ಯಾವುದೇ ದೇಗುಲದಲ್ಲಿ ವಿಶ್ವನಾಥ್ ಪ್ರಮಾಣ ಮಾಡಲಿ
Team Udayavani, Jul 21, 2019, 3:00 AM IST
ಮೈಸೂರು: ಶಾಸಕ ಎಚ್.ವಿಶ್ವನಾಥ್ ವಿರುದ್ಧ ವಿಧಾನಸಭೆಯಲ್ಲಿ ನಾನು ಮಾಡಿರುವ ಆರೋಪಗಳಿಗೆ ಬದ್ಧನಿದ್ದೇನೆ. ನನ್ನ ಆರೋಪದಲ್ಲಿ ತಪ್ಪಿದ್ದರೆ, ಸೋಮವಾರ ವಿಧಾನಸಭೆಗೆ ಬಂದು ನಾನು ಹೇಳಿದ್ದು ಸರಿಯಲ್ಲ ಎಂದು ಸಾಬೀತುಪಡಿಸಲಿ, ರಾಜ್ಯದ ಜನರ ಕ್ಷಮೆ ಕೋರಿ ರಾಜಕೀಯ ಜೀವನದಿಂದಲೇ ನಿವೃತ್ತಿಯಾಗುವುದಾಗಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಸವಾಲು ಹಾಕಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಕಳಂಕ ರಹಿತರು ಎಂದು ಮುಂಬೈನಲ್ಲಿ ಕುಳಿತು ಹೇಳಿದರೆ ಸಾಲದು. ನಿಮಗೆ ರಾಜಕೀಯ ಪುನರ್ಜನ್ಮ ಕೊಟ್ಟ ಪಕ್ಷದ ಋಣ ತೀರಿಸುವ ಬಯಕೆ, ಆತ್ಮಸಾಕ್ಷಿ, ಮನಃಸಾಕ್ಷಿ ಇದ್ದರೆ ಸೋಮವಾರ ವಿಧಾನಸಭೆಗೆ ಬಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೋರುವ ವಿಶ್ವಾಸಮತದಲ್ಲಿ ಭಾಗಿಯಾಗಿ ಎಂದು ಹಳ್ಳಿಹಕ್ಕಿ ವಿಶ್ವನಾಥ್‌ಗೆ ಕುಟುಕಿದರು.
ವೈಯಕ್ತಿಕವಾಗಿ ಯಾರಿಂದಲೂ ಹಣ ಪಡೆದಿಲ್ಲ ಎಂದು ನಾನು ಹೇಳುತ್ತೀನಿ, ನಿಮಗೆ ಅದು ಸಾಧ್ಯನಾ ಎಂದು ಪ್ರಶ್ನಿಸಿದ ಅವರು, ನಾನು ಪ್ರಾಮಾಣಿಕ, ನೇರವಾಗಿ ಮಾತನಾಡುತ್ತೇನೆ. ಅದಕ್ಕಾಗಿ ಕೆಲವರು ನನ್ನನ್ನು ದುರಹಂಕಾರಿ ಅನ್ನುತ್ತಾರೆ. ನಿಜ ನಾನು ದುರಹಂಕಾರಿ. ಆದರೆ, ರಾಜಕೀಯ ವ್ಯಭಿಚಾರಿ ಅಲ್ಲ ಎಂದರು.
ಸಾಲ ತೀರಿಸಲು ಮುಂಬೈಗೆ: ವಿಶ್ವನಾಥ್ ಪಕ್ಷಕ್ಕೆ ಹೊರೆಯಲ್ಲ. ಅವರ ಬಗ್ಗೆ ಹೇಳಲು ಡಿಕ್Òನರಿಯಲ್ಲಿ ಪದಗಳೇ ಇಲ್ಲ. ಎಲ್ಲರಿಗೂ ಮಾರ್ಗದರ್ಶನ ಮಾಡುವ ಮಹಾನ್ ಪುಣ್ಯಾತ್ಮ. ಅವರಿಗೆ ದುಡ್ಡಿನ ಅವಶ್ಯಕತೆ ಇರಬಹುದು, ಇಲ್ಲದೇಯೂ ಇರಬಹುದು. ಆದರೆ ನನಗೆ ಸಾಲವಿದೆ ಎಂದು ನನ್ನ ಬಳಿ ಹೇಳಿಕೊಂಡಿದ್ದರು. ಹೀಗಾಗಿ ಸಾಲ ತೀರಿಸಿಕೊಳ್ಳಲು ಮುಂಬೈಗೆ ಹೋಗಿರಬಹುದು ಎಂದು ಟೀಕಿಸಿದರು.
