ಇಂದಿರಾ ಕ್ಯಾಂಟೀನ್‌ಗೆ ಎಸ್‌ಎಫ್ಸಿ ಹಣ ಬಳಕೆಗೆ ಪಾಲಿಕೆ ಒಪ್ಪಿಗೆ
Team Udayavani, Jun 29, 2018, 12:36 PM IST
ಮೈಸೂರು: ಮೈಸೂರು ನಗರ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗಳ ಆಹಾರ ಸಬ್ಸಿಡಿಗೆ ಅಗತ್ಯವಿರುವ ಹಣವನ್ನು ರಾಜ್ಯ ಹಣಕಾಸು ಆಯೋಗ(ಎಸ್‌ಎಫ್ಸಿ)ದ ಮುಕ್ತ ನಿಧಿಯಿಂದ ಬಳಸುವ ಕುರಿತು ನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಯಿತು.
ಗುರುವಾರ ಮೇಯರ್ ಭಾಗ್ಯವತಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳ ಆಹಾರ ಸಬ್ಸಿಡಿಗೆ ಅಗತ್ಯವಿರುವ ಹಣವನ್ನು ಹಂಚಿಕೆ ಮಾಡುವ ಕುರಿತು ಪಾಲಿಕೆ ಸದಸ್ಯರ ನಡುವೆ ತೀವ್ರ ಚರ್ಚೆ ನಡೆಯಿತು. ಈ ವೇಳೆ 13ನೇ ಹಣಕಾಸು ಆಯೋಗದ ಅನುದಾನವನ್ನು ಇಂದಿರಾ ಕ್ಯಾಂಟೀನ್‌ಗೆ ಬಳಸಿಕೊಳ್ಳುವ ಕುರಿತು ಮೇಯರ್ ನಿರ್ಧಾರ ಕೈಗೊಂಡರು.
ಅಭಿವೃದ್ಧಿಗೆ ಮಾತ್ರ ಬಳಸಿ: ಬಿಜೆಪಿಯ ಮ.ವಿ.ರಾಮಪ್ರಸಾದ್, 13ನೇ ಹಣಕಾಸು ಆಯೋಗದ ಹಣವನ್ನು ಇಂದಿರಾ ಕ್ಯಾಂಟೀನ್‌ಗೆ ಬಳಸಿಕೊಳ್ಳುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಮೈಸೂರು ನಗರದ ಅಭಿವೃದ್ಧಿಗಾಗಿ 13ನೇ ಹಣಕಾಸು ಆಯೋಗದಿಂದ ನೀಡಿರುವ ಹಣವನ್ನು ಬೇರೆ ಉಪಯೋಗಕ್ಕೆ ಬಳಸಲು ಅವಕಾಶ ಇದೆಯೇ?,
ಈ ಬಗ್ಗೆ ರಾಜ್ಯಮಟ್ಟದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೀರಾ? ಎಂದು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ಬಿ.ವಿ.ಮಂಜುನಾಥ್, 13ನೇ ಹಣಕಾಸು ಆಯೋಗದ ಅನುದಾನವನ್ನು ಮೈಸೂರಿನ ಅಭಿವೃದ್ಧಿಗೆ ಮಾತ್ರವೇ ಬಳಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ಕಾರಿ ಸುತ್ತೋಲೆ: ಬಿಜೆಪಿ ಸದಸ್ಯರ ಮಾತಿಗೆ ಆಕ್ಷೇಪಿಸಿದ ಕಾಂಗ್ರೆಸ್‌ನ ಅಯ್ಯೂಬ್‌ಖಾನ್, ಮೈಸೂರು ಮಹಾನಗರ ಪಾಲಿಕೆಗೆ ಎಸ್‌ಎಫ್ಸಿ ವತಿಯಿಂದ ಹಣ ನೀಡಲಾಗುತ್ತಿದ್ದು, ಇದರ ಬಳಕೆ ಕುರಿತು ಸರ್ಕಾರ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಸರ್ಕಾರವೇ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಆಯೋಗದ ಹಣವನ್ನು ಬಳಸಿಕೊಂಡರೆ ಕಾನೂನು ರೀತಿಯಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು.
ಕಾಂಗ್ರೆಸ್‌ನ ಕೆ.ಎನ್.ಶ್ರೀಕಂಠಯ್ಯ, ಇಂದಿರಾ ಕ್ಯಾಂಟೀನ್‌ಗೆ ಸ್ಥಳೀಯ ಸಂಸ್ಥೆಯಿಂದ ಕೇವಲ ತಾತ್ಕಾಲಿಕವಾಗಿ ಮಾತ್ರ ಹಣವನ್ನು ನೀಡಲಾಗುತ್ತಿದ್ದು, ಇದಕ್ಕೆ ಎಲ್ಲಾ 11 ಪಾಲಿಕೆಗಳು ಒಪ್ಪಿಗೆ ನೀಡಿವೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಹಣ ಬಂದ ನಂತರ ಅದನ್ನು ಹಿಂಪಡೆದು ನಗರದ ಅಭಿವೃದ್ಧಿಗೆ ಬಳಸಬಹುದಾಗಿದೆ ಎಂದು ತಿಳಿಸಿದರು.
