ಪರಿಸರವಾದಿಗಳು, ತಜ್ಞರಿಂದ ಮಿಶ್ರ ಪ್ರತಿಕ್ರಿಯೆ
Team Udayavani, Nov 4, 2019, 3:00 AM IST
ಮೈಸೂರು: ಚಾಮರಾಜನಗರ ಜಿಲ್ಲೆ ಬಂಡೀಪುರ ಸಂರಕ್ಷಿತ ಅರಣ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲು ಮತ್ತು ರಾತ್ರಿ ವಾಹನ ಸಂಚಾರ ಸ್ಥಗಿತ ಕುರಿತು ನಗರದ ಮೈಸೂರು ಎಂಜಿನಿಯರುಗಳ ಸಂಸ್ಥೆಯಲ್ಲಿ ನಡೆದ ಸಂವಾದದಲ್ಲಿ ಪರ-ವಿರೋಧ ಚರ್ಚೆಗಳು ನಡೆದು, ತಜ್ಞರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದವು. ಸ್ಥಳೀಯ ಕೇಂದ್ರಗಳ ಸಹಯೋಗದೊಂದಿಗೆ ಎಂ.ಲಕ್ಷ್ಮಣ್ ನೇತೃತ್ವದಲ್ಲಿ ಭಾನುವಾರ ನಡೆದ ಸಂವಾದದಲ್ಲಿ ಬಂಡೀಪುರ ಸಂರಕ್ಷಿತ ಕಾಡಿನಲ್ಲಿ ಹಗಲು ಸಂಚಾರಕ್ಕೂ ಕರ್ನಾಟಕ ರಾಜ್ಯದ ಪರಿಸರವಾದಿಗಳು ಹಾಗೂ ತಜ್ಞರಿಂದ ಭಾರಿ ವಿರೋಧ ವ್ಯಕ್ತವಾಯಿತು.
ಈ ವೇಳೆ ಕೇರಳದ ಮಂದಿ 24 ಗಂಟೆ ಸಂಚಾರಕ್ಕೆ ಅನುವುಮಾಡಿಕೊಡಬೇಕು ಎಂದು ವಾದಿಸಿದರು. ಕೆಲವರು ರಾಷ್ಟ್ರೀಯ ಹೆದ್ದಾರಿ ನಿಯಮ ಪಾಲಿಸುವಂತೆ ವಾದಿಸಿದರೆ, ಮತ್ತೆ ಕೆಲವರು ಅರಣ್ಯ ಇಲಾಖೆ ನಿಯಮಗಳನ್ನು ಪಾಲಿಸುವಂತೆ ಪ್ರತಿಪಾದಿಸಿದರು. ಒಟ್ಟಾರೆ ರಾಷ್ಟ್ರೀಯ ಹೆದ್ದಾರಿ 24 ಗಂಟೆ ಸ್ಥಗಿತಗೊಳ್ಳಬೇಕೆ? ಬೇಡವೇ? ಎನ್ನುವ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಮೇಜರ್ ಜನರಲ್ ಒಂಬತ್ಕೆರೆ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯನ್ನು ಸ್ಥಗಿತಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿಲ್ಲ, ನಿದೇರ್ಶನ ನೀಡಿದೆ. ಇಲ್ಲಿ ಕೇರಳ, ಕರ್ನಾಟಕ ರಾಜ್ಯಗಳ ಸಮಸ್ಯೆ ಎಂದು ಬರುವುದಿಲ್ಲ. ಪರಿಸರ ಮುಖ್ಯವಾಗುತ್ತದೆ. ಈ ದೂರದೃಷ್ಟಿಯಿಂದಲೇ ಸುಪ್ರೀಂ ಕೋರ್ಟ್ 24 ಗಂಟೆ ರಸ್ತೆ ಸ್ಥಗಿತಗೊಳಿಸುವ ತೀರ್ಮಾನಕ್ಕೆ ಬಂದಿದೆ ಎಂದು ತಿಳಿಸಿದರು.
ಅರಣ್ಯ ರಕ್ಷಣೆಯೊಂದಿಗೆ ವನ್ಯ ಸಂಕುಲ, ನದಿಗಳ ಮೂಲವನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. 12 ತಿಂಗಳೂ ತುಂಬಿ ಹರಿಯುತ್ತಿದ್ದ ಕಾವೇರಿ ನದಿ ವರ್ಷದಲ್ಲಿ ಈಗ 10 ತಿಂಗಳು ಮಾತ್ರ ಹರಿಯುತ್ತಿದೆ. ಇದರಿಂದಾಗಿ ಈಗಾಗಲೇ, ಕರ್ನಾಟಕ, ಕೇರಳದ ವಯನಾಡು, ತಮಿಳುನಾಡಿನ ಪಾಂಡಿಚೇರಿ, ಪುದುಚೇರಿ ವಿಭಾಗಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ ಎಂದು ಸಮಸ್ಯೆಯ ಬಗ್ಗೆ ವಿವರಿಸಿದರು.
