ಸುಮಲತಾ ಗೆಲುವಿಗೆ ನೆರವಾಗಲು ಐಟಿ ದಾಳಿ: ಸಿಎಂ
Team Udayavani, Mar 29, 2019, 1:08 PM IST
ಮೈಸೂರು: ಆದಾಯ ತೆರಿಗೆ ದಾಳಿ ಮೂಲಕ ಬಿಜೆಪಿಯವರು ಭಯದ ವಾತಾವರಣ ಸೃಷ್ಟಿ ಮಾಡಲು ಮುಂದಾಗಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ದಾಳಿ, ಇಂತಹ ದಾಳಿಗಳಿಗೆ ನಾವು ಹೆದರುವುದಿಲ್ಲ, ಬೇಕಿದ್ದರೆ ನನ್ನ ಮನೆ ಮೇಲೂ ದಾಳಿ ಮಾಡಲಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರನ್ನು ಗುರಿಯಾಗಿಸಿ ಐಟಿ ದಾಳಿ ನಡೆಸಿರುವುದನ್ನು ವಿರೋಧಿಸಿ ಬೆಂಗಳೂರಲ್ಲಿ ಪ್ರತಿಭಟನೆ ಕೂರುತ್ತೇನೆ. ಕಾಂಗ್ರೆಸ್-ಜೆಡಿಎಸ್ ನಾಯಕರು ನನ್ನೊಂದಿಗೆ ಪಾಲ್ಗೊಳ್ಳುತ್ತಾರೆ.
ಆದಾಯ ತೆರಿಗೆ ಇಲಾಖೆ ಆಯುಕ್ತ ಬಾಲಕೃಷ್ಣನ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು, ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಅಧಿಕಾರಿಯನ್ನು ನೇಮಿಸಬೇಕು ಎಂಬ ವಿಚಾರ ಮುಂದಿಟ್ಟುಕೊಂಡು ಪ್ರತಿಭಟನೆ ಮಾಡುತ್ತೇನೆ. ದೇಶಕ್ಕೆ ಈ ವಿಚಾರ ಗೊತ್ತಾಗಲಿ ಎಂದರು.
ಸುಮಲತಾಗೆ ನೆರವು: ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಅನುಕೂಲವಾಗಲಿ ಎಂದು ಆದಾಯ ತೆರಿಗೆ ಇಲಾಖೆಯಿಂದ ದಾಳಿ ಮಾಡಿಸಿದ್ದಾರೆ. ಇಂತಹ ದಾಳಿಗಳಿಗೆ ನಾವು ಹೆದರುವುದಿಲ್ಲ. ಎಷ್ಟೇ ದಾಳಿಗಳಾದರೂ ನನ್ನ ಮಗ ನಿಖಿಲ್ ಗೆಲುವು ತಪ್ಪಿಸಲು ಸಾಧ್ಯವಿಲ್ಲ ಎಂದರು.
