Mysore Dasara: ದಸರಾ ಗಜಪಡೆ ಆಯ್ಕೆ ಪ್ರಕ್ರಿಯೆ ಪೂರ್ಣ
Team Udayavani, Aug 7, 2023, 4:19 PM IST
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಗಜಪಡೆಯ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, 14 ಆನೆಗಳನ್ನು ಎರಡು ತಂಡಗಳಲ್ಲಿ ಮೈಸೂರಿಗೆ ಕರೆತರಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
ಆನೆಗಳ ಆಯ್ಕೆ ಸಂಬಂಧ ಈಗಾಗಲೇ ಅರಣ್ಯ ಇಲಾಖೆ ಮತ್ತು ವೈದ್ಯರ ತಂಡ ಮತ್ತಿಗೋಡು, ದುಬಾರೆ, ಆನೆಕಾಡು, ಭಿಮನಕಟ್ಟೆ, ರಾಂಪುರ, ಬಳ್ಳೆ ಶಿಬಿರಗಳಿಗೆ ತೆರಳಿ ಒಂದು ಸುತ್ತಿನ ಪರೀಕ್ಷೆ ನಡೆಸಿತ್ತು. ಡಿಸಿಎಫ್ ಸೌರಭ್ ಕುಮಾರ್ ನೇತೃತ್ವದ ತಂಡ ಆಗಸ್ಟ್ 2ರಂದು ಮತ್ತೆ ಮತ್ತಿಗೋಡು, ಭೀಮನಕಟ್ಟೆ, 3ರಂದು ದುಬಾರೆ ಮತ್ತು ಆನೆಕಾಡು ಆನೆ ಶಿಬಿರ ಹಾಗೂ ಆ.5ರಂದು ರಾಂಪುರ ಮತ್ತು ಬಳ್ಳೆ ಶಿಬಿರಗಳಿಗೆ ತೆರಳಿ ಆನೆಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ ಪಟಾಕಿ ಸಿಡಿಸಿ ಶಬ್ಧಗಳಿಗೆ ಬೆದುರುವ ಬಗ್ಗೆ ಪರೀಕ್ಷೆ ನಡೆದಿದ್ದು, ಎಲ್ಲಾ ಆನೆಗಳು ಪಟಾಕಿ ಶಬ್ಧಕ್ಕೆ ಬೆದರದೆ ಧೈರ್ಯ ಪ್ರದರ್ಶಿಸಿವೆ.
ಸಭೆಯಲ್ಲಿ ಗಜಪಯಣದ ದಿನಾಂಕ ನಿಗದಿ: ಒಟ್ಟಾರೆ ಆನೆಗಳ ಸ್ವಭಾವ, ದಸರಾದಲ್ಲಿ ಪಾಲ್ಗೊಂಡಿರುವ ಅನುಭವ ಹಾಗೂ ಆರೋಗ್ಯವನ್ನು ಪರೀಕ್ಷಿಸಿರುವ ತಂಡ, 16 ಆನೆಗಳ ಪಟ್ಟಿ ಸಿದ್ಧಪಡಿಸಿದ್ದು, ವಾರಾಂತ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ದಸರೆಗೆ ಭಾಗವಹಿಸುವ 14 ಆನೆಗಳ ಪಟ್ಟಿ ಮತ್ತು ಗಜಪಯಣ ನಡೆಯುವ ದಿನಾಂಕ ನಿಗದಿಯಾಗಲಿದೆ.
ಪಟ್ಟಿಯಲ್ಲಿ ಎರಡು ಹೊಸ ಆನೆ: ಆನೆಗಳ ಆಯ್ಕೆ ಪ್ರಕ್ರಿಯಲ್ಲಿ ಉತ್ತಮ ನಡವಳಿಕೆ ತೋರಿದ ಎರಡು ಹೊಸ ಆನೆಗಳು ಅರಣ್ಯಾಧಿಕಾರಿಗಳು ಮತ್ತು ವೈದ್ಯರ ತಂಡದ ಗಮನ ಸೆಳೆದಿದ್ದು, ಈ ಎರಡು ಹೊಸ ಆನೆಗಳನ್ನು ಈ ಬಾರಿಯ ದಸರೆಗೆ ಕರೆತರಲು ಉತ್ಸುಕರಾಗಿದ್ದಾರೆ. ದುಬಾರೆ ಸಾಕಾನೆ ಶಿಬಿರದ ಗಂಡಾನೆಯಾದ ಕಂಜನ್ ಮತ್ತು ರಾಂಪುರ ಶಿಬಿರದ ಹೆಣ್ಣಾನೆ ಹಿರಣ್ಯಾ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಅಂತಿಮ ಆಯ್ಕೆಯಲ್ಲಿಯೂ ಸ್ಥಾನ ಪಡೆದರೆ ದಸರೆಯಲ್ಲಿ ಪಾಲ್ಗೊಳ್ಳಲಿವೆ.
