ಸಾಲಮನ್ನಾ ಬಗ್ಗೆ ತಿಂಗಳೊಳಗೆ ಶ್ವೇತಪತ್ರ ಹೊರಡಿಸಿ
Team Udayavani, May 9, 2019, 3:00 AM IST
ಮೈಸೂರು: ಸಾಲಮನ್ನಾ ಯೋಜನೆಯಡಿ ಈವರೆಗೆ ಎಷ್ಟು ಮೊತ್ತದ ಸಾಲಮನ್ನಾ ಮಾಡಲಾಗಿದೆ? ಇದರಿಂದ ರಾಜ್ಯದ ಎಷ್ಟು ರೈತರಿಗೆ ಪ್ರಯೋಜನವಾಗಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಗ್ರಹಿಸಿದೆ.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಒಂದು ತಿಂಗಳೊಳಗೆ ಶ್ವೇತಪತ್ರ ಹೊರಡಿಸದಿದ್ದರೆ ಚಳವಳಿ ಮಾಡುವುದಾಗಿ ಎಚ್ಚರಿಸಿದರು.
ಗೊಂದಲ ಸೃಷ್ಟಿ: ಲೋಕಸಭೆ ಚುನಾವಣೆ ಪೂರ್ವದಲ್ಲಿ ಫೆ.19ರಂದು ರೈತರಿಗೆ ಸಾಮೂಹಿಕವಾಗಿ ಪತ್ರ ಬರೆದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯಸರ್ಕಾರ ಈಗಾಗಲೇ ಆರು ಲಕ್ಷ ರೈತರನ್ನು ಸಾಲದಿಂದ ಮುಕ್ತ ಮಾಡಿರುವುದಾಗಿ ತಿಳಿಸಿದ್ದಾರೆ.
ಸಾಲಮನ್ನಾ ಅನ್ವಯ ಆಗದ ರೈತರಿಗೂ ಅವರ ಪತ್ರ ಬಂದಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಸಾಲಮನ್ನಾ ವಿಷಯವನ್ನು ಜೀವಂತವಾಗಿರಿಸಿ ಗೊಂದಲ ಸೃಷ್ಟಿಸುತ್ತಿದ್ದಾರೆ.
ರೈತರ ಬೆಳೆ ಸಾಲಮನ್ನಾ ಯೋಜನೆಯಡಿ 40 ಲಕ್ಷ ರೈತರಿಗೆ ನಿರಾಳಭಾವ ಮೂಡಿಸುವ ಆಶಯ ನಮ್ಮದು ಎಂದು ಹೇಳಿದ್ದಾರೆ. ಆದರೆ, ಅವರು ಹೇಳಿದಂತೆ ಆರು ಲಕ್ಷ ರೈತರಿಗೆ ಸಾಲಮನ್ನಾ ಪ್ರಯೋಜನವಾಗಿದೆ ಎಂಬುದು ನಂಬಿಕಾರ್ಹವಲ್ಲ ಎಂದರು.
ಬ್ಯಾಂಕ್ ನೋಟಿಸ್: 48 ಸಾವಿರ ಕೋಟಿ ಬೆಳೆ ಸಾಲಮನ್ನಾ ಮಾಡುವುದಾಗಿ ಹೇಳುತ್ತಲೇ ಬಂದಿದ್ದಾರೆ. ಅಲ್ಲದೇ ರೈತರ ಇತರೆ ಸಾಲಗಳನ್ನೂ ಹಂತ ಹಂತವಾಗಿ ಮನ್ನಾ ಮಾಡುವುದಾಗಿ, ಖಾಸಗಿ ಸಾಲದಿಂದಲೂ ಋಣ ಮುಕ್ತರನ್ನಾಗಿಸುವುದಾಗಿ ಘೋಷಿಸಿದ್ದಾರೆ.
ಆದರೆ, ಈ ಘೋಷಣೆಗಳನ್ನು ಜಾರಿಗೆ ತರಲು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಇದರಿಂದ ರೈತ ಸಮುದಾಯಕ್ಕೆ ಗೊಂದಲ ಉಂಟಾಗಿದೆ. ಬ್ಯಾಂಕ್‌ಗಳು ಸಾಲ ವಸೂಲಿಗೆ ನೋಟಿಸ್ ನೀಡುತ್ತಿವೆ. ರೈತರ ಮೇಲೆ ಮೊಕದ್ದಮೆ ಹೂಡುತ್ತಿವೆ. ಜೊತೆಗೆ ಹೊಸ ಸಾಲ ನೀಡುತ್ತಿಲ್ಲ ಎಂದು ದೂರಿದರು.
