Mysuru Dasara: ಅಂದಿನ ಪುಡಾನೆಗಳೀಗ ದಸರಾ ಕಣ್ಮಣಿಗಳು
Team Udayavani, Sep 11, 2023, 4:11 PM IST
ಮೈಸೂರು: ಒಂದು ಕಾಲದಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಪುಂಡಾಟ ನಡೆಸುತ್ತ ಜನತೆಗೆ ಉಪಟಳ ನೀಡುತ್ತಿದ್ದ ಪುಂಡಾನೆಗಳೀಗ ಮಾವುತ-ಕಾವಾಡಿಗಳ ವಿಧೇಯ ವಿದ್ಯಾರ್ಥಿಗಳು. ಅಷ್ಟೇ ಅಲ್ಲದೆ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ರಾಜಾತಿಥ್ಯಕ್ಕೆ ಪಾತ್ರವಾಗಿರುವುದು ವಿಶೇಷ.
ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ಆಗಮಿಸಿರುವ ಗಜಪಡೆಯ ಬಹತೇಕ ಆನೆಗಳು ಕಾಡಂಚಿನ ಗ್ರಾಮಗಳಲ್ಲಿ ರೈತರ ಜಮೀನಿಗೆ ನುಗ್ಗಿ ಬಾಳೆ, ಭತ್ತ, ಕಬ್ಬು ಬೆಳೆ ನಾಶ ಮಾಡುತ್ತಿದ್ದವು. ಅಲ್ಲದೇ, ಜನರ ಮೇಲೆ ದಾಳಿ ನಡೆಸುತ್ತಿದ್ದವು. ಅವೆಲ್ಲಾ ಅರಣ್ಯ ಇಲಾಖೆ ನಡೆಸಿದ ಸೆರೆ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದು ಪಳಗಿದ್ದು ಮಾವುತ-ಕಾವಾಡಿಗನ ಸಂಜ್ಞೆಗೆ ತಲೆಬಾಗುತ್ತಿವೆ. ಜಂಜೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ 14 ಆನೆಗಳಲ್ಲಿ ಕ್ಯಾಪ್ಟನ್ ಅಭಿಮನ್ಯು ಸೇರಿ ಮಹೇಂದ್ರ, ಭೀಮ, ಧನಜಂಯ, ಗೋಪಿ, ಕಂಜನ್ ಆನೆಗಳು ಕೊಡಗು, ಹಾಸನ ಮತ್ತು ರಾಮನಗರ ಭಾಗದಲ್ಲಿ ದಾಂಧಲೆ ನಡೆಸಿ, ಜನರ ಕೆಂಗಣ್ಣಿಗೆ ಗುರಿಯಾಗಿ ಸೆರೆಯಾಗಿದ್ದಾಗಿವೆ. ಮಾವುತ, ಕಾವಾಡಿಗಳು ನೀಡುವ ತರಬೇತಿಯಿಂದ ತಮ್ಮ ವರ್ತನೆ ಬದಲಿಸಿಕೊಂಡು, ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿವೆ.
ಕ್ಯಾಪ್ಟನ್ ಅಭಿಮನ್ಯು :
ಕೂಬಿಂಗ್ ಸ್ಪೆಷಲಿಸ್ಟ್, ಕ್ಯಾಪ್ಟನ್ ಎಂಬ ಹೆಸರಿನಿಂದ ಕರೆಸಿಕೊಳ್ಳುವ ಅಭಿಮನ್ಯು ಒಂದು ಕಾಲದಲ್ಲಿ ಪುಂಡಾನೆಯಾಗಿದ್ದ. 1977ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯದಲ್ಲಿ ಸೆರೆಸಿಕ್ಕ ಇವನೀಗ ಗಜಪಡೆಯ ಪರಾಕ್ರಮಿಯಾಗಿ ಜನರ ಪ್ರಮುಖ ಆಕರ್ಷಣೆಯಾಗಿದ್ದಾನೆ.
ಭವಿಷ್ಯದ ಅಂಬಾರಿ ಭೀಮ :
2009 ರಲ್ಲಿ ಸಕಲೇಶಪುರ ತಾಲೂಕಿನಲ್ಲಿ ದಾಂಧಲೆ ನಡೆಸುತ್ತಿದ್ದ ಭೀಮನನ್ನು ಹೆತ್ತೂರಿನಲ್ಲಿ ಸೆರೆ ಹಿಡಿದು ಪಳಗಿಸಿ, ವಿಧೇಯ ವಿದ್ಯಾರ್ಥಿಯನ್ನಾಗಿ ಮಾಡಲಾಗಿದೆ. ಕೇವಲ 23 ವರ್ಷದ ಭೀಮ ಚಿರ ಯುವಕನಾಗಿದ್ದು, ಈಗಾಗಲೇ ಎರಡು ಬಾರಿ ದಸರಾದಲ್ಲಿ ಭಾಗವಹಿಸಿದ್ದಾನೆ. ಭೀಮನ ಮೈಕಟ್ಟು ಅಂಬಾರಿ ಹೊರಲು ಸೂಕ್ತವಾಗಿದ್ದು, ಭವಿಷ್ಯದ ಕ್ಯಾಪ್ಟನ್ ಎಂದೇ ಹೇಳಲಾಗುತ್ತಿದೆ.