ರಾತ್ರಿ ಬೇಡ, ಹಗಲು ಸಂಚಾರ ಇರಲಿ: ಹೋಟೇಲ್ ಮಾಲಿಕರ ಸಂಘದ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ರಾತ್ರಿ ಸಂಚಾರ ಸ್ಥಗಿತಗೊಳ್ಳಲಿ. ಆದರೆ, ಹಗಲು ಸಂಚಾರ ಮುಕ್ತವಾಗಿರಲಿ. ರಾತ್ರಿ ವೇಳೆ ಚಲಿಸುವಾಗ ವಾಹನಗಳು ಕೆಟ್ಟುಹೋದರೆ, ಸೂಕ್ತ ಭದ್ರತೆ ಇರುವುದಿಲ್ಲ. ಶೌಚಾಲಯ ವ್ಯವಸ್ಥೆ ಇರುವುದಿಲ್ಲ, ಪ್ರಾಣಿಗಳೂ ಏಕಾ-ಏಕಿ ದಾಳಿ ನಡೆಸುತ್ತವೆ. ಪ್ರಾಣಿಗಳ ಕಳ್ಳಸಾಗಣೆಗೆ ಆಸ್ಪದ ನೀಡಿದಂತಾಗುತ್ತದೆ. ಹಾಗಾಗಿ ಹಗಲಿನಲ್ಲಿ ಸಂಚಾರಕ್ಕೆ ಮುಕ್ತ ಅವಕಾಶ ನೀಡಬೇಕು. ಹಗಲು ಸಂಚಾರವನ್ನು ಸ್ಥಗಿತಗೊಳಿಸಿದರೆ ಆ ಮಾರ್ಗವನ್ನೇ ಅವಲಂಬಿಸಿರುವ ಜನರ ಜೀವನ ಅಸ್ತವ್ಯಸ್ತಗೊಳ್ಳುತ್ತದೆ ಎಂದರು.
ಹಗಲು ಸಂಚಾರ ಸ್ಥಗಿತ ಬೇಡ: ಕೊಡಗು ಜಿಲ್ಲೆಯ ಕರ್ನಲ್ ಮುತ್ತಣ್ಣ ಮಾತನಾಡಿ, ಕೊಡಗು ಭಾಗದಲ್ಲಿ ಈಗಾಗಲೇ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿ 24 ಗಂಟೆ ಸ್ಥಗಿತಗೊಳಿಸಿದರೆ, ವೈನಾಡಿನಿಂದ ಬರುವ ಬಹುತೇಕ ವಾಹನಗಳು ಕೊಡಗು ಮಾರ್ಗವಾಗಿ ಬರಬೇಕಾಗುತ್ತದೆ. ಇದರಿಂದ ವಾಹನ ದಟ್ಟಣೆ ವೀಪರಿತವಾಗುತ್ತದೆ. ಇದು ಪರಿಸರಕ್ಕೆ ಮತ್ತು ಜನತೆಗೆ ಮಾರಕವಾಗುತ್ತದೆ. ಬಂಡೀಪುರ, ಕುಟ್ಟ ವ್ಯಾಪ್ತಿಯಲ್ಲಿ ಹುಲಿ, ಆನೆಯಂಥ ದೈತ್ಯ ಪ್ರಾಣಿಗಳು ಹೆಚ್ಚು ಸಂಚರಿಸುತ್ತವೆ. ಇದರಿಂದ ವಾಹನ ಸವಾರರಿಗೂ ಅಪಾಯ ಉಂಟಾಗಬಹುದು. ಪ್ರವಾಸೋದ್ಯಮ ಅಭಿವೃದ್ಧಿಯಾಗಲಿ. ಆದರೆ, ಹಗಲು ಸಂಚಾರ ಸ್ಥಗಿತ ಬೇಡ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.
ಸರ್ಕಾರ ಸಮತೋಲನ ಕಾಯುವುದು ಮುಖ್ಯ: ವಯನಾಡಿನ ಬಾಲಗೋಪಾಲನ್ ಮಾತನಾಡಿ, ಚಿರತೆ, ಕಾಡುನಾಯಿ, ಆನೆ ಇವುಗಳ ಚಲನೆಗೆ ಜಾಗ ವಿಸ್ತಾರವಾಗಿರಬೇಕು. ಆದರೆ, ರಾತ್ರಿ ವೇಳೆ ಸಂಚಾರ ನಡೆಸುವುದರಿಂದ ದೀಪಗಳ ಬೆಳಕು ಪ್ರಾಣಿಗಳ ಮೇಲೆ ಬೀಳುತ್ತದೆ. ಇದರಿಂದ ಅವುಗಳಿಂದ ಅನಾಹುತ ಆಗುವುದು ಒಂದು ಬಗೆಯಾದರೆ, ಅವುಗಳ ಮೆದುಳಿನ ಕಾರ್ಯಚಟುವಟಿಕಗಳಲ್ಲಿ ಏರು-ಪೇರಾಗುತ್ತವೆ. ಹಾಗಾಗಿ, ಪ್ರವಾಸೋದ್ಯಮ ಅಭಿವೃದ್ಧಿ ಮಾಡುವ ಜತೆಗೆ ಪರಿಸರ ಸಮತೋಲನ ಕಾಯ್ದುಕೊಳ್ಳುವಂತೆ ಸರ್ಕಾರ ಆದೇಶ ನೀಡಬೇಕು ಎಂದರು.