ಕಂಪನಿಗಳ ದಬ್ಬಾಳಿಕೆ: ಬರಗಾಲವನ್ನು ಶಾಶ್ವತವಾಗಿ ತೊಲಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೂರದೃಷ್ಟಿಯ ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದ ಅವರು, ರೈತರ ಬೀಜ ಸ್ವಾತಂತ್ರ್ಯಕ್ಕೆ ಕೈ ಹಾಕಿರುವ ಪೆಪ್ಸಿ, ಮಾನ್ಸೆಂಟೋ ಮತ್ತಿತರೆ ಕಂಪನಿಗಳ ದಬ್ಬಾಳಿಕೆಗೆ ರೈತರು ಎಂದೂ ಹೆದರುವುದಿಲ್ಲ ಎಂದು ಎಚ್ಚರಿಸಿದರು.
ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್‌ನಲ್ಲೇ ಪೆಪ್ಸಿ ಕಂಪನಿ ಅಲ್ಲಿನ ಆಲೂಗಡ್ಡೆ ಬೆಳೆಗಾರರ ಮೇಲೆ ಮೊಕದ್ದಮೆ ಹೂಡಿ ಕಿರುಕುಳ ನೀಡುತ್ತಿರುವುದು ಕೃಷಿ ಪ್ರಧಾನ ದೇಶವಾದ ಭಾರತಕ್ಕೆ ಮಾಡಿದ ಅಪಮಾನ ಎಂದು ಖಂಡಿಸಿದರು.
ರೈತ ಸಂಘದ ಮುಖಂಡರುಗಳಾದ ಎಂ.ಎಸ್.ಅಶ್ವಥನಾರಾಯಣ ರಾಜೇ ಅರಸ್, ಹೊಸಕೋಟೆ ಬಸವರಾಜ್, ನೇತ್ರಾವತಿ, ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್, ಪುನೀತ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಬರ ನಿರ್ವಹಣೆಯಲ್ಲಿ ವಿಫಲ: ಕಳೆದ ಸಾಲಿನಲ್ಲಿ ರಾಜ್ಯದ 156 ತಾಲೂಕುಗಳಲ್ಲಿ ಸಂಪೂರ್ಣ ಬರಗಾಲ ಉಂಟಾಗಿದ್ದರಿಂದ ಜನ-ಜಾನುವಾರುಗಳ ಬವಣೆ ಹೇಳತೀರದಾಗಿದೆ. ಈ ವರ್ಷ ಕೂಡ ಮಳೆ ತಡವಾಗಿದ್ದರಿಂದ ಈಗಾಗಲೇ ಬರದ ಛಾಯೆ ಮೂಡಿದ್ದು, ರಾಜ್ಯದ ಕೆಲ ಭಾಗಗಳಲ್ಲಿ ಮುಂಗಾರು ಬೆಳೆ ಇಲ್ಲವಾಗಿದೆ.
ಈಗ ಮಳೆ ಬಿದ್ದರೂ ಹತ್ತಿ, ರಾಗಿ ಮತ್ತಿತರೆ ಬೆಳೆಗಳನ್ನು ಹಾಕಿದರೂ ಇಳುವರಿ ಕಡಿಮೆಯಾಗುತ್ತದೆ ಎಂದು ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆತಂಕ ವ್ಯಕ್ತಪಡಿಸಿದರು. ಚುನಾವಣಾ ಫಲಿತಾಂಶದ ಲೆಕ್ಕಾಚಾರದಲ್ಲಿ ಮುಳುಗಿರುವ ಜನಪ್ರತಿನಿಧಿಗಳಿಗೆ ಬರದ ಬಿಸಿ ತಟ್ಟುತ್ತಲೇ ಇಲ್ಲ.
ಕುಡಿಯುವ ನೀರಿನ ಬವಣೆ, ಕೂಲಿಗಾಗಿ ಜನ ಗುಳೆ ಹೋಗುತ್ತಿದ್ದಾರೆ. ಸಾಲದ ಬಾಧೆಯಿಂದ ರೈತರ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಲೇ ಇದೆ. ಆದರೂ ಸಮರ್ಪಕವಾಗಿ ಬರ ನಿರ್ವಹಣೆ ಮಾಡುವಲ್ಲಿ ಎಡವಿರುವ ಸರ್ಕಾರ ಜನರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಕಿಡಿಕಾರಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.