ಬಿಜೆಪಿ ಮಣಿಸಲು ಹಳೇಯದೆಲ್ಲ ಮರೆತು ಹೋರಾಡಿ
Team Udayavani, Mar 30, 2019, 3:12 PM IST
ಮೈಸೂರು: ದೇಶದಲ್ಲಿ ದಲಿತರು, ಹಿಂದುಳಿದವರು ಆತಂಕದಿಂದ ದಿನದೂಡುವಂತಹ ಸ್ಥಿತಿ ನಿರ್ಮಾಣ ಮಾಡಿರುವ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದು, ಕ್ಯಾನ್ಸರ್‌ನಂತೆ ದೇಶವನ್ನು ಕಾಡುತ್ತಿರುವ ಬಿಜೆಪಿಯನ್ನು ಸೋಲಿಸುವುದೊಂದೇ ನಮ್ಮ ಗುರಿಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಚುನಾವಣಾ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎರಡೂ ಪಕ್ಷಗಳ ಕಾರ್ಯಕರ್ತರು, ಮುಖಂಡರು ಹಳೇಯದೆಲ್ಲವನ್ನೂ ಮರೆತು ಒಟ್ಟಾಗಿ ಹೋರಾಟ ಮಾಡಿ ಬಿಜೆಪಿಯನ್ನು ಸೋಲಿಸಿ ಎಂದು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಮಹಾನ್ ನಾಟಕಕಾರ ಮಾತ್ರವಲ್ಲ, ಕಲಾಕಾರ ಕೂಡ ಹೌದು. ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ನನ್ನ 50 ವರ್ಷಗಳ ರಾಜಕೀಯ ಜೀವನದಲ್ಲಿ ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿರಲಿಲ್ಲ.
ಐದು ವರ್ಷಗಳ ಕಾಲ ಏನೂ ಸಾಧನೆ ಮಾಡದೆ ಮಾತಿನಲ್ಲೇ ಕಾಲಹರಣ ಮಾಡಿದ ಮೋದಿ, ಮನ್ ಕೀ ಬಾತ್, ಅಚ್ಛೇ ದಿನ್ ಘೋಷಣೆ ಬಳಿಕ ಇದೀಗ ನಾನು ಚೌಕೀದಾರ್ ಅನ್ನುತ್ತಿದ್ದಾರೆ. ಬಡವರು, ರೈತರು, ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರಿಗೆ ಅವರು ಚೌಕೀದಾರ್ ಅಲ್ಲ ಅದಾನಿ, ಅಂಬಾನಿಗೆ ಮಾತ್ರ ಕಾವಲುಗಾರ ಎಂದು ಜರಿದರು.
28 ಕ್ಷೇತ್ರದಲ್ಲಿ ಪ್ರವಾಸ: ರಾಜ್ಯದ 28 ಕ್ಷೇತ್ರಗಳಲ್ಲೂ ಪ್ರವಾಸ ಕೈಗೊಂಡು ಕಾಂಗ್ರೆಸ್- ಜೆಡಿಎಸ್ ಮೈತ್ರಿಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ವಿಜಯಶಂಕರ್ ಜಂಟಲ್‌ವುನ್: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ನಮ್ಮ ಅಭ್ಯರ್ಥಿ ವಿಜಯಶಂಕರ್ ಜಂಟಲ್‌ವುನ್. ಅಧಿಕಾರ ಇದ್ದಾಗಲು, ಇಲ್ಲದಿದ್ದಾಗಲು ಅವರು ಬದಲಾಗಿಲ್ಲ. ಚಾಮರಾಜ ಕ್ಷೇತ್ರದಲ್ಲಿ ವಾಸು ಗೆದ್ದು ಸೋತವರು.
