ಸಮಾಜಕ್ಕೆ ಕೊಡುಗೆ ನೀಡುವ ಕೆಲಸವಾಗಲಿ
Team Udayavani, May 26, 2019, 3:00 AM IST
ಮೈಸೂರು: ಮನುಷ್ಯ ಹುಟ್ಟಿದ ಮೇಲೆ ಭಗವಂತನ ಸೇವೆ ಮಾಡುವ ಮೂಲಕ ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣಧಾಮದ ರಜತ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮೈಸೂರು ನಗರಕ್ಕೆ ಕರಾವಳಿ ಭಕ್ತರು ನೀಡಿರುವ ಕೊಡುಗೆಗಳಲ್ಲಿ ಶ್ರೀ ಕೃಷ್ಣಧಾಮವೂ ಒಂದು. ಸಂಸ್ಕೃತಿ, ಧಾರ್ಮಿಕ ಸಂಸ್ಕಾರ, ಆಚಾರ ಪದ್ಧತಿಗಳನ್ನು ಪ್ರಸಾರ ಮಾಡುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಕೆಂಪೇಗೌಡರು ಮೈಸೂರು ಮುಡಾ ಅಧ್ಯಕ್ಷರಾಗಿದ್ದಾಗ ಎರಡು ಸ್ಥಳಗಳಲ್ಲಿ ನಿವೇಶನವನ್ನು ನೀಡಿದರು.
ಒಂದು ಸ್ಥಳದಲ್ಲಿ ವಿಜಯ ವಿಠ್ಠಲ ವಿದ್ಯಾ ಸಂಸ್ಥೆ ನಿರ್ಮಾಣಗೊಂಡು ಜ್ಞಾನವನ್ನು ಪಸರಿಸಿದರೆ, ಮತ್ತೂಂದು ಸ್ಥಳದಲ್ಲಿ ಶ್ರೀ ಕೃಷ್ಣಧಾಮ ಸಮಾಜಕ್ಕೆ ಭಕ್ತಿಯನ್ನು ಪಸರಿಸುತ್ತಿದೆ. ಭಕ್ತಿ ಮತ್ತು ಜ್ಞಾನ ಸಮಾಜದ ಎರಡು ಕಣ್ಣುಗಳಿದ್ದಂತೆ ಎಂದರು.
ಸಂಸ್ಥೆಗೆ ವಯಸ್ಸಾದಂತೆ ಮೃತ್ಯುವಿನ ಭಯವಿರುವುದಿಲ್ಲ. ಬದಲಿಗೆ ಧೈರ್ಯ, ಹುಮ್ಮಸ್ಸು ಮತ್ತು ಅನುಭವ ಹೆಚ್ಚುತ್ತದೆ. ಜೊತೆಗೆ ಚಿರಂಜೀವಿಯಾಗಿ ಬೆಳೆಯುತ್ತಿರುತ್ತದೆ. ದೇವರ ಅನುಗ್ರಹ ಮತ್ತು ಮಾನವನ ಪ್ರಯತ್ನ ಇದ್ದರೆ ಮಾತ್ರ ಸಮಾಜದಲ್ಲಿ ಏಳಿಗೆ ಹಾಗೂ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಾನವನೆಂಬ ನಾವಿಕನಿಗೆ ದೀಪದ ಕಂಬಗಳಂತೆ ದಿಕ್ಕು ತೋರಿಸಲು ದೇಗುಲ, ಧಾರ್ಮಿಕ ಕೇಂದ್ರಗಳು, ಮಠ ಮಾನ್ಯಗಳು ಅಗತ್ಯವಾಗಿದೆ. ಇವುಗಳು ಮನುಷ್ಯನನ್ನು ಸರಿಯಾದ ದಾರಿಗೆ ಕೊಂಡೊಯ್ಯುತ್ತವೆ. ಮನುಷ್ಯ ಈ ಭೂಮಿಯಲ್ಲಿ ಹುಟ್ಟಿದ ಮೇಲೆ ಭಗವಂತನ ಆರಾಧನೆ, ಸೇವೆ ಮಾಡುವ ಮೂಲಕ ಸಮಾಜಕ್ಕೆ ಯಾವ ರೂಪದಲ್ಲಾದರೂ ಒಂದು ಕೊಡುಗೆ ನೀಡಬೇಕು ಎಂದರು.