ಜೆಡಿಎಸ್ ಟಾರ್ಗೆಟ್: ದೇಶದಲ್ಲಿ ಎಲ್ಲೂ ಅಕ್ರಮಗಳೇ ನಡೆಯುತಿಲ್ಲಾ?, ಯಡಿಯೂರಪ್ಪ ಏನು ಸಾಚಾನಾ? ಯಡಿಯೂರಪ್ಪ ಎಷ್ಟು ದುಡ್ಡು ಮಾಡಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಶಿವಮೊಗ್ಗದಲ್ಲಿ ಬಿಜೆಪಿಯವರು ಚುನಾವಣೆಗೆ ದುಡ್ಡೇ ಖರ್ಚು ಮಾಡುತ್ತಿಲ್ವಾ? ಎಂದು ಪ್ರಶ್ನೆಗಳ ಸುರಿಮಳೆಗರೆದ ಕುಮಾರಸ್ವಾಮಿ,
ಚುನಾವಣಾ ಸಂದರ್ಭದಲ್ಲಿ ಜೆಡಿಎಸ್ ನಾಯಕರುಗಳನ್ನೇ ಗುರಿಯಾಗಿಸಿಕೊಂಡು ಐಟಿ ದಾಳಿ ಮಾಡುವ ಅಗತ್ಯ ಏನಿತ್ತು, ಶಿವಮೊಗ್ಗದಲ್ಲೂ ಐಟಿ ದಾಳಿ ಆಗಿದೆ. ದೇವೇಗೌಡರ ಆಪ್ತ ಪರಮೇಶ್ ಸಣ್ಣದೊಂದು ಅಂಗಡಿ ಇಟ್ಟುಕೊಂಡಿದ್ದಾರೆ. ಅವರನ್ನೂ ಬಿಡದೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಶಿವಮೊಗ್ಗದ ಬಿಜೆಪಿಯವರ ಮನೆ ಮೇಲೆ ಏಕೆ ದಾಳಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಯಾರ್ಯಾರ ವಿರುದ್ಧ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಬೇಕು ಎಂದು ಕರ್ನಾಟಕ ಬಿಜೆಪಿಯ ಒಬ್ಬ ವ್ಯಕ್ತಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗೆ ಪಟ್ಟಿ ಕೊಡುತ್ತಾರೆ. ಆ ಪಟ್ಟಿಯನ್ನು ಅಮಿತ್ ಶಾ ಆದಾಯ ತೆರಿಗೆ ಇಲಾಖೆ ಆಯುಕ್ತ ಬಾಲಕೃಷ್ಣನ್‌ಗೆ ರವಾನಿಸುತ್ತಾರೆ. ಆ ಪಟ್ಟಿಯ ಪ್ರಕಾರವಾಗಿ ಬಾಲಕೃಷ್ಣನ್ ದಾಳಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿದರು.
ಶಾ ಸೂಚನೆಯಂತೆ ದಾಳಿ: ಬಾಲಕೃಷ್ಣನ್ ಮೂಲಕ ಬಿಜೆಪಿ ಈ ದಾಳಿ ಮಾಡಿಸಿದೆ. ಬಿಜೆಪಿಯವರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾರು ಸಂಪರ್ಕದಲ್ಲಿದ್ದಾರೆ. ಇಲ್ಲಿಂದ ಅಮಿತ್ ಶಾಗೆ ಯಾರು ಪಟ್ಟಿ ಕಳುಹಿಸಿದ್ದರೆ ಎಂಬುದು ನನಗೆ ಗೊತ್ತಿದೆ.
ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ ನೀಚ ರಾಜಕಾರಣ ಮಾಡುತ್ತಿದೆ.
ಇನ್ನೆರಡು ತಿಂಗಳಲ್ಲಿ ನಿವೃತ್ತಿಯಾಗಲಿರುವ ಬಾಲಕೃಷ್ಣನ್‌ಗೆ ಬಿಜೆಪಿಯವರು ಸಾಂವಿಧಾನಿಕ ಹುದ್ದೆಯ ಆಸೆ ತೋರಿಸಿ ಈ ಕೆಲಸ ಮಾಡಿಸುತ್ತಿದ್ದಾರೆ. ಆತನಿಗೆ ಯಾವುದೋ ರಾಜ್ಯದ ರಾಜ್ಯಪಾಲ ಹುದ್ದೆ ನೀಡುವುದಾಗಿ ಆಸೆ ತೋರಿಸಿರಬಹುದು. ಹೀಗಾಗಿ ಬಾಲಕೃಷ್ಣನ್ ಈ ರೀತಿಯ ದಾಳಿಗಳನ್ನು ಮಾಡಿಸಿಕೊಂಡು,
ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದು ಬಾಲಕೃಷ್ಣನ್ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು. ಇಷ್ಟು ದಿನ ಆದಾಯ ತೆರಿಗೆ ಇಲಾಖೆ ದಾಳಿ ಮಾಡುವಾಗ ಸ್ಥಳೀಯ ಪೊಲೀಸರ ನೆರವು ಪಡೆಯುತ್ತಿದ್ದರು. ಆದರೆ, ಈ ಬಾರಿ ಕೇಂದ್ರದ ಭದ್ರತಾ ಪಡೆಯನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಅಸಲಿ ಡೈರಿ ಎಲ್ಲಿದೆ?: ಯಡಿಯೂರಪ್ಪ ಏನು ದುಡ್ಡೇ ಖರ್ಚು ಮಾಡದೆ ಕೈ ಮುಗಿದುಕೊಂಡು, ನರೇಂದ್ರಮೋದಿ ಸಾಧನೆ ಹೇಳಿಕೊಂಡು ಚುನಾವಣಾ ನಡೆಸುತ್ತಾರಾ? 2 ಲಕ್ಷ ಹಣ ಸಾಗಿಸಲು ಆದಾಯ ತೆರಿಗೆ ಇಲಾಖೆ ಅನುಮತಿ ಪಡೆಯಬೇಕು.
