ಹುಣಸೂರು ಜನರ ಭಾವನೆಗಳಿಗೆ ಸ್ಪಂದಿಸಿದ್ದೇನೆ: ಪ್ರತಾಪ್ ಸಿಂಹ
Team Udayavani, Apr 14, 2019, 3:32 AM IST
ಹುಣಸೂರು: ತಾವು ಸಂಸದರಾದ ಬಳಿಕ ತಂಬಾಕು ಬೆಳೆಗಾರರಿಗೆ ಸಮಾಧಾನಕರ ದರ ಕೊಡಿಸಿ ಬೆಳೆಗಾರರ ಕ್ಷೇಮಾಭಿವೃದ್ಧಿಗೆ ದುಡಿದಿದ್ದೇನೆ. ಅಲ್ಲದೇ ತಾಲೂಕಿನ ಜನರ ಭಾವನೆಗಳಿಗೆ ಸ್ಪಂದಿಸಿದ್ದೇನೆಂದು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಹೇಳಿದರು.
ತಾಲೂಕಿನ ಗಾವಡಗೆರೆ ಹೋಬಳಿಯ ಹರವೆ, ಹಿರಿಕ್ಯಾತನಹಳ್ಳಿ, ಕಟ್ಟೆಮಳಲವಾಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹುಣಸೂರು ಉಪವಿಭಾಗ ವ್ಯಾಪ್ತಿಯ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿಗೆ ಕಳೆದ 5 ವರ್ಷದಿಂದಲೂ ದರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿ, ಸರಾಸರಿ ದರ ಹೆಚ್ಚಿಸಿ ರೈತರ ಅರ್ಥಿಕ ಸ್ಥಿತಿ ಸುಧರಿಸುವ ಕೆಲಸ ಮಾಡಿದ್ದೇನೆ.
2017 ರಲ್ಲಿ ತಂಬಾಕು ಸರಾಸರಿ ದರ 134 ರೂ ಇತ್ತು. 2018-19ರ ಮಾರುಕಟ್ಟೆ ಮುಕ್ತಾಯಗೊಂಡು ಈ ಸಾಲಿನ ಸರಾಸರಿ ದರ 183 ರೂ ಸಿಕ್ಕಿದೆ. ಜೊತೆಗೆ ಕನಿಷ್ಠ ದರ 70 ರೂ. ಸಿಕ್ಕಿದ್ದು, ರೈತರ ಮುಖದಲ್ಲಿ ನಗೆ ಕಾಣುವಂತೆ ಮಾಡಲಾಗಿದೆ ಎಂದರು.
ತಂಬಾಕು ಮಂಡಳಿವತಿಯಿಂದ ಬೆಳೆಗಾರರಿಗೆ ಸರಬರಾಜು ಮಾಡುತ್ತಿದ್ದ ರಸಗೊಬ್ಬರ ವಿತರಣಾ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಬದಲಾವಣೆ ತಂದು ಪ್ರತಿ ಪ್ಲಾಟ್ ಫಾರಂ ರೈತ ಸಮಿತಿಯಿಂದಲೇ ರಸಗೊಬ್ಬರ ನಿರ್ವಹಣೆ ಮಾಡುವ ವ್ಯವಸ್ಥೆಗೆ ಚಾಲನೆ ನೀಡಿ ಮಧ್ಯವರ್ತಿಗಳಿಗೆ ಕಡಿವಾಣ ಹಾಕಲಾಗಿದೆ. ರೈತರಿಗೆ ಕಡಿಮೆ ದರದಲ್ಲಿ ಗೊಬ್ಬರ ಕೊಡಿಸುವ ವ್ಯವಸ್ಥೆ ಕಲ್ಪಿಸಿದ್ದೇನೆ ಎಂದು ತಿಳಿಸಿದರು.
ತಾವು ಸಂಸದರಾದ ಆರಂಭದಲ್ಲಿ ತಂಬಾಕು ವಿಚಾರ ತಿಳಿಯದೇ ಅಲ್ಲಲ್ಲಿ ತಪ್ಪು ಆಗಿದ್ದು, ಇದೀಗ ತಂಬಾಕು ಬೆಳೆ ಕುರಿತು ಪೂರ್ಣ ಅರಿವು ಹೊಂದಿದ್ದೇನೆ ಎಂದರು. ಕೇಂದ್ರ ಸರ್ಕಾರದಿಂದ 14ನೇ ಹಣಕಾಸು ಯೋಜನೆಯಡಿ ತಾಲೂಕಿನ 41 ಪಂಚಾಯಿತಿಗಳಲ್ಲಿ 26 ಪಂಚಾಯಿತಿ ಕಟ್ಟಡ ನಿರ್ಮಾಣ, ವಿವಿಧ ಕಟ್ಟಡಗಳ ನಿರ್ಮಾಣ, ಶಾಲಾ ಕಾಂಪೌಂಡ್ ಸೇರಿದಂತೆ ನರೇಗಾ ಯೋಜನೆಯಡಿ ಮೂಲಭೂತ ಸವಲತ್ತುಗಳನ್ನು ಗ್ರಾಮಗಳಿಗೆ ಕಲ್ಪಿಸಿದ್ದೇನೆ.
ಹುಣಸೂರಿನಲ್ಲಿ ತಾಯಿ ಮತ್ತು ಮಗುವಿನ ಸುಸಜ್ಜಿತ ಆಸ್ಪತ್ರೆ ಮಂಜೂರು ಮಾಡಿಸಿದ್ದೇನೆ. ಮೈಸೂರು ಜಿಲ್ಲಾ ಕೇಂದ್ರವನ್ನು ಅಭಿವೃದ್ಧಿ ಪಡಿಸಿ ಪ್ರವಾಸೋದ್ಯಮವನ್ನಾಗಿ ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಬೇಕಾದ ಹೆದ್ದಾರಿ-ರಸ್ತೆಗಳ ಅಭಿವೃದ್ಧಿ, ರೈಲು, ವಿಮಾನ ಹಾರಾಟಕ್ಕೆ ಒತ್ತು ನೀಡಿದ್ದು, ಶೀಘ್ರದಲ್ಲೇ ಮತ್ತೆ ನಾಲ್ಕು ವಿಮಾನಗಳು ಮೈಸೂರಿಗೆ ಬರಲಿವೆ ಎಂದು ಭರವಸೆ ನೀಡಿದರು.
ಪ್ರಚಾರ ಸಭೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಯೋಗಾನಂದ ಕುಮಾರ್, ಜಿಪಂ ಮಾಜಿ ಸದಸ್ಯ ರಮೆಶ್ ಕುಮಾರ್, ತಂಬಾಕು ಮಂಡಳಿ ಸದಸ್ಯ ಕಿರಣ್ ಕುಮಾರ್, ವಿರೇಶ್ ರಾವ್ ಬೋಬಡೆ, ಮೈ.ವಿ.ರವಿಶಂಕರ್ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.