ಮೇಘ ಸ್ಫೋಟಕ್ಕೆ ಮಳೆನಾಡಾದ ಮೈಸೂರು
Team Udayavani, Aug 7, 2019, 3:00 AM IST
ಮೈಸೂರು: ಮೇಘ ಸ್ಫೋಟದಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲೂ ವ್ಯಾಪಕ ಮಳೆಯಾಗುತ್ತಿದ್ದು, ಮೈಸೂರು ಅಕ್ಷರಶಃ ಮಳೆನಾಡಾಗಿ ಮಾರ್ಪಟ್ಟಿದೆ. ಸೋಮವಾರ ತಡರಾತ್ರಿ ಆರಂಭವಾದ ಸಾಧಾರಣ ಮಳೆ ಇಡೀ ರಾತ್ರಿ ಬಿಟ್ಟು ಬಿಟ್ಟು ಸುರಿಯಿತು. ಮಂಗಳವಾರ ಬೆಳಗ್ಗೆ ಕೆಲಕಾಲ ಬಿಡುವು ನೀಡಿದ್ದ ಮಳೆ ಮಧ್ಯಾಹ್ನ 12ಗಂಟೆ ನಂತರ ಆಗಾಗ್ಗೆ ಧಾರಾಕಾರವಾಗಿ ಸುರಿಯಲಾರಂಭಿಸಿದ್ದರಿಂದ ನಗರದ ಪ್ರಮುಖ ರಸ್ತೆಗಳೆಲ್ಲಾ ಜಲಾವೃತವಾಗಿದ್ದವು. ಮಳೆಯಿಂದಾಗಿ ದಾರಿಹೋಕರು, ಬೀದಿ ಬದಿ ವರ್ತಕರು ಪರದಾಡುವಂತಾಯಿತು.
ಕೊಡೆ ಆಶ್ರಯ: ಇನ್ನು ಸಂಜೆ ವೇಳೆಗೆ ವರಮಹಾಲಕ್ಷ್ಮೀ ಹಬ್ಬಕ್ಕೆ ಪೂಜಾ ಸಾಮಗ್ರಿ, ಹೊಸಬಟ್ಟೆ ಖರೀದಿಸಲು ಮಾರುಕಟ್ಟೆಗೆ ಬಂದಿದ್ದ ಜನ ಮಳೆಯಿಂದಾಗಿ ಸಿಕ್ಕ ಸಿಕ್ಕಕಡೆಗಳಲ್ಲಿ ನಿಂತು ರಕ್ಷಣೆ ಪಡೆದರೆ, ಇನ್ನೂ ಕೆಲವರು ಕೊಡೆ ಹಿಡಿದು ವ್ಯಾಪಾರ ಹೊರಟಿದ್ದು ಕಂಡುಬಂತು.
ಇಡೀ ದಿನ ಮಳೆ ಸುರಿದ ಪರಿಣಾಮ ಜನ ಕೊಡೆ ಹಿಡಿದು, ಜರ್ಕಿನ್ ತೊಟ್ಟು ಓಡಾಡುತ್ತಿದ್ದರಲ್ಲದೆ, ಅಲ್ಲಲ್ಲಿ ಟೀ ಕ್ಯಾಂಟೀನ್ ಗಳ ಬಳಿ ನಿಂತು ಕಾಫಿ-ಟೀ ಕುಡಿದು ಮೈ ಬೆಚ್ಚಗೆ ಮಾಡಿಕೊಳ್ಳುತ್ತಿದ್ದರು. ಸಂಜೆ ನಂತರ ಜಿಟಿ ಜಿಟಿ ಮಳೆ ಮತ್ತು ಚಳಿಯಿಂದ ಪಾರಾಗಲು ಪಾನೀಪುರಿ, ಗೋಬಿ ಸೆಂಟರ್‌ಗಳಿಗೆ ಜನ ಮುಗಿಬಿದ್ದಿದ್ದರು.
ಜಿಲ್ಲಾದ್ಯಂತ ಮಳೆ: ಮೈಸೂರು ನಗರ ಸೇರಿದಂತೆ ಕೊಡಗು ಜಿಲ್ಲೆಗೆ ಹೊಂದಿಕೊಂಡಂತಿರುವ ಪಿರಿಯಾಪಟ್ಟಣ, ಹುಣಸೂರು, ಎಚ್.ಡಿ.ಕೋಟೆ ತಾಲೂಕುಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ನಂಜನಗೂಡು, ತಿ.ನರಸೀಪುರ, ಕೆ.ಆರ್.ನಗರ ಹಾಗೂ ಮೈಸೂರು ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ.
ಮೈಸೂರು ಜಿಲ್ಲೆಯಲ್ಲಿ ಮುಂದಿನ ಐದು ದಿನ ಮೋಡ ಕವಿದ ವಾತಾವರಣವಿದ್ದು ಸಾಧಾರಣ ಮಳೆ ಬರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗರಿಷ್ಠ ಉಷ್ಣಾಂಶ 27 ರಿಂದ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುವ ಸಾಧ್ಯತೆ ಇದೆ. ಬೆಳಗಿನ ಗಾಳಿಯ ತೇವಾಂಶ ಶೇ.87 ರಿಂದ 91ರವರೆಗೆ ಮತ್ತು
ಮಧ್ಯಾಹ್ನದ ತೇವಾಂಶ ಶೇ.74 ರಿಂದ 81 ಮತ್ತು ಗಾಳಿಯು ಗಂಟೆಗೆ ಸರಾಸರಿ 2 ರಿಂದ 3 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಆ. 7 ಮತ್ತು 8ರಂದು 20 ಮಿ.ಮೀ, 9, 10 ರಂದು 18 ಮಿ.ಮೀ ಹಾಗೂ 11ರಂದು 10 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ.ಪ್ರಕಾಶ್ ತಿಳಿಸಿದ್ದಾರೆ.
ತ.ನಾಡಿಗೆ ನೀರು ಹರಿಸಿದ್ದಕ್ಕೆ ಬರಿದಾದ ಕಬಿನಿ ಜಲಾಶಯ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿತ್ತಾದರೂ ಜೂನ್ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದ ಕಾರಣ ಮುಂಗಾರಿನ ಆರಂಭದಲ್ಲೇ ರಾಜ್ಯದಲ್ಲಿ ಮೊಟ್ಟ ಮೊದಲು ಭರ್ತಿಯಾಗುವ ಹೆಗ್ಗಳಿಕೆ ಹೊಂದಿರುವ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಒಳ ಹರಿವು ಕಡಿಮೆಯಾಗಿದೆ.
ಜಲಾಶಯದಿಂದ ತಮಿಳುನಾಡಿಗೆ ಹರಿಸುತ್ತಿರುವುದರಿಂದ ಕಬಿನಿಯ ಒಡಲು ಬರಿದಾಗುತ್ತಿದ್ದು, ಮುಂದಿನ ಮಳೆಗಾಲದವರೆಗೆ ಬೆಂಗಳೂರು, ಮೈಸೂರು ನಗರಗಳ ಕುಡಿಯುವ ನೀರಿಗೆ ನೀರನ್ನು ಕಾಯ್ದುಕೊಳ್ಳುವ ಸಲುವಾಗಿ ಈ ವರ್ಷ ಕಬಿನಿ ಜಲಾನಯನ ಪ್ರದೇಶದಲ್ಲಿ ಭತ್ತ ಬೆಳೆಯದಂತೆ ನೀರಾವರಿ ಇಲಾಖೆ ಈಗಾಗಲೇ ಪ್ರಕಟಣೆ ಹೊರಡಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.