ಹುಣಸೂರು: ಎಲ್ಲರಿಗೂ ಮೀಸಲಾತಿ ನೀಡಿದರೆ, ಶೋಷಿತರ ಗತಿ ಏನು? ಮಾಜಿ ಮಂತ್ರಿ ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ
Team Udayavani, Dec 18, 2022, 3:18 PM IST
ಹುಣಸೂರು: ವೈಚಾರಿಕತೆ ತತ್ವ ಸಿದ್ದಾಂತದ ತಳಹದಿಯಲ್ಲಿ ಶಿಕ್ಷಣದಿಂದ ಭವಿಷ್ಯ ಭಾರತ ರೂಪಿಸುವ ಶಕ್ತಿ ಯುವಪೀಳಿಗೆಗೆ ನೀಡುವ ದಿಕ್ಕನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಶಿಕ್ಷಣ ನೀತಿ ರೂಪಿಸಿ ಸರ್ವ ಸಮುದಾಯಗಳ ಕಣ್ತೆರೆಸಿದ್ದರು ಎಂದು ಮಾಜಿ ಶಾಸಕ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಎಸ್.ಸಿ ಮತ್ತು ಎಸ್ಟಿ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ನೂತನ ಕ್ಯಾಲೆಂಡರ್ ಬಿಡುಗಡೆ ,ಬಡ್ತಿ ಮತ್ತು ನಿವೃತ್ತಿ ನೌಕರರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅತ್ಯಂತ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಸುಶಿಕ್ಷಿತರಾದಲ್ಲಿ ದೇಶದ ಸರ್ವತೋಮುಖ ಅಭಿವೃದ್ಧಿ ಕಾಣಬಹುದಾಗಿದೆ. ಸ್ವಾತಂತ್ರ‍್ಯ ಪಡೆದ ಹಂತದಲ್ಲಿ ದೇಶದ ಸಾಕ್ಷರತೆ ಪ್ರಮಾಣ ಕೇವಲ ಶೇ9 ರಿಂದ 10ರಷ್ಟಿತ್ತು ಎಂದರು.
ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವಧಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವ ಹಿನ್ನಲೆಯಲ್ಲಿ 1964ರಲ್ಲಿ ಸುಬ್ರಹ್ಮಣ್ಯಂ ಸಮಿತಿ ರಚಿಸಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದ್ದರು. ನಂತರದಲ್ಲಿ 1984ರಲ್ಲಿ ರಾಜೀವ್ ಗಾಂಧಿ ಅವಧಿಯಲ್ಲಿ ಕೊಠಾರಿಯಾ ಸಮಿತಿ ನೇಮಿಸಿ ಶಿಕ್ಷಣ ನೀತಿಗೆ ಮತ್ತಷ್ಟು ಹೊಳಪು ನೀಡುವ ಕೆಲಸಕ್ಕೆ ಮುಂದಾಗಿ ಕೊಠಾರಿಯಾ ವರದಿ ಸಂಸತ್ತಿನಲ್ಲಿ ಚರ್ಚೆಗೊಂಡ ಬಳಿಕ ಕಾಯ್ದೆಯಾಗಿ ಹೊರ ಬಂದಿತ್ತು ಎಂದು ಹೇಳಿದರು.
ಈ ವರದಿಗಳಿಂದಾಗಿ ಶೋಷಿತ ಸಮುದಾಯಗಳಿಗೆ ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗಿ ಇಂದು ಬಹುತೇಕ ಶೋಷಿತ ಸಮುದಾಯಗಳ ಮಕ್ಕಳು ಸುಶಿಕ್ಷಿತರಾಗಿದ್ದಾರೆ ಎಂದರು.
