ಹಿಂದಿ ಹೇರಿಕೆಗೆ ಯತ್ನಿಸಿದ್ರೆ ಪ್ರತ್ಯೇಕ ರಾಷ್ಟ್ರಕ್ಕೆ ಆಗ್ರಹ
Team Udayavani, Apr 11, 2022, 2:43 PM IST
ಮೈಸೂರು: ಭಾರತದ ಮುಕ್ಕಾಲು ಭಾಗವನ್ನು ಆಳಿದ ಕೀರ್ತಿ ಕನ್ನಡಿಗರದ್ದಾಗಿದ್ದು, 4 ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಮತ್ತು ಪರಂಪರೆ ಹೊಂದಿರುವ ಕನ್ನಡವನ್ನು ನೇಪಥ್ಯಕ್ಕೆ ಸರಿಸಿ, ಬೇರೊಂದು ಭಾಗದ ಭಾಷೆ ಹೇರಿಕೆಗೆ ಕನ್ನಡಪರ ಸಂಘಟನೆಗಳು, ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧಿಕೃತ ಭಾಷಾ ಸಮಿತಿ ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಜನರು ಪರಸ್ಪರ ಸಂಪರ್ಕ ಭಾಷೆಯನ್ನಾಗಿ ಹಿಂದಿ ಬಳಸಬೇಕು. ಹಿಂದಿಯನ್ನು ಇಂಗ್ಲಿಷ್ ಭಾಷೆಗೆ ಪರ್ಯಾಯವಾಗಿ ಮಾಡಿಕೊಳ್ಳಬೇಕು ಎಂದು ನೀಡಿದ್ದ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಮುನ್ನೆಲೆಗೆ ತರುವುದು ಬೇಡ: ಒಕ್ಕೂಟ ವ್ಯವಸ್ಥೆಯಲ್ಲಿ ಹಿಂದಿಯೇತರ ರಾಜ್ಯಗಳು ತನ್ನದೇ ಆದ ಪ್ರಾದೇಶಿಕ ಭಾಷೆಯಲ್ಲಿ ವ್ಯವಹರಿಸುತ್ತಿವೆ. ಜತೆಗೆ ಸಾಂಪ್ರದಾಯಿಕ, ಸಾಂಸ್ಕೃತಿಕವಾಗಿ ಗಟ್ಟಿಗೊಂಡಿವೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪದೇ ಪದೆ ಹಿಂದಿ ಹೇರಿಕೆ ವಿಚಾರವನ್ನು ಮುನ್ನೆಲೆಗೆ ತರುವುದರ ಬದಲು ರಾಜ್ಯಕ್ಕೆ ನೀಡಬೇಕಾಗಿರುವ ಅನುದಾನವನ್ನು ನೀಡಿ, ಸರ್ವತೋಮುಖ ಪ್ರಗತಿಗೆ ಶ್ರಮಿಸಲಿ ಎಂದು ಕನ್ನಡಪರ ಹೋರಾಟಗಾರರು ಆಗ್ರಹಿಸಿದ್ದಾರೆ.
ಹಿಂದಿ ಹೇರುವ ನಿಲುವು ಕೈಬಿಡಿ: ಕರ್ನಾಟಕ ಕಾವಲುಪಡೆ ರಾಜ್ಯಾಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡ ಮಾತನಾಡಿ, ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನಿಲುವಿಗೆ ಮೊದಲಿನಿಂದಲೂ ದಕ್ಷಿಣ ರಾಜ್ಯಗಳು ವಿರೋಧಿಸುತ್ತಲೇ ಬಂದಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ಆಕ್ರಮಣಕಾರಿ ನಡೆಯನ್ನು ನಾವು ಒಪ್ಪುವುದಿಲ್ಲ. ಒಂದು ವೇಳೆ ಬಲವಂತವಾಗಿ ಹಿಂದಿ ಹೇರಿಕೆಗೆ ಮುಂದಾದರೆ ಪ್ರತ್ಯೇಕ ರಾಷ್ಟ್ರದ ಕೂಗು ಕೇಳಿಬರುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಹಿಂದಿ ಹೇರುವ ನಿಲುವನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದೆ ಹೇರಿಕೆ ಸಹಿಸಲ್ಲ: ಹಲವು ರಾಜಮನೆತಗಳು ಕನ್ನಡ ನಾಡಿನಲ್ಲಿ ಆಳ್ವಿಕೆ ಮಾಡಿ ರಾಜ್ಯವನ್ನು ಗಟ್ಟಿಗೊಳಿಸಿವೆ. ಈ ನೆಲ, ಭಾಷೆ, ಸಂಸ್ಕೃತಿ ಹಾಗೂ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹೀಗಿದ್ದರೂ ನಮ್ಮ ಮೇಲೆ ಹಿಂದಿ ಹೇರಿಕೆ ಮಾಡಲು ಮುಂದಾದರೆ ಸಹಿಸುವುದಿಲ್ಲ ಎಂದು ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಎಚ್ಚರಿಸಿದ್ದಾರೆ.
ಕೇಂದ್ರದ ದಬ್ಟಾಳಿಕೆ ಸಹಿಸಲ್ಲ: ರಾಜ್ಯದ ಸಂಸದರು ಈಗಲಾದರೂ ನಮ್ಮ ಭಾಷೆಗಾಗಿ ಧ್ವನಿ ಎತ್ತಬೇಕು. ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದು ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಭಾಷೆ, ನೆಲ-ಜಲ ವಿಚಾರದಲ್ಲಿ ನಾವೆಲ್ಲರೂ ಒಂದೇ. ಕೇಂದ್ರದ ದಬ್ಟಾಳಿಕೆಯನ್ನು ಎಂದಿಗೂ ಸಹಿಸುವುದಿಲ್ಲ ಎಂದು ಹೋರಾಟಗಾರ ರವಿಕುಮಾರ್ ಮರಡೀಪುರ ಹೇಳಿದ್ದಾರೆ.
ನಮ್ಮದು ಭಾಷಾ ವೈವಿಧ್ಯತೆಯ ರಾಷ್ಟ್ರ. ಅದನ್ನು ಹತ್ತಿಕ್ಕುವ ಕೆಲಸ ಕೇಂದ್ರದಿಂದ ನಡೆಯುತ್ತಲೇ ಇದೆ. ಈವರೆಗೆ ತ್ರಿಭಾಷಾ ಸೂತ್ರ ಎನ್ನುತ್ತಿದ್ದ ಕೇಂದ್ರ ಸರ್ಕಾರ ಈಗ ದ್ವಿಭಾಷಾ ಸೂತ್ರಕ್ಕೆ ಶಿಫ್ಟ್ ಆಗಿದೆ. ಪ್ರಾದೇಶಿಕ ಭಾಷೆ ಎಂದು ಹೆಳುವುದೇ ಮೂರ್ಖತನ. ಎಲ್ಲಾ ರಾಜ್ಯಗಳ ಆಡಳಿತ ಭಾಷೆಗಳೂ ರಾಷ್ಟ್ರ ಭಾಷೆಯಾಗಿವೆ. ಹಿಂದಿ ಹೇರಿಕೆ ನಿಲುವು ಮುಂದಿನ ತಲೆಮಾರಿನ ಮೇಲೆ ದೊಡ್ಡಪೆಟ್ಟು ನೀಡಲಿದೆ. – ಪ್ರೊ.ಅರವಿಂದ ಮಾಲಗತ್ತಿ, ಸಾಹಿತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.