ಎಚ್ಡಿಕೆ ಹೆಚ್ಚೇನೂ ಕೊಡ್ಲಿಲ್ಲ; ಸಿದ್ದು ಕೊಟ್ಟಿದ್ದು ಜಾರಿಯಾಗಿಲ್ಲ
Team Udayavani, Feb 8, 2019, 7:09 AM IST
ಮೈಸೂರು: ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ, ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, 8 ತಿಂಗಳಲ್ಲೇ 2ನೇ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದು, ಶುಕ್ರವಾರ ಮಧ್ಯಾಹ್ನ 12.30ಕ್ಕೆ 2019-20ನೇ ಸಾಲಿನ ರಾಜ್ಯ ಮುಂಗಡಪತ್ರ ಮಂಡಿಸಲಿದ್ದಾರೆ.
ವಿಧಾನಸಭೆ ಚುನಾವಣೆಗೂ ಮುನ್ನ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2018ರ ಫೆ.16ರಂದು 2018-19ನೇ ಸಾಲಿನ, ತಮ್ಮ ಸರ್ಕಾರದ ಅವಧಿಯ ಕಡೆಯ 6ನೇ ಮುಂಗಡಪತ್ರ ಪತ್ರ ಮಂಡಿಸಿ, ತವರು ಜಿಲ್ಲೆಗೆ ಭರಪೂರ ಭರವಸೆಗಳನ್ನು ನೀಡಿದ್ದರು.
ಆದರೆ, ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಮತದಾರ ಯಾವುದೇ ಪಕ್ಷಕ್ಕೂ ಬಹುಮತ ನೀಡದೆ ಅತಂತ್ರ ಪರಿಸ್ಥಿತಿ ಉಂಟಾಗಿದ್ದ ರಿಂದ ಜೆಡಿಎಸ್ – ಕಾಂಗ್ರೆಸ್ ಸೇರಿ ರಚಿಸಿದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾದ ಎಚ್.ಡಿ. ಕುಮಾರ ಸ್ವಾಮಿ ಅವರು, ಸಿದ್ದರಾಮಯ್ಯ ಅವರ ವಿರೋಧದ ನಡುವೆಯೂ ಹಿಂದಿನ ಸರ್ಕಾರದ ಕಾರ್ಯಕ್ರಮಗಳನ್ನು ಮುಂದು ವರಿಸುವ ಭರವಸೆ ಯೊಂದಿಗೆ ಜುಲೈ 5ರಂದು 2018-19ನೇ ಸಾಲಿಗೆ ತಮ್ಮ ಸರ್ಕಾರದ ಹೊಸ ಮುಂಗಡಪತ್ರ ಮಂಡಿಸಿದ್ದರು.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಇತರೆ ಜಿಲ್ಲೆಗಳ ಜೊತೆಗೆ ತವರು ಮೈಸೂರು ನಗರ ಮತ್ತು ಜಿಲ್ಲೆಗೆ ಭರಪೂರ ಯೋಜನೆಗಳನ್ನು ಘೋಷಿಸಿದ್ದರು. ಆದರೆ, ಕುಮಾರಸ್ವಾಮಿಯವರ ಮುಂಗಡಪತ್ರ ಹಾಸನ, ಮಂಡ್ಯ, ರಾಮನಗರಕ್ಕೆ ಸೀಮಿತವಾಗಿದೆ ಎಂಬ ಆರೋಪಗಳಿಗೆ ತಕ್ಕಂತೆ ಮೈಸೂರು ಜಿಲ್ಲೆಗೆ ಹೆಚ್ಚಿನದೇನನ್ನೂ ಕೊಡಲಿಲ್ಲ. ಸಿದ್ದರಾಮಯ್ಯ ಘೋಷಿಸಿದ್ದನ್ನು ಮುಂದುವರಿಸುವ ಗೋಜಿಗೆ ಹೋಗಲಿಲ್ಲ.