ಅವರ ಜೊತೆ ಪಕ್ಷೇತರ ಅಭ್ಯರ್ಥಿ ಹರೀಶ್ ಗೌಡ ಇರುವುದು ನಮಗೆ ಆ ಕ್ಷೇತ್ರದಲ್ಲಿ ಹೆಚ್ಚಿನ ಮತಗಳನ್ನು ತಂದು ಕೊಡಲಿದೆ. ಕೆ.ಆರ್.ಕ್ಷೇತ್ರದಲ್ಲೂ ಕಾಂಗ್ರೆಸ್-ಜೆಡಿಎಸ್ ಜೊತೆಯಾಗಿವೆ. ಇದರಿಂದ ನಮಗೆ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈತ್ರಿ ಪಕ್ಷದ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಮಾತನಾಡಿ, ನನ್ನ ಗೆಲುವು ಎರಡೂ ಪಕ್ಷಗಳ ಗೆಲುವು. ಈ ಚುನಾವಣೆ ಎರಡು ಪಕ್ಷಗಳ ಸಂಬಂಧವನ್ನು ಗಟ್ಟಿಗೊಳಿಸಲಿದೆ. ಎರಡು ಪಕ್ಷಗಳಲ್ಲಿ ರಾಜಕೀಯ ಹಿನ್ನೆಡೆ ಉಂಟಾಗಬಾರದು. ಇದು ಉಭಯ ಪಕ್ಷಗಳ ನಂಬಿಕೆ ಹಾಗೂ ವಿಶ್ವಾಸವನ್ನು ಹೆಚ್ಚಿಸಲಿದೆ. ರಾಜ್ಯದ ಮೈತ್ರಿ ಸರ್ಕಾರದಂತೆ ರಾಷ್ಟ್ರ ಮಟ್ಟದಲ್ಲೂ ಮೈತ್ರಿಯ ಅವಶ್ಯಕತೆ ಇದೆ.
ಹೀಗಾಗಿ ಈ ಚುನಾವಣೆಯ ಹೋರಾಟಕ್ಕೆ ಮಾನಸಿಕವಾಗಿ ಸಿದ್ಧಗೊಳ್ಳುವಂತೆ ಹೇಳಿದರು. ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮಾಜಿ ಶಾಸಕ ವಾಸು, ಮೇಯರ್ ಪುಷ್ಪಲತಾ ಜಗನ್ನಾಥ್, ಕೆ.ಹರೀಶ್ ಗೌಡ, ಜೆಡಿಎಸ್‌ನ ಮಾಜಿ ಮೇಯರ್ ಆರ್.ಲಿಂಗಪ್ಪ ಇತರರು ಉಪಸ್ಥಿತರಿದ್ದರು.
ಮತಬೇಟೆಗೆ ಬಿಜೆಪಿ ಹನುಮ ಜಯಂತಿ, ಹಿಂದುತ್ವದ ಜಪ: ಏನೂ ಸಾಧನೆ ಮಾಡದ ಬಿಜೆಪಿಯವರು ಚುನಾವಣೆ ಸಂದರ್ಭದಲ್ಲಿ ಜನರ ಬಳಿ ಮತ ಕೇಳಲು ಯಾವುದೇ ವಿಷಯ ಇಲ್ಲವಾದಾಗ ಹನುಮ ಜಯಂತಿ, ಹಿಂದುತ್ವದಂತಹ ಭಾವನಾತ್ಮಕ ವಿಷಯಗಳನ್ನು ಮುಂದಿಡುತ್ತಾರೆ. ಹಳ್ಳಿ ಹಳ್ಳಿಗಳಲ್ಲಿ ಹನುಮ ಜಯಂತಿ ಮಾಡಿ ಪಾನಕ ಹಂಚುವವರು ನಾವು.
ದನ ಮೇಯಿಸುವವರು, ಸಗಣಿ ಎತ್ತುವವರು ನಾವು, ಗೋ ಮಾತೆಗೆ ಸುಗ್ಗಿ ಕಾಲದಲ್ಲಿ ಪೂಜೆ ಮಾಡಿ ಕಿಚ್ಚು ಹಾಯಿಸುವ ನಾವುಗಳೇ ನಿಜವಾದ ಹಿಂದುಗಳು. ಜೀವನದಲ್ಲಿ ಒಮ್ಮೆಯೂ ಇವನ್ನೆಲ್ಲಾ ಮಾಡದ ಬಿಜೆಪಿಯವರು ನಮಗೇ ಹಿಂದುತ್ವದ ಪಾಠ ಮಾಡಲು ಬಂದರೆ ಹೇಗೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಹೆಗಡೆ ಮತಾಂಧ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಒಬ್ಬ ಮತಾಂಧ. ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲು ಮಾಡಲು ಎಂದು ಹೇಳಿದ್ದಾರೆ. ಇದರ ಹಿಂದೆ ಮೋದಿ, ಅಮಿತ್ ಶಾ ಕುಮ್ಮಕ್ಕು ಇದೆ. ಸಂವಿಧಾನ ಬದಲಾದರೆ ದೇಶದ ಜನತೆಗೆ ಸಮಾನ ಅವಕಾಶಗಳು ಸಿಗಲ್ಲ. ತಾರತಮ್ಯ, ಅಸಮತೋಲನ ತಾಂಡವವಾಡಲಿದೆ. ಇದಕ್ಕೆ ಅವಕಾಶ ಕೊಡದೆ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಒಗ್ಗೂಡಿ ಹೋರಾಡುವಂತೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.