ಮತದಾನ ಜಾಗೃತಿಗೆ ಮನೆ ಮನೆಗೆ ಸ್ಟಿಕ್ಕರ್
Team Udayavani, Apr 10, 2019, 3:00 AM IST
ಮೈಸೂರು: ಮೈಸೂರು ತಾಲೂಕು ಸ್ವೀಪ್ ಸಮಿತಿ ವತಿಯಿಂದ ತಾಲೂಕಿನ ರಮ್ಮನಹಳ್ಳಿಯಲ್ಲಿ ಮನೆ ಮನೆಗೆ ಮತದಾನ ಜಾಗೃತಿಯ ಸ್ಟಿಕ್ಕರ್ ಅಂಟಿಸಿ ಮತ್ತು ನೈತಿಕ ಮತದಾನದ ಕರಪತ್ರಗಳನ್ನು ಮತದಾರರಿಗೆ ನೀಡಿ ಮತದಾನ ಅರಿವು ಮೂಡಿಸಲಾಯಿತು.
ಮಂಗಳವಾರ ರಮ್ಮನಹಳ್ಳಿ ಗ್ರಾಮದ ಶಾಲಾ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಗ್ರಾಮದ ಬೀದಿಗಳಲ್ಲಿ ಜಾಥಾ ನಡೆಸಿ ಕಡ್ಡಾಯ ಮತದಾನದ ಭಿತ್ತಿಚಿತ್ರ ಹಿಡಿದು ಮತ್ತು ನೈತಿಕ ಚುನಾವಣೆಯ ಘೋಷವಾಕ್ಯಗಳನ್ನು ಕೂಗಿ ಜನತೆಗೆ ತಪ್ಪದೇ ಮತ ಚಲಾಯಿಸುವಂತೆ ಅರಿವು ಮೂಡಿಸಿದರು.
ಮೈಸೂರು ತಾಲೂಕಿನಲ್ಲಿ ಹೆಚ್ಚು ಮತಗಳನ್ನು ಹೊಂದಿರುವ ಗ್ರಾಮಗಳಲ್ಲಿ ರಮ್ಮನಹಳ್ಳಿಯು ಕೂಡ ಒಂದಾಗಿದ್ದು, ಸ್ವೀಪ್ ಸಮಿತಿಯ ಅಧಿಕಾರಿಗಳು ಗ್ರಾಮದ ನಾಗರಿಕ ಮತದಾರರಿಗೆ ಚುನಾವಣಾ ಪ್ರತಿಜ್ಞಾ ವಿಧಿಯನ್ನು ಅವರು ಬೋಧಿಸಿ ಮತದಾನದ ಬಗ್ಗೆ ಅರಿವು ಮೂಡಿಸಿದರು.
ಚುನಾವಣೆ ಹಬ್ಬ: ಚುನಾವಣೆಯನ್ನು ನಾವು ದೇಶದ ಹಬ್ಬದ ರೀತಿಯಲ್ಲಿ ಆಚರಿಸಬೇಕು. ನಮ್ಮನ್ನಾಳುವ ನಾಯಕನನ್ನು ನಾವೇ ಆರಿಸಿವುದರಿಂದ ಸೂಕ್ತ ನಾಯಕತ್ವ ಗುಣವುಳ್ಳ ಸಾಮಾಜಿಕ ಚಿಂತನೆ ಇರುವವರನ್ನು ಆಯ್ಕೆ ಮಾಡಲು ನಿಮ್ಮ ಮತ ಅಮೂಲ್ಯ,
ಆದ್ದರಿಂದ ಏಪ್ರಿಲ್ 18 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡುವಂತೆ ಮನವಿಮಾಡಿದರು. ನೈತಿಕ ಚುನಾವಣೆಗೆ ಬೆಂಬಲ ನೀಡಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಸಾಗುವುದು ಅನಿವಾರ್ಯವಾಗಿದೆ.
ಯಾವುದೇ ಕಾರಣಕ್ಕೂ ಮತದಾನದಂತಹ ಪವಿತ್ರಕಾರ್ಯದಿಂದ ಹೊರಗುಳಿಯ ಬಾರದು ಎಂದು ತಾಪಂ ಸಹಾಯಕ ನಿರ್ದೇಶಕ ಕೃಷ್ಣ ತಿಳಿಸಿದರು. ಶಿಶು ಅಭಿವೃದ್ಧಿ ಅಧಿಕಾರಿ ಮಂಜುಳಾ ಪಾಟೀಲ್, ರಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಈಶುಕುಮಾರ್ ಇನ್ನಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.