ಸೌಮ್ಯ ಸ್ವಭಾವದ ಧನಂಜಯ :
2013ರಲ್ಲಿ ಸಕಲೇಶಪುರ ತಾಲೂಕಿನ ಯಸಳೂರು ವಲಯದಲ್ಲಿ ಸೆರೆ ಹಿಡಿದ ಕಾಡಾನೆಯನ್ನು ಧನಂಜಯ ಎಂಬ ಹೆಸರಿಟ್ಟು ಕಳೆದ ನಾಲ್ಕು ವರ್ಷದಿಂದ ಜಂಜೂಸವಾರಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಅಭಿಮನ್ಯುವಿನ ನಂತರದ ಸ್ಥಾನ ನಿಭಾಯಿಸುವ ಎಲ್ಲಾ ಗುಣಲಕ್ಷಣವನ್ನು ಹೊಂದಿದ್ದಾನೆ. 43 ವರ್ಷದ ಧನಂಜಯ ದುಬಾರೆ ಶಿಬಿರದಲ್ಲಿ ಮಾವುತ ಭಾಸ್ಕರ, ಕಾವಾಡಿ ರಾಜಣ್ಣನ ಆರೈಕೆಯಲ್ಲಿದ್ದು, ಕಾಡಾನೆ ಸರೆ ಮತ್ತು ಹುಲಿ ಸೆರೆ ಕಾರ್ಯಾಚರಣೆ ಸಂದರ್ಭದಲ್ಲಿಯೂ ಧೈರ್ಯದಿಂದ ಭಾಗವಹಿಸುತ್ತಿದ್ದಾನೆ.
ಗಜಪಡೆಯಲ್ಲೊಬ್ಬ ಪರಾಕ್ರಮಿ:
ಪುಂಡಾನೆ ಸೆರೆ ಕಾರ್ಯಾಚಣೆಯಲ್ಲಿ ಸೆರೆ ಸಿಕ್ಕ ಬಳಿಕ ಮೂರೇ ವರ್ಷದಲ್ಲಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಅರ್ಹತೆ ಗಿಟ್ಟಿಸಿಕೊಂಡಿರುವ 39 ವರ್ಷದ ಮಹೇಂದ್ರ ಆನೆ ಪ್ರಮುಖ ಆಕರ್ಷಣೆ.
ಯಾರಿದು ಮಹೇಂದ್ರ?:
2015-2016ರ ವೇಳೆ ರಾಮನಗರದ ಭಾಗದ ಜನರಿಗೆ ತಲೆ ನೋವಾಗಿದ್ದ ಪುಂಡಾನೆ ಸೆರೆ ಹಿಡಿಯಲು ಆ ಭಾಗದ ರೈತರಾದಿಯಾಗಿ ಜನಪ್ರತಿನಿಧಿಗಳಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ವಿಧಿಯಿಲ್ಲದೆ ತೋಟವೊಂದರಲ್ಲಿ ಯಾವುದೇ ಅಳುಕಿಲ್ಲದೇ ಬೀಡುಬಿಟ್ಟಿದ್ದ ಮಹೇಂದ್ರನನ್ನು ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಸೆರೆ ಹಿಡಿದು ನಾಗರಹೊಳೆ ಮತ್ತಿಗೋಡು ಶಿಬಿರಕ್ಕೆ ಕರೆತಂದು ಪಳಗಿಸಿ ಮಹೇಂದ್ರ ಎಂಬ ಹೆಸರಿಡಲಾಯಿತು.
