2013ರಲ್ಲಿ ಪೇಜಾವರ ವಿದ್ಯಾರ್ಥಿ ನಿಲಯ ಆರಂಭ
Team Udayavani, Dec 30, 2019, 3:00 AM IST
ಮೈಸೂರು: ದುರ್ಬಲ ವರ್ಗದವರ ಮಕ್ಕಳಿಗೆ ಸಂಸ್ಕಾರ, ರಾಷ್ಟ್ರಭಕ್ತಿಯ ಶಿಕ್ಷಣ ನೀಡುವ ಉದ್ದೇಶದಿಂದ ಶ್ರೀಗಳು ಆರಂಭಿಸಿದ ವಿದ್ಯಾರ್ಥಿನಿಲಯ ನೂರಾರು ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಿದೆ.
ಮೈಸೂರಿನ ಜೆಪಿ ನಗರದಲ್ಲಿ 2013ರಲ್ಲಿ ಪೇಜಾವರ ಸಾರ್ವಜನಿಕ ವಿದ್ಯಾರ್ಥಿ ನಿಲಯ ಆರಂಭಿಸಿದ ಶ್ರೀಗಳು ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಇರುವ ಬಡತನ, ಅನಕ್ಷರತೆ ಗಮನದಲ್ಲಿಟ್ಟುಕೊಂಡು ಆರಂಭಿಸಿದ್ದ ಈ ಸಂಸ್ಥೆಯಲ್ಲಿ 100ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ.
ಪೂರ್ವಾಂಚಲ ರಾಜ್ಯಗಳಾದ ಮಣಿಪುರ, ಮೇಘಾಲಯ, ತ್ರಿಪುರ, ಅಸ್ಸಾಂನ ಕಡುಬಡತನದ ಕುಟುಂಬಗಳ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡಲು 2013ರಲ್ಲಿ ವಸತಿ ನಿಲಯವನ್ನು ಶ್ರೀಗಳು ಆರಂಭಿಸಿದರು. ಪೂರ್ವಾಂಚಲ ರಾಜ್ಯದ 56 ವಿದ್ಯಾರ್ಥಿಗಳು ಈ ನಿಲಯದಲ್ಲಿ ಉಳಿದುಕೊಂಡು ವಿಜಯ ವಿಠuಲ ಹಾಗೂ ಭಗೀನಿ ಸೇವಾ ಸಮಾಜ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ.
5 ವರ್ಷ ಪೂರ್ಣ: 28 ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಸಂಸ್ಥೆ ಇಂದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆಶ್ರಯ ತಾಣವಾಗಿದ್ದು, 5 ವರ್ಷ ಪೂರೈಸಿ ಮುನ್ನಡೆಯುತ್ತಿದೆ. ಪ್ರಸ್ತುತ 56 ಪೂರ್ವಾಂಚಲ ರಾಜ್ಯದ ವಿದ್ಯಾರ್ಥಿಳು 43 ಕರ್ನಾಟಕದ ವಿವಿಧ ಭಾಗದ ವಿದ್ಯಾರ್ಥಿಗಳಿಗೆ ನೆಲೆ ನೀಡಿದೆ.
ಪೂರ್ವಾಂಚದವರಿಗೆ ಆದ್ಯತೆ: ಕಡೆಗಣಿಸಲ್ಪಟ್ಟ ರಾಜ್ಯಗಳು ಎಂಬ ಹಣೆಪಟ್ಟಿ ಹೊತ್ತಾ ಈಶಾನ್ಯ ರಾಜ್ಯಗಳಲ್ಲಿ ಬಡತನದಿಂದ ಮಕ್ಕಳು ಅನಕ್ಷರಸ್ಥರಾಗುತ್ತಿದ್ದರು. ಬಡತನವನ್ನೇ ನೆಪವೊಡ್ಡಿ ಮಕ್ಕಳನ್ನು ದುಷ್ಕೃತ್ಯಗಳಿಗೆ ಬಳಸಿಕೊಳ್ಳುವುದನ್ನು ಗಮನಿಸಿದ ಶ್ರೀಗಳು, ಅಲ್ಲಿನ ಮಕ್ಕಳಿಗೆ ಒಂದು ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಂಕಲ್ಪ ಮಾಡಿದರು.
