ಹೆಚ್ಚು ಹೆಚ್ಚು ವೃತ್ತಿಪರರು ಹೊರ ಬರಲಿ
Team Udayavani, Mar 18, 2019, 7:15 AM IST
ಮೈಸೂರು: ಕೈಗಾರಿಕೆಗಳೊಡನೆ ಸಂಪರ್ಕ ಸಾಧಿಸುವುದು, ಸಂಶೋಧನೆ ಮತ್ತು ನಾವೀನ್ಯತೆಗೆ ಒತ್ತು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಪರ್ಕ ಜಾಲ ಹೊಂದುವುದು, ಹಳೆಯ ವಿದ್ಯಾರ್ಥಿಗಳನ್ನು ಹೆಚ್ಚು ಒಳಗೊಳ್ಳುವುದು ಹಾಗೂ ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಒದಗಿಸುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸಬೇಕಾದ ಅವಶ್ಯಕತೆ ಇದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಡಾ.ಅನಿಲ್ ಡಿ.ಸಹಸ್ರಬುಧೆ ಹೇಳಿದರು. ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದಲ್ಲಿ ಭಾನುವಾರ ನಡೆದ ವಿವಿಯ 99ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.
ಶೇ.30 ಗುರಿ: ರಾಷ್ಟ್ರದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಸವಾಲುಗಳು ಹಾಗೂ ಅವಕಾಶಗಳು ಈಗ ವಿಪುಲವಾಗಿವೆ. ಸ್ವಾತಂತ್ರಾé ನಂತರ ಖಾಸಗಿ ವಲಯ ಹಾಗೂ ಸರ್ಕಾರಿ ವಲಯದಲ್ಲಿ ಭಾರತದಲ್ಲಿ ತಲೆಯೆತ್ತಿರುವ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದ್ದು, ಒಟ್ಟು ಪ್ರವೇಶಾತಿ ಅನುಪಾತದಲ್ಲಿ ಶೇ.28ರಷ್ಟು ಹೆಚ್ಚಳ ಉಂಟಾಗಿದೆ. 2020ರ ವೇಳೆಗೆ ಶೇ.30ರ ಗುರಿನ್ನಿಟ್ಟುಕೊಂಡಿದ್ದು, ಅದನ್ನು ಸಾಕಾರಗೊಳಿಸುವ ಹಂತದಲ್ಲಿದ್ದೇವೆ ಎಂದರು.
ವೃತ್ತಿಪರತೆ: ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.50ರಷ್ಟು ಮಂದಿ 25 ವರ್ಷ ವಯೋಮಾನದ ಒಳಗಿನವರಿರುವುದರಿಂದ ಈ ಅನುಕೂಲತೆಯನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ನಮ್ಮ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಿಂದ ಹೊರಬರುತ್ತಿರುವ ಪದವೀಧರರು ಉದ್ಯೋಗಾರ್ಹರಲ್ಲ ಎಂಬ ವರದಿಗಳಿವೆ.
ಪರಿಣಾಮಕಾರಿ ಸಂವಹನ ಕೌಶಲಗಳಂಥ ಸಂಗತಿಗಳು, ತಂಡದ ಕೆಲಸ, ಶಿಸ್ತು, ಸಮಸ್ಯೆಯನ್ನು ಪರಿಹರಿಸುವ ಸಾಮರ್ಥ್ಯ, ತೀಕ್ಷ್ಣ ಆಲೋಚನೆ, ವಿಶ್ಲೇಷಣಾ ಸಾಮರ್ಥ್ಯ, ವೃತಿಪರ, ನ್ಯಾಯಸಮ್ಮತ ಅಭ್ಯಾಸಗಳು, ಮೌಲ್ಯ ಇತ್ಯಾದಿಗಳನ್ನು ನಮ್ಮ ಯುವ ಪದವೀಧರರು ನಿರೀಕ್ಷಿತ ಮಟ್ಟದಲ್ಲಿ ರೂಢಿಸಿಕೊಂಡಿಲ್ಲ ಎಂಬ ಕೊರತೆಯನ್ನು ಉದ್ಯಮಗಳು ನಮ್ಮ ಗಮನಕ್ಕೆ ತರುತ್ತಿವೆ.