ಹೀಗಿರುವಾಗ ಶಿವಮೊಗ್ಗದಲ್ಲಿ 2 ಕೋಟಿ ರೂ. ಸಿಕ್ಕಿತು. ಅದರ ಬಗ್ಗೆ ಬಾಲಕೃಷ್ಣನ್ ಯಾವ ಮಾಹಿತಿ ಕೊಡುತ್ತಿಲ್ಲ. ಯಡಿಯೂರಪ್ಪ ಅವರ ಡೈರಿ ನಕಲಿ ಎಂದು ಈ ಬಾಲಕೃಷ್ಣನ್ ಸ್ಪಷ್ಟನೆ ಕೊಡುತ್ತಾರೆ, ಹಾಗಿದ್ದರೆ ಅಸಲಿ ಡೈರಿ ಯಾವುದು? ಯಡಿಯೂರಪ್ಪ ಡೈರಿ ಬಗ್ಗೆ ಸ್ಪಷ್ಟನೆ ನೀಡುವ ಬಾಲಕೃಷ್ಣನ್ ಬೇರೆ ಯಾವ ವಿಷಯದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ನೋಟು ಎಣಿಸುವ ಯಂತ್ರ ಸಿಗ್ತಾ?: ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎಷ್ಟು ಲೂಟಿ ಮಾಡಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. ಹಿಂದಿನ ಸರ್ಕಾರದಲ್ಲಿ ವಿಧಾನಸೌಧದಲ್ಲೇ ಒಂದೂವರೆ ಕೋಟಿ ಹಣ ಸಿಕ್ಕಿತ್ತು. ಆ ಬಗ್ಗೆ ಬಾಲಕೃಷ್ಣನ್ ಸ್ಪಷ್ಟನೆ ಕೊಟ್ಟಿದ್ದಾರೆಯೇ? ಕೆ.ಎಸ್.ಈಶ್ವರಪ್ಪ ಮನೆಯಲ್ಲಿ ನೋಟು ಎಣಿಸುವ ಯಂತ್ರ ಇಟ್ಟುಕೊಂಡಿದ್ದರು.
ಇವರೇನು ಹಗಲು ರಾತ್ರಿ ಕಷ್ಟಪಟ್ಟು ದುಡಿದು ಇಷ್ಟು ಹಣ ಸಂಪಾದಿಸಿದ್ದರಾ? ಪ್ರತಿ ದಿನ ಲೂಟಿ ಹೊಡೆಯುತ್ತಿದ್ದ ಕೋಟ್ಯಂತರ ರೂಪಾಯಿ ಹಣ ಎಣಿಸಲು ನೋಟು ಎಣಿಸುವ ಎರಡು ಯಂತ್ರ ಇಟ್ಟುಕೊಂಡಿದ್ದರಾ? ಸಚಿವ ಸಿ.ಎಸ್.ಪುಟ್ಟರಾಜು ಮನೆಯಲ್ಲಿ ನೋಟು ಎಣಿಸುವ ಯಂತ್ರ ಸಿಕ್ತಾ?, ಕುಮಾರಸ್ವಾಮಿಯ ಟನ್ ಗಟ್ಟಲೆ ದುಡ್ಡು ಸಿಕ್ತಾ? ಯಾವ ಕಾರಣಕ್ಕೆ ಇಂತಹ ದಾಳಿ ಮಾಡಿಸುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಾಳಿ ವಿರುದ್ಧ ರಾಜಕೀಯ ಹೋರಾಟ: ಯಾರು ಕಾನೂನು ಬಾಹಿರವಾಗಿದ್ದಾರೆ ಅಂಥವರ ಮನೆ ಮೇಲೆ ದಾಳಿ ಮಾಡಲಿ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಅಕ್ರಮವಾಗಿ ಎಷ್ಟು ಹಣ ಮಾಡಿದ್ದಾರೆ? ಅವರ ಮೇಲೆ ಏಕೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡುತ್ತಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಕೇಂದ್ರ ಸರ್ಕಾರ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ತಯಾರಿಲ್ಲ.
