Piriyapatna ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೆ.ವೆಂಕಟೇಶ್
ಕೆರೆ ತುಂಬಿಸುವ ಯೋಜನೆ ಮಂದಗತಿಯಲ್ಲಿ
Team Udayavani, Jun 7, 2023, 8:26 PM IST
ಪಿರಿಯಾಪಟ್ಟಣ: ರೈತರ ಕೃಷಿ ಚಟುವಟಿಕೆ ಹಾಗೂ ಕಾವೇರಿ ಕುಡಿಯವ ನೀರನ್ನು ಜನತೆಗೆ ಒದಗಿಸಬೇಕು ಎಂಬ ಉದ್ದೇಶದಿಂದ 150 ಕೆರೆಗಳಿಗೆ ನೀರು ತುಂಬಿಸುವ ಐತಿಹಾಸಿಕ ಯೋಜನೆಯನ್ನು ಅವಧಿ ಮುಗಿದರೂ ಅಧಿಕಾರಿಗಳು ಪೂರ್ಣಗೊಳಿಸದಿರುವುದು ಬೇಸರ ತಂದಿದೆ ಎಂದು ಪಶುಪಾಲನಾ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತು ಕಾವೇರಿ ನಿಗಮದ ಅಧಿಕಾರಿಗಳಿಗಾಗಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ರಾಜ್ಯದ ಅತಿದೊಡ್ಡ ಏತ ನೀರಾವರಿ ಯೋಜನೆಗಳಲ್ಲಿ ಈ ಯೋಜನೆಯೂ ಒಂದು. ಕರಡಿಲಕ್ಕನ ಕೆರೆ ಏತ ನೀರಾವರಿ ಯೋಜನೆಯನ್ನು 1986ರಲ್ಲಿ ಮಾಡಿಸಿದ್ದೆ ಈಗ ಮತ್ತೆ 300 ಕೋಟಿ ಖರ್ಚು ಮಾಡಿ 150 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡುವ ತಾಲೂಕಿನ ಜನರ ಮತ್ತು ರೈತರ ಬಹುದಿನಗಳ ಬೇಡಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರದಿಂದ ಈಡೇರುತ್ತಿರುವುದು ನನ್ನ ಭಾಗ್ಯ ಎಂದರು.
2017-18 ನೇ ಸಾಲಿನಲ್ಲಿ ತಾಲೂಕಿನ ರೈತರು ಹಾಗೂ ಸಾರ್ವಜನಿಕರಿಗೆ ಕಾವೇರಿ ನೀರನ್ನು ಒದಗಿಸಲು ಈ ಯೋಜನೆಯನ್ನು 18 ತಿಂಗಳಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಕರೆ ತಂದು ಶಂಕುಸ್ಥಾಪನೆ ನೆರವೇರಿಸಿದ್ದೆ, ಆದರೆ ಈ ಯೋಜನೆ ಹಿಂದಿನ ಶಾಸಕ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ನಿರುತ್ಸಾಹದಿಂದ ಈ ಯೋಜನೆ ಅಳ್ಳ ಹಿಡಿದೆ ಆದ್ದರಿಂದ ಕೂಡಲೇ ಈ ಯೋಜನೆಗೆ ವೇಗ ಸಿಗುವಂತಾಗಿ ನಮ್ಮ ರೈತರಿಗೆ ಇದರ ಉಪಯೋಗ ಸಿಗುವಂತಾಗಬೇಕು ಆದ್ದರಿಂದ ಅಧಿಕಾರಿಗಳು ಇಂದಿನಿಂದಲೇ ಕೆಲಸ ಪುನರಾರಂಭಿಸಬೇಕು ಅದಕ್ಕಾಗಿ ಈ ಬಗ್ಗೆ ಪ್ರತಿದಿನ ನನಗೆ ಮಾಹಿತಿ ನೀಡಬೇಕು ಎಂದು ಎಚ್ಚರಿಸಿದ ಅವರು, ನಾನು ಈ ಹಿಂದೆ ಕರಡಿಲಕ್ಕನ ಕೆರೆ ಏತ ನೀರಾವರಿ ಯೋಜನೆಯನ್ನು ಜಾರಿಗೆ ತಂದ ಪರಿಣಾಮ ತಾಲೂಕಿನ ಅರ್ಧಭಾಗದಷ್ಟು ಹಳ್ಳಿಗಳು ಬೇಸಿಗೆಯಲ್ಲಿಯೂ ನೀರಿನ ತೊಂದರೆ ಇಲ್ಲದಂತೆ ಸುಖವಾಗಿದೆ. ಆದರೆ ಉಳಿದ ಅರ್ಧದಷ್ಟು ಹಳ್ಳಿಗಳು ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ ಎದುರಿಸುತ್ತಿದ್ದವು ಹಾಗಾಗಿ ರೂ.300 ಕೋಟಿ ಅನುದಾನ ತಂದು 133 ಕೆರೆಗಳು 17 ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಆರಂಭಿಸಿ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಉದ್ದೇಶ ಹೊಂದಿದ್ದೆ. ಈ ಬಾರಿ ಮುಂಗಾರು ಮಳೆ ಇನ್ನೂ ಪ್ರಾರಂಭವಾಗಿಲ್ಲ, ಈಗಾಗಲೇ ತಾಲೂಕಿನ ಹಲವಾರು ಕೆರೆಗಳು ಬತ್ತಿಹೋಗಿ ರೈತರು ಮತ್ತು ಜನಜಾನುವಾರುಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದನ್ನು ಮನಗಂಡ ಅಧಿಕಾರಿಗಳು ಶೀಘ್ರವಾಗಿ ಕೆಲಸ ಮುಗಿಸಬೇಕು ಜುಲೈ ತಿಂಗಳ 20 ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಕರೆ ತಂದು ಅವರಿಂದಲೇ 150 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಯ ಉದ್ಘಾಟನೆ ನೆರವೇರಿಸಬೇಕು ಎಂದರು.
ಯೋಜನೆಯ ವಿವರ
ತಾಲೂಕಿನ ಮುತ್ತಿನ ಮುಳುಸೊಗೆ ಗ್ರಾಮದ ಬಳಿ ಕಾವೇರಿ ನದಿಯಿಂದ ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಪಿರಿಯಾಪಟ್ಟಣ ತಾಲೂಕಿನ ಕೆಲವು ಪ್ರದೇಶ ಈ ಹಿಂದೆ ಬರಪೀಡಿತವಾಗಿದ್ದು, ಸುಮಾರು 79 ಗ್ರಾಮಗಳ ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವುದು ಕಂಡುಬರುತ್ತದೆ. ಪಿರಿಯಾಟ್ಟಣ ತಾಲೂಕಿನ ಸ್ವಲ್ಪ ಭಾಗವು ಅರೆಮಲೆನಾಡು ಪ್ರದೇಶವಾಗಿದ್ದರೂ ಸಹ ಕೆಲವು ಹಳ್ಳಿಗಳಲ್ಲಿ ಮಳೆಯ ಕೊರತೆ ಹಾಗೂ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಾಗಿರುತ್ತದೆ. ಈ ಭಾಗದಲ್ಲಿ ಸರಕಾರವು ಹಲವಾರು ಕೊಳವೆ ಬಾವಿಗಳನ್ನು ಕೊರೆಸಿದ್ದರೂ ಸಹ ನೀರಿಕ್ಷಿತ ನೀರಿನ ಪ್ರಮಾಣ ದೊರಕುತ್ತಿಲ್ಲ. ಅಲ್ಲದೇ ಖಾಸಗಿ ಕೊಳವೆ ಬಾವಿಗಳು ಅಂತರ್ಜಲದ ಕೊರತೆಯಿಂದ ಬತ್ತಿಹೋಗುತ್ತಿದೆ.
ಈ ಪರಿಸ್ಥಿತಿಯನ್ನು ಅವಲೋಕಿಸಿದ ಕೆ.ವೆಂಕಟೇಶ್ ರವರು ಸದರಿ ಗ್ರಾಮಗಳ ವ್ಯಾಪ್ತಿಯ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಹಾಗೂ ಇತ್ಯಾದಿ ಪೂರೈಕೆಗಳ ಸೌಲಭ್ಯ ಕಲ್ಪಿಸುವ ಪ್ರಯುಕ್ತ ಪಿರಿಯಾಪಟ್ಟಣ ತಾಲೂಕಿನ ಒಳನಾಡು ಪ್ರದೇಶ ವ್ಯಾಪ್ತಿಯಲ್ಲಿ ಬರುವ 79 ಗ್ರಾಮಗಳ ಕೆರೆಗಳಿಗೆ ಕಾವೇರಿ ನದಿಯಿಂದ ಸುಮಾರು 133 ಕೆರೆ ಮತ್ತು 17 ಕಟ್ಟೆಗಳು ಸೇರಿ 150 ಕೆರೆಗಳಿಗೆ ನೀರು ತುಂಬಿಸಲು ಮುಂದಾಗಿದ್ದರು.
