲತಾಣ, ಮೊಬೈಲ್‌ಗಳಿಗೆ ದಾಸರಾಗಿರುವ ಅನೇಖರು ಸನಾತನ ಧರ್ಮದ ಮಹೋನ್ನತ ಸಂಗತಿಗಳನ್ನೇ ಮರೆತಿದ್ದಾರೆ. ಇದು ಅಪಾಯಕಾರಿ ಎಂದು ಜಗದ್ಗುರುಗಳು ಎಚ್ಚರಿಸಿದರು.
ಟೀಕೆ ಸಲ್ಲದು:
ಕೆಲವರು ನಮ್ಮ ಧರ್ಮದ ಬಗ್ಗೆ ಸಂಪೂರ್ಣ ಅಧ್ಯಯನ ಮಾಡದೇ, ತಿಳಿದುಕೊಳ್ಳದೇ ಬಾಯಿಗೆ ಬಂದಂತೆ ಟೀಕೆ ಮಾಡುತ್ತಿರುತ್ತಾರೆ. ಅವರಿಗೆ ನಾವು ಪ್ರತಿಕ್ರಿಯೆ ಕೊಡುವ ಅಗತ್ಯವಿಲ್ಲ. ಅನುಷ್ಠಾನವಂತರಿಂದ, ಸಾಧಕರಿಂದ ಧರ್ಮ ಉಳಿದೇ ಉಳಿಯುತ್ತದೆ. ನಮ್ಮ ಮುಂದಿನ ಪೀಳಿಗೆ ಅಧರ್ಮ ಮಾರ್ಗದಲ್ಲಿ ಸಾಗದಂತೆ ಎಚ್ಚರ ವಹಿಸುವ ಹೊಣೆಗಾರಿಕೆ ಪಾಲಕರ ಮೇಲಿದೆ ಎಂದು ಶ್ರೀ ವಿಧುಶೇಖರ ಭಾರತೀ ತೀರ್ಥರು ಕಿವಿಮಾತು ಹೇಳಿದರು.
ಧರ್ಮ ನಾಶ ಮಾಡಲಿದ್ದಾರೆ:
ಪ್ರಸ್ತುತ ದಿನಮಾನಗಳಲ್ಲಿ ನಾಸ್ತಿಕರು, ಧರ್ಮ ನಾಶ ಮಾಡುವ ಸಂಕಲ್ಪ ಮಾಡಿದ್ದಾರೆ. ಇದು ಭರತಖಂಡದ ದುರಂತ. ನಾವು -ನಮ್ಮ ಮನೆತನ, ಪರಂಪರೆಯಲ್ಲಿ ಹೇಳಿದ ಜೀವನ ಮಾರ್ಗವನ್ನು ಅನುಸರಿಸುವಲ್ಲಿ ಶ್ರದ್ಧೆ ತೋರಬೇಕು. ಅಜ್ಜ- ಅಜ್ಜಿ ಹೇಗೆ ಜೀವನ ನಿರ್ವಹಿಸಿದ್ದರು ಎಂದು ಒಮ್ಮೆ ಅವಲೋಕಿಸಬೇಕು. ಆಗ ನಮ್ಮ ನಮ್ಮ ಮನೆಯೇ ಮಂದಿರವಾಗುತ್ತದೆ. ಇದಕ್ಕೆ ಹಲವು ವರ್ಷಗಳ ಸಂಯಮ, ತಾಳ್ಮೆಗಳೂ ಬೇಕು. ಆಗ ಮಾತ್ರ ನಮ್ಮ ಮನೆಯ ಮಕ್ಕಳು ಧರ್ಮವಂತರಾಗುತ್ತಾರೆ. ಸಂಸ್ಕಾರದ ಹಾದಿಯಲ್ಲಿ ಸಾಗಿ ಜೀವನ ಸಾರ್ಥಕ ಮಾಡಿಕೊಳ್ಳುತ್ತಾರೆ. ಹಾಗಾಗಿ ಇಂದಿನ ತಂದೆ- ತಾಯಿಯರ ಮೇಲೆ ಬಹಳ ದೊಡ್ಡ ಜವಾಬ್ದಾರಿ ಬಂದಿದೆ ಎಂದು ಶ್ರೀಗಳು ಹೇಳಿದರು.
ನಂಜನಗೂಡು ಶಾಖಾ ಮಠ ಶೀಘ್ರ ಪುನರುತ್ಥಾನ:
ಶೃಂಗೇರಿ ದಕ್ಷಿಣಾಮ್ನಾಯ ಶಾರದಾ ಪೀಠಕ್ಕೂ. ನಂಜನಗೂಡಿನ ಶ್ರೀ ಶಂಕರ ಮಠದ ಶಾಖೆಗೂ ನೂರಾರು ವರ್ಷಗಳ ಅವಿನಾ ಸಂಬಂಧ ಇದೆ. ನಮ್ಮ ಪರಂಪರೆಯ ಅನೇಕ ಜಗದ್ಗುರುಗಳು ಈ ಕ್ಷೇತ್ರ ದೇವತೆ ಶ್ರೀಕಂಠೇಶ್ವರನಿಗೆ (ನಂಜುಂಡೇಶ್ವರ) ಪೂಜೆ ಸಮರ್ಪಣೆ ಮಾಡಿದ ಇತಿಹಾಸವಿದೆ ಎಂದು ಜಗದ್ಗುರುಗಳು ಹೇಳಿದರು.
