ಕಾರ್ಮಿಕ, ರೈತ ವಿರೋಧಿ ಕೇಂದ್ರ ಸರ್ಕಾರ
Team Udayavani, Jan 9, 2019, 9:02 AM IST
ಹುಣಸೂರು: ರೈತರು ಹಾಗೂ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉಳ್ಳವರ ಪರವಾಗಿದೆ ಎಂದು ಸಿಐಟಿಯು ಮುಖಂಡ ಬಸವರಾಜು ಕಲ್ಕುಣಿಕೆ ದೂರಿದರು.
ನಗರದ ಮುನೇಶ್ವರ ಕಾವಲ್ ಮೈದಾನದ ಎದುರಿನ ಹಳೇ ಸೇತುವೆ ಹೆದ್ದಾರಿಯಲ್ಲಿ ಮುಷ್ಕರನಿರತ ಕಾರ್ಮಿಕ ಸಂಘಟನೆಗಳನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಹಾಗೂ 18 ಸಾವಿರ ರೂ. ಕನಿಷ್ಠ ವೇತನ ನಿಗದಿಗೊಳಿಸುವ ಹಾಗೂ ಡಾ.ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರುತ್ತೇವೆಂದು ಹೇಳಿದ್ದ ಮೋದಿ ಸರಕಾರ ಇದೀಗ ಎಲ್ಲವನ್ನು ಮರೆತು ರೈತ ಮತ್ತು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಸಿಪಿಎಂ ಕಾರ್ಯದರ್ಶಿ ಜಗದೀಶ್ ಸೂರ್ಯ ಮಾತನಾಡಿ, ಎನ್‌ಡಿಎ ಸರ್ಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ದುಡಿಯುವ ವರ್ಗಕ್ಕೆ ಯಾವುದೇ ಸೌಲಭ್ಯ ಕಲ್ಪಿಸದೆ ಸುಳ್ಳುಗಳನ್ನು ಹೇಳುತ್ತಾ ಶ್ರೀಮಂತ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಮತ್ತು ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.
ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಪುಷ್ಪಾ ಮಾತನಾಡಿ, ಅಂಗನವಾಡಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸದೆ, ನೌಕರರಿಗೆ ಕನಿಷ್ಠ ವೇತನ ನೀಡದೆ ಇದೀಗ ಖಾಸಗಿಕರಣ ಮಾಡಲು ಹೊರಟಿರುವ ಸರಿಯಲ್ಲ. ಮಾತೃಪೂರ್ಣ ಯೋಜನೆಯನ್ನೂ ಕಸಿದುಕೊಳ್ಳಲು ಹೊರಟಿರುವ ಮೋದಿ ಸರಕಾರ ಕಾರ್ಮಿಕ-ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಮುಷ್ಕರದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಸಾವಿತ್ರಿ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಮಂಗಳಗೌರಮ್ಮ, ಸಿಐಟಿಯು.ಮುಖಂಡರಾದ ಶ್ರೀಪತಿಗೌಡ, ಮಲ್ಲಿಕಾರ್ಜುನ್, ರಾಜು, ಗ್ರಾಪಂ ನೌಕರರ ಒಕ್ಕೂಟದ ಅಧ್ಯಕ್ಷ ಲೋಕೇಶ್, ತಂಬಾಕು ಬೆಳೆಗಾರರ ಸಂಘದ ಅಧ್ಯಕ್ಷ ಗೋವಿಂದಯ್ಯ, ದಸಂಸ ಪುಟ್ಟಸ್ವಾಮಿ, ವೆಂಕಟೇಶ್ ಮತ್ತಿತತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.