ಮೈಸೂರು: ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಮೈಸೂರಲ್ಲಿ 2 ವರ್ಷದ ಹುಲಿ ಬಲಿ
Team Udayavani, Jan 30, 2024, 9:58 AM IST
ಉದಯವಾಣಿ ಸಮಾಚಾರ
ಮೈಸೂರು: ನಗರದಂಚಿನ ಗ್ರಾಮಗಳಲ್ಲಿ ಕಾಣಿಸಿಕೊಂಡ ಹುಲಿಗಳ ಸೆರೆಗೆ ಸರ್ಕಾರ ಆದೇಶ ನೀಡಿದ್ದರೂ, ಅರಣ್ಯ ಇಲಾಖೆಯ
ವಿಳಂಬ ಧೋರಣೆಗೆ ಹುಲಿಯೊಂದು ಬಲಿಯಾಗಿದೆ.
ಕಳೆದ ಮೂರು ತಿಂಗಳ ಹಿಂದೆ ಮೈಸೂರು ನಗರದಂಚಿನ ಗ್ರಾಮಗಳಲ್ಲಿ ಹುಲಿಗಳು ಕಾಣಿಸಿಕೊಂಡಿರುವ ಬಗ್ಗೆ ಸುದ್ದಿಯಾಗಿದ್ದಲ್ಲದೇ, ಅರಣ್ಯ ಇಲಾಖೆ ಪರಿಶೀಲಿಸಿ, ಹುಲಿ ಇರುವುದನ್ನು ದೃಢಪಡಿಸಿತ್ತು. ಇದಾದ ಎರಡು ತಿಂಗಳ ಬಳಿಕ ಮೈಸೂರು-ನಂಜನಗೂಡು ಹೆದ್ದಾರಿಯ ಮಂಡಕಳ್ಳಿ ವಿಮಾನ ನಿಲ್ದಾಣ ಬಳಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ 2 ವರ್ಷದ ಹುಲಿ ಸ್ಥಳದಲ್ಲೇ ಮೃತಪಟ್ಟಿದೆ.
ಹುಲಿ ಬಗ್ಗೆ ಮಾಹಿತಿ ನೀಡಿದ್ದ ಇಲಾಖೆ:
ಸಾಮಾನ್ಯವಾಗಿ ದಟ್ಟಾರಣ್ಯ ಹಾಗೂ ಕಾಡಂಚಿನ ಪ್ರದೇಶಕ್ಕಷ್ಟೇ ಸೀಮಿತವಾಗಿದ್ದ, ನಾಡಿನ ಗಂಧಗಾಳಿ ಅರಿಯದ ಹುಲಿಗಳು ನಗರದ ಪ್ರದೇಶದತ್ತ ಮುಖ ಮಾಡುತ್ತಿವೆ. ಇದಕ್ಕೆ ಉದಾಹರಣೆಯಾಗಿ ಮೈಸೂರು ತಾಲೂಕಿನ ದೊಡ್ಡಕಾನ್ಯ, ಚಿಕ್ಕ ಕಾನ್ಯ ಹಾಗೂ ಸಿಂಧುವಳ್ಳಿ ಬಳಿ ಹಾಗೂ ನಗರದ ವಿಮಾನ ನಿಲ್ದಾಣ ಕ್ಯಾಂಪಸ್ ನಲ್ಲಿ, ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಬಳಿ ಹುಲಿ ಪ್ರತ್ಯಕ್ಷವಾಗಿದ್ದವು. ಹುಲಿಗಳು ಈ ಪ್ರದೇಶದಲ್ಲಿ ಇರುವ ಬಗ್ಗೆ ಇಲಾಖೆ ದೃಢಪಡಿಸಿ ಸರ್ಕಾರಕ್ಕೆ ಮಾಹಿತಿಯನ್ನೂ ನೀಡಿತ್ತು.
ಹುಲಿ ಸೆರೆಗೆ ಆದೇಶ: ಮೈಸೂರಿಗೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ ನಾಲ್ಕು ಹುಲಿಗಳು ಕಾಣಿಸಿಕೊಂಡಿರುವುದನ್ನು
ಗಂಭೀರವಾಗಿ ಪರಿಗಣಿಸಿದ ಸರ್ಕಾರ ಶೀಘ್ರವೇ ಹುಲಿಗಳ ಸೆರೆಗೆ ಆದೇಶಿಸಿತ್ತು. ಇದಾದ ಬಳಿಕ ಅರಣ್ಯ ಇಲಾಖೆ ಹುಲಿಗಾಗಿ ಶೋಧ ನಡೆಸಿದ್ದು, ಹುಲಿಗಳ ಸುಳಿವು ದೊರೆಯದ ಹಿನ್ನೆಲೆ ಸುಮ್ಮನಾಗಿತ್ತು. ಪರಿಣಾಮ ಭಾನುವಾರ ರಾತ್ರಿ ಹೆದ್ದಾರಿಯಲ್ಲಿ ಹುಲಿ
ವಾಹನ ಡಿಕ್ಕಿಗೆ ಬಲಿಯಾಗಿದೆ. ಈ ಮೂಲಕ ಅರಣ್ಯ ಇಲಾಖೆ ನಿರ್ಲಕ್ಷ್ಯ ಧೋರಣೆ ಮತ್ತು ವಿಳಂಬದಿಂದಾಗಿ 2 ವರ್ಷದ ಹುಲಿ
ಸಾವಿಗೀಡಾಗಿದೆ.
