Piriyapatna ಸಚಿವರ ತವರಿನಲ್ಲಿ “ಸಿರಿ’ಕಲ್ಚರ್‌ಗೆ ಉತ್ತೇಜನ
ತಂಬಾಕಿಗೆ ಪರ್ಯಾಯವಾಗಿ ರೇಷ್ಮೆ ಬೆಳೆಯಲು ಸಚಿವ ವೆಂಕಟೇಶ್ ಸಲಹೆ
Team Udayavani, Aug 5, 2023, 8:49 PM IST
ಪಿರಿಯಾಪಟ್ಟಣ: ಆಡು ಮುಟ್ಟದ ಸೊಪ್ಪಿಲ್ಲ ಎಂಬ ನಾಣ್ಣುಡಿಯಂತೆ ತಾಲೂಕು ಅರೆಮಲೆನಾಡು ಪ್ರದೇಶವಾದ ತಾಲೂಕಿನಲ್ಲಿ ಕೈಗತ್ತದ (ಬೆಳೆಯದ)ಬೆಳೆಯಿಲ್ಲ. ತಂಬಾಕು ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾದರೂ, ಹಿಂದೆ ರೇಷ್ಮೆ, ಸೂರ್ಯಕಾಂತಿ ಹೆಚ್ಚು ಬೆಳೆಯಲಾಗುತ್ತಿತ್ತು. ಕ್ಷೇತ್ರದ ಶಾಸಕರೂ ಆದ ಕೆ.ವೆಂಕಟೇಶ್ ಈಗ ರೇಷ್ಮೆ ಸಚಿವರೂ ಆಗಿದ್ದು, ಬೆಳೆಗಾರರಲ್ಲಿ ಹುಮ್ಮಸ್ಸು ತಂದಿದೆ. ಅಲ್ಲದೆ, ರೇಷ್ಮೆ ಕೃಷಿ ಉತ್ತೇಜಿಸಲು ರೈತರಿಗೆ ಸಲಹೆಯೂ ಮಾಡುತ್ತಿದ್ದಾರೆ.
ತಾಲೂಕಿನಲ್ಲಿ 80ರ ದಶಕದಿಂದೀಚೆಗೆ ತಂಬಾಕು ಪ್ರಮುಖ ವಾಣಿಜ್ಯ ಬೆಳೆಯಾಗಿ ಕಂಡರೂ ಶುಂಠಿ, ಮುಸುಕಿನ ಜೋಳ, ಬಾಳೆ ಹಾಗೂ ಅಡಕೆ, ತರಕಾರಿ ಅಷ್ಟೇ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಈ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದ ರೇಷ್ಮೆ, ಸೂರ್ಯಕಾಂತಿ ಈಗ ಕಡಿಮೆ ಆಗಿದೆ.
ಬಹು ಬೆಳೆಗೆ ಹೊಂದಿಕೊಳ್ಳುವ ಮಣ್ಣು:
ಪಿರಿಯಾಪಟ್ಟಣದ ಮಣ್ಣಿನ ಹವಾಗುಣ ಎಲ್ಲ ಬೆಳೆಗೂ ಹೊಂದಿಕೊಳ್ಳುವ ಲಕ್ಷಣ ಹೊಂದಿದೆ. ದೇಶ ಹಾಗೂ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ. ತಾಲೂಕಿನಲ್ಲಿರುವ ಒಟ್ಟು 83 ಸಾವಿರ ಹೆಕ್ಟರ್ ಭೂ ಪ್ರದೇಶದಲ್ಲಿ, 11 ಸಾವಿರ ಹೆಕ್ಟೇರ್ ಅರಣ್ಯಕ್ಕೆ, 26 ಸಾವಿರ ಹೆಕ್ಟೇರ್ ತಂಬಾಕು, 4 ಸಾವಿರ ಹೆಕ್ಟೇರ್ ಶುಂಠಿ, 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ, ತೆಂಗು, ಬಾಳೆ ಸೇರಿ ತೋಟಗಾರಿಕಾ ಬೆಳೆ, 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 11 ಸಾವಿರ ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬೆಳೆಯಲಾಗುತ್ತಿದೆ. ರೇಷ್ಮೆ ಮಾತ್ರ 300 ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಕೆ.ವೆಂಕಟೇಶ್ ಅವರು ರೇಷ್ಮೆ ಖಾತೆ ವಹಿಸಿಕೊಂಡ ಮೇಲೆ, ರೈತರ ಉತ್ಸಾಹ ಇಮ್ಮಡಿ ಆಗಿದೆ. ಮುಂದಿನ ದಿನಗಳಲ್ಲಿ 500 ಹೆಕ್ಟೇರ್‌ನಲ್ಲಿ ರೇಷ್ಮೆ ಬೆಳೆಯುವ ಲಕ್ಷಣ ಗೋಚರವಾಗುತ್ತಿವೆ.
