ರಾಜಕೀಯ ಕವಲುದಾರಿಯಲ್ಲಿ ಜಿಟಿಡಿ
Team Udayavani, Nov 9, 2021, 3:54 PM IST
ಮೈಸೂರು: ಜಾತ್ಯತೀತ ಜನತಾದಳದಿಂದ ಬಹಳ ದೂರ ಸರಿದಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ರಾಜಕೀಯವಾಗಿ ಈಗ ಅಕ್ಷರಶಃ ಕವಲು ದಾರಿಯಲ್ಲಿದ್ದಾರೆ.
ಜೆಡಿಎಸ್‌ನಲ್ಲಿ ಉಳಿಸಿಕೊಳ್ಳಲು ಆ ಪಕ್ಷದ ನಾಯಕರು ಪ್ರಯತ್ನಿಸುತ್ತಿದ್ದರೂ ದೇವೇಗೌಡರಿಗೆ ಅಲ್ಲಿರಲು ಸುತಾರಾಂ ಇಷ್ಟವಿಲ್ಲ. ಕಾಂಗ್ರೆಸ್ ಸೇರಲು ತಮಗೆ ಹಾಗೂ ತಮ್ಮ ಪುತ್ರ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಇಬ್ಬರಿಗೂ ಅಸೆಂಬ್ಲಿ ಚುನಾವಣೆಯಲ್ಲಿ ಟಿಕೆಟ್ ನೀಡಬೇಕೆಂಬ ಕೋರಿಕೆ ಮಂಡಿಸಿದ್ದಾರೆ.
ಕಾಂಗ್ರೆಸ್ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಇನ್ನೂ ಗೊತ್ತಿಲ್ಲ. ಇನ್ನು ಬಿಜೆಪಿ ಸೇರಲು ಆ ಪಕ್ಷದ ಕೆಲವು ಹಿರಿಯ ನಾಯಕರು ಜಿ.ಟಿ.ದೇವೇಗೌಡ ರನ್ನು ಆಹ್ವಾನಿಸಿದ್ದರೂ ಮೈಸೂರು ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ಬಿಜೆಪಿಗೆ ಭದ್ರ ನೆಲೆ ಇಲ್ಲ. ಹೀಗಾಗಿ, ಬಿಜೆಪಿ ಸೇರಲು ಜಿ.ಟಿ.ದೇವೇಗೌಡರು ಹತ್ತು ಸಲ ಯೋಚಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಈಗ ರಾಜಕೀಯವಾಗಿ ಕವಲುದಾರಿಯಲ್ಲಿದ್ದಾರೆ. ರಾಜಕೀಯವಾಗಿ ಎಲ್ಲಾ ಅವಕಾಶಗಳನ್ನು ಮುಕ್ತವಾಗಿರಿಸಿಕೊಂಡಿದ್ದಾರೆ.
ಒಂದೇ ವೇದಿಕೆಯಲ್ಲಿ ಸಿದ್ದು-ಜಿಟಿಡಿ: ಜಿ.ಟಿ. ದೇವೇಗೌಡರು ರಾಜಕೀಯವಾಗಿ ಕವಲುದಾರಿ ಯಲ್ಲಿರುವ ಇಂತಹ ಪರಿಸ್ಥಿತಿಯಲ್ಲಿಯೇ ನಾಳೆ (ಮಂಗಳವಾರ) ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆಯುವ ಎರಡು ಕಾರ್ಯಕ್ರಮಗಳಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೇವೇಗೌಡರು ಭಾರೀ ಮತಗಳ ಅಂತರದಿಂದ ಸೋಲಿಸಿದ್ದರು. ಇದಾದ ನಂತರ ಲೋಕಸಭಾ ಚುನಾವಣೆ ಪ್ರಚಾರದ ವೇದಿಕೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಸಿದ್ದ ರಾಮಯ್ಯ- ಜಿ.ಟಿ.ದೇವೇಗೌಡ ಒಂದೇ ವೇದಿಕೆಯಲ್ಲಿದ್ದರು. ಕುಮಾರಸ್ವಾಮಿ ಸರ್ಕಾರದ ಪತನದ ನಂತರ ಮೊದಲ ಬಾರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಂದೇ ವೇದಿಕೆಯಲ್ಲಿ ಇಬ್ಬರೂ ನಾಯಕರು ಕಾಣಿಸಿಕೊಳ್ಳುತ್ತಿರುವುದು ರಾಜಕೀಯವಾಗಿ ಕುತೂಹಲ ಮೂಡಿಸಿದೆ.
