ವಿಮಾನ ನಿಲ್ದಾಣದಲ್ಲಿ ವಿವಿಧ ಸೇವೆಗಳಿಗೆ ಚಾಲನೆ
ಶೀಘ್ರದಲ್ಲೇ ರನ್‌ವೇ ವಿಸ್ತರಣೆ , ಮೈಸೂರು ವಿಮಾನ ನಿಲ್ದಾಣ ಸಲಹಾ ಸಮಿತಿ ಸಭೆ
Team Udayavani, Nov 11, 2020, 4:34 PM IST
ಮೈಸೂರು: ಮೈಸೂರು ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಕ್ಯಾಂಟಿನ್, ಶೌಚಾಲಯ, ಸೆಲ್ಫಿ ಪಾಯಿಂಟ್, ಸುಧಾರಿತ ತಂತ್ರಜ್ಞಾನವನ್ನೊಳಗೊಂಡ ಅಗ್ನಿ ಶಾಮಕ ವಾಹನ ಸೇರಿದಂತೆ ಇತರೆ ಸೇವೆಗಳಿಗೆ ಮೈಸೂರು ವಿಮಾನ ನಿಲ್ದಾಣ ಸಲಹಾ ಸಮಿತಿ ಅಧ್ಯಕ್ಷ, ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು.
ಮಂಡಕಳ್ಳಿಯಲ್ಲಿರುವ ವಿಮಾನ ನಿಲ್ದಾಣದ ವ್ಯಾಪ್ತಿಯನ್ನು ಹೆಚ್ಚಿಸಲು ಹಾಗೂ ಮೇಲ್ದರ್ಜೆಗೇರಿಸುವ ಸಲುವಾಗಿ ಶೀಘ್ರದಲ್ಲೇ ರನ್‌ವೇ ವಿಸ್ತರಣೆ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ನಗರದ ಹೊರವಲಯದಲ್ಲಿರುವ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದ ಮೈಸೂರು ವಿಮಾನ ನಿಲ್ದಾಣ ಸಲಹಾ ಸಮಿತಿಯಲ್ಲಿ ಸಭೆಯಲ್ಲಿ ಮಾತನಾಡಿದ ಅವರು, ರನ್‌ವೇ ವಿಸ್ತರಣೆಗೆ ಒಟ್ಟು 240ಎಕರೆ ಅಗತ್ಯವಿದ್ದು ,ಈಗಾಗಲೇ 2012ರಲ್ಲೇ 114 ಎಕರೆ ಭೂಸ್ವಾಧೀನ ವಾಗಿದೆ. ಪ್ರತಿ ಎಕರೆಗೆ 40 ಲಕ್ಷ ರೂ. ಭೂಪರಿಹಾರ ನಿಗದಿ ಮಾಡಲಾಗಿತ್ತು. ಇದೀಗ ಮಾರುಕಟ್ಟೆ ಮೌಲ್ಯ ಏರಿಕೆಯಾಗಿವುದರಿಂದ ಪರಿಹಾರ ದರವನ್ನೂ ಪರಿಷ್ಕರಿಸಿದ್ದು, ರಸ್ತೆ ಬದಿಯ 1 ಎಕರೆಗೆ 1.05 ಕೋಟಿ ರೂ., ಒಳಭಾಗದಲ್ಲಿರುವ 1 ಎಕರೆಗೆ 1.04 ಕೋಟಿ ರೂ. ನಿಗದಿ ಪಡಿಸಿದ್ದು, ಇದಕ್ಕಾಗಿ 170 ಕೋಟಿ ರೂ.ಬೇಕಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಗೆ ಇನ್ನು ಕೆಲವೇ ದಿನಗಳಲ್ಲಿ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆಯಲಿದ್ದು, ಶೀಘ್ರದಲ್ಲೇ ವಿಸ್ತರಣೆ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಿಸ್ತರಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗುಂಟೆ ಲೆಕ್ಕದಲ್ಲಿ ಮತ್ತು ಮನೆ-ನಿವೇಶನವನ್ನೂ ಪರಿಗಣಿಸದೆ 20ಎಕರೆ ಭೂಸ್ವಾಧೀನಪಡಿಸಿಕೊಂಡಿರುವಕೆಐಎಡಿಬಿ ಕ್ರಮಕ್ಕೆಆಕ್ಷೇಪಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೊದಲೇ ಈ ಕುರಿತು ಸರ್ವೆ ಮಾಡಿ,ಅದಕ್ಕೆ ಪರಿಹಾರ ನಿಗದಿಪಡಿಸಬೇಕು. ಈ ಕೆಲಸವನ್ನು ಏಕೆ ಮಾಡಲಿಲ್ಲ? ಪ್ರಶ್ನಿಸಿದರು. ಮನೆ-ನಿವೇಶನ ಇರುವ ಜಾಗವನ್ನು ಬಿಟ್ಟು ಉಳಿದ 15 ಎಕರೆ ಜಮೀನನ್ನು ವಿಮಾನ ನಿಲ್ದಾಣಕ್ಕೆ ಹಸ್ತಾಂತರಿಸಬೇಕು ಎಂದು ಸೂಚಿಸಿದರು.