ಮೀಸಲಾತಿ ಮೊಟಕು ಆತಂಕ: ಮುಂದುವರೆದವರಿಗೆ ಶೇ.10ರಷ್ಟು ಮೀಸಲಾತಿ ಜಾರಿಗೊಳಿಸಿರುವ ಸರಕಾರ ಹಂತಹಂತವಾಗಿ ಎಲ್ಲಾ ಕ್ಷೇತ್ರಗಳಲ್ಲಿನ ಶೋಷಿತ ಸಮುದಾಯಕ್ಕೆ ನೀಡಿದ್ದ ಮೀಸಲಾತಿಗೊಟಕುಗೊಳಿಸಲು ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಸರಿಕರಣ: 2020ರಲ್ಲಿ ಬಿಜೆಪಿ ಸರಕಾರ ಯಾವುದೇ ಚರ್ಚೆಗಳಿಲ್ಲದೆ ಶಿಕ್ಷಣ ನೀತಿಗೆ ಬದಲಾವಣೆ ತಂದಿದ್ದು, ಈ ನೀತಿಯಿಂದ ಶೋಷಿತ ಸಮುದಾಯ ಶಿಕ್ಷಣದಿಂದ ಹಿಂದುಳಿಯುವ ಆತಂಕದ ಪರಿಸ್ಥಿತಿ ಸೃಷ್ಠಿಯಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ ಮೇಲ್ವರ್ಗದವರಿಗೆ ಅನುಕೂಲವಾಗಿದ್ದು, ತುಳಿತಕ್ಕೆ ಒಳಗಾದ ಸಮುದಾಯ ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗುವ ಪರಿಸ್ಥಿತಿ ಸೃಷ್ಠಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಅಂಬೇಡ್ಕರ್ ತನ್ನ ಸಮುದಾಯ ಸುಶಿಕ್ಷಿತರಾಗಬೇಕೆಂಬ ಮಹಾಸೆ ಇಟ್ಟುಕೊಂಡು ಸಂವಿದಾನವನ್ನು ರಚಿಸಿದರು. ಅವರನ್ನು ಫೋಟೋ, ಫ್ಲೆಕ್ಸ್ಗಳಿಗೆ ಸೀಮಿತವಾಗಿಸಿದ್ದು, ಬದಲಿಗೆ ಸುಶಿಕ್ಷಿತರಾದವರು ಅವರನ್ನು ಹೃದಯದಲ್ಲಿಟ್ಟುಕೊಂಡು ಈಸಮುದಾಯದ ಇತರರನ್ನು ಮೇಲೆತ್ತುವ ಕಾರ್ಯ ಮಾಡಿದಾಗ ಮಾತ್ರ ಅಂಬೇಡ್ಕರರ ಆಶಯ ಈಡೇರಿದಂತಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಪಿ.ಮಂಜುನಾಥ್ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿ, ವಿಶ್ವಕ್ಕೆ ಸಂವಿದಾನ ಕೊಟ್ಟ ಮಹಾಪುರುಷರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳಾಗಬೇಕು. ಇದಕ್ಕೆ ಬೆನ್ನೆಲುಬಾಗಿ ನಿಲ್ಲುವೆನೆಂದರು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಗೀತಾ, ಮಾಜಿ ಅಧ್ಯಕ್ಷೆ ಸೌರಭ ಸಿದ್ದರಾಜು, ತಾ.ಪಂ. ಇಓ ಮನು.ಬಿ.ಕೆ, ಬಿ.ಆರ್.ಸಿ.ಸಂತೋಷ್ ಕುಮಾರ್, ಮುಖಂಡರಾದ ನಾಗರಾಜ್ ಮಲ್ಲಾಡಿ, ಹರಿಹರ ಆನಂದ ಸ್ವಾಮಿ, ಡಿ.ಕುಮಾರ್, ಬಿ.ಕೆ.ಶಿವಣ್ಣ, ಕಾಂತರಾಜು, ಶಿವಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಿದ್ದರು.
ಮೆರವಣಿಗೆ: ನಗರದ ದೇವರಾಜ ಅರಸು ಪುತ್ಥಳಿಯಿಂದ ಸರಕಾರಿ ನೌಕರರ ಸಂಘದ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕೈಯಲ್ಲಿ ಪಕ್ಷದ ಬಾವುಟ ಹಿಡಿದು, ಮಾಜಿಮಂತ್ರಿ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಎಚ್.ಪಿ. ಮಂಜುನಾಥ್, ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮಿಜಿಗಳನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬಸ್ ನಿಲ್ದಾಣದ ಬಳಿಗೆ ಕರೆತಂದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಪುಷ್ಪಾರ್ಚನೆಗೈದು, ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಿ ಸಂಭ್ರಮಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.