ಗಾಂಧಿ ತತ್ವ ಕೊಂದಿರುವ ವಿಚಾರ ಚರ್ಚೆಯಾಗಲಿ
Team Udayavani, Feb 17, 2020, 3:00 AM IST
ಮೈಸೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ನಿರ್ಭೀತಿಯಿಂದ ನಾಗರಿಕತೆಯನ್ನು ವಿಮರ್ಶೆಗೊಳಪಡಿಸಿ, ದೇಸಿ ನೆಲೆಗಟ್ಟಿನಲ್ಲಿ ಚಿಂತಿಸಿದ ಮೊದಲ ವ್ಯಕ್ತಿ ಎಂದು ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಹೇಳಿದರು. ರಂಗಾಯಣದಲ್ಲಿ ನಡೆಯುತ್ತಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಭಾನುವಾರ ಕಿರುರಂಗಮಂದಿರದ ಆವರಣದಲ್ಲಿ ಆಯೋಜಿಸಿದ್ದ “ಗಾಂಧಿ ಪಥ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮಹಾತ್ಮ ಗಾಂಧಿ ಪ್ರತಿ ಸವಲತ್ತನ್ನು ನಾಗರಿಕತೆಯಿಂದ ಪಡೆದು, ಅದನ್ನು ಪ್ರಶ್ನಿಸದಿರುವ ಮನೋಭಾವಕ್ಕೆ ವಿರುದ್ಧವಾಗಿ ದೇಸಿ ನೆಲಗಟ್ಟಿನಲ್ಲಿ ಎಲ್ಲವನ್ನೂ ತಾವೇ ಸಿದ್ಧಪಡಿಸಿಕೊಂಡು ಸತ್ಯ ಶೋಧನೆಗೆ ಇಳಿದರು. ಸತ್ಯ ಹೇಳುವವರಿಗೆ ಸಮರ್ಥನೆ ಬೇಕಾಗಿಲ್ಲ. ಶೋಧನೆ ಬೇಕಾಗುತ್ತದೆ. ಗಾಂಧಿ ಸತ್ಯಶೋಧನೆಯೊಂದಿಗೆ ಜೀವನ ಪ್ರಕ್ರಿಯೆ ಕಂಡುಕೊಂಡರು ಎಂದರು.
ಗಾಂಧಿ ಮಾಡಿದ ಮೊದಲ ಕೆಲಸ, ತಮ್ಮ ಬಗ್ಗೆ ತಾವೇ ವಿರುದ್ಧವಾಗಿ ಯೋಚಿಸುವುದು. ಜೊತೆಗೆ ನಾಗರಿಕತೆಗೆ ವಶವಾಗದೆ, ಪರಿಶೋಧನೆಗೆ ತೊಡಗಿಕೊಳ್ಳುವ ಕಾಯಕದಲ್ಲಿ ತೊಡಗಿದರು. ಭಕ್ತಿ, ಅಭಿಮಾನಗಳನ್ನು ಅಗ್ನಿ ಪರೀಕ್ಷೆಗೆ ಒಳಪಡಿಸಿದಾಗ ಮೌಲ್ಯಗಳಾಗುತ್ತವೆ. ಈಗ ಯಾರೆಲ್ಲ ಭಕ್ತಿಯಿಂದ ತೇಲಾಡುತ್ತಿದ್ದಾರೋ, ಅವರೆಲ್ಲರೂ ಅಗ್ನಿ ಪರೀಕ್ಷೆಗೆ ಒಳಗಾಗಲೇಬೇಕು ಎಂದು ತಿಳಿಸಿದರು.
ತನಗೆ ನೋವು ಕೊಟ್ಟ ವ್ಯಕ್ತಿಯ ನೋವನ್ನೂ ಅರಿತು ಅವರಿಗೆ ಪ್ರೀತಿ ತುಂಬಿದ ಕೆಲಸ ಗಾಂಧಿಯಿಂದಾಯಿತು. ಮಹಾಭಾರತದಲ್ಲಿ ಕರ್ಣ ಸಾರಥಿಯಾದ ಶಲ್ಯನ ಮಾತು ಕೇಳಿ ಅರ್ಜುನನ ಕೊರಳ ಬದಲು ಹೃದಯಕ್ಕೆ ಗುರಿಯಿಟ್ಟಂತೆ ಗಾಂಧಿ ತಮ್ಮ ಶತ್ರುಗಳ ಕೊರಳಿನ ಬದಲು ಹೃದಯಕ್ಕೆ ಹತ್ತಿರವಾಗಲು ಯತ್ನಿಸಿದರು. ವೈಷ್ಣವ ಜನತೋ ಅಂದರೆ ಇದೇ ಅಲ್ಲವೇ?