ಎಚ್‌ಡಿಕೆ ಭರವಸೆಗಳು: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಮೈಸೂರು ನಗರ ಹಾಗೂ ಮಾರ್ಗ ಮಧ್ಯದ 92 ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಹಳೇ ಉಂಡವಾಡಿ ಬಳಿ ಕಾವೇರಿ ನದಿಯಿಂದ ನಗರಕ್ಕೆ ಹೆಚ್ಚುವರಿಯಾಗಿ 300 ಎಂಎಲ್‌ಡಿ ನೀರನ್ನು ಸರಬರಾಜು ಮಾಡುವ ಯೋಜನೆಯನ್ನು 50 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿದೆ ಎಂದು ಮುಂಗಡಪತ್ರದಲ್ಲಿ ಹೇಳಿದ್ದರು.
ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರ ಒತ್ತಾಸೆ ಮೇರೆಗೆ 2051ನೇ ಇಸವಿವರೆಗೆ ಮೈಸೂರು ನಗರಕ್ಕೆ 300 ಎಂಎಲ್‌ಡಿ ನೀರು ಒದಗಿಸುವ ಹಳೇ ಉಂಡವಾಡಿ ಯೋಜನೆಗೆ ಪ್ರಾರಂಭಿಕವಾಗಿ 50 ಕೋಟಿ ಬಿಡುಗಡೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಈ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ.
ಮೈಸೂರು ಜಿಲ್ಲೆಯ ರೇಷ್ಮೆ ಬೆಳೆಗಾರರು ಮತ್ತು ರೀಲರುಗಳಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಉತ್ಪಾದಿಸುವ ರೇಷ್ಮೆ ಗೂಡಿಗೆ ಸ್ಥಳೀಯವಾಗಿ ಮಾರಾಟ ವ್ಯವಸ್ಥೆ ಕಲ್ಪಿಸಲು ಒಟ್ಟು 3 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಜಿಲ್ಲೆಯಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪಿಸಲಾಗುವುದು. ಇದಕ್ಕಾಗಿ 2018-19ನೇ ಸಾಲಿಗೆ ಒಂದು ಕೋಟಿ ರೂ. ಒದಗಿಸಲಾಗುವುದು ಎಂದಿದ್ದರು. ಆದರೆ, ಈವರೆಗೆ ಕಾಮಗಾರಿ ಆರಂಭವಾಗಿಲ್ಲ.
ರಾಜ್ಯದ ವಿಭಾಗ ಮಟ್ಟದಲ್ಲಿ ಧಾರವಾಡ, ಕಲಬುರಗಿ ಮತ್ತು ಮೈಸೂರುಗಳಲ್ಲಿ ಮೂರು ಘನೀಕೃತ ವೀರ್ಯನಳಿಕೆಗಳ ವಿತರಣಾ ಕೇಂದ್ರ ಗಳನ್ನು 2.25 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸ ಲಾಗುವುದು ಎಂಬ ಭರವಸೆಯೂ ಈಡೇರಿಲ್ಲ.
ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರವು (ಸಿಡಾಕ್) ಸಂಭಾವ್ಯ ಉದ್ದಿಮೆದಾರರಿಗೆ ತರಬೇತಿ ನೀಡಲು ಜಾರಿಗೊಳಿಸಿರುವ ದಿಶಾ ಯೋಜನೆಯನ್ನು ಈ ಸಾಲಿನಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಿ 2 ಕೋಟಿ ರೂ. ಅನುದಾನದಲ್ಲಿ 1 ಲಕ್ಷ ಜನರಿಗೆ ದಿಶಾ ಯೋಜನೆಯಡಿ ತರಬೇತಿ ನೀಡಲಾಗುವುದು ಎಂದಿದ್ದರೂ ಈವರೆಗೆ ಯಾವ ತರಬೇತಿಯೂ ನಡೆಯಲಿಲ್ಲ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಮೈಸೂರು ನಗರದಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ಹಾಗೂ ಇತರೆ ರೋಗಗಳಿಗೆ ಸಂಬಂಧಿಸಿದ ತೃತೀಯ ಹಂತದ ಆರೋಗ್ಯ ಸೇವೆಗಳನ್ನು ಒದಗಿಸಲು ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆಯ ಲಾಗುವುದು ಎಂದಿದ್ದರಾದರೂ ಆಸ್ಪತ್ರೆ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ.
