ದೆಹಲಿ ಗಣರಾಜ್ಯೋತ್ಸವ ಮಾದರಿ ಜಂಬೂಸವಾರಿ
Team Udayavani, Aug 1, 2017, 12:00 PM IST
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯನ್ನು ಈ ಬಾರಿ ದೆಹಲಿಯ ಗಣರಾಜ್ಯೋತ್ಸವ ಪರೇಡ್ ಮಾದರಿಯಲ್ಲಿ ಶಿಸ್ತು ಬದ್ಧವಾಗಿ ನಡೆಸಲು ದಸರಾ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಅರಮನೆ ಆವರಣದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಸುಮಾರು ಆರು ಕಿ.ಮೀ ದೂರ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ದಸರಾ ಗಜಪಡೆಯ ಸಾರಥಿ ಅರ್ಜುನ ಸೇರಿದಂತೆ ಇನ್ನುಳಿದ ಆನೆಗಳು ಜಂಬೂಸವಾರಿಯಲ್ಲಿ ಬೇರೆ ಬೇರೆ ಜವಾಬ್ದಾರಿ ನಿರ್ವಹಿಸುತ್ತವೆ.
ಇವುಗಳ ಜತೆಗೆ ನಾಡು-ನುಡಿ, ಕಲೆ-ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳು, ನೂರಾರು ಕಲಾತಂಡಗಳು ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸುತ್ತಾ ಸಾಗುತ್ತವೆ. ಆದರೆ, ದೇಶ-ವಿದೇಶದ ಲಕ್ಷಾಂತರ ಮಂದಿ ಕಣ್ತುಂಬಿಕೊಳ್ಳುವ ಜಂಬೂಸವಾರಿ ಮೆರವಣಿಗೆಯಲ್ಲಿ ಶಿಸ್ತು ಕಾಪಾಡಿಕೊಳ್ಳುತ್ತಿಲ್ಲ. ಹೀಗಾಗಿ ಈ ವರ್ಷ ವಿವಿಧ ಕಲಾ ತಂಡಗಳು ಪ್ರದರ್ಶಿಸುವ ತಂಡಗಳನ್ನು ಒಂದೆಕಡೆತರಲು ತೀರ್ಮಾನಿಸಲಾಯಿತು. ಜತೆಗೆ ಬೇರೆ ಬೇರೆ ರಾಜ್ಯಗಳ ಕಲಾತಂಡಗಳು, ಒಂದೆರಡು ವಿದೇಶಿ ಕಲಾತಂಡಗಳನ್ನು ಜಂಬೂಸವಾರಿ ಮೆರವಣಿಗೆಗೆ ಆಹ್ವಾನಿಸಲು ತೀರ್ಮಾನಿಸಲಾಯಿತು.
ಅಲ್ಲದೇ ಚಿನ್ನದ ಅಂಬಾರಿಯ ಮೇಲೆ ಪುಷ್ಪವೃಷ್ಟಿಗರೆಯಲು ವಾಯುಪಡೆಯ ವಿಮಾನ ಬಳಸಿಕೊಳ್ಳಲು ರಾಜ್ಯದ ಮುಖ್ಯಕಾರ್ಯದರ್ಶಿಯವರಿಂದ ವಾಯುಪಡೆ ಮುಖ್ಯಸ್ಥರಿಗೆ ಪತ್ರ ಬರೆಸಲು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ದಸರಾ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾರ್ಯಕಾರಿ ಸಮಿತಿ ಸಭೆ ಗಮನಕ್ಕೆ ತರಲಾಯಿತು.