ತಂಬಾಕಿಗೂ ಮೊದಲು ರೇಷ್ಮೆಗೆ ಆಗ್ರಸ್ಥಾನ:
ದೇಶದಲ್ಲಿ ರೇಷ್ಮೆ ಬೆಳೆಯುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಅಗ್ರಸ್ಥಾನ. 1785ರಲ್ಲಿ ಮೈಸೂರು ಮಹಾರಾಜರಿಂದ ಆರಂಭವಾದ ರೇಷ್ಮೆ ಕೃಷಿ, ರಾಜ್ಯದ ಉದ್ದಗಲಕ್ಕೂ ವ್ಯಾಪಿಸಿ ಪಿರಿಯಾಪಟ್ಟಣ ಸೇರಿ ಹಳೇಮೈಸೂರು ಪ್ರಾಂತ್ಯದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಕಂಗೊಳಿಸಿತ್ತು. ಆದರೆ, 80ರ ದಶಕದಲ್ಲಿ ತಂಬಾಕು ತಾಲೂಕಿಗೆ ಪಾದಾರ್ಪಣೆ ಮಾಡಿದ ಮೇಲೆ ರೇಷ್ಮೆ ಬೆಳೆ 150 ಎಕರೆಗೆ ಸೀಮಿತಗೊಂಡು ವಾಣಿಜ್ಯ ಬೆಳೆಗಳಲ್ಲಿ ತಂಬಾಕು ಆಗ್ರ ಸ್ಥಾನ ಪಡೆದು ಇಂದಿಗೂ ಮುಂಚೂಣಿಯಲ್ಲಿ ಸಾಗುತ್ತಿದೆ.
ರೇಷ್ಮೆಗೆ ಮಾರುಕಟ್ಟೆ ಕಲ್ಪಿಸಿ, ಉತ್ತೇಜನ ನೀಡಿ:
ಹಿಂದೆ ರೇಷ್ಮೆ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿತ್ತು. ಅಷ್ಟೇ ಬೇಡಿಕೆಯೂ ಇತ್ತು. ಆದರೆ, ಸ್ಥಳೀಯವಾಗಿ ಮಾರುಕಟ್ಟೆ ಇಲ್ಲದೆ, ತಂಬಾಕಿಗೆ ಪೈಪೋಟಿ ನೀಡಲು ವಿಫಲವಾಗಿ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಸಚಿವರು ಉತ್ಸಾಹ ತೋರಿ ತಂಬಾಕಿನಂತೆ ರೇಷ್ಮೆ ಮಾರುಕಟ್ಟೆ ಪ್ರಾರಂಭಿಸಿದರೆ ಹಳೇ ಮೈಸೂರು ಪ್ರಾಂತ್ಯವಾದ ಪಿರಿಯಾಪಟ್ಟಣ, ಕೆ.ಆರ್.ನಗರ, ಹುಣಸೂರು, ಹೆಗ್ಗಡದೇವನ ಕೋಟೆ, ರಾಮನಾಥಪುರ, ಹೊಳೆನರಸೀಪುರ ಭಾಗಗಳಲ್ಲಿ ರೇಷ್ಮೆ ಬೆಳೆಗಾರರಿಗೆ ಅನುಕೂಲ ಆಗುತ್ತದೆ. ಅಲ್ಲದೆ, ನಿರುದ್ಯೋಗಿಗಳಿಗೆ ಉದ್ಯೋಗ, ಕೈಗಾರಿಕಾ ಅಭಿವೃದ್ಧಿ ಸಾಧಿಸಿದಂತಾಗುತ್ತದೆ.
ತಂಬಾಕಿಗೆ ಪರ್ಯಾಯವಾಗಿ, ಅದಕ್ಕೆ ಪೈಪೋಟಿ ನೀಡಬಲ್ಲ ರೇಷ್ಮೆ ಬೆಳೆಯಲು ರೈತರಿಗೆ ಮನದಟ್ಟು ಮಾಡಲಾಗುತ್ತಿದೆ. ರೇಷ್ಮೆ ಬೆಳೆಯಲು ತಗಲುವ ವೆಚ್ಚ, ಅದರಲ್ಲಿನ ಲಾಭದ ಬಗ್ಗೆ ತಿಳಿವಳಿಕೆ ನೀಡುವುದಲ್ಲದೆ, ಸಹಾಯಧನ, ಸಾಧನ ಸಲಕರಣೆಗಳನ್ನು ರಿಯಾಯ್ತಿ ದರದಲ್ಲಿ ನೀಡುತ್ತಿದೆ. ರೈತರು ತಂಬಾಕಿಗೆ ಪರ್ಯಾಯವಾಗಿ ಆರ್ಥಿಕವಾಗಿ ಸದೃಢರಾಗಲು ರೇಷ್ಮೆ ಸಹಕಾರಿಯಾಗಲಿದೆ.
– ಕೆ.ವೆಂಕಟೇಶ್, ರೇಷ್ಮೆ ಸಚಿವ
ದೇಶದ ಅಭಿವೃದ್ಧಿ ಗ್ರಾಮಗಳ ಪ್ರಗತಿ ಮೇಲೆ ನಿಂತಿದೆ. ಗ್ರಾಮ ಮಟ್ಟದಲ್ಲಿ ಗುಡಿ ಕೈಗಾರಿಕೆಗಳು, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ, ಅವುಗಳಿಗೆ ಆರ್ಥಿಕ ನೆರವು ನೀಡಬೇಕು. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪಿಸಿದ್ರೆ, ರೇಷ್ಮೆ ಗೂಡು ಬೆಳೆಯಲು ಸಾಧ್ಯವಾಗುತ್ತದೆ. ಯುವ ಜನತೆ ವಲಸೆ ಹೋಗುವುದನ್ನು ತಪ್ಪಿಸಿ, ಸ್ಥಳೀಯವಾಗಿ ಉದ್ಯೋಗ ಮತ್ತಷ್ಟು ಒದಗಿಸಬಹುದು.
-ಬಿ.ವಿ.ಮಂಜುನಾಥ್, ರೈತ, ಬೆಟ್ಟದಪುರ
-ಪಿ.ಎನ್.ದೇವೇಗೌಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.