ಮದ್ಯವರ್ಜನ ಶಿಬಿರ: ಹೊಸ ಜೀವನಕ್ಕೆ ಕಾಲಿಟ್ಟ 72 ಮಂದಿ
Team Udayavani, Jan 14, 2020, 3:00 AM IST
ಮೈಸೂರು: ಕುಡಿತಕ್ಕೆ ದಾಸರಾಗಿ ಸಮಾಜದಲ್ಲಿ ನಿಂದನೆಗೆ ಗುರಿಯಾಗಿದ್ದವರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಮದ್ಯವರ್ಜನ ಶಿಬಿರದ ಮೂಲಕ ಕುಡಿತದ ಚಟ ಬಿಟ್ಟು ಹೊಸ ಜೀವನಕ್ಕೆ ಕಾಲಿಟ್ಟರು.
ಟ್ರಸ್ಟ್ ವತಿಯಿಂದ ಜಯಲಕ್ಷ್ಮೀಪುರಂನ ಶ್ರೀಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಮೈಸೂರು ತಾಲೂಕು ವ್ಯಾಪ್ತಿಯ ಮತ್ತು ನಗರದ ಕೆಲ ಭಾಗದಲ್ಲಿ ಮದ್ಯವ್ಯಸನಕ್ಕೆ ಬಲಿಯಾದವರಿಗೆ ಕುಡಿತ ಬಿಡಿಸಲು ಆಯೋಜಿಸಲಾಗಿದ್ದ ಏಳು ದಿನಗಳ 1455ನೇ ಮದ್ಯವರ್ಜನ ಶಿಬಿರದಲ್ಲಿ ಭಾಗಿಯಾದವರು ಚಟದಿಂದ ಹೊರಬಂದು ಹೊಸಜೀವನ ಆರಂಭಿಸಿದರು.
ಒಂದು ವಾರ ನಡೆದ ಶಿಬಿರದಲ್ಲಿ 72 ಮಂದಿ ಭಾಗವಹಿಸಿದ್ದರು. ಯೋಗ, ಪ್ರಾರ್ಥನೆ, ಭಜನೆ, ಮನಃಪರಿವರ್ತನೆಗಾಗಿ ಕೌನ್ಸೆಲಿಂಗ್, ಶಿಬಿರದ ಮೂಲಕ ಕುಡಿತ ಬಿಟ್ಟ ಹೊಸ ಜೀವನ ಸಮಿತಿ ಸದಸ್ಯರ ಅನಿಸಿಕೆ, ಕೌಟುಂಬಿಕ ಸಲಹೆ, ಸಾಂಸ್ಕೃತಿಕ ಕಾರ್ಯಕ್ರಮ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಹಾಗೂ ಔಷಧಿ ನೀಡಿ ಅವರ ಮನಃಪರಿವರ್ತನೆ ಮಾಡಲಾಯಿತು.
ಪ್ರಜ್ಞಾಹೀನ ಸ್ಥಿತಿಯಲ್ಲಿ ಶಿಬಿರಕ್ಕೆ ಕರೆತಂದವರಲ್ಲಿ ಕೆಲವರು ವಾಸ್ತವತೆಗೆ ಮರಳಿದ್ದಾರೆ. ತಮ್ಮ ಮಿಂಚಿ ಹೋದ ಕಾಲ ಮರೆತು ಹೊಸ ಜೀವನ ಆರಂಭಿಸುವ ತವಕದಲ್ಲಿದ್ದಾರೆ. ಮುಂದೆ ಈ ರೀತಿಯ ತಪ್ಪು ಮಾಡುವುದಿಲ್ಲ, ಕುಡಿತಕ್ಕೆ ಬಲಿಯಾಗುವುದಿಲ್ಲ, ತಂದೆ-ತಾಯಿ, ಪತ್ನಿ -ಮಕ್ಕಳನ್ನು ಕಣ್ಣೀರು ಹಾಕಿಸುವುದಿಲ್ಲ ಎಂದು ದೇವರಲ್ಲಿ ಸಂಕಲ್ಪ ಮಾಡಿ ಹೊಸ ಜೀವನಕ್ಕೆ ಕಾಲಿರಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಕುಡಿತದ ದಾಸ್ಯಕ್ಕೆ ಒಳಗಾಗಿ ಸಮಾಜದಲ್ಲಿ ಅತ್ಯಂತ ನಿಕೃಷ್ಟವಾದ ಜೀವನ ನಡೆಸಿದ್ದೀರಿ, ಮುಂದಿನ ದಿನಗಳಲ್ಲಿ ಉತ್ತಮ ಜೀವನ ನಡೆಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್. ಹರ್ಷ, ಅಶೋಕ್‌ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮೈಸೂರು ತಾಲೂಕು ಯೋಜನಾಧಿಕಾರಿ ಕೆ.ಆನಂದ, ಭಾಸ್ಕರ್, ಮೇಲ್ವಿಚಾರಕರಾದ ಮಂಜುನಾಥ್, ವಲಯದ ಸೇವಾಪ್ರತಿನಿಧಿಗಳು ಹಾಜರಿದ್ದರು.
ಸರ್ಕಾರಗಳೇ ಬಡಜನರ ಶತ್ರು: ಸರ್ಕಾರಗಳೇ ಬಡಜನರ, ಕೂಲಿ ಕಾರ್ಮಿಕರ ಶತ್ರು. ಬದುಕಲು ಎಲ್ಲಾ ಯೋಜನೆ ಜಾರಿಗೆ ತರುವ ಸರ್ಕಾರ, ಮದ್ಯದಂಗಡಿ ತೆರೆದು, ಮಾರಾಟಕ್ಕೆ ಪರವಾನಗಿ ನೀಡಿ ಬಡವರ ರಕ್ತ ಹೀರುತ್ತಿದೆ. ಹಾಗಾಗಿ ಸರ್ಕಾರ ಜನ ಸಾಮಾನ್ಯರ ಬಗ್ಗೆಯೂ ಚಿಂತಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ.ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ ತಿಳಿಸಿದರು. ಜಿಲ್ಲೆಯಲ್ಲಿ ಈವರೆಗೆ 39 ಮದ್ಯವರ್ಜನ ಶಿಬಿರ ಆಯೋಜಿಸಿದ್ದು, 3,500 ಮಂದಿ ವ್ಯಸನಮುಕ್ತರಾಗಿ ಸುಂದರ ಬದುಕು ಕಟ್ಟಿಕೊಂಡು ಸಂತೋಷ, ಸಮೃದ್ಧ ಬದುಕನ್ನು ನಡೆಸುತ್ತಿದ್ದಾರೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.