ಪೂರ್ವತಾಲೀಮು: ಮೈನವಿರೇಳಿಸುವ ಸಾಹಸ ಪ್ರದರ್ಶನದ ಪಂಜಿನ ಕವಾಯತು ಯಶಸ್ಸಿನ ದೃಷ್ಟಿಯಿಂದ ಒಂದು ದಿನ ಮುಂಚೆಯೇ ಪೂರ್ವ ತಾಲೀಮು ನಡೆಸಿ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡುವಂತೆ, ಈ ಬಾರಿ ವಿಜಯದಶಮಿ ಹಿಂದಿನ ದಿನ ಅರಮನೆ ಆವರಣದೊಳಗೆ ಜಂಬೂಸವಾರಿಯ ಪೂರ್ವತಾಲೀಮು ನಡೆಸಿ, ಸಾರ್ವಜನಿಕರಿಗೆ ಮುಕ್ತ ಪ್ರವೇಶ ನೀಡಿದರೆ ಜಂಬೂಸವಾರಿ ದಿನ ಜನಜಂಗುಳಿ ನಿಯಂತ್ರಿಸಬಹುದು ಎಂದು ಶಾಸಕ ಎಂ.ಕೆ.ಸೋಮಶೇಖರ್ ಸಲಹೆ ನೀಡಿದರು.
ಸೆ.21ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭವನ್ನು ಬೆಳಗ್ಗೆ 9ಗಂಟೆಗೆ ಏರ್ಪಡಿಸಲು ಸಭೆ ತೀರ್ಮಾನಿಸಿತು. ದಸರಾ ಉದ್ಘಾಟಕರ ಆಯ್ಕೆ ಜವಾಬ್ದಾರಿಯನ್ನು ಮುಖ್ಯಮಂತ್ರಿಯವರಿಗೆ ವಹಿಸಲಾಗಿದ್ದು, ಇನ್ನಷ್ಟೆ ಉದ್ಘಾಟಕರ ಆಯ್ಕೆ ಆಗಬೇಕಿದೆ. ದಸರಾ ವಸ್ತುಪ್ರದರ್ಶನ ಕೂಡ ಪ್ರತಿ ವರ್ಷ ಉದ್ಘಾಟನೆ ವೇಳೆಗೆ ಮಳಿಗೆಗಳು ಖಾಲಿ ಇರುತ್ತವೆ ಎಂಬ ದೂರುಗಳಿರುವುದರಿಂದ ಈ ಬಾರಿ ರಾಜ್ಯಸರ್ಕಾರದ 30 ಇಲಾಖೆಗಳಿಂದಲೇ ಮಳಿಗೆಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಸಚಿವ ಮಹದೇವಪ್ಪ ತಿಳಿಸಿದರು.
ದಸರಾ ಮಹೋತ್ಸವ ಆಚರಣೆಗೆ 15 ಕೋಟಿ ರೂ., ಮೈಸೂರು ನಗರದ ಒಳ ರಸ್ತೆಗಳ ದುರಸ್ತಿಗೆ 21 ಕೋಟಿ ರೂ. ಹಾಗೂ ಕಳೆದ ವರ್ಷದ ದಸರಾ ಬಾಕಿ 5.45 ಕೋಟಿ ರೂ. ಮಂಜೂರಾತಿಗೆ ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದ್ದಾರೆ. ಜತೆಗೆ ಬೇರೆ ಬೇರೆ ನಗರಗಳಿಂದ ಮೈಸೂರನ್ನು ಸಂಪರ್ಕಿಸುವ 17 ರಸ್ತೆಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ 117 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಲಾಂಛನ ಅನಾವರಣ: ಸಚಿವ ಡಾ.ಎಚ್.ಸಿ.ಮಹದೇವಪ್ಪ ದಸರಾ ಮಹೋತ್ಸವದ ಲಾಂಛನ ಅನಾವರಣಗೊಳಿಸಿದರು. ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಗೀತಾ ಮಹದೇವಪ್ರಸಾದ್, ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಿ.ರಂದೀಪ್, ಜಿಪಂ ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ, ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಗಜಪಯಣ
ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಮೊದಲ ತಂಡದ ಗಜಪಯಣವನ್ನು ಆ.14ರಂದು ಬೆಳಗ್ಗೆ 11 ಗಂಟೆಗೆ ಹುಣಸೂರು ತಾಲೂಕಿನ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಲ್ಲಿ ಸಾಂಪ್ರದಾಯಿಕ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ, ಆ.17ರಂದು ಮಧ್ಯಾಹ್ನ 12.05 ಗಂಟೆಗೆ ಮೈಸೂರು ಅರಮನೆ ಆವರಣಕ್ಕೆ ಗಜಪಡೆಯನ್ನು ಸ್ವಾಗತಿಸಲು ತೀರ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.