ಕಗ್ಗಲಿಪುರಕ್ಕೆ ಕೇರಳ ತ್ಯಾಜ್ಯ: ಗ್ರಾಮಸ್ಥರ ಆಕ್ರೋಶ
Team Udayavani, May 1, 2019, 3:00 AM IST
ತಿ.ನರಸೀಪುರ: ರಾತ್ರೋ ರಾತ್ರಿ ಕೇರಳದಿಂದ ತಂದ ಲಾರಿಗಟ್ಟಲೇ ತ್ಯಾಜ್ಯವನ್ನು ಗ್ರಾಮದಲ್ಲಿ ಸುರಿಯಲು ಯತ್ನಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ತಾಲೂಕಿನ ಕಗ್ಗಲಿಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಕೇರಳದಿಂದ ತ್ಯಾಜ್ಯ ತುಂಬಿಕೊಂಡು ಬಂದ ಮೈಸೂರಿನ ಗೌಸಿಯಾ ನಗರದ ಸಾದಿಕ್ ಎಂಬಾತ ಕಗ್ಗಲಿಪುರ ಗ್ರಾಮದ ಕೆರೆಯ ಪಕ್ಕದ ನಿವೇಶನವೊಂದರಲ್ಲಿ ಸುರಿಯಲು ಯತ್ನಿಸಿದಾಗ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಇದಕ್ಕೆ ತೀವ್ರವಾದ ವಿರೋಧ ವ್ಯಕ್ತ ಪಡಿಸಿದರು.
ಆದರೆ, ಸಾದಿಕ್ ನಿವೇಶನವನ್ನು ತಾನು ಗ್ರಾಮದ ಕಮಲಮ್ಮ ಮೊಟೇಗೌಡ ಎಂಬುವವರಿಂದ ಬಾಡಿಗೆಗೆ ಪಡೆದಿದ್ದು, ಈ ಜಾಗ ತನ್ನದೇ ಎಂದು ಹೇಳುತ್ತಿದ್ದಂತೆ ಕೆರಳಿದ ಗ್ರಾಮಸ್ಥರು ಆತನೊಂದಿಗೆ ಮಾತಿನ ಚಕಮಕಿ ನಡೆಸಿ ತ್ಯಾಜ್ಯವನ್ನು ಸುರಿಯಲು ತಡೆಯೊಡ್ಡಿದರು.
ಆದರೂ ಆತ ತನ್ನ ಹಠವನ್ನು ಬಿಡದೆ ಕಸವನ್ನು ಸುರಿಯಲೆತ್ನಿಸಿದಾಗ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಬಂದ ಬನ್ನೂರು ಠಾಣೆಯ ಪೋಲಿಸರು, ಗ್ರಾಮಸ್ಥರನ್ನು ಚದುರಿಸಿ ತ್ಯಾಜ್ಯ ತುಂಬಿದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ನೋಟಿಸ್ ಜಾರಿ: ಈ ಕುರಿತು ಪ್ರತಿಕ್ರಿಯಿಸಿರುವ ಕಗ್ಗಲಿಪುರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಂತೋಷ್, 2017ರಲ್ಲಿ ಸಾದಿಕ್ ಎಂಬಾತನಿಗೆ ಪ್ಲಾಸ್ಟಿಕ್ ಕೈಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತು.
ಆದರೆ, ಆತ ಕೇರಳದಿಂದ ತ್ಯಾಜ್ಯವಸ್ತುಗಳನ್ನು ತಂದು ಶೇಖರಣೆ ಮಾಡುತ್ತಿದ್ದು, ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೈಗಾರಿಕೆ ನಡೆಸಲು ನೀಡಲಾಗಿದ್ದ ಅನುಮತಿಯನ್ನು ರದ್ದು ಪಡಿಸಿ ಜಾಗದ ಮಾಲೀಕರಾದ ಕಮಲಮ್ಮ ಮೋಟೇಗೌಡ ಹಾಗೂ ಸ್ಥಳದ ಬಾಡಿಗೆದಾರ ಸಾದಿಕ್ ಇಬ್ಬರಿಗೂ ನೋಟಿಸ್ ಜಾರಿಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.