ಅವರಿಗೆ ಗೊತ್ತಿದೆ ಜನ ನಮ್ಮನ್ನು ಸೋಲಿತ್ತಾರೆ ಎಂದು ಅದರಿಂದ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳ ದುರ್ಬಳಕೆಗೆ ಮುಂದಾಗಿದ್ದಾರೆ. ಈ ಮೂಲಕ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುತ್ತೇವೆ ಅಂದುಕೊಂಡಿದ್ದರೆ ಅದು ಕನಸಿನ ಮಾತು. ಯಾವ ದಾಳಿ ಬೇಕಾದರೂ ಮಾಡಲಿ ನಾವು ಹೆದರುವುದಿಲ್ಲ. ಇದರ ವಿರುದ್ಧ ನಾವು ರಾಜಕೀಯವಾಗಿಯೇ ಹೋರಾಟ ಮಾಡುತ್ತೇವೆ ಎಂದರು.
ಏಕಾಏಕಿ 20-30 ಕಡೆ ದಾಳಿ: ಆದಾಯ ತೆರಿಗೆ ಇಲಾಖೆ ದಾಳಿ ನಡೆಸುವ ಮುನ್ಸೂಚನೆ ದೊರೆತಿದ್ದರಿಂದ ನಾನು ಬುಧವಾರ ಮಂಡ್ಯದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದೆ. ಚುನಾವಣೆ ನಾಮಪತ್ರ ಸಲ್ಲಿಕೆ ಬಳಿಕ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುವುದು ರಾಜಕೀಯ ಪ್ರೇರಿತ, ಆದಾಯ ತೆರಿಗೆ ಇಲಾಖೆ ಇರುವುದು ದೇಶದಲ್ಲಿ ಯಾರು ಅಕ್ರಮ ಹಣ ಸಂಪಾದನೆ ಮಾಡಿದ್ದಾರೆ ಅವರ ಮೇಲೆ ದಾಳಿ ಮಾಡುವುದು ಸಹಜ.
ಕಾನೂನು ವ್ಯಾಪ್ತಿಯಲ್ಲಿ ಆ ಇಲಾಖೆ ಕೆಲಸ ಮಾಡಲು ನನ್ನ ಸಹಮತ ಇದೆ. ಆದರೆ, ಇವತ್ತು ವ್ಯಕ್ತಿಗತವಾಗಿ ನಮ್ಮ ಅಭಿಮಾನಿಗಳ ಮನೆಗಳ ಮೇಲೆ ದಾಳಿ ಮಾಡಿರುವುದು, ರಾಜ್ಯ ಸರ್ಕಾರದ ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ. ಹಾಸನದ ಲೋಕೋಪಯೋಗಿ ಎಂಜಿನಿಯರ್ ಕಚೇರಿ, ಕನಕಪುರ ತಹಶೀಲ್ದಾರ್ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಇದೆಲ್ಲಾ ಹೊಸ ರೀತಿಯಲ್ಲಿ ನಡೆಯುತ್ತಿರುವ ಬೆಳವಣಿಗೆ, ಏಕಾಏಕಿ ರಾಜ್ಯದ ಸುಮಾರು 20 ರಿಂದ 30 ಕಡೆಗಳಲ್ಲಿ ದಾಳಿಯಾಗಿದೆ ಎಂದು ವಿವರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.