92 ವರ್ಷದ ಹಿಂದೆ ಶೃಂಗೇರಿ ಪರಂಪರೆಯ 34ನೇ ಯತಿ ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿ ನಂಜನಗೂಡಿನಲ್ಲಿ ಶೃಂಗೇರಿ ಶಾಖಾ ಮಠವನ್ನು ಇಲ್ಲಿ ಆರಂಭಿಸಿದ್ದರು. ಅದೀಗ ಶಿಥಿಲವಾಗಿದೆ. ಶೀಘ್ರವೇ ಪುನರುತ್ಥಾನ ಮಾಡಲಾಗುವುದು. ಮುಂಬರುವ ವರ್ಷಗಳಲ್ಲಿ ಇಲ್ಲಿಯೂ ಮಠದ ಶತಮಾನೋತ್ಸವ ಸಂಭ್ರಮದಿಂದ ನೆರವೇರಲಿದೆ ಎಂದು ಅವರು ಭಕ್ತ ಸಮೂಹಕ್ಕೆ ಭರವಸೆ ನೀಡಿದಾಗ ಹರ್ಷೋದ್ಗಾರದ ಚಪ್ಪಾಳೆ ಮೊಳಗಿತು.
ಸನ್ನಿಧಿ ಸೇವೆಗೆ ಸಮರ್ಪಣೆ :
ನಂಜನಗೂಡಿನ ನಾರಾಯಣ ರಾವ್ ಅಗ್ರಹಾರದಲ್ಲಿ ಪುನರುತ್ಥಾನಗೊಂಡ ಶ್ರೀ ಗಣಪತಿ ದೇವಾಲಯದಲ್ಲಿ ಜಗದ್ಗುರುಗಳು ಸೋಮವಾರ ಪೂಜಾ ಕಾರ್ಯ ನೆರವೇರಿಸಿ ಸನ್ನಿಧಿಯನ್ನು ಸೇವೆಗೆ ಸಮರ್ಪಣೆ ಮಾಡಿದರು. ನಂತರ ಅವರು ಪುರಾಣ ಪ್ರಸಿದ್ಧ ಶ್ರೀಕಂಠೇಶ್ವರಸ್ವಾಮಿ ದೇಗುಲ, ಗಟ್ಟವಾಡಿಯಲ್ಲಿರುವ ಶ್ರೀ ಸುಬ್ರಹ್ಮಣೇಶ್ವರಸ್ವಾಮಿ ಸನ್ನಿಧಿಗಳ ದರ್ಶನ ಪಡೆದು ಪೂಜೆ ಸಮರ್ಪಿಸಿದರು.ನಂತರ ನೂರಾರು ಭಕ್ತರಿಗೆ ಶ್ರೀಗಳು ಫಲ ಮಂತ್ರಾಕ್ಷತೆ ಅನುಗ್ರಹಿಸಿದರು. ಈ ಸಂದರ್ಭ ಮುಖಂಡರಾದ ಎನ್.ಎಸ್.ಸುಬ್ರಹ್ಮಣ್ಯ, ಯು.ಎನ್.ಪದ್ಮನಾಭರಾವ್, ಎನ್.ನರಸಿಂಹಸ್ವಾಮಿ, ಎನ್.ಆರ್.ಕೃಷ್ಣಪ್ಪಗೌಡ, ಮೋಹನ್‌ಕುಮಾರ್, ಉಮೇಶ್ ಶರ್ಮ, ಬ್ರಾಹ್ಮಣ ಧರ್ಮ ಸಹಾಯ ಸಭಾ ಅಧ್ಯಕ್ಷ ಗೋವರ್ಧನ ಮತ್ತು ಮಠದ ಪದಾಧಿಕಾರಿಗಳು ಇದ್ದರು.
ಆಶೀರ್ವಾದ ಪಡೆದ ಶೋಭಾ ಕರಂದ್ಲಾಜೆ:
ಬಿಜೆಪಿ ನಾಯಕಿ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ದರ್ಶನ ಮಾಡಿ ಆಶೀರ್ವಾದ ಪಡೆದರು. ಲೋಕಸಭೆ ಚುನಾವಣೆಯಲ್ಲಿ ವಿಜಯ ದೊರೆತು, ಮೋದಿ ಸರ್ಕಾರವೇ ಮತ್ತೆ ಆಡಳಿತಕ್ಕೆ ಬರಲಿ ಎಂದು ಪ್ರಾರ್ಥಿಸಿದ್ದು ವಿಶೇಷವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.