ಸಾಮಾಜಿಕ ಪ್ರಜ್ಞೆಯುಳ್ಳವರು ಗಾಂಧಿ-ಅಂಬೇಡ್ಕರ್, ಗಾಂಧಿ-ನೆಹರು, ಗಾಂಧಿ-ಟ್ಯಾಗೋರ್‌ರ ಚರ್ಚೆಗಳನ್ನು ಓದಬೇಕು ಎಂದು ಸಲಹೆ ನೀಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್ ಮಾತನಾಡಿ, ಪಾಶ್ಚಿಮಾತ್ಯ ಚಿಂತಕ ಕಾರ್ಲ್ಮಾರ್ಕ್ಸ್ ಮತ್ತು ನೆಹರೂ ವಾದದಿಂದಾಗಿ ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಚಿಂತನೆಗಳು ಈ ರಾಷ್ಟ್ರದಲ್ಲಿ ಮೂಲೆಗುಂಪಾಗಿವೆ.
ಸಂವಿಧಾನದಲ್ಲಿ ಅಡಕಗೊಳಿಸಿರುವ ಸಮಾಜವಾದ, ಜಾತ್ಯತೀತತೆ ಶಬ್ಧಗಳ ಬಗ್ಗೆ ಚರ್ಚೆಗಳಾಗಬೇಕು. ಟಿಪ್ಪು ಪರ ವಾದಿಸುವವರು ಖಡ್ಗ ಕೆಳಗಿಟ್ಟು ಖುರಾನ್‌ನೊಂದಿಗೆ ಮತ್ತು ಗೋಡ್ಸೆ ಪರ ವಾದಿಸುವವರು ಪಿಸ್ತೂಲ್ ಕೆಳಗಿಟ್ಟು ಭಗವದ್ಗೀತೆಯೊಂದಿಗೆ ಗಾಂಧಿ ಪಥಕ್ಕೆ ಬರಬೇಕು. ಈಗ ಗಾಂಧಿಯನ್ನು ದೈಹಿಕವಾಗಿ ಕೊಂದಿರುವ ವಿಚಾರಕ್ಕಿಂತ ಗಾಂಧಿ ತತ್ವಗಳನ್ನು ಕೊಂದಿರುವ ವಿಚಾರಗಳ ಬಗ್ಗೆ ಚರ್ಚೆಗಳಾಗಬೇಕು ಎಂದರು.
ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಯಾರೊಬ್ಬರ ಸ್ವತ್ತಲ್ಲ. ಆರ್‌ಟಿಸಿ ಬರೆದುಕೊಟ್ಟಿಲ್ಲ. ತಮ್ಮವರನ್ನಷ್ಟೇ ಸೇರಿಸಿಕೊಂಡು ಪುಂಗುವುದನ್ನು ವಿಚಾರವಾದಿಗಳು ಬಿಡಬೇಕು. ಈ ಬಹುರೂಪಿ ತೆರೆದ ವೇದಿಕೆಯಾಗಿದೆ. ಎಲ್ಲರೂ ಬಂದು ಮುಕ್ತವಾಗಿ ಚರ್ಚಿಸಬಹುದು. ಗಾಂಧಿ ಮೊಮ್ಮಗನನ್ನು ಕರೆಸಿದ ಎಂದು ಹೇಳಿಕೊಳ್ಳುವುದಲ್ಲ. ಅಥವಾ ಈ ವಿಚಾರ ಸಂಕಿರಣದಲ್ಲಿ ದೂರ ಉಳಿಯುವುದಲ್ಲ.
ನೀವಷ್ಟೇ ಹೇಳುವುದು ಸತ್ಯವಲ್ಲ. ಗಾಂಧಿಯ ಪಾತ್ರಧಾರಿಯ ಬಾಯಿಯಿಂತ ತಮ್ಮ ಬೌದ್ಧಿಕತೆಯನ್ನು ಹೇಳಿಸುವುದು ಸತ್ಯವಲ್ಲ. ನಾವು ಪ್ರಜ್ಞಾಪೂರ್ವಕವಾಗಿಯೇ ಗಾಂಧಿ ಪಥ ಪರಿಕಲ್ಪನೆಯಲ್ಲಿ ಬಹುರೂಪಿ ನಡೆಸುತ್ತಿದ್ದೇವೆ. ನಾವೂ ಕೂಡ ಗಾಂಧಿಯ ಬಗ್ಗೆ ಹೇಳಬೇಕಿದೆ. ನೀವೂ ಹೇಳಿ, ಜನರು ತೀರ್ಮಾನಿಸಲಿ ಎಂದರು. ಮುಖ್ಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಪತ್ರಕರ್ತೆ ಪ್ರೀತಿ ನಾಗರಾಜ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.