ಈ ಹಿನ್ನೆಲೆಯಲ್ಲಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಆದ್ಯತೆಯ ಮೇರೆಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಕೈಗಾರಿಕೆಗಳೊಂದಿಗೆ ವಿಶ್ವವಿದ್ಯಾಲಯ ಸಂಬಂಧ ಹೊಂದಬೇಕು. ನಾಲ್ಕು ತಿಂಗಳು ಅಥವಾ ಬೇಸಿಗೆ ರಜಾ ಕಾಲದಲ್ಲಾದರೂ ಬೋಧಕರು ಕೈಗಾರಿಕೆಯಲ್ಲಿದ್ದು, ವೃತ್ತಿ ತರಬೇತಿ ಪಡೆಯುವುದು,
ಕೈಗಾರಿಕೆಯಿಂದ ಹಂಗಾಮಿ ಬೋಧಕರನ್ನು ನೇಮಕ ಮಾಡುವುದು, ಕೈಗಾರಿಕಾ ಬೆಂಬಲದಿಂದ ಪ್ರಯೋಗಾಲಯವನ್ನು ತೆರೆಯುವುದು, ಪಠ್ಯಕ್ರಮ ಸಿದ್ಧಪಡಿಸುವಲ್ಲಿ ಕೈಗಾರಿಕಾ ವಲಯವನ್ನು ತೊಡಗಿಸುವುದು, ಸಂವಹನ ಕೌಶಲಗಳಲ್ಲಿ ತರಬೇತಿ, ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಿಕೆ ಹಾಗೂ ಸಮಾಲೋಚನೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ನಾವೀನ್ಯತೆ, ಸಂಶೋಧನೆ: ವಿಶ್ವವಿದ್ಯಾಲಯಗಳೆಂದರೆ ಅಲ್ಲಿ ಹೊಸ ಜ್ಞಾನ ಹೊರಹೊಮ್ಮೆ ಅದು ಎಲ್ಲ ಕಡೆ ವ್ಯಾಪಿಸಿ, ಪ್ರಸಾರವಾಗಿ ಅದು ಪ್ರಯೋಗವಾಗಬೇಕು ಎಂಬುದು ನಿರೀಕ್ಷೆ. ಶಿಕ್ಷಣದ ಸಂದರ್ಭದಲ್ಲಿ ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು ಕೊಡುವುದು ಮುಖ್ಯವಾಗುತ್ತದೆ ಎಂದರು.
ವಿದೇಶಿ ಪ್ರಾಧ್ಯಾಪಕರು: ಇವತ್ತು ಇಡೀ ಪ್ರಪಂಚವೇ ಒಂದು ವಿಶ್ವ ಗ್ರಾಮವಾಗಿ ಪರಿಣಮಿಸಿದೆ. ಜ್ಞಾನ, ವ್ಯಾಪಾರ, ವಾಣಿಜ್ಯ ಮತ್ತು ಸಾಂಸ್ಕೃತಿಕ ವಿನಿಮಯಕ್ಕಾಗಿ ಎಲ್ಲ ರಾಷ್ಟ್ರಗಳೂ ಪರಸ್ಪರ ಅವಲಂಬಿತವಾಗಿವೆ. ಹಾಗಾಗಿ ಬೋಧಕರು ಮತ್ತು ವಿದ್ಯಾರ್ಥಿಗಳ ವಿನಿಮಯ ವ್ಯವಸ್ಥೆಗಾಗಿ ಉನ್ನತಮಟ್ಟದ ವಿವಿಗಳೊಡನೆ ಸಂಬಂಧ ಹೊಂದುವುದು, ಅತ್ಯಂತ ಮುಂಚೂಣಿ ಕೋರ್ಸ್‌ಗಳನ್ನು ಬೋಧಿಸಲು ವಿದೇಶಗಳಿಂದ ಪ್ರಾಧ್ಯಾಪಕರನ್ನು ಆಹ್ವಾನಿಸುವುದು, ಮುಂಚೂಣಿ ಸಂಶೋಧನೆ ನಡೆಸಲು ಸಂಪರ್ಕ ಸಾಧಿಸಿ ಒಡಂಬಡಿಕೆ ಮಾಡಿಕೊಳ್ಳುವುದು ಈ ಕಾಲದ ನಡೆಯಾಗಿದೆ.