0.828 ಟಿ.ಎಂ.ಸಿ ನೀರು ಬಳಕೆ
ಈ ಯೋಜನೆಯ ಪ್ರಕಾರ ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳುಸೊಗೆ ಗ್ರಾಮದ ಬಳಿ ಕಾವೇರಿ ನದಿಯಿಂದ ಮಳೆಗಾಲದ ಸಮಯದಲ್ಲಿ (ಸುಮಾರು ಮೂರುವರೆ ತಿಂಗಳು) ಏರು ಕೊಳವೆ ಮೂಲಕ ನೀರೆತ್ತಿ, ದೇಪೂರ ಗ್ರಾಮದ ಯೋಜಿತ ವಿತರಣಾ ತೊಟ್ಟಿ ನಂತರ ಎಡಭಾಗದ ಮತ್ತು ಬಲಭಾಗದ ಗುರುತ್ವಾಕರ್ಷಣೆಯ ಪೈಪ್‌ಲೈನ್ ಮುಖಾಂತರ 150 ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಸುಮಾರು 0.828 ಟಿ.ಎಂ.ಸಿ (95 ಕ್ಯೂಸೆಕ್ಸ್) ನೀರು ಯೋಜನೆಗೆ ಬೇಕಾಗುತ್ತದೆ. ಈ 0.828 ಟಿ.ಎಂ.ಸಿ ನೀರನ್ನು ಕಾವೇರಿ ನದಿಯಿಂದ ತೆಗೆದುಕೊಳ್ಳಲು ಅನುಮತಿ ಪಡೆಯಲಾಗಿದೆ.
11.464 ಮೀಟರ್ ಕಾಲುವೆ
ಮುತ್ತಿನ ಮುಳ್ಳುಸೋಗೆ ಗ್ರಾಮದಿಂದ ಆರಂಭವಾಗಿ ಬಲದಂಡೆ ಮತ್ತು ಎಡದಂಡೆಗಳನ್ನು ನಿರ್ಮಿಸಿಕೊಂಡು 125 ಕೀ.ಮಿ ಉದ್ದದ ಈ ಯೋಜನೆಗಾಗಿ 11.464 ಮೀಟರ್ ನೀರಿನ ಕಾಲುವೆ ನಿರ್ಮಾಣವಾಗಲಿದೆ. 100 ಅಡಿ ಎತ್ತರದಿಂದ ಕೆರೆಗಳಿಗೆ ಕುಡಿಯುವ ನೀರು ತುಂಬಿಸಲಾಗುತ್ತದೆ. ಇದರಿಂದ ತಾಲೂಕಿನ ಕೆಲವು ಉಳಿದ ಕೆರೆಗಳಿಗೆ ಕಾವೇರಿ ನದಿ ಪಾತ್ರದಿಂದ ಪ್ರತಿ ವರ್ಷ 0.85 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಬೃಹತ್ ಯೋಜನೆಗಾಗಿ ಸರ್ವೆ ಕಾರ್ಯವನ್ನು ಜಿಯೋಸ್ಟಿಂ ಎಂಬ ಕಂಪನಿಯ ವತಿಯಿಂದ ಡಿಜಿಟಲ್ ಸರ್ವೆ ಮಾಡಲಾಗಿದ್ದು, ಆಲನಹಳ್ಳಿ, ಚೌಡೇನಹಳ್ಳಿ, ನಂದಿನಾಥಪುರ ಮಾರ್ಗವಾಗಿ ಪಿರಿಯಾಪಟ್ಟಣಕ್ಕೆ ಕೊನೆಯಾದರೆ ಮತ್ತೊಂದು ನಾಲೆ ಕಂಪಲಾಪುರದಲ್ಲಿ ಅಂತ್ಯಗೊಳ್ಳುತ್ತದೆ.
ಪಿ.ಎನ್.ದೇವೇಗೌಡ ಪಿರಿಯಾಪಟ್ಟಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.