ಹುಣಸೂರು: ರಜೆಗೆ ಬಂದಿದ್ದ 32 ವರ್ಷದ ಸೈನಿಕ ಹೃದಯಾಘಾತದಿಂದ ನಿಧನ
ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ, ಶಾಸಕ ಮಂಜುನಾಥ್ ಸೇರಿದಂತೆ ಗಣ್ಯರು ಭಾಗಿ
Team Udayavani, Oct 12, 2022, 5:19 PM IST
ಹುಣಸೂರು: ರಜೆ ಮೇಲೆ ಸ್ವಗ್ರಾಮಕ್ಕಾಗಮಿಸಿದ್ದ ಬಂದಿದ್ದ ಸೈನಿಕರೊಬ್ಬರು ಮನೆಯಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಾಲೂಕಿನ ಚಿಟಕ್ಯಾತನಹಳ್ಳಿಯಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಚಿಟಕ್ಯಾತನಹಳ್ಳಿ ಗ್ರಾಮದ ಕೃಷ್ಣೇಗೌಡರ ಏಕೈಕ ಪುತ್ರ ಮಹೇಶ್(32) ಮೃತರು. ತಂದೆ, ಸಹೋದರಿ, ಪತ್ನಿ ವಿನೋದ, ಐದು ವರ್ಷದ ಮಗಳಿದ್ದಾಳೆ. ಇವರು ಹರವೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರೇಗೌಡರ ಅಳಿಯ.
ಮಹೇಶ್ ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅ.3 ಕ್ಕೆ ಸ್ವಗ್ರಾಮಕ್ಕೆ ರಜೆ ಮೇಲೆ ಬಂದಿದ್ದ ಇವರು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಬೆರೆತು ರಜೆ ಕಳೆಯುತ್ತಿದ್ದರು. ನ.1 ಕ್ಕೆ ಕರ್ತವ್ಯಕ್ಕೆ ಮರಳಬೇಕಿತ್ತು.
ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದ್ದರು, ಬೆಳಗ್ಗೆ 6 ರ ವೇಳೆಗೆ ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದು ವಾರಸುದಾರರಿಗೆ ಒಪ್ಪಿಸಿದರು. ಕುಟುಂಬದವರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು.
ಶಾಸಕರಿಂದ ಸಾಂತ್ವನ
ಶಾಸಕ ಎಚ್.ಪಿ.ಮಂಜುನಾಥ್, ತಹಶೀಲ್ದಾರ್ ಕರ್ನಲ್ ಡಾ.ಅಶೋಕ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ, ಜಿ.ಪಂ.ಮಾಜಿ ಸದಸ್ಯ ಸಿ.ಟಿ.ರಾಜಣ್ಣ ಸೇರಿದಂತೆ ಅನೇಕ ಮುಖಂಡರು ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು.
ಗೌರವ ಸಮರ್ಪಣೆ
ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಿ.ವಿ.ರವಿ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸರಿಂದ ಮೂರು ಸುತ್ತು ಗುಂಡು ಹಾರಿಸಿ ಗೌರವ ವಂದನೆ ಸಲ್ಲಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.