ಹಕ್ಕುಚ್ಯುತಿ ಮಂಡಿಸಲಿ: ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ವಿಶ್ವನಾಥ್ ಹೇಳಿದ್ದಾರೆ. ವಿಧಾನಸಭೆಯಲ್ಲೇ ನಿಮ್ಮ ಬಗ್ಗೆ ಕೆಲವನ್ನು ಮಾತ್ರ ಹೇಳಿದ್ದೇನೆ. ನಿಮಗೆ ನಿಜವಾಗಿಯೂ ಮಾನ ಇದ್ದರೆ, ಸದನದಲ್ಲೇ ಹಕ್ಕುಚ್ಯುತಿ ಮಂಡಿಸಿ ನೋಡೋಣ ಎಂದು ಸವಾಲೆಸೆದ ಸಾ.ರಾ.ಮಹೇಶ್, ನಾನು ಮಾಡಿರುವ ಆರೋಪ ಸತ್ಯವೆಂದು ಯಾವುದೇ ದೇವಸ್ಥಾನಕ್ಕೆ ಕರೆದರೂ ಪ್ರಮಾಣ ಮಾಡುವೆ. ಅವರು ಇಲ್ಲವೆಂದು ಹೇಳುವುದಾದರೆ ಪ್ರಮಾಣ ಮಾಡಲಿ ಎಂದರು.
ಹಿಂಬಾಲಕರಿಗೆ ಸೀಟು: ನನ್ನ 30 ವರ್ಷದ ರಾಜಕೀಯ ಜೀವನದಲ್ಲಿ ಯಾರ ಬಗ್ಗೆಯೂ ವೈಯಕ್ತಿಕವಾಗಿ ಟೀಕೆ ಮಾಡಿಲ್ಲ. ನಮ್ಮ ಪಕ್ಷದೊಳಗೆ ಇದ್ದು, ರಾಜ್ಯಾಧ್ಯಕ್ಷರಾಗಿದ್ದರಿಂದ ಅವರು ಹೇಳಿದ ಹಿಂಬಾಲಕರಿಗೆ ಆರು ಸೀಟು ಕೊಟ್ಟಿದ್ದೆವು. ನಾನು ತಪ್ಪು ಮಾಡಿದ್ದರೆ ಅಧ್ಯಕ್ಷರಾಗಿ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡದೆ ಬಹಿರಂಗವಾಗಿ ಟೀಕೆ ಮಾಡಿದರು.
ಆಪರೇಷನ್ ಕಮಲ: ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಪೋರೇಟ್ ಹಣ ತಂದು ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ. ನನಗೂ ಅಂಥ ಆಫರ್ ಕೊಟ್ಟಿದ್ದರು. ನನಗೆ ಮಂತ್ರಿಗಿರಿನೂ ಬೇಡ, ಹಣನೂ ಬೇಡ. ಯಾವ ಆಸೆಗೆ ಹೋಗಲಿ ಅಂದಿದ್ದವರು, ಈಗ ಯಾವ ರಾಜಕೀಯ ಆಸೆಗೆ ಮುಂಬೈಗೆ ಹೋಗಿದ್ದೀರಾ? ರಾಜಕೀಯ ಶುದ್ಧ ಹಸ್ತರು, ಪ್ರಾಮಾಣಿಕರೆಂದು ಹೇಳಿಕೊಳ್ಳುವ ನೀವು ವಿಶೇಷ ವಿಮಾನದಲ್ಲಿ ಮುಂಬೈಗೆ ಹೋಗಿದ್ದು ಆಪರೇಷನ್ ಕಮಲವಲ್ಲವೇ ಎಂದು ಪ್ರಶ್ನಿಸಿದರು.
ನಾನು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ನಾನು ಪಕ್ಷದಿಂದ ಹೊರಬರಲು ಸಾ.ರಾ.ಮಹೇಶ್ ಕಾರಣ ಅಂದರು. ನಾನು ಆಕಸ್ಮಿಕವಾಗಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಕ್ಕೆ ನನ್ನನ್ನು ಬಿಜೆಪಿಯ ಹಳೆಯ ಗಿರಾಕಿ ಅಂಥ ಹೇಳಿದ್ರು. ನನಗೂ ಸ್ವಾಭಿಮಾನ ಇದ್ದ ಕಾರಣಕ್ಕಾಗಿ ಅವರ ವಿಚಾರಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ ಎಂದು ಹೇಳಿದರು.
ಉತ್ತರ ಕೊಡಬೇಕಿಲ್ಲ: ಬೀದಿಯಲ್ಲಿ ಮಾತನಾಡುವವರಿಗೆ ನಾನು ಉತ್ತರ ಕೊಡಬೇಕಿಲ್ಲ. ಕಾಂಗ್ರೆಸ್‌ನಿಂದ ಗೆದ್ದು ಈವರೆಗೆ ಪಕ್ಷಕ್ಕೆ ರಾಜೀನಾಮೆ ಕೊಡದೆ ಇರುವವರಿಂದ ನಾನು ರಾಜಕೀಯ ಪಾಠ ಕಲಿಯಬೇಕಿಲ್ಲ ಎಂದು ಎಚ್.ವಿಶ್ವನಾಥ್ ಪುತ್ರ, ಜಿಪಂ ಸದಸ್ಯ ಅಮಿತ್ ವಿ.ದೇವರಹಟ್ಟಿಗೆ ತಿರುಗೇಟು ನೀಡಿದರು. ಒಬ್ಬ ಅಧಿಕಾರಿ, ಗುತ್ತಿಗೆದಾರನಿಂದ ಹಣ ಪಡೆದಿದ್ದರೆ ಯಾವುದೇ ವೇದಿಕೆಯಲ್ಲಿ ಹೇಳಲಿ ಎಂದು ಸವಾಲು ಹಾಕಿದರು.
