ಸಿಎಂ ಸಿದ್ದರಾವಣ ಎಂದು ಹೆಸರು ಬದಲಿಸಿಕೊಳ್ಳಲಿ
Team Udayavani, Mar 12, 2018, 12:40 PM IST
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ರಾವಣನ ಗುಣಗಳು ಹೆಚ್ಚಾಗಿದ್ದು, ಅವರು ತಮ್ಮ ಹೆಸರನ್ನು ಸಿದ್ದರಾವಣ ಎಂದು ಬದಲಿಸಿಕೊಳ್ಳಲಿ ಎಂದು ಸಂಸದ ಪ್ರತಾಪ್‌ಸಿಂಹ ಟೀಕಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ನಡೆದ ಸಂಸದರ ಅನುದಾನದಡಿಯಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾವಣ ಎಲ್ಲದಕ್ಕೂ ನಾನು, ನನ್ನದು, ನನ್ನಿಂದಲೇ ಎನ್ನುತ್ತಿದ್ದ,
ಇದೇ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಮಾತುಮಾತಿಗು ನಾನು, ನನ್ನದು, ನನ್ನಿಂದಲೇ ಎನ್ನುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ಸಿದ್ದರಾಮಯ್ಯ ಎಂಬುದಕ್ಕಿಂತ ಸಿದ್ದರಾವಣ ಎಂಬ ಹೆಸರು ಸೂಕ್ತವಾಗಲಿದ್ದು, ಕೂಡಲೇ ಅವರು ತಮ್ಮ ಹೆಸರನ್ನು ಸಿದ್ದರಾವಣ ಎಂದು ಬದಲಿಸಿಕೊಳ್ಳಲಿ ಎಂದರು.
ರಾಜರ ಹೋಲಿಕೆ ಏಕೆ?:
ಸಿದ್ದರಾಮಯ್ಯ ಅವರೇ, ಮೈಸೂರು ಮಹಾರಾಜರೇನು ಅವರ ಸ್ವಂತ ಹಣದಿಂದ ಮಾರ್ಕೆಟ್ ಕಟ್ಟಿಲ್ಲ ಎಂದು ಹೇಳಿದ್ದೀರಾ. ಆದರೆ, ನೀವು ನಿಮ್ಮ ಮನೆಯಿಂದ ಹಣತಂದು ಕಟ್ಟಡಗಳನ್ನು ಕಟ್ಟಿದ್ದೀರಾ?. ಕೇವಲ 400 ಕೋಟಿ ಖರ್ಚು ಮಾಡಿ ಕಟ್ಟಡ ಕಟ್ಟಿದ್ದೇ ನಿಮ್ಮ ಸಾಧನೆಯೇ?, ಹಾಗಾದರೆ ಕೇಂದ್ರ ಸರ್ಕಾರದಿಂದ 13 ಸಾವಿರ ಕೋಟಿ ರೂ. ಅನುದಾನ ತಂದಿರುವ ನಾನೇನು ಹೇಳಬೇಕು?
ಎಂದು ಪ್ರಶ್ನಿಸಿದ ಸಂಸದ ಪ್ರತಾಪ್‌ಸಿಂಹ, ಅದ್ಯಾವ ಲೆಕ್ಕದಲ್ಲಿ ಮೈಸೂರು ಮಹಾರಾಜರಿಗೆ ನಿಮ್ಮನ್ನು ಹೋಲಿಕೆ ಮಾಡಿಕೊಂಡಿದ್ದೀರಾ ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಹಾಕಿದರು. ಅಲ್ಲದೆ ಮುಖ್ಯಮಂತ್ರಿಗಳೇ ನಿಮ್ಮ ಈ ದರ್ಪ ಕೊನೆಯಾಗುವ ಕಾಲ ಬಂದಿದ್ದು, ರಾವಣನ ಅಂತ್ಯದಂತೆ ನಿಮ್ಮ ಅಧಿಕಾರ ಅಂತ್ಯಕ್ಕೆ ಮೋದಿ, ಅಮೀತ್ ಶಾ ಬರಲಿದ್ದಾರೆ ಎಂದು ಕಿಡಿಕಾರಿದರು.
ತ್ರಿಚಕ್ರ ವಾಹನ ವಿತರಣೆ: ಸಂಸದರ ಅನುದಾನದಡಿ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು. ಜಲದರ್ಶಿನಿ ಆವರಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್‌ಸಿಂಹ ಅವರು, 20 ಮಂದಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಿದರು. ಈ ಸಂದರ್ಭದಲ್ಲಿ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾಜೀವ್, ಎಂ.ರಾಜೇಂದ್ರ, ಪಾಲಿಕೆ ಸದಸ್ಯ ಮ.ವಿ.ರಾಮ್‌ಪ್ರಸಾದ್ ಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.