ಆರಂಭದ ದಿನಗಳಲ್ಲಿ ರೋಷಾವೇಶದಿಂದ ವರ್ತಿಸುತ್ತಿದ್ದ ಮಹೇಂದ್ರ ದಿನಕಳೆದಂತೆ ಶಿಬಿರದ ವಾತಾವರಣಕ್ಕೆ ಒಗ್ಗಿದ. ಮೊದಲಿಗೆ ವಿನೋದ್ ರಾಜ್ ಎಂಬಾತ ನೀಡಿದ ಅತ್ಯುತ್ತಮ ತರಬೇತಿಯಿಂದಾಗಿ ಆರೇಳು ತಿಂಗಳಲ್ಲೇ ಮೃದು ಸ್ವಭಾದ ಆನೆಯಾಗಿ ಮಾರ್ಪಟ್ಟಿದ್ದು ವಿಶೇಷ. ಸದ್ಯಕ್ಕೆ 2.74 ಮೀಟರ್ ಎತ್ತರ, 4450 ಕೆ.ಜಿ. ತೂಕ ಇರುವ ಮಹೇಂದ್ರನನ್ನು ರಾಜಣ್ಣ ಎಂಬ ಮಾವುತರು ನೋಡಿಕೊಳ್ಳುತ್ತಿದ್ದಾರೆ. ಎಷ್ಟು ಸೌಮ್ಯ ಸ್ವಭಾವವೋ ಅಷ್ಟೇ ಧೈರ್ಯಶಾಲಿ ಮತ್ತು ದಿಟ್ಟ ಮನೋಭಾವ ಹೊಂದಿರುವ ಮಹೇಂದ್ರ, ಹೇಳಿದ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಾನೆ. ಹುಲಿ, ಆನೆ ಕಾರ್ಯಾಚರಣೆಯಲ್ಲಿ ಇವನನ್ನು ಬಳಸಿಕೊಳ್ಳಲಾಗುತ್ತಿದೆ. ಕೂಬಿಂಗ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿರುವ ಅಂಬಾರಿ ಆನೆ ಅಭಿಮನ್ಯು ಸ್ಥಾನವನ್ನು ಈ ಮಹೇಂದ್ರ ತುಂಬುವ ಎಲ್ಲಾ ಲಕ್ಷಣ ಹೊಂದಿದ್ದಾನೆ.
ಕಳೆದ ಬಾರಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದ ದಸರಾದಲ್ಲಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಮಹೇಂದ್ರ ಯಶಸ್ವಿಯಾಗಿ ನಿಭಾಯಿಸುವ ಮೂಲಕ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಹತ್ತರವಾದ ಜವಾಬ್ದಾರಿ ನಿಭಾಯಿಸಿದ್ದ.
1990ರಲ್ಲಿ ಸೆರೆ ಸಿಕ್ಕಿದ್ದ ಗೋಪಿ :
ಹಾಸನ ಮಲೆನಾಡು ಭಾಗದಲ್ಲಿ ಕಾಫಿ ತೋಟ, ಭತ್ತದ ಗದ್ದೆಯಲ್ಲಿ ದಾಂಧಲೆ ನಡೆಸುತ್ತಿದ್ದ ಪುಂಡಾನೆಯನ್ನು 1990ರಲ್ಲಿ ಆಲೂರು ತಾಲೂಕಿನ ದೊಡ್ಡಬೆಟ್ಟದಲ್ಲಿ ಸೆರೆ ಹಿಡಿದು, ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸಿ ಗೋಪಿ ಎಂದು ನಾಮಕರಣ ಮಾಡಲಾಗಿದೆ. ಕಳೆದ 12 ವರ್ಷಗಳಿಂದ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿರುವ ಗೋಪಿ 2015ರಲ್ಲಿ ಅರಮನೆ ಪಟ್ಟದ ಆನೆಯಾಗಿಯೂ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿತ್ತು. 41 ವರ್ಷದ ಗೋಪಿಯನ್ನು ಮಾವುತ ಪಿ.ಬಿ.ನವೀನ್, ಕಾವಾಡಿ ಜಿ.ಆರ್.ಶಿವು ನೋಡಿಕೊಳ್ಳುತ್ತಿದ್ದಾರೆ.
ಎದುರಾಳಿ ಹಿಮ್ಮೆಟ್ಟಿಸುವ ಕಂಜನ್:
ಈ ಬಾರಿಯ ದಸರಾ ಉತ್ಸವದಲ್ಲಿ ಪಾಲ್ಗೊಂಡಿರುವ ಹೊಸ ಆನೆಗಳಲ್ಲಿ ಕಂಜನ್ ಆನೆಯೂ ಒಂದಾಗಿದೆ. ಈತ ಸಕಲೇಶಪುರ ತಾಲೂಕಿನಲ್ಲಿ ಸೆರೆಯಾಗಿದ್ದು, ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸಿ ಕಂಜನ್ ಎಂದು ಹೆಸರನ್ನು ನಾಮಕರಣ ಮಾಡಲಾಗಿದೆ. ಹಲವು ಹುಲಿ ಮತ್ತು ಆನೆ ಸೆರೆ ಕಾರ್ಯಾಚರಣೆಯಲ್ಲಿಯೂ ಭಾಗವಹಿಸಿರುವ ಕಂಜನ್, ಎದುರಾಳಿಯ ಆರ್ಭಟಕ್ಕೆ ಮಣಿಯದೇ ಮುನ್ನುಗ್ಗುವ ಪರಾಕ್ರಮಿ ಆಗ್ತಿದಾನೆ. 24 ವರ್ಷದ ಕಂಜನ್‌ನನ್ನು ಮಾವುತ ವಿಜಯ, ಕಾವಾಡಿ ಮಣಿಕಂಠ ನೋಡಿಕೊಳ್ಳುತ್ತಿದ್ದಾರೆ.
– ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.