ಪಾಲಿಕೆ ಆಯುಕ್ತ ಜಗದೀಶ್, ಈಗಾಗಲೇ ಜಾರಿಯಾಗಿರುವ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ತಡೆಯಲು ಸಾಧ್ಯವಿಲ್ಲ. ಅಲ್ಲದೆ ಇಂದಿರಾ ಕ್ಯಾಂಟೀನ್‌ಗೆ ಎಸ್‌ಎಫ್ಸಿ ಮತ್ತು ಪಾಲಿಕೆ ನಿಧಿಯಿಂದ ಹಣವನ್ನು ಬಳಸುವ ಬಗ್ಗೆ ಸರ್ಕಾರದ ಆದೇಶವಿದೆ ಎಂದು ಸಭೆಗೆ ತಿಳಿಸಿದರು.
ಸರ್ಕಾರಕ್ಕೆ ಪ್ರಸ್ತಾವನೆ: ನಗರದ ಕೆಸರೆ 3ನೇ ಹಂತದಲ್ಲಿರುವ ಅಶ್ರಫುಲ್ ಊಲೂಂ ಟ್ರಸ್ಟ್ ಆಸ್ತಿಯಾದ ಮದರಸಾ, ಅರೆಬಿಕ್ ಶಾಲೆ ಹಾಗೂ ನಿವೇಶನಗಳ ಮಧ್ಯದ ಪಾಲಿಕೆ ರಸ್ತೆಯನ್ನು ಟ್ರಸ್ಟ್ ಆಸ್ತಿಯ ಕೊನೆಯಲ್ಲಿ ಹಾದು ಹೋಗುವಂತೆ ಮರುಜೋಡಣೆ ಮಾಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಮ.ವಿ.ರಾಮಪ್ರಸಾದ್, ಜಾಗದ ಸ್ಥಳ ಪರಿಶೀಲನೆ ನಡೆಸಿರುವ ಅಧಿಕಾರಿಗಳಿಂದ ಮಾಹಿತಿ ನೀಡುವಂತೆ ಕೋರಿದರು. ಆದರೆ ಪಾಲಿಕೆ ಪಟ್ಟಣ ಯೋಜನೆಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ, ಪಾಲಿಕೆ ಸದಸ್ಯರ ನಡುವೆ ಚರ್ಚೆ ಏರ್ಪಟ್ಟಿತು.
ಈ ವೇಳೆ ಮಾತನಾಡಿದ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ರಾಜ್ಯ ಸರ್ಕಾರದಿಂದ ಸಿಡಿಪಿ ಆಗಿರುವುದರಿಂದ ಈ ರೀತಿಯ ನಿರ್ಣಯಗಳನ್ನು ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಸಂಬಂಧಪಟ್ಟವರಿಂದ ಸ್ಪಷ್ಟೀಕರಣ ಪಡೆದು ನಂತರ ಕ್ರಮವಹಿಸಿ, ರಸ್ತೆ, ನಿವೇಶನ, ಉದ್ಯಾನ ಮಾಡಲು ಅದರದ್ದೇ ನಿಯಮವಿದ್ದು, ಏಕಾಏಕಿ ಯಾವುದೇ ನಿರ್ಧಾರ ಮಾಡಬೇಡಿ ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಯ್ಯೂಬ್‌ಖಾನ್, ಸಂಬಂಧಪಟ್ಟವರು ಪರಿಶೀಲಿಸಿದ ಬಳಿಕವೇ ಕೌನ್ಸಿಲ್‌ನಲ್ಲಿ ವಿಷಯ ಪ್ರಸ್ತಾಪಿಸಲಾಗುತ್ತಿದ್ದು, ಏಕಾಏಕಿ ಚರ್ಚೆ ನಡೆಯುತ್ತಿಲ್ಲ. ಮದರಸಾ ಜಾಗ ಎಂದ ಮಾತ್ರಕ್ಕೆ ಬಿಜೆಪಿಯವರು ಆಕ್ಷೇಪಿಸುವುದು ಸರಿಯಲ್ಲ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಮೇಯರ್, ವಿಷಯದ ಬಗ್ಗೆ ಸಭೆಯಲ್ಲಿ ಸಂಗ್ರಹವಾದ ಅಭಿಪ್ರಾಯಗಳನ್ನು ಆಧರಿಸಿ, ಷರತ್ತಿನೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.