ಜೆಡಿಎಸ್ ಜತೆ ಒಳ ಒಪ್ಪಂದ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಮೊದಲಿನಿಂದಲೂ ದುರ್ಬಲವಾಗಿದೆ. ಈ ಕ್ಷೇತ್ರದಲ್ಲಿ ಕಮಲ ಯಾವತ್ತೂ ಅರಳಿಲ್ಲ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಂತೂ ಬಿಜೆಪಿಯು ಅಂದಿನ ಸಿಎಂ ಸಿದ್ದರಾಮಯ್ಯ ಅವರನ್ನು ಮಣಿಸಲು ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡು ದುರ್ಬಲ ಅಭ್ಯರ್ಥಿಯನ್ನು ಹೂಡಿ ಪರೋಕ್ಷವಾಗಿ ಜೆಡಿಎಸ್‌ಗೆ ಸಾಥ್ ನೀಡಿತ್ತು. ಹೀಗಾಗಿ, ಜಿ.ಟಿ.ದೇವೇಗೌಡರು ಭಾರೀ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಜಿ.ಟಿ.ದೇವೇಗೌಡರು ಈ ಹಿಂದೆ 2008ರಲ್ಲಿ ಬಿಜೆಪಿ ಸೇರಿದ್ದರು. ಆ ಪಕ್ಷದಿಂದ ಹುಣಸೂರು ಕ್ಷೇತ್ರದಲ್ಲಿ ಕಣಕ್ಕಿಳಿದು ಪರಾಭವಗೊಂಡಿದ್ದು ಉಂಟು. ಆಗ ದೇವೇಗೌಡರು ಮೂರನೇ ಸ್ಥಾನಕ್ಕೆ ಇಳಿದಿದ್ದರು. ಹೀಗಾಗಿ, ಮೈಸೂರು ಜಿಲ್ಲೆಯ ಗ್ರಾಮೀಣ ಅಸೆಂಬ್ಲಿ ಕ್ಷೇತ್ರಗಳಲ್ಲಿ ಬಿಜೆಪಿ ಪರಿಸ್ಥಿತಿ ಹೇಗಿದೆ ಎಂಬುದರ ಅರಿವು ದೇವೇಗೌಡರಿಗೆ ಚೆನ್ನಾಗಿದೆ.
ಎಲ್ಲಾ ಅವಕಾಶ ಮುಕ್ತವಾಗಿರಿಸಿರುವೆ: ಜೆಡಿಎಸ್‌ನಲ್ಲಿ ತಮ್ಮನ್ನು ಉಳಿಸಿಕೊಳ್ಳಲು ಆ ಪಕ್ಷದ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಆದರೆ, ಆ ಪಕ್ಷದಿಂದ ತಾವು ಈಗಾಗಲೇ ಬಹಳ ದೂರ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಏನು ರಾಜಕೀಯ ಬದಲಾವಣೆಯಾಗುತ್ತದೆಯೋ ಕಾದು ನೋಡೋಣ. ಆದರೆ, ಎಲ್ಲ ಅವಕಾಶಗಳನ್ನು ಮುಕ್ತವಾಗಿರಿ ಸಿಕೊಂಡಿದ್ದೇನೆ ಎಂದು ದೇವೇಗೌಡ ಸೋಮವಾರ “ಉದಯವಾಣಿ’ಗೆ ಪ್ರತಿಕ್ರಿಯಿಸಿದರು.