ಇದಲ್ಲದೆ, ಪ್ರಸ್ತುತ ಜಿಲ್ಲೆಗೊಂದರಂತೆ ಇರುವ ವೃದ್ಧಾಶ್ರಮವನ್ನು ರಾಜ್ಯದ ಎಲ್ಲಾ ಉಪವಿಭಾಗಗಳಲ್ಲಿ ತಲಾ ಒಂದರಂತೆ ವಿಸ್ತರಿಸಿ ಪ್ರಾರಂಭಿಸಲಾಗುವುದು. ಮೈಸೂರು ಜಿಲ್ಲೆಯಲ್ಲಿ ಚಿಪ್‌ಗ್ಳನ್ನು ತಯಾರಿಸುವ ಸಂಸ್ಥೆ ಸ್ಥಾಪಿಸಲು ಯೋಜಿಸಲಾಗಿದೆ ಎಂಬ ಮುಂಗಡಪತ್ರದಲ್ಲಿನ ಭರವಸೆಗಳು ಭರವಸೆ ಗಳಾಗೇ ಉಳಿದಿವೆ.
ಚಿತ್ರನಗರಿ ನನೆಗುದಿಗೆ: ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಕ್ಷೇತ್ರ ವರುಣಾ ವಿಧಾನಸಭಾ ಕ್ಷೇತ್ರದ ಹಿಮ್ಮಾವು ಗ್ರಾಮದ ಬಳಿ 150 ಎಕರೆ ಭೂಮಿಯನ್ನು ನಿಗದಿಪಡಿಸಿದ್ದರು. ಆದರೆ, ಕುಮಾರಸ್ವಾಮಿಯವರು ತಮ್ಮ ಮುಂಗಡಪತ್ರ ದಲ್ಲಿ ರಾಮನಗರದಲ್ಲಿ ಚಿತ್ರನಗರಿ ಸ್ಥಾಪಿಸಿ, ಛಾಯಾಚಿತ್ರ, ಸಂಕಲನ, ಸೌಂಡ್ ರೆರ್ಕಾಡಿಂಗ್ ಮಾಡುವ ಸಂಸ್ಥೆ, ಅನಿಮೇಷನ್ ಸ್ಟುಡಿಯೋಗಳು, ಕಂಪ್ಯೂಟರ್ ಗ್ರಾಫಿಕ್ ಸ್ಟುಡಿಯೋಗಳು ಚಲನಚಿತ್ರ ರಂಗಕ್ಕೆ ಸೇವೆ ಸಲ್ಲಿಸುವ ಉದ್ಯಮಗಳಿಗೆ ಪ್ರೋತ್ಸಾಹ ನೀಡಲು 40 ಕೋಟಿ ರೂ. ಬಂಡವಾಳ ಹೂಡಲು ಇಚ್ಛಿಸಿರುತ್ತೇನೆ.
ಇದಲ್ಲದೆ, ಹೊರದೇಶದಿಂದ ಚಿತ್ರ ನಿರ್ಮಾಣಕ್ಕಾಗಿ ಬರುವ ಕಲಾವಿದರು ಮತ್ತು ತಂತ್ರಜ್ಞರಿಗೆ ವಸತಿ ಹಾಗೂ ಇನ್ನಿತರೆ ಅವಶ್ಯಕ ಮೂಲಭೂತ ಸೌಕರ್ಯ ಒದಗಿಸು ವುದಾಗಿ ಹೇಳಿದ್ದರು. ಇದರಿಂದ ಅಸಮಾಧಾನ ಗೊಂಡ ಸಿದ್ದರಾಮಯ್ಯ ಅವರು ಚಿತ್ರನಗರಿ ಯನ್ನು ಮೈಸೂರಿನಲ್ಲೇ ಸ್ಥಾಪಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿ ದ್ದರು.