2 ಹಂತದಲ್ಲಿ ಬರಲಿವೆ ಆನೆಗಳ ತಂಡ: ದಸರಾ ಉತ್ಸವಕ್ಕೆ ಮುನ್ನುಡಿಯಾದ ಗಜಪಯಣಕ್ಕೆ ದಿನ ನಿಗದಿಯಾಗಬೇಕಿದ್ದು, ಗಜಪಯಣದಂದು ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 08 ಆನೆಗಳ ಮೊದಲ ತಂಡ ಆಗಮಿಸಿದರೆ, ತಿಂಗಳ ಬಳಿಕ ಎರಡನೇ ತಂಡ ಮೈಸೂರಿಗೆ ಬರಲಿದೆ. ಸದ್ಯಕ್ಕೆ ಮತ್ತಿಗೋಡು ಶಿಬಿರದಿಂದ ಅಭಿಮನ್ಯು, ಮಹೇಂದ್ರ, ಕರ್ನಾಟಕ ಭೀಮ, ವರಲಕ್ಷ್ಮೀ, ಲಕ್ಷ್ಮೀ, ಅಶ್ವತ್ಥಾಮ ದುಬಾರೆಯಿಂದ ಧನಂಜನಯ, ಗೋಪಿ, ಶ್ರೀರಾಮ, ಪ್ರಶಾಂತ, ಹರ್ಷ, ಕಂಜನ್, ವಿಜಯಾ, ಕಾವೇರಿ ಹಾಗೂ ಬಳ್ಳೆಯಿಂದ ಮಾಜಿ ಕ್ಯಾಪ್ಟನ್ ಅರ್ಜುನ ಆನೆ ರಾಂಪುರ ಶಿಬಿರದ ಸುಗ್ರೀವ, ಚೈತ್ರಾ, ಹಿರಣ್ಯ ಆನೆಗಳು ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿವೆ.
ಮೊದಲ ಹಂತದಲ್ಲಿ ಅಭಿಮನ್ಯು, ಮಹೇಂದ್ರ, ಕರ್ನಾಟಕ ಭೀಮ, ವರಲಕ್ಷ್ಮೀ, ಲಕ್ಷ್ಮೀ, ಅರ್ಜುನ, ಧನಂಜಯ ಹಾಗೂ ಗೋಪಿ ಆನೆಗಳು ಬರುವ ಸಾಧ್ಯತೆಗಳಿವೆ. ಗಜಪಯಣ ಮತ್ತು ಅರಮನೆ ಅಂಗಳದಲ್ಲಿ ಗಜಪಡೆಯ ವಾಸ್ತವ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಆನೆಗಳ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರಿಗೆ ಅರಮನೆ ಆವರಣದಲ್ಲಿ ಟೆಂಟ್ ನಿರ್ಮಾಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಈ ಬಾರಿಯೂ ಮಾವುತರು ಮತ್ತು ಕಾವಾಡಿಗಳ ಮಕ್ಕಳಿಗಾಗಿ “ಟೆಂಟ್ ಶಾಲೆ’ ನಡೆಸಲಾಗುತ್ತದೆ. ಆನೆಗಳಿಗೆ ಹಸಿರು ಮೇವಿನೊಂದಿಗೆ ಪ್ರತಿದಿನವೂ ಹೆಸರು ಕಾಳು, ಉದ್ದು, ಗೋಧಿ, ಕುಸುಬಲ ಅಕ್ಕಿ ಮತ್ತು ಬೆರೆಸಿದ ರಾಗಿ ಮು¨ªೆಯನ್ನು ನೀಡಲು ನಿರ್ಧರಿಸಲಾಗಿದೆ.
ಹೆಣ್ಣಾನೆಗಳ ವರದಿ ಕೈ ಸೇರಿಲ್ಲ: ಇದೇ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಹೆಣ್ಣಾನೆಗಳಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದೆ. ಅದರಂತೆ ದುಬಾರೆ ಶಿಬಿರದ ಕಾವೇರಿ, ವಿಜಯ, ಮತ್ತಿಗೋಡು ಶಿಬಿರದ ವರಲಕ್ಷ್ಮೀ, ಲಕ್ಷ್ಮೀ, ರಾಂಪುರ ಶಿಬಿರದ ಚೈತ್ರಾ, ಹಿರಣ್ಯಾ ಆನೆಗಳ ರಕ್ತ ಮತ್ತು ಮೂತ್ರ ಮಾದರಿಯನ್ನು ಸಂಗ್ರಹಿಸಿ ಉತ್ತರ ಪ್ರದೇಶದಲ್ಲಿನ ಸಂಶೋಧನಾ ಸಂಸ್ಥೆಯ ಲ್ಯಾಬ್‌ಗ ಕಳಿಸಿದ್ದು, ಒಂದೆರೆಡು ದಿನಗಳಲ್ಲಿ ವರದಿ ಕೈಸೇರುವ ನಿರೀಕ್ಷೆ ಇದೆ ಎನ್ನಲಾಗಿದೆ.
ದಸರಾಗೆ ಆನೆಗಳನ್ನು ಕರೆತರಲು ಆನೆಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಮತ್ತಿಗೋಡು, ಭಿಮನಕಟ್ಟೆ, ದುಬಾರೆ, ಆನೆಕಾಡು, ರಾಂಪುರ ಮತ್ತು ಬಳ್ಳೆ ಶಿಬಿರಗಳಿಗೆ ತೆರಳಿ ಪರಿಶೀಲಿಸಲಾಗಿದೆ. ವಾರಾಂತ್ಯದಲ್ಲಿ ನಡೆಯುವ ಸಭೆಯಲ್ಲಿ ಆನೆಗಳ ಪಟ್ಟಿ ಮತ್ತು ಗಜಪಯಣದ ದಿನ ಅಂತಿಮವಾಗಲಿದೆ.–ಸೌರಭ್ ಕುಮಾರ್, ಡಿಸಿಎಫ್, ಮೈಸೂರು
-ಸತೀಶ್ ದೇಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.