ಮಹಾನಗರ ಪಾಲಿಕೆ ಬಜೆಟ್ ಮಂಡನೆಗೆ ಅಸ್ತು
Team Udayavani, Apr 19, 2022, 3:24 PM IST
ಮೈಸೂರು: ಮೈಸೂರು ಮಹಾನಗರ ಪಾಲಿಕೆ 2022-23ನೇ ಬಜೆಟ್ ಮಂಡನೆಗೆ ಮೂರು ಪಕ್ಷಗಳು ಸಮ್ಮತಿ ಸೂಚಿಸಿದ್ದು, ಏ.28ರಂದು ಪಾಲಿಕೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರು ಬಜೆಟ್ ಮಂಡಿಸಲಿದ್ದಾರೆ.
ನಗರ ಪಾಲಿಕೆ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಪಾಲಿಕೆ ಬಜೆಟ್ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಆಡಳಿತ ಪಕ್ಷ ಸೇರಿದಂತೆ ವಿರೋಧ ಪಕ್ಷದ ಮುಖಂಡರು ಒಮ್ಮತದಿಂದ ಬಜೆಟ್ ಮಂಡನೆಗೆ ಒಪ್ಪಿಗೆ ಸೂಚಿಸಿದರು.
ಗೊಂದಲಗಳಿಗೆ ಸಭೆಯಲ್ಲಿ ತೆರೆ: ಮೇಯರ್ ಸುನಂದಾ ಪಾಲನೇತ್ರ ಅವರ ಅಧಿಕಾರವಾಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ಆರ್ಥಿಕ ವರ್ಷದ ಬಜೆಟ್ ಮಂಡನೆಗೆ ಸಂಬಂಧಿಸಿದ ಗೊಂದಲಗಳಿಗೆ ಸಭೆಯಲ್ಲಿ ತೆರೆ ಎಳೆದ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಮೇಯರ್ ಅಧ್ಯಕ್ಷತೆಯಲ್ಲಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರು ಬಜೆಟ್ ಮಂಡಿಸಬಹುದೇ ಎಂದು ಸರ್ಕಾರದ ಸಲಹೆ ಕೇಳಲಾಗಿತ್ತು. ಕಾಯಿದೆಯಲ್ಲಿರುವಂತೆ ಮೇಯರ್, ಉಪಮೇಯರ್ ಹಾಗೂ ಎಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಈ ಹಿಂದಿನಂತೆ ಎಲ್ಲಾ ಅಧಿಕಾರವಿದೆ. ಆದರೆ ಸ್ಥಾಯಿ ಸಮಿತಿ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ವಿವರಣೆ ನೀಡಿ, ಈಗಿರುವ ಮೇಯರ್ ಅವರ ಅಧ್ಯಕ್ಷತೆಯಲ್ಲಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರು ಬಜೆಟ್ ಮಂಡಿಸಬಹುದು ಎಂದು ಸ್ಪಷ್ಟಪಡಿಸಿದರು.
ಅಧಿಕಾರಿಗಳಿಗೆ ಸಂಬಳ ಕೊಡಲು ಕಷ್ಟ: ಈ ವೇಳೆ ಮಾತನಾಡಿದ ಕಾಂಗ್ರೆಸ್ ಸದಸ್ಯ ಆಯೂಬ್ ಖಾನ್, ಬಜೆಟ್ ಮಂಡಿಸದಿದ್ದರೆ ಕಾಮಗಾರಿಗಳ ಬಿಲ್ ಪಾವತಿಸಲು, ಅಧಿಕಾರಿಗಳಿಗೆ ಸಂಬಳ ಕೊಡಲು ಕಷ್ಟವಾಗುತ್ತದೆ. ಹಾಗಾಗಿಯೇ ಇದೇ 28ರಂದು ಬಜೆಟ್ ಮಂಡಿಸುವುದು ಸೂಕ್ತ ಎಂದು ಸಲಹೆ ನೀಡಿದರು. ಇದಕ್ಕೆ ಉಳಿದವರು ಸಮ್ಮತಿ ಸೂಚಿಸಿದರು.