ಹುಲಿಯ ಮೂಲ ಯಾವುದು?
ಚಿಕ್ಕದೇವಮ್ಮನ ಬೆಟ್ಟದಲ್ಲಿದ್ದ ಹೆಣ್ಣು ಹುಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು, ಬಳಿಕ ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಮೈಸೂರು ಜಿಲ್ಲೆಗೆ ಸೇರಿದ ಕಾಡಂಚಿನ ಗ್ರಾಮಗಳ ಪಾಳುಬಿದ್ದಿರುವ ಖಾಸಗಿ ಭೂಮಿಯಲ್ಲಿ ವಾಸ್ತವ್ಯ ಹೂಡಿತ್ತು. ಬಳಿಕ ಮರಿಗಳು ದೊಡ್ಡದಾದ ಮೇಲೆ ಸ್ವತಂತ್ರವಾಗಿ ಬದುಕಲು ತನ್ನ ಸುಪರ್ಧಿಯಿಂದ ಹೊರ ದೂಡಿತ್ತು. ಹೀಗೆ ತಾಯಿಯಿಂದ ಬೇರ್ಪ ಟ್ಟ ಮರಿ ಹುಲಿಗಳು ನಗರದಂಚಿನ ಗ್ರಾಮಗಳಲ್ಲಿ ನೆಲೆ ನಿಂತಿವೆ.
ತಾಯಿಯಿಂದ ಬೇರ್ಪಟ್ಟ ಮರಿಗಳಲ್ಲಿ ಒಂದು ಮರಿ ದೊಡ್ಡಕಾನ್ಯ, ಚಿಕ್ಕಕಾನ್ಯ ಬಳಿ ಸುತ್ತಾಡಿದ್ದರೆ, ಮತ್ತೊಂದು ಮರಿ ದೂರ ಗ್ರಾಮದ ಕೆಲವೆಡೆ ಓಡಾಡಿರುವ ದೃಶ್ಯ ಅರಣ್ಯ ಸಿಬ್ಬಂದಿ ಗಮನಕ್ಕೆ ಬಂದಿದೆ. ಇನ್ನೊಂದು ಮರಿ ನಂಜನಗೂಡು ವಲಯಕ್ಕೆ ಸೇರಿರುವ ಮೈಸೂರು- ನಂಜನಗೂಡು ಗಡಿ ಭಾಗದ ಬ್ಯಾತಹಳ್ಳಿ ಬಳಿ ಇರುವ ಕಬ್ಬಿನ ಗದ್ದೆ, ಪಾಳುಬಿದ್ದ ಭೂಮಿಯಲ್ಲಿ ಬೆಳೆದಿರುವ ಪೊದೆಗಳ ರಕ್ಷಣೆಯಲ್ಲಿ ಆಶ್ರಯ ಪಡೆದುಕೊಂಡಿರುವ ಮಾಹಿತಿ ಅರಣ್ಯ ಇಲಾಖೆಗೆ ಲಭ್ಯವಾಗಿತ್ತು. ಮತ್ತೂಂದು ಹುಲಿ ಶ್ರೀರಂಗ ಪ ಟ್ಟಣ ತಾಲೂಕಿನ ಮೈಸೂರು ನಗರದಂಚಿನ ಮಹದೇವಪುರ ಬಳಿ ಕಾಣಿಸಿಕೊಂಡಿತ್ತು. ಈಗ ಮೃತಪಟ್ಟಿರುವ ಹುಲಿ ಮೈಸೂರು-ನಂಜನಗೂಡು ಗಡಿ ಭಾಗದ ಬ್ಯಾತಹಳ್ಳಿ ಬಳಿ ನೆಲೆ ನಿಂತ ಹುಲಿಯೇ ಎಂಬ ಅನು ಮಾನ ವ್ಯಕ್ತವಾಗಿದೆ.