ಆದರೂ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಚಿತ್ರನಗರಿ ವಿಷಯದಲ್ಲಿ ಗೊಂದಲದ ಹೇಳಿಕೆಗಳನ್ನೇ ನೀಡುತ್ತಾ ಬಂದರೂ ಸರ್ಕಾರದ ಈ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಚಲನಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದ ವಿಶ್ವ ವಿದ್ಯಾನಿಲಯ ಸ್ಥಾಪನೆ ಮಾಡಲಿದ್ದು, ಚಿತ್ರ ನಗರಿಯನ್ನು ಮೈಸೂರಿನಲ್ಲೇ ಸ್ಥಾಪಿಸುವುದಾಗಿ ಹೇಳುವ ಮೂಲಕ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ವಿವಾದಕ್ಕೆ ತೆರೆ ಎಳೆದ ರಾದರೂ ಹಿಮ್ಮಾವು ಗ್ರಾಮದಲ್ಲಿ ಚಿತ್ರನಗರಿ ಸ್ಥಾಪನೆಗೆ ಮುಂದಾಗದಿರುವುದರಿಂದ ಯೋಜನೆ ನನೆಗುದಿಗೆ ಬಿದ್ದಿದೆ.
ರೈತರ ಸಲಹಾ ಸಮಿತಿ ರಚಿಸಲೇ ಇಲ್ಲ: ಕೃಷಿ ವಲಯದ ಚಟುವಟಿಕೆಗಳಲ್ಲಿ ರೈತರ ಸಹಭಾಗಿತ್ವವನ್ನು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ರಾಜ್ಯದ ಪ್ರತಿ ಜಿಲ್ಲೆಯಿಂದ ಇಬ್ಬರು ಪ್ರಗತಿಪರ ರೈತರನ್ನು ಒಳ ಗೊಂಡಿರುವ ಕರ್ನಾಟಕ ರಾಜ್ಯ ರೈತರ ಸಲಹಾ ಸಮಿತಿಯನ್ನು ರಚನೆ ಮಾಡಲು ಯೋಜಿಸಿದ್ದು, ಈ ಸಲಹಾ ಸಮಿತಿಯ ಜೊತೆ ನಾನು ಪ್ರತಿ ಎರಡು ತಿಂಗಳಿ ಗೊಮ್ಮೆ ಚರ್ಚೆ ನಡೆಸಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ ಎಂದಿ ದ್ದರು. ಆದರೆ, 8 ತಿಂಗಳು ಕಳೆದರೂ ಸಲಹಾ ಸಮಿತಿ ರಚನೆಯಾಗಲೇ ಇಲ್ಲ.
ಸಿದ್ದು ಭರವಸೆ ಈಡೇರಿತೆ?: ಮೈಸೂರು ವಿವಿಯಲ್ಲಿ ಬಸವ ಅಧ್ಯಯನಪೀಠ ಸ್ಥಾಪನೆಗೆ 2 ಕೋಟಿ ರೂ. ಮಂಜೂರು ಮಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅದರಂತೆ ವಿಶ್ವವಿದ್ಯಾಲಯಕ್ಕೆ 4 ಹಂತದಲ್ಲಿ ಹಣ ಬಿಡು ಗಡೆಯಾಗಿದ್ದು, ಪೀಠದ ಕೇಂದ್ರ ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ. ಸಿದ್ದರಾಮಯ್ಯ ಘೋಷಿಸಿದ್ದ ಶುಶ್ರೂಷ ಕರ ಕಾಲೇಜು, ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ನೆನಗುದಿಗೆ ಬಿದ್ದಿದ್ದು, ಮುಖ್ಯಮಂತ್ರಿ ಕಪ್ ಹೆಸರಿನಲ್ಲಿ ದಸರಾ ಕ್ರೀಡಾಕೂಟ ನಡೆಸಲು 7 ಕೋಟಿ ರೂ. ನೀಡುವ ಸಿದ್ದರಾಮಯ್ಯ ಅವರ ಘೋಷಣೆಯೂ ಈಡೇರಿಲ್ಲ.
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ
Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.