ಸದಸ್ಯ ಬಿ.ವಿ.ಮಂಜುನಾಥ್ ಮಾತನಾಡಿ, ಈ ಬಾರಿಯ ಬಜೆಟ್ ಪುಸ್ತಕಕ್ಕೆ ಸೀಮಿತವಾಗುವಂತೆ ಮಾಡಬೇಡಿ. ಪಾಲಿಕೆ ಆದಾಯ ಎಷ್ಟಿದೆಯೋ ಅಷ್ಟಕ್ಕೆ ಬಜೆಟ್ ಗಾತ್ರವನ್ನು ಸೀಮಿತ ಮಾಡಬೇಕು. 700-800 ಕೋಟಿ ಬಜೆಟ್ ಮಂಡಿಸಿ ಯಾವ ಕೆಲಸವೂ ಆಗದಿದ್ದರೆ ಪ್ರಯೋಜನವಿಲ್ಲ ಎಂದು ಸಲಹೆ ನೀಡಿದರು. ಪುಷ್ಪಲತಾ ಜಗನ್ನಾಥ್ ಮಾತನಾಡಿ, ನೂತನ ಬಜೆಟ್ ನಲ್ಲಿ ಯೋಗಲಕ್ಷ್ಮೀ ಯೋಜನೆ ಮುಂದುವರಿಸುವಂತೆ ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಹಿಂದಿನ ಮೇಯರ್ ಅವಧಿಯ ಯಾವ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ ಸ್ಪಷ್ಟಪಡಿಸಿದರು.
ಮಾ.ವಿ.ರಾಮಪ್ರಸಾದ್ ಮಾತನಾಡಿ, ಕಳೆದ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ವೃತ್ತಗಳ ಅಭಿವೃದ್ಧಿ ಮಾಡಲಿಲ್ಲ. ಆರೋಗ್ಯ ವಿಮೆ ಮುಂದುವರಿಸಬೇಕು. ಉದ್ಯಾನ ಮತ್ತು ಸ್ಮಶಾನಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಹಾಗಾಗಿ ಬಜೆಟ್‌ನಲ್ಲಿ ಇವುಗಳಿಗೆ ಒತ್ತು ನೀಡುವಂತೆ ಮನವಿ ಮಾಡಿದರು.
ಜೆಡಿಎಸ್ ಸದಸ್ಯೆ ಪ್ರಮೀಳಾ ಶಂಕರೇಗೌಡ ಮಾತನಾಡಿ, ಕಳೆದ ಸಾಲಿನಲ್ಲಿ ಪಾಲಿಕೆ ಸದಸ್ಯರ ಆರೋಗ್ಯ ತಪಾಸಣೆಗೆ 25 ಲಕ್ಷ ಮೀಸಲಿಡಲಾಗಿತ್ತು. ಅದು ಕಾರ್ಯ ರೂಪಕ್ಕೆ ಬರಲಿಲ್ಲ. ಸ್ಮಶಾನ, ಉದ್ಯಾನ ಅಭಿವೃದ್ಧಿಗೆ ಪ್ರತ್ಯೇಕ ತೆರಿಗೆ ಸಂಗ್ರಹಿಸಲಾಗುತ್ತಿದೆ. ಅದು ಬಳಕೆಯಾಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಬಳಿಕ ಆಯೂಬ್ ಖಾನ್ ಮಾತನಾಡಿ, ನಗರದಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಪ್ರತಿವರ್ಷ 40 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಆದರೆ ಬಿದಿ ನಾಯಿಗಳ ನಿಯಂತ್ರಣವಾಗಿಲ್ಲ. ಈ ಬಾರಿಯ ಬಜೆಟ್ ನಲ್ಲಿ ಬೀದಿನಾಯಿಗಳಿಂದ ದಾಳಿಗೆ ಒಳಗಾದವರಿಗೆ ಪಾಲಿಕೆಯಿಂದಲೇ ಚಿಕಿತ್ಸಾ ವೆಚ್ಚ ಭರಿಸುವಂತೆ ಘೋಷಿಸಬೇಕು ಎಂದು ಸಲಹೆ ನೀಡಿದರು.