ಕೇರಳ ಮೂಲದ ವಕೀಲ ಪಿ.ಸಿ.ಗೋಪಿನಾಥ್ ಮಾತನಾಡಿ, ಸಂವಿಧಾನ ಅಸ್ತಿತ್ವಕ್ಕೆ ಬಂದಾಗ ಮೂಲಹಕ್ಕು ಸಿಕ್ಕಿತು. ದೇಶಾದ್ಯಂತ ಮುಕ್ತವಾಗಿ ಸಂಚರಿಸಬಹುದು ಎಂದು ನಾವು ಖುಷಿಪಟ್ಟೆವು. ಈಗ ಅದಕ್ಕೆ ನ್ಯಾಯಾಂಗ ವ್ಯವಸ್ಥೆಯಿಂದ ಕೆಡಕುಂಟಾಗುತ್ತಿದೆ. ನ್ಯಾಯಾಲಯದ ನಿರ್ಧಾರದಿಂದ ಮೂಲಭೂತ ಹಕ್ಕುಗಳಿಗೆ ಕಡಿವಾಣ ಹಾಕಿದಂತಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಬಂಡೀಪುರ, ಆಮೇಲೆ ಕುಟ್ಟ ಹೀಗೆ, ಸುಲ್ತಾನ್ ಪತ್ತೇರಿ ಹೀಗೆ ಒಂದೊಂದು ಪ್ರದೇಶಗಳಲ್ಲಿನ ಸಂಚಾರ ಸ್ಥಗಿತಗೊಳಿಸುತ್ತಾ ಹೋದರೆ, ಕೇರಳ ಒಂದು ದ್ವೀಪದಂತಾಗಿಬಿಡುತ್ತದೆ. ನಾವು ಎಲ್ಲಿಗೂ ಹೋಗಬೇಡವೇ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಅರಣ್ಯವನ್ನು ರಕ್ಷಿಸುವ ಉದ್ದೇಶವಿದ್ದರೇ, ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶಿಸಲಿ. ಅದನ್ನು ಬಿಟ್ಟು ಸಂಚಾರ ಸ್ಥಗಿತಗೊಳಿಸುವುದಿಂದ ಏನು ಪ್ರಯೋಜನ ಎಂದು ಹೇಳಿದರು.
ಅರಣ್ಯಕ್ಕಾಗಿ ತ್ಯಾಗ ಮಾಡೋಣ: ವನ್ಯಜೀವಿ ತಜ್ಞ ರಾಜ್‌ಕುಮಾರ್ ಮಾತನಾಡಿ, ಭಾರತದಲ್ಲಿ ಶೇ.3ರಷ್ಟು ಅರಂಣ್ಯ ಸಂಪತ್ತು ಇದೆ. ಇದನ್ನು ಗಣನೀಯವಾಗಿ ಸಂರಕ್ಷಣೆ ಮಾಡಿದರೆ, ಶೇ.90ರಷ್ಟು ನದಿಗಳನ್ನು ರಕ್ಷಿಸಬಹುದು. ಸರ್ಕಾರದ ಈ ನಿರ್ಧಾರದಿಂದ ನಮ್ಮ ಮುಂದಿನ ಪೀಳಿಗೆಗೆ ಗುಣಮಟ್ಟದ ಅರಣ್ಯ ಸಂಪತ್ತನ್ನು ಕೊಡುಗೆಯಾಗಿ ನೀಡಬಹುದು ಎಂಬ ಉದ್ದೇಶ ಎಂದು ಭಾವಿಸೋಣ. ಅರಣ್ಯಕ್ಕಾಗಿ ನಾವೆಲ್ಲರೂ ತ್ಯಾಗ ಮಾಡೋಣ. ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿಕೊಳ್ಳೋಣ. 20 ಅಥವಾ 35 ಕಿ.ಮೀ. ಸಂಚಾರ ಹೆಚ್ಚಾದರೆ, ಸಮಸ್ಯೆ ಎನೂ ಆಗುವುದಿಲ್ಲ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.