ಮೈಸೂರು ಭಾಗದ ಜನವಸತಿ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವುದನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಹುಲಿ ಸೆರೆಗೆ ಆನೆಗಳ ಸಹಾಯಯದೊಂದಿಗೆ ಕೋಂಬಿಂಗ್ ನಡೆಸಿ ಸೆರೆ ಹಿಡಿಯಬಹುದಿತ್ತು. ಆದರೆ, ಇದ್ಯಾವುದನ್ನೂ ಮಾಡದ ಪರಿಣಾಮ ಹುಲಿಯೊಂದು ಅನ್ಯಾಯವಾಗಿ ಮೃತಪಟ್ಟಂತಾಯಿತು.
ನಗರ ಪ್ರದೇಶದತ್ತ ವನ್ಯಮೃಗಗಳು ಹೊಸ ಸಮಸ್ಯೆಯ ಮುನ್ಸೂಚನೆಯೇ
ದಟ್ಟಾರಣ್ಯ ಹಾಗೂ ಕಾಡಂಚಿನ ಪ್ರದೇಶಕ್ಕಷ್ಟೇ ಸೀಮಿತವಾಗಿದ್ದ ಹುಲಿ, ಕರಡಿಯಂತಹ ಪ್ರಾಣಿಗಳೀಗ ನಗರದಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೊಸ ಸಮಸ್ಯೆಗೆ ಮುನ್ಸೂಚನೆಯೇ ಎಂಬ ಪ್ರಶ್ನೆ ವ್ಯಕ್ತವಾಗಿದೆ.
ಮೈಸೂರು ವ್ಯಾಪ್ತಿಯಲ್ಲಿ ನಾಲ್ಕು ಹುಲಿ ಓಡಾ ಡುತ್ತಿರುವ ಸುಳಿವು ಒಂದೆಡೆಯಾದರೆ ಜಿಲ್ಲೆಯ ತಿ.ನರಸೀಪುರ ಪಟ್ಟಣದಲ್ಲಿ ಕೆಲ ದಿನಗಳ ಹಿಂದೆ ಕರಡಿಯೊಂದು ಕಾಣಿಸಿಕೊಂಡಿತ್ತು. ಇದಷ್ಟೇ ಅಲ್ಲದೇ ಯಳಂದೂರು ತಾಲೂಕಿನ ಶಾಲೆಯೊಂದರಲ್ಲಿ ಕರಡಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಸಿತ್ತು. ಹೀಗೆ ಹುಲಿ, ಕರ ಡಿಯಂತಹ ಮೃಗಗ ಳು ಇತ್ತೀಚೆಗೆ ಜನವಸತಿ ಪ್ರದೇಶಗಳಲ್ಲಿ ಪ್ರತ್ಯಕ್ಷವಾಗುವ ಮೂಲಕ ಹೊಸ ಸಮಸ್ಯೆಗೆ ನಾಂದಿ ಹಾಡಿವೆ.
ಹುಲಿ ಸಂರಕ್ಷಣೆ ಯೋಜನೆ ಮೂಲಕ ಬಂಡಿ ಪುರ ಮತ್ತು ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು, ಇರುವ ಸೀಮಿತ ಅರಣ್ಯ ಪ್ರದೇಶದಲ್ಲಿ ಅವುಗಳ ಸಾಂಧ್ರತೆ ಹೆಚ್ಚಿದೆ. ಪರಿ ಣಾಮ ಬೇರೊಂದು ಹುಲಿಯೊಂದಿಗೆ ಸರಹ ದ್ದಿನ ಕಾಳಗ ನಡೆಸಿ ಸೋತು ಕಾಡಂಚಿಗೆ ಬಂದು ನೆಲೆ ನಿಂತ ಹುಲಿಗಳು ದಿನಕಳೆದಂತೆ ಅಲ್ಲೂ ಅದೇ ಸಮಸ್ಯೆ ಎದುರಿಸಿ ಜನವಸತಿ ಪ್ರದೇಶದತ್ತ ಮುಖ ಮಾಡುತ್ತಿವೆ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಹೀಗೆ ಜನವಸತಿ ಪ್ರದೇಶದತ್ತ ಬಮದ ಹುಲಿಗಳು ಕ್ರಮೇಣ ಅರ್ಬನ್ ಟೈಗ್ರೆಸ್ ಗಳಾಗಿ ಮಾರ್ಪಟ್ಟು ಇಲ್ಲಿಯೇ ನೆಲೆ ನಿಲ್ಲುವ ಸಾಧ್ಯತೆಗಳಿವೆ. ಇದು ಮತ್ತೊಂದು ಮಾನವ-ವನ್ಯಜೀವಿ ಸಂಘರ್ಷಕ್ಕೂ ಕಾರಣವೂ ಆಗಬಹುದು ಎಂಬ ಸುಳಿವನ್ನು ನೀಡಿದ್ದಾರೆ.
*ಸತೀಶ್ ದೇಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.