ಆಡಳಿತ ಪಕ್ಷದ ನಾಯಕ ಶಿವಕುಮಾರ್ ನಂಜನಗೂಡು ರಸ್ತೆಯಲಲ್ಲಿನ ಜೆಎಸ್‌ಎಸ್ ಕಾಲೇಜು ಬಳಿಯ ವೃತ್ತಕ್ಕೆ ನಂದಿ ವೃತ್ತ ಎಂದು ನಾಮಕರಣ ಮಾಡಲು ಸಲಹೆ ನೀಡಿದರು. ಉಪ ಮೇಯರ್ ಅನ್ವರ್‌ಬೇಗ್, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಮತ್ತು ಅಧಿಕಾರಿಗಳು ಇದ್ದರು.
ಹೆಚ್ಚು ತೆರಿಗೆ ಜಟಾಪಟಿ : ಬಿಜೆಪಿ ಸದಸ್ಯ ಸುಬ್ಬಯ್ಯ ಮಾತನಾಡಿ, ನಗರ ಪಾಲಿಕೆಗೆ ಹೆಚ್ಚು ತೆರಿಗೆ ಪಾವತಿಸುವ ವಾರ್ಡ್ ಗಳಿಗೆ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡುವ ಮೂಲಕ ಅಭಿವೃದ್ಧಿ ಕೆಲಸಗಳಲ್ಲಿ ಆದ್ಯತೆ ನೀಡಬೇಕು ಎಂದು ತಮ್ಮ ಅಭಿಪ್ರಾಯ ಮಂಡಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ಆರೀಫ್ ಹುಸೇನ್, ಕಡಿಮೆ ತೆರಿಗೆ ಪಾವತಿಸುವ, ಹೆಚ್ಚು ತೆರಿಗೆ ಪಾವತಿಸುವ ವಾರ್ಡ್ ಎಂಬ ಭೇದಭಾವ ಸರಿಯಲ್ಲ. ಪಾಲಿಕೆ ಇತಿಹಾಸದಲ್ಲಿ ಈ ರೀತಿಯ ಕೆಲಸ ನಡೆದಿಲ್ಲ. ಮುಂದೆಯೂ ಆಗುವುದು ಬೇಡ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರೇಮಾ ಶಂಕರೇಗೌಡ ದನಿಗೂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysore: ಹಾಡಹಗಲೇ ಕಾರು ಅಡ್ಡಗಟ್ಟಿ ರಾಬರಿ; ಹಣದೊಂದಿಗೆ ಕಾರು ಕೂಡಾ ದೋಚಿದರು!
Hunasur: ಪ್ರೇಯಸಿಗೆ ಚಿನ್ನ ಖರೀದಿಸಲು ಎಟಿಎಂ ಗೆ ತುಂಬಬೇಕಿದ್ದ ಹಣ ಎಗರಿಸಿದ ಯುವಕ
Mysuru ಮುಟ್ಟುಗೋಲು: 142 ನಿವೇಶನ ಮಾಹಿತಿ ಬಹಿರಂಗಕ್ಕೆ ಸ್ನೇಹಮಯಿ ಕೃಷ್ಣ ಒತ್ತಾಯ
ತ್ರಿವೇಣಿ ಸಂಗಮ ಕುಂಭಮೇಳಕ್ಕೆ 10 ಕೋಟಿ ರೂ. ಪ್ರಸ್ತಾವನೆ: ಸಚಿವ ಮಹದೇವಪ್ಪ
Mysuru: ಸಿದ್ದರಾಮಯ್ಯ ಹೆಸರು ದುರ್ಬಳಕೆಗೆ ಇ.ಡಿ. ಮೂಲಕ ಯತ್ನ; ಯತೀಂದ್ರ