ನಮಗೆ ಆಧ್ಯಾತ್ಮದ ಜೊತೆಗೆ ಆಧುನಿಕ ಶಿಕ್ಷಣವೂ ಅಗತ್ಯ. ಎಲ್ಲಾ ಭಾಷೆ, ಎಲ್ಲಾ ವಿದ್ಯೆಗಳು ಬೇಕು. ಭಾರತೀಯನ ಹೃದಯ ಅರಳಲು ಆಧ್ಯಾತ್ಮಿಕ ಶಿಕ್ಷಣದಿಂದ ಅರಳಲು ಮಾತ್ರ ಸಾಧ್ಯ ಎಂದು ಹೇಳಿದರು.
ವ್ಯಾಸರಾಜ ಮಠದ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಮಾತನಾಡಿ, ಒಂದು ಸಂಸ್ಥೆ ಪ್ರಗತಿ ಮತ್ತು ಏಳಿಗೆಯನ್ನು ಸಾಧಿಸಲು ಸಂಸ್ಥೆಯ ಸ್ಥಾಪನೆ ಯಾರಿಂದ, ಯಾವ ಹಿನ್ನೆಲೆಯಲ್ಲಿ ಆಯಿತು ಎಂಬುದು ಮುಖ್ಯ. ಇದರೊಟ್ಟಿಗೆ ಸಂಸ್ಥೆಯ ಕಾರ್ಯಕರ್ತರಲ್ಲಿ ವಿವೇಕ, ಮುಂದಿನ ನಡೆ ಬಗ್ಗೆ ದೂರ ದೃಷ್ಟಿ, ಹೊಂದಾಣಿಕೆಯ ಮನೋಭಾವವೂ ಮುಖ್ಯವಾಗಿರುತ್ತದೆ ಎಂದರು.
ಶ್ರೀ ಕೃಷ್ಣ ಟ್ರಸ್ಟ್‌ನ ಉಪಾಧ್ಯಕ್ಷ ಪಿ. ಜಯರಾಮ ಭಟ್, ಜೆ.ಎಲ್. ಅನಂತ ತಂತ್ರಿ, ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ ಭಟ್, ಎಚ್.ಬಿ. ರಮಾಕಾಂತ್, ಶ್ರೀ ಕೃಷ್ಣ ಮಿತ್ರಮಂಡಳಿ ಅಧ್ಯಕ್ಷ ಪಿ.ವಿ. ನಾಗೇಶ್, ಉಪಾಧ್ಯಕ್ಷ ರವಿಶಾಸ್ತ್ರಿ ಸೇರಿದಂತೆ ಮತ್ತಿತರರು ಇದ್ದರು.
ನಮ್ಮಲ್ಲಿ ಶಿಕ್ಷಣವೇ ಬೇರೆ, ಆಧ್ಯಾತ್ಮವೇ ಬೇರೆ ಎಂಬ ಜಿಜ್ಞಾಸೆಗಳಿವೆ. ಆದರೆ ಭಾರತೀಯ ಪರಂಪರೆ ಮತ್ತು ತತ್ವಶಾಸ್ತ್ರದಲ್ಲಿ ಆಧ್ಯಾತ್ಮ ಮತ್ತು ಶಿಕ್ಷಣ ಎರಡಕ್ಕೂ ಅವಿನಾಭಾವ ಸಂಬಂಧವಿದೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೇ, ಆಧ್ಯಾತ್ಮಿಕ ಪ್ರಪಂಚದತ್ತ ನಾವುಗಳು ವಾಲಬೇಕಿದೆ. ನಮ್ಮ ಪರಂಪರೆ ಮತ್ತು ಆಧ್ಯಾತ್ಮಿಕ ಶ್ರೀಮಂತಿಕೆ ಇಂತಹ ಧಾರ್ಮಿಕ ಸಂಸ್ಥೆಗಳಿಂದ ಹೆಚ್ಚಿದೆ.
-ಪ್ರೊ.ಜಿ. ಹೇಮಂತ ಕುಮಾರ್, ಮೈಸೂರು ವಿವಿ ಕುಲಪತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.