ಬಳಿಕ ಸುತ್ತೂರು ಶ್ರೀ ಹಾಗೂ ಬಾಲಗಂಗಾಧರನಾಥ ಶ್ರೀ ಜತೆ ಚರ್ಚಿಸಿ, ಅವರಿಗೆ ಉಚಿತ ಊಟ, ವಸತಿ ಹಾಗೂ ಶಿಕ್ಷಣ ನೀಡಲು ತೀರ್ಮಾನಿಸಲಾಯಿತು. ನಂತರ ಮೂವರು ಶ್ರೀಗಳು ಈಶಾನ್ಯ ರಾಜ್ಯಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಮೂರು ಸಂಸ್ಥೆಗಳಿಂದ ತ್ರಿವಿಧ ದಾಸೋಹಕ್ಕೆ ಮುಂದಾದರು. ಇದರ ಮುಂದುವರಿದ ಭಾಗವೇ ಪೇಜಾವರ ಸಾರ್ವಜನಿಕ ವಿದ್ಯಾರ್ಥಿ ನಿಲಯ.
ಈ ವಿದ್ಯಾರ್ಥಿನಿಲಯದಲ್ಲಿ ಪೂರ್ವಾಂಚಲ ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ ನೀಡುವ ಜೊತೆಗೆ ಸ್ನಾತಕೋತ್ತರ ಶಿಕ್ಷಣದವರೆಗೂ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸಲಾಗುತ್ತಿದೆ. ಜೊತೆಗೆ ಎಲ್ಲಾ ವಿದ್ಯಾರ್ಥಿಗಳಿಗೂ ನಿತ್ಯ ಯೋಗ, ಸಂಗೀತ, ದೇವರ ನಾಮ, ಶ್ಲೋಕ, ಸ್ತೋತ್ರಗಳ ಪಠಣ ಹಾಗೂ ಕ್ರೀಡಾ ತರಬೇತಿ, ಪಾಕ ತಯಾರಿಕ ತರಬೇತಿ ನೀಡಲಾಗುತ್ತಿದೆ.
ಸರ್ಕಾರದ ಸಹಕಾರ ಮತ್ತು ಅನುದಾನವಿಲ್ಲದೇ ನಡೆಯುತ್ತಿರುವ ಪೇಜಾವರ ಸಾರ್ವಜನಿಕ ವಿದ್ಯಾರ್ಥಿ ನಿಲಯವು 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆಶ್ರಯ ನೀಡುವಷ್ಟು ಸ್ಥಳಾವಕಾಶ ಹೊಂದಿದ್ದು, ಪೇಜಾವರ ಮಠದ ನಿರ್ವಾಹಣೆಯಲ್ಲಿದೆ.
ಶ್ರೀಗಳ ಕನಸು ಈಡೇರಲಿಲ್ಲ: 2013ರಲ್ಲಿ ಬಾಲಕರಿಗಾಗಿ ಆರಂಭಿಸಿದ ಪೇಜಾವರ ಸಾರ್ವಜನಿಕ ವಿದ್ಯಾರ್ಥಿ ನಿಲಯ ನಂತರ ಅಲ್ಲಿಯೇ ಪಕ್ಕದಲ್ಲಿರುವ ಮಠದ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗಾಗಿ ವಿದ್ಯಾರ್ಥಿನಿಯರ ಸಾರ್ವಜನಿಕ ವಸತಿ ನಿಲಯ ಆರಂಭಿಸುವ ಕನಸು ಕಂಡಿದ್ದರು. ಜೂನ್ ತಿಂಗಳಲ್ಲಿ ಚಾತುರ್ಮಾಸ್ಯಕ್ಕಾಗಿ ಮೈಸೂರಿಗೆ ಬಂದಾಗ ತಮ್ಮ ಈ ಅಭಿಲಾಷೆ ವ್ಯಕ್ತಪಡಿಸಿದ್ದರು ಎಂದು ವಸತಿ ನಿಲಯದ ನಿರ್ವಹಕ ಪುಟ್ಟಣ್ಣ ಪತ್ರಿಕೆಗೆ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.