ಪರ್ಯಾಯ ಸ್ಪರ್ಧಿಗೆ ಜೆಡಿಎಸ್ ಪೋಷಣೆ : ದೇವೇಗೌಡರು ಜೆಡಿಎಸ್‌ನಿಂದ ದೂರವಾಗುತ್ತಿದ್ದಂತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪರ್ಯಾಯ ಅಭ್ಯರ್ಥಿಗಳನ್ನು ತಯಾರು ಮಾಡುತ್ತಿದೆ. ಇಲ್ಲಿ ದೇವೇಗೌಡರಿಗೆ ಟಾಂಗ್ ನೀಡಲು ಮಾಜಿ ಸಿಎಂ ಕುಮಾರಸ್ವಾಮಿ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಜಿಪಂ ಮಾಜಿ ಸದಸ್ಯ, ಒಂದು ಕಾಲದ ಜಿ.ಟಿ.ದೇವೇಗೌಡರ ಆಪ್ತ, ಕುರುಬ ಸಮಾಜದ ಬೀರಿಹುಂಡಿ ಬಸವಣ್ಣ ಅವರಿಗೆ ಇಲ್ಲಿ ಪಕ್ಷದ ಜವಾಬ್ದಾರಿ ವಹಿಸಲಾಗಿದೆ. ಬಸವಣ್ಣ ಈಗಾಗಲೇ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಾ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ತಾವು ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ.
ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಮಗೆ ಪಕ್ಷದ ಸಂಘಟನೆ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ತಾವು ಜೆಡಿಎಸ್ ಟಿಕೆಟ್ ಆಕಾಂಕ್ಷಿ. ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಬಸವಣ್ಣ ತಿಳಿಸಿದ್ದಾರೆ.
ಕುತೂಹಲ ಮೂಡಿಸಿದ ಕ್ಷೇತ್ರ: ಅಸೆಂಬ್ಲಿ ಚುನಾವಣೆಗೆ ಮುನ್ನವೇ ಚಾಮುಂಡೇಶ್ವರಿ ಕ್ಷೇತ್ರ ರಾಜಕೀಯವಾಗಿ ಕುತೂಹಲ ಮೂಡಿಸಿದೆ. ಜಿ.ಟಿ.ದೇವೇಗೌಡರ ಮುಂದಿನ ರಾಜಕೀಯ ನಿಲುವು ಮೈಸೂರು ಜಿಲ್ಲಾ ರಾಜಕಾರಣದ ಮೇಲೆಯೂ ಪ್ರಭಾವ ಬೀರುವುದು ಖಚಿತ. ಒಕ್ಕಲಿಗ ಸಮಾಜದ ಪ್ರಬಲ ಮುಖಂಡರಾದ ದೇವೇಗೌಡರು ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆಯೋ ಆ ಪಕ್ಷ ಜಿಲ್ಲೆಯಲ್ಲಿ ಮತ್ತಷ್ಟು ಬಲ ಪಡೆಯುವುದು ಖಚಿತ.
ರಾಜಕೀಯದ ಇಂದಿನ ಪರಿಸ್ಥಿತಿಯಲ್ಲಿ ದೇವೇಗೌಡರ ಮೊದಲ ಆದ್ಯತೆ ಕಾಂಗ್ರೆಸ್ ಸೇರ್ಪಡೆ. ಆದರೆ, ತಮ್ಮ ಹಾಗೂ ತಮ್ಮ ಪುತ್ರನಿಗೆ ಟಿಕೆಟ್ ಸಿಗುವುದು ಕಾಂಗ್ರೆಸ್‌ನಲ್ಲಿ ಕಷ್ಟವಿದೆ ಎಂಬ ಅರಿವು ದೇವೇಗೌಡರಿಗಿದೆ. ರಾಜಕೀಯ ಹವಾಮಾನ ತಜ್ಞರಾಗಿರುವ ಜಿ.ಟಿ.ದೇವೇಗೌಡರ ಬಳಿ ಅಂತಿಮವಾಗಿ ಒಂದು ಅಸ್ತ್ರವಿದೆ. ಅದುವೇ ಪಕ್ಷೇತರವಾಗಿ ಕಣಕ್ಕಿಳಿಯುವುದು. ಆದರೆ, ಇದು ಕೊನೆಯ ಅಸ್ತ್ರ. ದೇವೇಗೌಡರು ಈಗಾಗಲೇ ಪಕ್ಷೇತರವಾಗಿ ಕಣಕ್ಕಿಳಿಯುವ ಮಾತನ್ನೂ ಒಮ್ಮೆ ಆಡಿರುವುದು ಉಂಟು.
– ಕೂಡ್ಲಿ ಗುರುರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!
Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.