ಮೂವರು ಸುಲಿಗೆಕೋರರ ಸೆರೆ: ಮೊಬೈಲ್, ಹಣ ವಶ
Team Udayavani, Feb 15, 2021, 6:30 PM IST
ಮೈಸೂರು: ನಗರದ ಸರಸ್ವತಿಪುರಂ ಠಾಣೆಯ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಮೊಬೈಲ್ ಕಳ್ಳತನ ಮಾಡುತ್ತಿದ್ದ ಖದೀಮನೊಂದಿಗೆ ಇಬ್ಬರು ಸುಲಿಗೆಕೋರರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಮೊಬೈಲ್ ಕಳ್ಳತನ ಮಾಡುತ್ತಿದ್ದ ಕೆಜಿ ಕೊಪ್ಪಲಿನ ನಿವಾಸಿ ಅಕ್ಷಯ್ (19) ಎಂಬಾತನನ್ನು ಬಂಧಿಸಿ ಆತನಿಂದ 70 ಸಾವಿರ ರೂ. ವೌಲ್ಯದ 2 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಕುವೆಂಪುನಗರದ ನಿವಾಸಿಯೊಬ್ಬರು ಜ.23ರಂದು ರಾತ್ರಿ ಮಲಗುವಾಗ ಎರಡು ಮೊಬೈಲ್‌ಗಳನ್ನು ಕಿಟಕಿ ಪಕ್ಕದಲ್ಲಿ ಚಾರ್ಜ್ ಮಾಡಲು ಇಟ್ಟು ಮಲಗಿದ್ದು, ಬೆಳಗ್ಗೆ ಎದ್ದು ನೋಡಲಾಗಿ ಕಿಟಕಿ ತೆರೆದಿದ್ದು, ಮೊಬೈಲ್ ಕಳ್ಳತನವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅಕ್ಷಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಳ್ಳತನ ಕೃತ್ಯವೆಸಗಿರುವುದು ಪತ್ತೆಯಾಗಿದೆ.
ಸುಲಿಗೆಕೋರರಾದ ಸರಸ್ವತಿಪುರಂನ ಭರತ್(24) ಮತ್ತು ಕುವೆಂಪು ನಗರದ ನಿವಾಸಿ ಚಂದು(21) ಬಂಧಿಸಿ, ಅವರಿಂದ 8 ಸಾವಿರ ರೂ. ಮೌಲ್ಯದ 1 ಮೊಬೈಲ್, ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನಗಳು ವಶಪಡಿಸಿಕೊಳ್ಳಲಾಗಿದೆ. ಫೆ.1ರಂದು ರಾತ್ರಿ ಬ್ರಿಗೇಡ್ ವೃತ್ತದದ ಬಳಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರನ್ನು ಬೈಕ್‌ನಲ್ಲಿ ಬಂದ ಮೂವರು ಯುವಕರು ಅಡ್ಡಗಟ್ಟಿ, ಮೊಬೈಲ್ ಮತ್ತು ಪರ್ಸ್ ಕಿತ್ತುಹೊಂಡು ಹೋಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿ ಮೇರೆಗೆ ದೊಡ್ಡ ಮೋರಿ ರಸ್ತೆ ಬಳಿ ಮೊಬೈಲ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಭರತ್ ಮತ್ತು ಚಂದು ಅವರನ್ನು ವಶಕ್ಕೆ ಪಡೆದು ವಿಚಾರಣೆ ಮನಡೆಸಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. ಮತ್ತೂಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.
ಈ ಪತ್ತೆ ಕಾರ್ಯವನ್ನು ಡಿಸಿಪಿ ಗೀತಾ ಪ್ರಸನ್ನ , ಕೆ.ಆರ್. ವಿಭಾಗದ ಎಸಿಪಿ ಎಂ.ಎಸ್. ಪೂರ್ಣಚಂದ್ರ ತೇಜಸ್ವಿ ರವರ ಮಾರ್ಗದರ್ಶನದಲ್ಲಿ ಸರಸ್ವತಿಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸಿ.ತಿಮ್ಮರಾಜು, ಎಸ್‌ಐಗಳಾದ ಎಸ್.ರಾಚಯ್ಯ, ಎನ್.ಭವ್ಯ, ಸಿಬ್ಬಂದಿ ಬಸವರಾಜೆ ಅರಸ್, ರಾಘವೇಂದ್ರ, ಎಚ್.ಮಂಜುನಾಥ, ಮಂಜುನಾಥ, ಉಮೇಶ್ ಮತ್ತು ಹರೀಶ್ ಕುಮಾರ್ ಇದ್ದರು.
ಕಾರಿನಲ್ಲಿ ಬಂದು ಸರ ಕದ್ದರು! :
ಮೈಸೂರು: ಕಾರಿನಲ್ಲಿ ಬಂದ ಸರಗಳ್ಳರು, ಮಹಿಳೆಯ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ವಿವಿ ಮೊಹಲ್ಲಾದ ಉಷಾ ನಂದಿನಿ ಎಂಬವರೇ ತಮ್ಮ 120 ಗ್ರಾಂ ತೂಕದ, 2 ಲಕ್ಷ ರೂ. ವೌಲ್ಯದ ಚಿನ್ನದ ಸರವನ್ನು ಕಳೆದುಕೊಂಡವರು. ಭಾನುವಾರ ಬೆಳಗ್ಗೆ ಗಂಟೆ ಸಮಯದಲ್ಲಿ ಉಷಾ ನಂದಿನಿ ಅವರು ಕುಕ್ಕರ ಹಳ್ಳಿ ಕೆರೆ ಆವರಣದಲ್ಲಿ ವಾಯು ವಿಹಾರ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ಹಿಂಬಾಲಿಸಿಕೊಂಡು ಬಂದ ಮೂವರು, ಕೆಳಗೆ ಬೀಳಿಸಿ ಸರವನ್ನು ಕಿತ್ತುಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಖದೀಮರಿಗೆ ಬಲೆ ಬೀಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.