ಸಂಪರ್ಕವಿರಲಿ: ಹಿರಿಯ ವಿದ್ಯಾರ್ಥಿಗಳು ಒಂದು ವಿಶ್ವವಿದ್ಯಾಲಯದ ರಾಯಭಾರಿಗಳಿದ್ದಂತೆ, ಹಾಗಾಗಿ ಆಗಾಗ ಹಿರಿಯ ವಿದ್ಯಾರ್ಥಿಗಳ ಸಭೆ ನಡೆಸುತ್ತಿರಬೇಕು. ಇ-ಮೇಲ್, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್ ಇತ್ಯಾದಿಗಳ ಮೂಲಕ ಹಿರಿಯ ವಿದ್ಯಾರ್ಥಿಗಳ ಜೊತೆ ನಿರಂತರ ಸಂಪರ್ಕದಲ್ಲಿರಬೇಕಾದ್ದು ಅತಿ ಮುಖ್ಯ ಎಂದು ಹೇಳಿದರು. ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅಧ್ಯಕ್ಷತೆವಹಿಸಿದ್ದರು. ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಪರೀಕ್ಷಾಂಗ ಕುಲಸಚಿವ ಪ್ರೊ.ಮಹದೇವನ್ ಉಪಸ್ಥಿತರಿದ್ದರು.
ಡಾಕ್ಟರೆಟ್ ಪ್ರದಾನ: ಇದೇ ಸಂದರ್ಭದಲ್ಲಿ ತಿಪಟೂರು ತಾಲೂಕು ನೊಣವಿನಕೆರೆ ಸೋಮನಕಟ್ಟೆಯ ಕಾಡಸಿದ್ದೇಶ್ವರ ಮಠದ ಕರಿವೃಷಭಾ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೆಟ್ ಪ್ರದಾನ ಮಾಡಲಾಯಿತು.
ವಿವಿಯಲ್ಲಿ ದಿನಪೂರ್ತಿ ಚಟುವಟಿಕೆ ನಡೆಯಲಿ: ದಿನದ 24ಗಂಟೆಯೂ ಸಹ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಸೌಕರ್ಯಗಳನ್ನು ಒದಗಿಸಬೇಕಾದ್ದು ಮುಖ್ಯ. ವಿವಿಗಳು ಸರ್ಕಾರಿ ಕಚೇರಿಗಳ ರೀತಿ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸಬಾರದು. ವಿಶ್ವವಿದ್ಯಾಲಯದ ಆವರಣ ದಿನಪೂರ್ತಿ ಅರ್ಥಪೂರ್ಣ ಚಟುವಟಿಕೆಗಳಿಂದ ಗಿಜಿಗುಡುತ್ತಿರಬೇಕು. ತಂತ್ರಜ್ಞಾನ ಬಹಳ ಕ್ಷಿಪ್ರವಾಗಿ ಬದಲಾಗುತ್ತಿದೆ.
ಅಂರ್ತಜಾಲದ ಮೂಲಕ ಲಭ್ಯವಾಗುವ ಜ್ಞಾನ ನಿಮ್ಮ ಬೆರಳ ತುದಿಯಲ್ಲಿ ಮತ್ತು ಮೊಬೈಲ್ ಉಪಕರಣಗಳಲ್ಲಿ ಅಡಗಿದೆ. ಈ ಕ್ರಾಂತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ಯಾವ ಕಾರಣಕ್ಕೂ ಕಲಿಯುವುದನ್ನು ನಿಲ್ಲಿಸಬೇಡಿ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಡಾ.ಅನಿಲ್ ಡಿ.ಸಹಸ್ರಬುಧೆ ಕಿವಿಮಾತು ಹೇಳಿದರು.
