ಶಾಸಕರ ಪುತ್ರಿಗಾಗಿ ಮೈಸೂರಲ್ಲಿ ಶೋಧ?
Team Udayavani, Mar 9, 2018, 6:05 AM IST
ಮೈಸೂರು: ಶಾಸಕ ಶಿವಮೂರ್ತಿ ನಾಯಕ್ ಅವರ ಪುತ್ರಿ ಲಕ್ಷ್ಮೀ ನಾಯಕ್ ಹಾಗೂ ಚಿತ್ರನಿರ್ಮಾಪಕ ಪಿ.ಸುಂದರ್‌ಗೌಡ ನವಜೋಡಿಗಾಗಿ ಬೆಂಗಳೂರು ಪೊಲೀಸರು ಗುರುವಾರ ಮೈಸೂರಿನಲ್ಲಿ ಹುಡುಕಾಟ ನಡೆಸಿದರು.
ಶಾಸಕರ ಮಗಳು ಲಕ್ಷ್ಮೀ ಹಾಗೂ ಸುಂದರ್‌ಗೌಡ ವಿವಾಹವಾಗುವ ಮುನ್ನ ಮೈಸೂರಿನ ಖಾಸಗಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು ಎಂದು ತಿಳಿದು ಬಂದಿದ್ದು, ಈ ನಡುವೆ ಸುಂದರ್‌ಗೌಡ ಕುಟುಂಬ ಹುಣಸೂರು ರಸ್ತೆಯ ರೂಸ್ಟ್ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿರುವ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿದರು.
ರೆಸಾರ್ಟ್‌ಗೆ ಆಗಮಿಸುವಷ್ಟರಲ್ಲಿ ಈ ಜೋಡಿ ಬೇರೆಡೆ ತೆರಳಿದ್ದು, ಸುಂದರ್‌ಗೌಡ ಕುಟುಂಬದ 12 ಮಂದಿ ಸದಸ್ಯರು ಮಾತ್ರ ಇದ್ದರು. ಕ್ಯಾಮರಾ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಶಾಸಕರ ಪುತ್ರಿ ಲಕ್ಷ್ಮೀ ನಾಯಕ್ ಬಂದು ಹೇಳಿಕೆ ನೀಡುವವರೆಗೂ ರೆಸಾರ್ಟ್‌ನಿಂದ ಹೊರ ಹೋಗದಂತೆ ಸುಂದರ್‌ಗೌಡ ಕುಟುಂಬಕ್ಕೆ ಸೂಚಿಸಿದರು.
ರೆಸಾರ್ಟ್ ಮಾಲೀಕ ಹೇಳಿದ್ದೇನು?
ಈ ಬಗ್ಗೆ ಮಾಹಿತಿ ನೀಡಿದ ರೂಸ್ಟ್ ರೆಸಾರ್ಟ್ ಮಾಲೀಕ ದಿಲೀಪ್ ಬಿದ್ದಪ್ಪ, ಕಳೆದೊಂದು ವಾರದಿಂದ ನಮ್ಮಲ್ಲಿ ಯಾವುದೇ ಮದುವೆ ನಡೆದಿಲ್ಲ. ನಾಲ್ಕು ದಿನಗಳ ಹಿಂದೆಯೆ ಯಾರದೋ ಹೆಸರಿನಲ್ಲಿ ರೂಮ್ ಬುಕ್ ಮಾಡಲಾಗಿದ್ದು, ಹುಡುಗ ಹುಡುಗಿ ನಮ್ಮ ಹೊಟೇಲ್‌ಗೆ ಬಂದಿಲ್ಲ. ಬುಧವಾರ ರಾತ್ರಿ ಸುಂದರ್ ಗೌಡ ಕುಟುಂಬದವರು ಹೋಟೆಲ್‌ಗೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಗುರುವಾರ ಮುಂಜಾನೆ 4.30ರ ವೇಳೆಗೆ ಪೊಲೀಸರು ಹೊಟೇಲ್‌ಗೆ ಬಂದು, ಸಿಸಿ ಕ್ಯಾಮರಾ ವಿಡಿಯೋ ಕೇಳಿದ್ದು, ಅದನ್ನು ನೀಡಲಾಗಿದೆ. ಆದರೆ ಸಿಸಿ ಕ್ಯಾಮರಾದ ವಿಡಿಯೋದಲ್ಲಿ ಹುಡುಗ-ಹುಡುಗಿ ಇಲ್ಲ ಎಂಬುದು ಗೊತ್ತಾಗಿದೆ ಎಂದರು.
ಯಲಹಂಕ ಠಾಣೆಯಲ್ಲಿ ದೂರು:
ಶಾಸಕರ ಪತ್ನಿ ಬುಧವಾರ ರಾತ್ರಿ 9 ಗಂಟೆ ವೇಳೆಗೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.