ಟೆಂಡರ್ ಕರೆಯುತ್ತೇವೆ: ನಗರ ಪಾಲಿಕೆ ವ್ಯಾಪ್ತಿಯ ಕಟ್ಟಡ, ಪಾರ್ಕ್, ಪಾಲಿಕೆ ಪಾರ್ಕಿಂಗ್ ಸ್ಥಳ, ವಾಣಿವಿಲಾಸ ನೀರು ಸರಬರಾಜು ಕೇಂದ್ರ ಹಾಗೂ ಇನ್ನಿಕರ ಕಡೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಭದ್ರತಾ ಸಿಬ್ಬಂದಿಗಳ ಗುತ್ತಿಗೆ ಅವಧಿ ಮುಗಿದಿದೆ. ಈ ಹಿನ್ನೆಲೆಯಲ್ಲಿ ಅಗತ್ಯವಿರುವ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲು ಟೆಂಡರ್ ಅಹ್ವಾನಿಸುವಂತೆ ಚರ್ಚಿಸಲಾಯಿತು.
ಈ ವೇಳೆ ಮಾತನಾಡಿದ ಪುರುಷೋತ್ತಮ್, ಈಗಾಗಲೇ ಹಲವು ಗುತ್ತಿಗೆ ಸಿಬ್ಬಂದಿಗಳ ಅವಧಿ ಮುಗಿದು ಟೆಂಡರ್ ಕರೆಯದಿರಲು ಕಾರಣವೇನೆಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಆಯುಕ್ತರು, ಚುನಾವಣಾ ನೀತಿ ಸಂಹಿತೆ ಕಾರಣದಿಂದ ಟೆಂಡರ್ ಕರೆಯಲು ವಿಳಂಬವಾಗಿದ್ದು, ಮುಂದೆ ಗುತ್ತಿಗೆ ಅವಧಿ ಮುಗಿಯುವ ಮೊದಲೇ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಕನಿಷ್ಠ ವೇತನ ಆಧಾರದ ಮೇಲೆ ಗುತ್ತಿಗೆ ಕರೆಯುವುದಾಗಿ ಮೇಯರ್ ಭಾಗ್ಯವತಿ ತಿಳಿಸಿದರು.
ನಾಮಕರಣ ಮುಂದಕ್ಕೆ: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ, ವೃತ್ತ ಹಾಗೂ ಉದ್ಯಾನಗಳಿಗೆ ನಾಮಕರಣ ಮಾಡುವ ಸಂಬಂಧ ಪಾಲಿಕೆ ಸದಸ್ಯರು, ಸಾರ್ವಜನಿಕರಿಂದ ಕೇಳಿಬಂದಿರುವ ಪ್ರಸ್ತಾವನೆಯ ವಿಷಯವನ್ನು ಮುಂದೂಡಲಾಯಿತು.
ಕೆ.ಎಸ್.ರಂಗಪ್ಪ ಹೆಸರು ಪ್ರಸ್ತಾಪ: ಪಾಲಿಕೆ ವ್ಯಾಪ್ತಿಯ ರಸ್ತೆ, ವೃತ್ತ ಹಾಗೂ ಉದ್ಯಾನವನಗಳಿಗೆ ನಾಮಕರಣ ಮಾಡಲು ಸಲ್ಲಿಕೆಯಾಗಿರುವ ಪ್ರಸ್ತಾವನೆಯಲ್ಲಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಹಾಸ್ಯ ಚಕ್ರವರ್ತಿ ನರಸಿಂಹರಾಜು, ಡಾ.ಸಿ.ಪಿ.ಕೃಷ್ಣಕುಮಾರ್ ಅವರ ಹೆಸರುಗಳನ್ನು ಉಲ್ಲೇಖೀಸಲಾಗಿತ್ತು.
ಪಾಲಿಕೆಯ ಕಾಂಗ್ರೆಸ್ ಸದಸ್ಯ ಜೆ.ಎಸ್. ಜಗದೀಶ್ ಪಾಲಿಕೆಯ 22ನೇ ವಾರ್ಡ್ ವ್ಯಾಪ್ತಿಯ ನಿವೇದಿತಾ ನಗರದ ಸುಬ್ಬರಾವ್ ಉದ್ಯಾನದಲ್ಲಿರುವ ರಂಗಮಂಟಪಕ್ಕೆ “ಪ್ರೊ.ಕೆ.ಎಸ್.ರಂಗಪ್ಪ ಕಲಾಮಂಟಪ’ ಎಂದು ನಾಮಕರಣ ಮಾಡುವ ಬಗ್ಗೆ ಸಲ್ಲಿಸಿದ್ದ ಪ್ರಸ್ತಾವನೆ ಎಲ್ಲರ ಗಮನ ಸೆಳೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.