ವಿಶ್ವಾಸ ಖಚಿತ: ವಿಧಾನಸಭೆಯಲ್ಲಿ ಸೋಮವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತ ಸಾಬೀತು ಮಾಡುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ.ಯಾವ ರೀತಿ ವಿಶ್ವಾಸ ಪಡೆಯುತ್ತೇವೆ ಎಂಬುದನ್ನು ಸೋಮವಾರದವರೆಗೆ ಕಾದು ನೋಡಿ, ಅದನ್ನೆಲ್ಲ ಬಹಿರಂಗವಾಗಿ ಹೇಳಲಾಗುವುದಿಲ್ಲ ಎಂದು ಕುತೂಹಲ ಮೂಡಿಸಿದರು.
ಮುಂದೆ ಮತ್ತಷ್ಟು ವಿಷಯ ಬಹಿರಂಗಪಡಿಸುವೆ: ನಿಜ ನಾನು ಡೆವಲಪರ್. ನನಗೂ ವ್ಯವಹಾರ ಇದೆ. ನಾನು ಚುನಾವಣೆಯಲ್ಲಿ ಒಮ್ಮೆ ಸೋತು, ಸತತ ಮೂರು ಬಾರಿ ಗೆದ್ದಿದ್ದೇನೆ. ನೀವು ಐದು ಬಾರಿ ಗೆದ್ದು, ನಾಲ್ಕು ಬಾರಿ ಸೋತಿದ್ದೀರಾ? ನನಗೆ ವ್ಯವಹಾರ ಇದೆ. ನಿಮಗೆ ಏನಿದೆ ವ್ಯವಹಾರ? 9 ಚುನಾವಣೆಗೆ ಹಣ ಎಲ್ಲಿಂದ ಬಂತು ಹೇಳಲಿ ನೋಡೋಣ? ರಾಜಕೀಯವಾಗಿ ಪುನರ್ಜನ್ಮ ಕೊಟ್ಟ ಜೆಡಿಎಸ್‌ನ್ನು ಎಂದಿಗೂ ಮರೆಯಲಾರೆ ಎಂದಿದ್ದ ವಿಶ್ವನಾಥ್ ಅವರ ಮತ್ತಷ್ಟು ವಿಚಾರಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ತಿಳಿಸಿದರು.
ಜಿಟಿಡಿ ಬೇಡವೆಂದರೂ ವಿಶ್ವನಾಥ್ ಪರ ನಿಂತೆ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇಂಥಾ ಪರಿಸ್ಥಿತಿ ಬರಲು ಪರೋಕ್ಷವಾಗಿ ನಾನೂ ಕಾರಣನಾಗಿದ್ದೇನೆ. ಜಿ.ಟಿ.ದೇವೇಗೌಡ ಸೇರಿ ಅನೇಕರು ಎಚ್.ವಿಶ್ವನಾಥ್ ಪಕ್ಷಕ್ಕೆ ಬೇಡವೆಂದು ಹೇಳಿದ್ದರು. ಹುಣಸೂರು ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅಥವಾ ಹರೀಶ್‌ಗೌಡರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಆದರೆ, ನಾನು ವಿಶ್ವನಾಥ್ ಪರವಹಿಸಿದ್ದೆ. ನಾನು ಅಂದೇ ಬೇಡ ಅಂದಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸಾ.ರಾ. ಮಹೇಶ್ ಬೇಸರ ವ್ಯಕ್ತಪಡಿಸಿದರು.
ಹುಣಸೂರು ಕ್ಷೇತ್ರದ ಶಾಸಕರಾದ ಮೇಲೆ ಆಡಳಿತ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ನಾನು ಜಾತೀವಾದಿಯಾಗಿದ್ದರೆ ವಿಶ್ವನಾಥ್‌ಗೆ ಪಕ್ಷದ ಅಧ್ಯಕ್ಷ ಸ್ಥಾನ ಕೊಡುವುದು ಬೇಡ ಅನ್ನಬಹುದಾಗಿತ್ತು. ಆದರೆ, ನಾನು ಅಂತಹ ಕೆಲಸ ಮಾಡಿಲ್ಲವೆಂದು ವಾಗ್ಧಾಳಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.