ಬಸ್ ಸೇವೆ ಪುನಾರಂಭ: ನಿಲ್ದಾಣದಿಂದ ಮೈಸೂರು ನಗರಕ್ಕೆ ಬಸ್ ಸೇವೆಯನ್ನು ಮತ್ತೆ ಪುನರಾರಂಭ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿ, ವಿಮಾನಗಳ ಆಗಮನ ಮತ್ತು ನಿರ್ಗಮನ ಸಂದರ್ಭ ದಲ್ಲಿ 7 ಬಸ್‌ಗಳು ಈ ಹಿಂದೆ ಸಂಚರಿಸುತ್ತಿದ್ದವು. ಕೋವಿಡ್ ದಿಂದ ಸ್ಥಗಿತಗೊಳಿಸಲಾಗಿತ್ತು. ಶೀಘ್ರವೇ ಶುರು ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಸಮಿತಿಯ ಸದಸ್ಯರಾದ ಹರೀಶ್ ಶೆಣೈ, ಅನಿಲ್ ಥಾಮಸ್, ಎಸ್.ಹೇಮಲತಾ, ಎಸ್. ಕೆ.ದಿನೇಶ್ ಇನ್ನಿತರರು ಪಾಲ್ಗೊಂಡಿದ್ದರು.
ಬೃಹತ್ ವಿಮಾನ ಹಾರಾಟಕ್ಕೆ ವೇದಿಕೆ ನಿರ್ಮಿಸಿ : ಸಭೆಯಲ್ಲಿ ವಿವಿಧ ಕ್ಷೇತ್ರದ ಪರಿಣಿತರು, ಉದ್ದಿಮೆ ದಾರರರು ಮತ್ತು ಪ್ರತಿನಿಧಿಗಳು ಮಾತನಾಡಿ, ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನಗರದ ವಿಮಾನ ನಿಲ್ದಾಣದ ವಿಸ್ತರಣೆಗೆ ತ್ವರಿತವಾಗಿ ಕ್ರಮ ವಹಿಸಬೇಕು. ಮಂಡಕಳ್ಳಿಯಲ್ಲಿರುವ ನಿಲ್ದಾಣದ ವ್ಯಾಪ್ತಿಯನ್ನು ಹೆಚ್ಚಿಸಿ, ಈಗಿರುವ ಲಘು ವಿಮಾನದೊಂದಿಗೆ ಬೃಹತ್ ವಿಮಾನಗಳ (ಬೋಯಿಂಗ್) ಹಾರಾಟಕ್ಕೆ ವೇದಿಕೆ ನಿರ್ಮಿಸಬೇಕು ಎಂದು ಸಲಹೆ ನೀಡಿದರು. ಕಳೆದ 7 ವರ್ಷಗಳಿಂದ ವಿಮಾನ ನಿಲ್ದಾಣದ ವಿಸ್ತರಣಾ ಪ್ರಕ್ರಿಯೆ ಜಾರಿಯಾಗಿಲ್ಲ.ನಿಲ್ದಾಣದವ್ಯಾಪ್ತಿಯನ್ನು ಹೆಚ್ಚಿಸಬೇಕು. ಜೊತೆಗೆ ದೇಶ-ವಿದೇಶಗಳ ಪ್ರಮುಖ ನಗರದೊಂದಿಗೆ ಸಂಪರ್ಕ ಕಲ್ಪಿಸಿ ಪ್ರವಾಸಿಗರಿಗೆ, ಉದ್ದಿಮೆದಾರರಿಗೆ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂಬ ಬೇಡಿಕೆ ಮುಂದಿಟ್ಟರು.
ವಿಮಾನಯಾನ ದರಕ್ಕಿಂತ ಟ್ಯಾಕ್ಸ್ ದರ ದುಬಾರಿ : ವಿಮಾನ ನಿಲ್ದಾಣದಲ್ಲಿ ಸಕಾಲಕ್ಕೆ ಟ್ಯಾಕ್ಸಿಗಳೂ ಸಿಗುವುದಿಲ್ಲ ಎಂದು ಬಹಳಷ್ಟು ಜನರು ಸಮಸ್ಯೆಯನ್ನು ಪ್ರಸ್ತಾಪಿಸಿದರು. ನಿಲ್ದಾಣದ ಮಳಿಗೆ ಬಾಡಿಗೆ ತಿಂಗಳಿಗೆ 15 ಸಾವಿರ ರೂ.ನಿಗದಿ ಪಡಿಸಿರುವುದು ದುಬಾರಿಯಾಗಿದೆ. ಈ ವೆಚ್ಚವನ್ನು ನಾವು ಗ್ರಾಹಕರಿಗೆ ವರ್ಗಾಯಿಸುವುದರಿಂದ ಟ್ಯಾಕ್ಸ್ ದರ ಸಹಜವಾಗಿಯೇ ಏರಿಕೆಯಾಗಲಿದೆ. ಬಾಡಿಗೆ ದರವನು °10 ಸಾವಿರ ರೂ.ಕ್ಕಿಂತ ಕಡಿಮೆಗೆ ಇಳಿಸಿದರೆ ನಾವು ಕೂಡ ಕಡಿಮೆ ದರದಲ್ಲಿ ಸೇವೆ ನೀಡಲು ಸಿದ್ಧ ಎಂದು ಟ್ರಾವೆಲ್ಸ್ ಏಜೆನ್ಸಿ ಪ್ರತಿನಿಧಿ ಹೇಳಿದರು. ಇದಕ್ಕೆ ಸ್ಪಂದಿಸಿದ ನಿಲ್ದಾಣದ ನಿರ್ದೇಶಕ ಮಂಜುನಾಥ್, ಈ ಕುರಿತು ಅನುಮೋದನೆ ಪಡೆದು ಮುಂದಿನ ಕ್ರಮ ವಹಿಸಲಾಗುವುದು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.