20 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ: ಎಂಎಸ್ಸಿ ರಸಾಯನ ಶಾಸ್ತ್ರ ಅಧ್ಯಯನ ವಿಭಾಗದಲ್ಲಿ ನೈಜೀರಿಯಾ ಮೂಲದ ಮಾನಸಗಂಗೋತ್ರಿಯ ವಿದ್ಯಾರ್ಥಿನಿ ಎಮಿಲಿಫ್ ಸ್ಟೆಲ್ಲಾ ಚಿನೆಲೊ 20 ಚಿನ್ನದ ಪದಕ, ಐದು ನಗದು ಬಹುಮಾನ ಪಡೆಯುವ ಮೂಲಕ ಮೈಸೂರು ವಿವಿಯ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾರೆ. ಘಟಿಕೋತ್ಸವ ಸಮಾರಂಭದಲ್ಲಿ ಪದಕ ಸ್ವೀಕಾರಕ್ಕೆ ಎಮಿಲಿಫ್ ರನ್ನು ಆಹ್ವಾನಿಸಿದಾಗ ಸಭಾಂಗಣದಲ್ಲಿ ನೆರೆದಿದ್ದವರೆಲ್ಲಾ ಕರತಾಡನದ ಮೂಲಕ ಎಮಿಲಿಫ್ ಸಾಧನೆಗೆ ಗೌರವ ಸಲ್ಲಿಸಿದರು.
ಕನ್ನಡ ಓದಿದರೆ ಕೆಲಸ ಸಿಗುವುದಿಲ್ಲ ಎಂಬ ಕಾರಣಕ್ಕೆ ಯುವ ಪೀಳಿಗೆ ಕನ್ನಡ ಓದಲು ಮುಂದಾಗುತ್ತಿಲ್ಲ. ಇದರಿಂದ ಕನ್ನಡ ಭಾಷೆ ಇಂದು ಮರೆಯಾಗುತ್ತಿದೆ. ಆದರೆ, ನಾನು ಕನ್ನಡದಲ್ಲೇ ಸ್ನಾತಕೋತ್ತರ ಪದವಿ ಮಾಡಿ 9 ಚಿನ್ನದ ಪದಕ, 4 ನಗದು ಬಹುಮಾನ ಗಳಿಸಿರುವುದು ನನಗೆ ಹೆಮ್ಮೆ ಎನಿಸಿದೆ.
-ಪಿ.ಎಲ್.ಪೂಜಿತ, ಕನ್ನಡ ವಿಭಾಗ
18 ವರ್ಷಗಳ ಬಳಿಕ ಸ್ನಾತಕೋತ್ತರ ಪದವಿ ಪಡೆಯಲು, ಸಂಸ್ಕೃತ ಓದಲು ಸೇರಿದೆ. ಮಹಾರಾಷ್ಟ್ರದವಳಾದ ನಾನು, ನನ್ನ ಪತಿ ಆರ್‌ಬಿಐನಲ್ಲಿ ಕೆಲಸ ಮಾಡುತ್ತಿರುವುದರಿಂದ ಇಲ್ಲಿ ಸೇರಿದೆ. ಹತ್ತು ಚಿನ್ನದ ಪದಕ ಬರುತ್ತೆ ಎಂದು ನಿರೀಕ್ಷೆಯನ್ನೇ ಮಾಡಿರಲಿಲ್ಲ.
-ಮೀರಾ ರಾವ್ ಅನಾಸನೆ, ಸಂಸ್ಕೃತ ವಿಭಾಗ
ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೆಟ್ ಕೊಟ್ಟಿರುವುದು ನನಗೂ ನನ್ನ ಸಮಾಜದ ಸದ್ಬಕ್ತರಿಗೆ ಸಂತಸ ತಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿರುವ ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ.
-ಕರಿವೃಷಭಾ ದೇಶಿಕೇಂದ್ರ ಸ್ವಾಮೀಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.